One N Only Exclusive Cine Portal

ಇದು ಕನ್ನಡಿಗರ ಆಲ್ಬಂ…

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕರುನಾಡಿನ ತುಂಬಾ ಕನ್ನಡತನದ ಕಂಪು ಪಸರಿಸಿಕೊಳ್ಳುತ್ತದೆ. ಇದರ ನಡುವೆಯೇ ಕನ್ನಡದ ಪ್ರೇಮವನ್ನು ಯುವ ಮನಸುಗಳಿಗೂ ಹಬ್ಬಿಸುವಂಥಾ ಕೆಲಸ ಕಾರ್ಯಗಳೂ ನಡೆಯುತ್ತವೆ. ಬೆಂಗಳೂರಿನ ಹೆಬ್ಬಾಳ ಕ್ಷೇತ್ರದಲ್ಲಿ ಸಮಾಜ ಸೇವಕಿಯಾಗಿ ಅಪಾರ ಹೆಸರು ಸಂಪಾದಿಸಿರುವ ಸುನೀತಾ ಮಂಜುನಾಥ್ ಅವರೂ ಕೂಡಾ ವಿಶೇಷ ರೀತಿಯಲ್ಲಿ ಕನ್ನಡ ಪ್ರೀತಿ ಮೆರೆದು ಅದನ್ನು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಅನಾವರಣಗೊಳಿಸಲು ಸಜ್ಜಾಗಿದ್ದಾರೆ.

ಸುನಿತಾ ಅವರು ಕನ್ನಡದ ಖ್ಯಾತ ರ್‍ಯಾಪರ್ ಅಲೋಕ್ ಕಡೆಯಿಂದ ಚೆಂದದ್ದೊಂದು ವೀಡಿಯೋ ಆಲ್ಬಂ ರೂಪಿಸಲು ಮುಂದಾಗಿದ್ದಾರೆ. ಈಗಾಗಲೇ ಅಲೋಕ್ ಕನ್ನಡ ಪ್ರೀತಿಯನ್ನು ಹಬ್ಬಿಸುವ ರ್‍ಯಾಪ್ ಸಾಂಗ್‌ಗಳಿಂದಲೇ ಖ್ಯಾತರಾಗಿದ್ದಾರೆ. ಅವರೇ ಈ ವಿಶೇಷವಾದ ವೀಡಿಯೋ ಆಲ್ಬಂ ಅನ್ನು ರೂಪಿಸಲು ತಯಾರಿ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ನಾಯಕಿಯರ ದಂಡೇ ಈ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೇಘನಾ ರಾಜ್, ಶ್ರ್ರುತಿ ಹರಿಹರನ್ ಸೇರಿದಂತೆ ಬಹುತೇಕ ನವ ನಾಯಕಿಯರು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಂದಹಾಗೆ ಇದು ಕನ್ನಡಾಂಬೆಗೆ ಅರ್ಪಿಸಲಾಗುವ ಮಹಿಳಾ ಪ್ರಧಾನ ವೀಡಿಯೋ ಆಲ್ಬಂ. ಈ ಮೂಲಕ ಕನ್ನಡ ಬಂದರೂ ನಾನಾ ಕಾರಣಗಳಿಂದ ಅದನ್ನು ಕಡೆಗಣಿಸುವ ಯುವ ಸಮೂಹದ ಮನಪರಿವರ್ತನೆ ಮಾಡಿ ಅವರ ಮನಸುಗಳಲ್ಲೂ ಕನ್ನಡತನವನ್ನು ನೆಲೆ ನಿಲ್ಲುವಂತೆ ಮಾಡುವುದೇ ಈ ವೀಡಿಯೋ ಆಲ್ಬಂನ ಪ್ರಧಾನ ಉದ್ದೇಶವಂತೆ.
ಈ ಆಲ್ಬಂ ಹೊರ ತರುತ್ತಿರೋ ಸುನಿತಾ ಮಂಜುನಾಥ್ ಕನ್ನಡದ ಬಗೆಗೂ ಅಪಾರವಾಗ ಪ್ರೀತಿ, ಅಭಿಮಾನ ಹೊಂದಿರುವವರು. ಅವರಿಗೆ ಬಿ.ಇ. ಎಂಟೆಕ್ ಮುಗಿಸಿದ ನಂತರ ರೇಲ್ವೇ ಇಲಾಖೆಯಲ್ಲಿ ಸೆಕ್ಷನ್ ಆಫೀಸರ್ ಕೆಲಸ ಅರಸಿಬಂದಿತ್ತು. ಆದರೆ ಸರ್ಕಾರಿ ಕೆಲಸ ಪಡೆಯೋದಕ್ಕಿಂತಾ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ನಾಗ ರೀಕರ ಸಂಕಷ್ಟಗಳಿಗೆ ಮಿಡಿಯಬೇಕು ಅನ್ನೋದು ಸುನೀತಾ ಅವರ ಹೆಬ್ಬಯಕೆಯಾಗಿತ್ತು. ಸುನೀತಾ ಮಂಜುನಾಥ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಅವರದ್ದೇ ಆದ ಶಿಕ್ಷಣ ಸಂಸ್ಥೆಗಳನ್ನೂ ಹೊಂದಿದ್ದಾರೆ. ಚನ್ನಕೇಶವ ಸಮೂಹ ಶಿಕ್ಷಣ ಸಂಸ್ಥೆಗೆ ಸೇರಿದ ಸಂಜಯನಗರದ ರಾಧಾಕೃಷ್ಣ ಆಂಗ್ಲ ಶಾಲೆ, ಕೆಂಗೇರಿ ಉಪನಗರದ ರಾಧಾಕೃಷ್ಣ ಸ್ಕೂಲ್ ಆಫ್ ಎಜುಕೇಶನ್ ಮತ್ತು ಏಡೆಡ್ ಸಂಸ್ಥೆಗಳಾದ ಮಾನಸ ಕನ್ನಡ ಪ್ರೌಢಶಾಲೆ ಮತ್ತು ಕಮಲಾ ಪ್ರೌಢಶಾಲೆ ಸುನೀತಾ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಕನ್ನಡತನದ ಜೊತೆಗೇ ಮಹಿಳಾ ಪ್ರಧಾನ ಭೂಮಿಕೆಯಲ್ಲಿ ಅರಳಿಕೊಳ್ಳಲಿರೋ ಈ ಹಾಡಿನಲ್ಲಿ ಅಡಿಷನಲ್ ಪೊಲೀಸ್ ಕಮೀಷನರ್ ಮಾಲಿನಿ ಕೃಷ್ಣಮೂರ್ತಿ, ಮಾಲಿನಿ ಕೃಷ್ಣಮೂರ್ತಿ ಮುಂತಾದವರನ್ನೂ ಒಳಗೊಳ್ಳಲು ಪ್ರಯತ್ನಿಸಲಾಗುತ್ತಿದೆ. ಇನ್ನುಳಿದಂತೆ ಸ್ಯಾಂಡಲ್‌ವುಡ್ ನಾಯಕಿಯರಾದ ಸೋನು ಗೌಡ, ಆಯುಷಿ, ಭಾವನಾ ರಾವ್, ಮಯೂರಿ ಮುಂತಾದವರೂ ಕಾಣಸಿಕೊಳ್ಳಲಿದ್ದಾರಂತೆ.
ಇದೀಗ ಅವರು ಯುವ ಸಮುದಾಯದತ್ತ ಕನ್ನಡದ ಕಂಪು ಹರಡಿಸೋ ಈ ಸಾರ್ಥಕ ಕೆಲಸಕ್ಕೆ ಮುಂದಾಗಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image