One N Only Exclusive Cine Portal

”ಇನ್ಯಾವತ್ತೂ ಕನ್ನಡ ಸಿನಿಮಾ ಮಾಡಬಾರದು”!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕೆಲವು ಹೊಸಬರ ತಂಡ ಸಿನಿಮಾ ಬಿಡುಗಡೆಗೆ ಮುಂಚೆ, ಅಂದರೆ ಶುರುವಾದಾಗಿನಿಂದ ಬಿಡುಗಡೆಯ ಹಿಂದಿನ ರಾತ್ರಿಯ ತನಕ ಬಲು ಉತ್ಸಾಹದಲ್ಲಿರುತ್ತಾರೆ. ಬರೀ ಉತ್ಸಾಹವಾದರೆ ಪರವಾಗಿಲ್ಲ, ಅದು ಕಾನ್ಫಿಡೆನ್ಸಿನ ಮಟ್ಟ ಮೀರಿ ಓವರ್ ಕಾನ್ಫಿಡೆನ್ಸ್ ರೇಂಜಿನಲ್ಲಿರುತ್ತದೆ.
ಕಳೆದ ವಾರ ಬಿಡುಗಡೆಯಾಗಿರುವ `ದಯವಿಟ್ಟು ಗಮನಿಸಿ ಸಿನಿಮಾ ತಂಡ ಕೂಡಾ ಹಾಗೆ ಓವರ್ ಕಾನ್ಫಿಡೆನ್ಸಿನಲ್ಲಿ ನರಳಿತ್ತು. ವಾಸ್ತವ ಪರಿಸ್ಥಿತಿ ಏನಿತ್ತೋ ಗೊತ್ತಿಲ್ಲ. ಆದರೆ, `ಡೈರೆಕ್ಟ್ರಿಗೆ ಈಗಲೇ ಸಿಕ್ಕಾಪಟ್ಟೆ ಹೆಡ್ ವೇಯ್ಟು ಕಣ್ರೀ…, `ಪ್ರೊಡ್ಯೂಸರು ಚಿಕ್ ಹುಡ್ಗ. ಮಾಡ್ತಿರೋದು ಮೊದಲನೇ ಸಿನಿಮಾ. ಆದರೆ ಇಡೀ ಸಿನಿಮಾ ಇಂಡಸ್ಟ್ರಿಯನ್ನೇ ಅರೆದು ಕುಡಿದವನಂತೆ ಮಾತಾಡ್ತಾನೆ… ಇಂಥ ಮಾತುಗಳು ಮೇಲಿಂದ ಮೇಲೆ ಕೇಳಿಬರುತ್ತಿತ್ತು. ಆಡೋರ ಮಾತು ನಿಜ ಎನ್ನುವ ಹಾಗೆ ದಿನಪತ್ರಿಕೆಯ ಸಿನಿಮಾ ವರದಿಗಾರರೊಬ್ಬರ ಜೊತೆಗೆ ಈ ಎಳೇ ಪ್ರೊಡ್ಯೂಸರ್ ಕೃಷ್ಣ ಭಯಂಕರ ಕಿತ್ತಾಡಿಬಿಟ್ಟಿದ್ದ. ತೀರಾ ಲೋ ಲೆವೆಲ್ಲಿಗಿಳಿದು ಮಾತಾಡಿದ್ದ ವಿಚಾರ ಜಾಹೀರಾಗಿತ್ತು.
ಸಿನಿಮಾ ರಿಲೀಸಿಗೂ ಮುಂಚೇನೇ ಈ ಪಾಟಿ ಮಾತು ಕೇಳಿಬರುತ್ತಿರೋವಾಗ `ಸಿನಿಮಾ ಹೇಗಿದೆ ಗಮನಿಸಬೇಕು ಅಂತ ಕಾದವರು ಸಾಕಷ್ಟಿದ್ದರು. ಪುಣ್ಯಕ್ಕೆ ಕೇಳಿಬರುತ್ತಿದ್ದ ಮಾತುಗಳಿಗೆ ವ್ಯತಿರಿಕ್ತವಾಗಿ ತೆರೆಮೇಲೆ ದೃಶ್ಯಗಳು ಜೀವ ಪಡೆದಿದ್ದವು. ತೀರಾ ಸಂವೇದನಾಶೀಲರಷ್ಟೇ ಕಟ್ಟಿಕೊಡಬಹುದಾದ್ದ ಸುಂದರವಾದ ಸಿನಿಮಾ ಜೀವ ಪಡೆದಿತ್ತು.

ಆದರೆ ಸಿನಿಮಾ ತಂಡದವರ ಓವರ್ ಕಾನ್ಫಿಡೆನ್ಸಿಗೆ ಮಾತ್ರ ಸರಿಯಾದ ಗೂಟ ಬಿದ್ದಿದೆ. ಇವರು ಕೇಳಿದ ಯಾವ ಶೋಗಳನ್ನೂ ಮಲ್ಪಿಪ್ಲೆಕ್ಸ್ ನವರು ನೀಡುತ್ತಿಲ್ಲ. ಬುಕ್ ಮೈ ಶೋದವರು ಒಳ್ಳೆ ಕಮೆಂಟುಗಳನ್ನೆಲ್ಲಾ ಕೆಳಕ್ಕದುಮಿ ನೆಗೆಟೀವ್ ಕಮೆಂಟುಗಳನ್ನು ಮಾತ್ರ ಮೇಲಕ್ಕಿರಿಸಿದ್ದಾರೆ. ಪರ್ಸೆಂಟೇಜು ಕೂಡಾ ಕಡಿಮೆ ಆಗಿದೆ. ಇದೆಲ್ಲದರ ಸೈಡ್ ಎಫೆಕ್ಟ್ ಎನ್ನುವಂತೆ ಇನ್ಯಾವತ್ತೂ ಕನ್ನಡ ಸಿನಿಮಾ ಮಾಡಬಾರದು ಎನ್ನುವ ತೀರ್ಮಾನಕ್ಕೆ ಚಿತ್ರತಂಡ ಬಂದಿದೆ. ಸಿನಿಮಾಸಕ್ತರು, ಪ್ರೇಕ್ಷಕರ ಆದಿಯಾಗಿ ಎಲ್ಲರೂ ಇವರ ನೋವಿನ ನರಳಾಟವನ್ನು ದಯವಿಟ್ಟು ಗಮನಿಸಿ. ಆದರೆ `ಅಯ್ಯೋ.. ಪಾಪ’ ಅನ್ನೋ ಸಿಂಪಥಿ ಮಾತ್ರ ಇವರಿಗೆ ಬೇಡವಂತೆ!

 

///////////////////////////////////////////////////////////

ದಯವಿಟ್ಟು ಗಮನಿಸಿ ಇದು ಗಡಿಬಿಡಿಯ ಲೈಫಿನ ಬಿಡಿಬಿಡಿ ಚಿತ್ರ!

‘ದಯವಿಟ್ಟು ಗಮನಿಸಿ ಚಿತ್ರ ತೆರೆ ಕಂಡಿದೆ. ಹೆಸರಲ್ಲಿಯೇ ಭಿನ್ನವಾದೊಂದು ಕಥಾ ಎಳೆಯ ಮನ್ಸೂಚನೆ ರವಾನಿಸೋ ಮೂಲಕವೇ ಒಂದಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಈ ಚಿತ್ರ ಬೇರೆ ಬೇರೆ ದಿಕ್ಕಿನತ್ತ ನಾಗಾಲೋಟದಲ್ಲಿರೋ ಈ ಬದುಕಿನಲ್ಲಿ ನಾವು ಗಮನಿಸದಿರೋ ಸೂಕ್ಷ್ಮ ಸಂಗತಿಗಳನ್ನು ನಮಗೇ ದಾಟಿಸೋ ಕ್ರಿಯಾಶೀಲ ಪಯತ್ನವಾಗಿ ಗಮನ ಸೆಳೆಯುತ್ತದೆ.

