One N Only Exclusive Cine Portal

ಅಭಿಮಾನಿ ದೇವ್ರುಗಳಿಗಾಗಿ ಭರ್ಜರಿ ಬಿರಿಯಾನಿ!

Hegide Cinema dodmaneಸಿದ್ಧಸೂತ್ರಗಳಾಚೆಗೆ ಯೋಚಿಸಿ ತೀರಾ ಹೊಸದೇನನ್ನೋ ನೀಡಬೇಕು ಅಂತಾ ಬಯಸುವ ಕ್ರಿಯಾಶೀಲ ಮನಸ್ಸೊಂದು ತನ್ನ ಪ್ರಯತ್ನಗಳಿಗೆ ಮೇಲಿಂದ ಮೇಲೆ ಏಟುಬಿದ್ದಾಗ ರೊಚ್ಚಿಗೆದ್ದುಬಿಡುತ್ತದೆ. ಹೊಸ ಫ್ಲೇವರಿನ ಅಡುಗೆ ಮಾಡಿ ಅದನ್ನು ಜನ ತಿಸ್ಕಾರ ಮಾಡಿದಾಗ “ತಡೀರಿ, ನೀವು ಹೊಸ ರುಚಿಗೆ ತೆರೆದುಕೊಳ್ಳುವುದಿಲ್ಲ. ನಿಮಗೇನಿದ್ದರೂ ಇರೋ ಬರೋ ಮಸಾಲೆಯನ್ನೆಲ್ಲಾ ಅರೆದು ಬಿರಿಯಾನಿ ಮಾಡಿ ಮುಂದಿಟ್ಟರಷ್ಟೇ ಅದು ನಿಮಗೆ ರುಚಿಸೋದು” ಅಂತಾ ಸೂರಿ ಡಿಸೈಡು ಮಾಡಿಬಿಟ್ಟಿದ್ದಾರೆ. ಹಾಗೆ ಸೂರಿ ಭಯಂಕರ ಬೇಸರಕ್ಕೆ ತುತ್ತಾಗಿ ಅಭಿಮಾನಿಗಳ ಶಿಳ್ಳೆ, ಕೇಕೆ, ಚಪ್ಪಾಳೆ, ಚೀರಾಟ ಪಡೆಯಲೆಂದೇ ಮಾಡಿದಂತಿದೆ `ದೊಡ್ಮನೆ ಹುಡ್ಗ’. ಜೊತೆಗೆ ಈ ಪ್ರಯತ್ನದಲ್ಲಿ ಸೂರಿ ಅಕ್ಷರಶಃ ಗೆಲುವು ಸಾಧಿಸಿದ್ದಾರೆ.