ಅಧ್ಯಾಯ-1
ಮದುವೆ ವಯಸ್ಸು ದಾಟಿದರೂ ಅವಿವಾಹಿತನಾಗೇ ಉಳಿದ ಗಂಡಸು, ಮದುವೆಯಾದ ಎರಡೇ ದಿನಕ್ಕೆ ಸಂಬಂಧ ಮುರಿದುಕೊಂಡ ಮಗಳಿಗೆ ಮತ್ತೊಬ್ಬನನ್ನು ಗಂಟುಹಾಕಲು ಗಂಡು ಹುಡುಕೋ ತಂದೆ, ಸದಾ ಗುದ್ದಾಡುತ್ತಿದ್ದರೂ ಮೂರನೇ ಮಗುವಿಗೆ ರೆಡಿಯಾದ ದಂಪತಿ.

ಅಧ್ಯಾಯ-2
ಜೇಬುಗಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡ ಯುವಕ. ತಪ್ಪಿಸಿಕೊಂಡ ಅಪರಾಧಿಗಳ ಪರವಾಗಿ ಪೊಲೀಸ್ ಠಾಣೆಯಲ್ಲಿ ಪ್ರಾಕ್ಸಿ ಹಾಕೋದು ಉಪಕಸುಬು. ಪೊಲೀಸರಿಂದಲೇ ಪೇಮೆಂಟು ಪಡೆಯೋ ಐನಾತಿ. ಕಳ್ಳ ಗೆಳೆಯ ಜೊತೆಗೇ ಇದ್ದರೂ ಕಾಯಕವೇ ಕೈಲಾಸ ಎಂಬಂತೆ ಬದುಕೋ ಕಾರ್ ಮೆಕ್ಯಾನಿಕ್ಕು. ಕಳ್ಳನ ಹೃದಯವನ್ನೂ ಗಿಲ್ಲುವ ಲವ್ವು. ಹುಡುಗಿಗೆ ಅರೇಂಜ್ ಮ್ಯಾರೇಜೆಂದರೆ ಭಯ. ಆದರೂ ಮನೆಯವರ ಸೂಚನೆಯನ್ನು ಮೀರಲಾಗುವುದಿಲ್ಲ.

ಅಧ್ಯಾಯ-3
ಜಾತಿ ಕಾರಣಕ್ಕಾಗಿ, ಹೆತ್ತವರ ವಿರೋಧದಿಂದ ಪ್ರೀತಿಸಿದವಳನ್ನು ತೊರೆದು ಸನ್ಯಾಸಿಯಂತೆ ಅಲೆಯುವ ಯುವಕ. ಎರಡು ವರ್ಷಕ್ಕೊಮ್ಮೆ ಮತಾಂತರ ಹೊಂದುತ್ತಾ ಕಡೆಗೊಂದು ದಿನ ವಿಶ್ವ ಮಾನವನಾಗಲು ಹೊರಟ ಗಡ್ಡಧಾರಿ. ನೋಡೋರ ಕಣ್ಣಿಗೀತ ಗುರೂಜಿ. ವಾಸ್ತವಕ್ಕೆ ಬಣ್ಣಕಟ್ಟಿ ಬೇರೆಯದ್ದೇ ರೀತಿಯಲ್ಲಿ ಬಿಂಬಿಸುವ ಟೀವಿ ನಿರ್ದೇಶಕಿಯ ಕಮರ್ಷಿಯಲ್ ಮೆಂಟಾಲಿಟಿ. ಏನೂ ಅಲ್ಲದವನನ್ನು ಸ್ವಾಮೀಜಿಯನ್ನಾಗಿಸಿ ಕಾಸು, ಹೆಸರು ಮಾಡಿಕೊಳ್ಳಲು ನಿಂತ ಪುಡಾರಿ. ಬದುಕಿಗಾಗಿ ಸೆರಗು ಹಾಸುವ ಅನಿವಾರ್ಯತೆಗೆ ಸಿಲುಕಿಕೊಂಡ ಮೂವತ್ತು ದಾಟಿದ ಎಳೇ ಮಹಿಳೆ. ಜಗತ್ತು ಅವಳಿಗೆ ಕೊಟ್ಟ ಹೆಸರು ಸೂಳೆ.

ಅಧ್ಯಾಯ-4
ಲವ್ ಮ್ಯಾರೇಜು ಮಾಡಿಕೊಂಡು, ಮಾವ ಕೊಟ್ಟ ಫ್ಲಾಟು, ಕಾರ್ಪೋರೇಟ್ ಜಾಬು ಅಂತಿರುವವನ ಬಾಳಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ. ರಾತ್ರಿಯಿಡೀ ಆಫೀಸಿನ ಕೆಲಸ ಮಿಕ್ಕ ಟೈಮಲ್ಲಿ ಹೆಂಡತಿಯೊಂದಿಗೆ ವಿರಸ. ಜೊತೆಯಲ್ಲಿ ಕೆಲಸ ಮಾಡೋ ಗಂಡುಬೀರಿಯಂತಾ ಹುಡುಗಿಗೆ ಇವನ ಮೇಲೆ ಸೆಳೆತ. ದುಡಿಮೆಯಿಂದ ಎಲ್ಲವೂ ದಕ್ಕಿಬಿಡುತ್ತದೆ ಅನ್ನೋ ಮನಸ್ಥಿತಿಯಿಂದ ಮಗಳ ಬರ್ತಡೇಗೆ ಆನ್ ಲೈನಲ್ಲೇ ಕೇಕು ಆರ್ಡರು ಮಾಡೋ ಕಾರ್ಪೊರೇಟ್ ಕಚೇರಿಯ ಮ್ಯಾನೇಜರು. ಈತ ನಡು ರಾತ್ರಿಯಲ್ಲಿ `ನಾನು ನನ್ನ ರೆಸಿಗ್ನೇಷನ್ನನ್ನು ಮೇಲ್ ನಲ್ಲಿ ಕಳಿಸಲ್ಲ. ಫೋನಲ್ಲೇ ಹೇಳಿಬಿಡ್ತೀನಿ. ತಗಾ… ನಿನ್ನಮ್ಮನ್ ತಿಕಾ ಮುಚ್ಕಂಡು ಮಲ್ಕೋ’ ಅಂದಾಗ ಅದೇ ಮ್ಯಾನೇಜರನ ಎದೆಮೇಲೆ ಚಲಿಸಿದಂತಾಗೋದು ಬುಲ್ಡೋಜರು.
ಈ ನಾಲ್ಕೂ ಅಧ್ಯಾಯಗಳ ಸಾಲುಗಳನ್ನು ನೋಡಿದರೆ ಮೆಟ್ರೋ ಸಿಟಿಯ ಲೈಫು ಒಂದು ಸಲ ಕಣ್ಣಮುಂದೆ ಸರಿದುಹೋದಂತಾಗುತ್ತದಲ್ಲಾ? ಇರುವುದನ್ನು ಬಿಟ್ಟು ಇನ್ಯಾವುದಕ್ಕೋ ಹುಡುಕಾಡುವ ಮನಸ್ಸುಗಳನ್ನೇ ಕೇಂದ್ರವಾಗಿರಿಸಿಕೊಂಡು ನಿರ್ದೇಶಕ ರೋಹಿತ್ ಪದಕಿ ಎಳೆಎಳೆಯಾಗಿ ಬಿಡಿಸಿಡುತ್ತಾ ಕಡೆಗೆ ಎಲ್ಲ ಅಧ್ಯಾಯಗಳನ್ನು ಒಂದೇ ಟ್ರ್ಯಾಕಿಗೆ ತಂದು ರೈಲು ಹತ್ತಿಸಿದ್ದಾರೆ.
ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳನ್ನು `ಗಮನಿಸಿ’, ಸಿನಿಮಾ ರೂಪದಲ್ಲಿ ಬಿಚ್ಚಿಡೋದು ಸ್ವಲ್ಪ ಕಷ್ಟದ ಕೆಲಸವಾದರೂ ನೋಡುಗರ ಪಾಲಿಗೆ ಅದನ್ನು ಸರಳವಾಗಿಸಿದ್ದಾರೆ. `ದಯವಿಟ್ಟು ಗಮನಿಸಿ’ ತೆರೆಮೇಲೆ ಅರಳಿರುವ ಬಣ್ಣವೇ ಒಂಥರಾ ಕ್ಯೂಟ್ ಎನಿಸುವಂತಿದೆ. ನಮ್ಮ ಕಣ್ಣುಗಳೇ ಎದುರಿಗಿನ ದೃಶ್ಯವನ್ನು ನೋಡುತ್ತಿದೆಯೇನೋ ಅನ್ನಿಸುವಷ್ಟು ನೈಜವಾಗಿದೆ. ನಾಲ್ಕಾರು ಜನ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾದ ನಿಜವಾದ ಹೀರೋ ಸಂಗೀತ ನಿರ್ದೇಶಕ ಅನೂಪ್ ಸಿಳೀನ್. ಹಾಡುಗಳು ಮಾತ್ರವಲ್ಲದೆ, ಇಡೀ ಸಿನಿಮಾವನ್ನು ತಣ್ಣಗೆ ನೋಡಿಸಿಕೊಂಡು ಹೋಗೋದು ಅನೂಪ್ ಅವರ ಹಿನ್ನೆಲೆ ಸಂಗೀತ. ಅರಸು ಅಂತಾರೆಯ ಗಡ್ಡದ ಹಾಡು ಸಖತ್ ಮಜಾ ಕೊಡುತ್ತದೆ. ನಟರಂಗ ರಾಜೇಶ್ ನಟನೆ ತುಂಬಾನೇ ಇಷ್ಟವಾಗುವಂತಿದೆ. ಇನ್ನು, ವಸಿಷ್ಠ, ಅವಿನಾಶ್, ರಘು ಮುಖರ್ಜಿ, ಪ್ರಕಾಶ್ ಬೆಳವಾಡಿ ಕೂಡಾ ಪಾತ್ರಗಳನ್ನೇ ತಿಂದುಹಾಕುವಂತೆ ನಟಿಸಿದ್ದಾರೆ.
ಜೀವನ ಅಂದಮೇಲೆ ನಾನಾ ಗುರಿ, ನಾನಾ ದಿಕ್ಕು ಮತ್ತು ರಾಶಿ ರಾಶಿ ಸಮಸ್ಯೆಗಳಿರುತ್ತವೆ. ಇದೆಲ್ಲದರ ನಡುವೆ ನಮ್ಮ ಸುತ್ತಲಿನ ಬದುಕುಗಳ ಬಗ್ಗೆ, ಅವರ ಹಿನ್ನೆಲೆಗಳ ಬಗ್ಗೆ ಗಮನ ಹರಿಸುವ ಸೂಕ್ಷ್ಮತೆಯೇ ಕಳೆದು ಹೋಗಿರುತ್ತೆ. ಈಗಂತೂ ಯಾವ ರೀತಿಯಲ್ಲಿ ಯಾಂತ್ರಿಕತೆ ಆವರಿಸಿಕೊಂಡಿದೆಯಂದರೆ ತೀರಾ ನಮ್ಮ ಬಗೆಗಿನ ಸೂಕ್ಷ್ಮ ಸಂಗತಿಗಳನ್ನೇ ನಾವು ಗಮನಿಸಿರೋದಿಲ್ಲ.
ಅಂಥಾ ನಾನಾ ವಿಚಾರಗಳನ್ನು ನಾಲಕ್ಕು ಕಥೆಗಳ ಮೂಲಕ ಕಟ್ಟಿ ಕೊಡುತ್ತಾ ನಮಗೆ ನಮ್ಮನ್ನೇ ಪರಿಚಯಿಸಿದಂತೆ ಅಚ್ಚರಿ ಹುಟ್ಟಿಸುತ್ತಾ ಸಾಗೋದು ಈ ಚಿತ್ರದ ವಿಶೇಷತೆ. ಇಲ್ಲಿನ ಪಾತ್ರಗಳು ಸಾದಾಸೀದವಾಗಿ ಚಲಿಸಿದರೂ ಅದೆಲ್ಲವುಗಳನ್ನೂ ಕಾಡುವಂತೆ ಕಟ್ಟಿ ಕೊಡುವ ಮೂಲಕ ರೋಹಿತ್ ಪದಕಿ ನಿರ್ದೇಶಕನಾಗಿ ನೆಲೆ ನಿಲ್ಲೋ ಭರವಸೆ ಹುಟ್ಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image