ಹಾಗೆ ನೋಡಿದರೆ ಸೂರಿ ಒಂದು ಸಿನಿಮಾಗೂ ಮತ್ತೊಂದು ಸಿನಿಮಾಗೂ ಇಂಥದ್ದೇ ಅಟೆಂಪ್ಟು ಮಾಡುತ್ತಲೇ ಬಂದಿದ್ದಾರೆ. ದುನಿಯಾ ಗೆದ್ದ ನಂತರದ ಇಂತಿ ನಿನ್ನ ಪ್ರೀತಿಯ ಚಿತ್ರದ ಸೋಲಿನ ನಂತರ ಮಾಡಿದ್ದು ಪಕ್ಕಾ `ಜಂಗ್ಲಿ’ ಸಬ್ಜೆಕ್ಟಿನ ಸಿನಿಮಾವನ್ನ. ಅಂಥಾ ಗೆಲುವಿನ ಸೂತ್ರವನ್ನೇ ಮುಂದುವರೆಸಿ `ಜಾಕಿಯಲ್ಲೂ ಭರ್ಜರಿ ಸಕ್ಸಸ್ ಕಂಡಿದ್ದರು. ಮತ್ತೆ ಕಡ್ಡಿಪುಡಿ ಮತ್ತು ಕೆಂಡಸಂಪಿಗೆ ಚಿತ್ರಗಳು ವಿಮರ್ಶಕರಿಂದ ಯದ್ವಾತದ್ವಾ ಹೊಗಳಿಸಿಕೊಂಡರೂ ಪ್ರೇಕ್ಷಕರನ್ನು ಖುಷಿಪಡಿಸುವಲ್ಲಿ ಮತ್ತದೇ ಸೋಲು… ಈ ಎಲ್ಲ ಕಾರಣಗಳನ್ನು ಮನಸ್ಸಲ್ಲಿಟ್ಟುಕೊಂಡಿರೋ ಸೂರಿ ಈಗ ಮೊದಲು ಅಭಿಮಾನಿಗಳನ್ನು ಸಂತೃಪ್ತಗೊಳಿಸಬೇಕೆಂದು ಖಡಕ್ಕು ನಿರ್ಧಾರಕ್ಕೆ ಬಂದಂತಿದೆ.
09BGFRSURI1_3002247fದೊಡ್ಮನೆ ಹುಡ್ಗ… ಒಂದೇ ಹಿಡಿಯಲ್ಲಿ ಈ ಚಿತ್ರದ ಕಥೆಯನ್ನು ಹೇಳಿಬಿಡುವುದು ಸಾಧ್ಯವಿಲ್ಲ. ಕಥೆ ಎಲ್ಲೋ ಆರಂಭವಾಗಿ, ಇನ್ನೆಲ್ಲೋ ಓಡಾಡಿ ಕಡೆಗೆ ದೊಡ್ಮನೆಗೆ ಬಂದು ನಿಲ್ಲುತ್ತದೆ. ಹುಬ್ಬಳ್ಳಿಯ ಫುಡ್ ಸ್ಟ್ರೀಟಲ್ಲಿ ಬಿರಿಯಾನಿ ಮಾಡುವ ಹೀರೋ. ಗಂಡುಮೆಟ್ಟಿದ ನಾಡಿನ ಜವಾರಿ ಭಾಷೆಯನ್ನು ಮಾತಾಡುವ ಹೀರೋಗೆ ಡ್ರಾಮಾ ಶೋ ನೀಡಲು ಬಂದು ದಿಕ್ಕುತಪ್ಪಿದ ಹುಡುಗಿ ಪರಿಚಯವಾಗುತ್ತಾಳೆ. ಹೀರೋ ಮುಂದೆಯೂ ಭರ್ಜರಿ ಡ್ರಾಮಾ ಮಾಡಿ ಆತನ ಮನಗೆಲ್ಲುತ್ತಾಳೆ. ಆಕೆಯ ತಂದೆ ಅವಿನಾಶ್ ಫೇಮಸ್ ಕ್ರಿಮಿನಲ್ ಲಾಯರ್. ಹಳೇ ರೌಡಿ ಕಂ ಲ್ಯಾಂಡ್ ಮಾಫಿಯಾ ಡಾನ್ ನ ಭಂಟ. ಆ ರೌಡಿಗೊಬ್ಬ ತಮ್ಮ. ಆತ ಆರಂಭದಲ್ಲೇ ಹುಬ್ಬಳ್ಳಿಗೆ ಎಂಟ್ರಿ ಕೊಟ್ಟು ಹೀರೋನಿಂದ ಗೂಸಾ ತಿಂದಿರುತ್ತಾನೆ. ರೌಡಿ ಮತ್ತು ಲಾಯರ್ ಸೇರಿ ಹಳೇ ಮೈಸೂರು ಭಾಗದಲ್ಲಿ ಭೂಮಿ ಕಬಳಿಸಲು ಸ್ಕೆಚ್ ಹಾಕಿರುತ್ತಾರೆ. ಆ ಭೂಮಿಯನ್ನು ನುಂಗಲು ದೊಡ್ಮನೆಯ ರಾಜೀವಪ್ಪ (ಅಂಬರೀಶ್)ರನ್ನು ವಂಚನೆಯ ಎಳೆಯಲ್ಲಿ ಸಿಕ್ಕಿಸಿ ಜೈಲು ಪಾಲು ಮಾಡುತ್ತಾರೆ. ಜೈಲಿನಲ್ಲೇ ಅವರನ್ನು ಫಿನಿಷ್ ಮಾಡೋ ಪ್ಲಾನೂ ನಡೆಯುತ್ತದೆ. ಹಾಗೆ ಸುಫಾರಿ ಪಡೆದು ಜೈಲಿಗೆ ಎಂಟ್ರಿ ಕೊಡೋನು ಹೀರೋ ಸೂರ್ಯ. ಜೈಲಿನಲ್ಲಿ ರಾಜೀವಪ್ಪನನ್ನು ಎತ್ತಲು ಇನ್ನೂ ಮೂರು ಗ್ಯಾಂಗು ಕಾದುಕುಳಿತಿರುತ್ತದೆ. ರಾಜೀವಪ್ಪನನ್ನು ಮುಗಿಸಲು ಹೋದ ಹೀರೋ ಸೂರ್ಯನೇ ಅವರನ್ನು ಕಾಪಾಡುತ್ತಾನೆ… ಯಾಕಂದರೆ, ಈ ಸೂರ್ಯ ಆ ರಾಜೀವಪ್ಪನ ಮಗ ಅರ್ಥಾತ್ ದೊಡ್ಮನೆ ಹುಡ್ಗ!
ಇದೆಲ್ಲ ನಡೆಯೋ ಹೊತ್ತಿಗೆ ಸಿನಿಮಾ ಮಧ್ಯಂತರ ತಲುಪಿರುತ್ತದೆ. ಹುಬ್ಬಳ್ಳಿಯ ಈ ಹುಡುಗ ಅವರ ಮಗನಾಗಲು ಹೇಗೆ ಸಾಧ್ಯ? ಲಾಯರ್ ಮಗಳು ಮತ್ತು ಹೀರೋ ಲವ್ವು ಏನಾಗುತ್ತದೆ? ನಾಯಕ ಹುಬ್ಬಳ್ಳಿ ಬಿಟ್ಟು ದೊಡ್ಮನೆಗೆ ಮತ್ತೆ ಎಂಟ್ರಿ ಕೊಡ್ತಾನಾ? ರಾಜೀವಪ್ಪನ ಜೀವ ಉಳಿಯುತ್ತಾ? ದೊಡ್ಮನೆ ಹುಡ್ಗ ಕುಟುಂಬದ ಗೌರವ ಕಾಪಾಡ್ತಾನಾ…? ಇವೆಲ್ಲಾ ಇಂಟರ್‌ವಲ್ ನಂತರದ ಮತ್ತು ಚಿತ್ರದ ಕ್ಲೈಮ್ಯಾಕ್ಸ್ ನಡುವೆ ಕೆರಳುವ ಕುತೂಹಲಗಳು…Dodmane Hudga_Punith-3B
ಪಕ್ಕಾ ಕಮರ್ಷಿಯಲ್ ಮತ್ತು ಫ್ಯಾಮಿಲಿ ಸೆಂಟಿಮೆಂಟುಗಳನ್ನು ಮನಸ್ಸಲ್ಲಿಟ್ಟುಕೊಂಡು ಸೂರಿ ದೊಡ್ಮನೆ ಹುಡ್ಗ ಚಿತ್ರವನ್ನು ರೂಪಿಸಿದ್ದಾರೆ. ಇಲ್ಲಿ ಪುನೀತ್ ಪಾತ್ರ ಎಷ್ಟು `ಪವರ್’ಫುಲ್ಲಾಗಿದೆಯೋ ಅಂಬರೀಶ್ ಅವರ ರೋಲು ಕೂಡಾ ಅಷ್ಟೇ `ರೆಬೆಲ್ ಆಗಿದೆ. ದಾನ ಮಾಡುವುದನ್ನೇ ದೊಡ್ಡಸ್ತಿಕೆ ಎಂದು ತಿಳಿದ ದೊಡ್ಮನೆಯ ರಾಜೀವಪ್ಪನದ್ದು ಊರಿಗೇ ಉಪಕಾರಿ ಎನಿಸಿಕೊಂಡಿದ್ದರೂ ಹೆತ್ತ ಮಗನ ಪಾಲಿಗೆ ವಿಲನ್ ಆಗಿರುವ ವಿಚಿತ್ರ ಕ್ಯಾರೆಕ್ಟರ್. ಇಂಥಾ ತೋರಿಕೆಯ ಸಿಟ್ಟಿನಾಚೆಗೂ ಮಗನ ಮೇಲೆ ಎದೆಯಲ್ಲಿ ಬೆಟ್ಟದಷ್ಟು ಪ್ರೀತಿ ಹೊಂದಿರುವಂಥಾ ಅಪ್ಪ ಮಗನ ಬಾಂಧವ್ಯದಲ್ಲಿ ಜೀವಂತಿಕೆಯಿದೆ. ಈ ಚಿತ್ರದಲ್ಲಿದ್ದ ನಾಲ್ಕು ಹಾಡುಗಳಲ್ಲಿ ಮೂರಷ್ಟೇ ತೆರೆ ಮೇಲೆ ಬಂದಿದೆ. ಅದರಲ್ಲಿ ಎರಡು ಕೇಳಲು ಚೆನ್ನಾಗಿವೆ, ಒಂದು ನೋಡಲಷ್ಟೇ ಚೆಂದ. ಹರಿಕೃಷ್ಣ ಸ್ವಲ್ಪ ಹೆಚ್ಚು ಶ್ರಮ ವಹಿಸಿದ್ದರೆ `ದೊಡ್ಮನೆ ಲೆವೆಲ್ಲು ಇನ್ನೂ ಜಾಸ್ತಿಯಾಗುತ್ತಿತ್ತು. ಸತ್ಯ ಹೆಗಡೆ-ಸೂರಿ ಕಾಂಬಿನೇಷನ್ನಿದ್ದಾಗ ಛಾಯಾಗ್ರಹಣದ ಬಗ್ಗೆ ಮಾತಾಡೋ ಹಾಗಿಲ್ಲ. ರಾಧಿಕಾ ಪಂಡಿತ್ ನಟನೆಯ ಬಗ್ಗೆ ಕೂಡಾ…
ಒಟ್ಟಾರೆ ದೊಡ್ಮನೆಯ ಈ ಫ್ಲಾಮಿಲಿ ಪ್ಯಾಕಿನಲ್ಲಿ ಕೊರತೆಗಳು ಕಡಿಮೆ. ಬಿರಿಯಾನಿ ಘಮದ ಜೊತೆಗೆ ಮಾಸ್ ಪ್ರೇಕ್ಷಕರಿಗೆ ಬೇಕಿರುವ ಏಳು ಭರ್ಜರಿ ಫೈಟುಗಳು, ಮನಮುಟ್ಟುವ ಮತ್ತು ಎದೆಗೆ ಗುದ್ದುವ ಪಂಚಿಂಗ್ ಡೈಲಾಗುಗಳು… ಎಲ್ಲವೂ ಇದೆ. ಇತ್ತೀಚೆಗೆ ಗೆಲುವಿನ ಪವರ್ ಕೊಂಚ ಇಳಿದಂತಿದ್ದ ಪುನೀತ್‌ಗೂ ಇಂಥಾದ್ದೊಂದು ಮಾಸ್ ಸಬ್ಜೆಕ್ಟ್ ಸಿನಿಮಾ ಮತ್ತು ಈ ಥರದ್ದೊಂದು ಗೆಲುವಿನ ಅವಶ್ಯಕತೆ ಇತ್ತು. ಅದು `ದೊಡ್ಮನೆಯಲ್ಲಿ ಸಖತ್ತಾಗಿಯೇ ಸಾಧ್ಯವಾಗಿದೆ!

  • ಅರುಣ್ ಕುಮಾರ್.ಜಿ
    ನಮ್ಮ ರೇಟಿಂಗ್ * * * * (4/5)

Leave a Reply

Your email address will not be published. Required fields are marked *


CAPTCHA Image
Reload Image