One N Only Exclusive Cine Portal

ಇಷ್ಟರಲ್ಲೇ ಮದುವೆಯಾಗ್ತಾರಂತೆ ಮಿಸ್ಟರ್ ಲೇಜಿ ದಿಗಂತ್!


ಯೋಗರಾಜ ಭಟ್ಟರ ದಯೆಯಿಂದ ನಟನಾಗಿ ರೂಪುಗೊಂಡು ನೆಲೆ ನಿಲ್ಲಲಾಗದೆ ಒದ್ದಾಡುತ್ತಿರೋ ದಿಗಂತ್‌ಗೆ ದೂದ್‌ಪೇಡ ಅಂತೊಂದು ಬಿರುದು ಸಿಕ್ಕಿದ್ದೇ ಗಟ್ಟಿ. ಹೈಟು, ಪರ್ಸನಾಲಿಟಿ ಮತ್ತು ಒಂದು ರೇಂಜಿಗಿರೋ ನಟನೆ… ಇಷ್ಟಿದ್ದರೂ ಬರಖತ್ತಾಗದೇ ಮಂಡೆಬಿಸಿ ಮಾಡಿಕೊಂಡಿರೋ ಈ ಮಲೆನಾಡ ಹುಡುಗ ಯಾವುದು ಏನಾದರಾಗಲಿ, ಮೊದಲೊಂದು ಮದುವೆ ಆಗಿಬಿಡೋ ನಿರ್ಧಾರ ಮಾಡಿದ್ದಾರಾ?

ಹೌದು ಅನ್ನೋ ಉತ್ತರ ದಿಗಂತ್ ಕಡೆಯಿಂದಲೇ ರವಾನೆಯಾಗಿದೆ!
ಅವರೇ ಹೇಳಿಕೊಂಡಿರೋದನ್ನು ನಂಬೋದಾದರೆ ಬರೋ ವರ್ಷ ಅಂದರೆ ೨೦೧೮ರ ಮಧ್ಯಭಾಗದ ಸುಮುಹೂರ್ತವೊಂದರಲ್ಲಿ ಮದುವೆ ಸಮಾರಂಭ ನೆರವೇರೋದು ಪಕ್ಕಾ. ಇದಕ್ಕವರು ಅಚಲ ನಿರ್ಧಾರ ಮಾಡಿಕೊಂಡಂತಿದ್ದಾರೆ. ಆದರೆ ಯಾರೊಂದಿಗೆ ಮದುವೆಯಾಗಲಿದ್ದಾರೆಂಬುದು ಮಾತ್ರ ಸಸ್ಪೆನ್ಸ್!
ಅರೇ ಅದರಲ್ಲಿ ಸಸ್ಪೆನ್ಸ್ ಏನಿದೆ? ದಿಗಂತ್ ಮದುವೆಯಾಗೋದು ಐಂದ್ರಿತಾ ರೇಯನ್ನಲ್ವಾ ಅನ್ನಿಸೋದು ಸಹಜವೇ. ಆದರೆ ಐಂದ್ರಿತಾ ರೇಯನ್ನೇ ವರಿಸೋ ಇರಾದೆ ಇದ್ದಿದ್ದರೆ ಮಾಧ್ಯಮದವರು ‘ಹುಡುಗಿ ಅವ್ರೇನಾ ಅಂತ ಕೇಳಿದ ಪ್ರಶ್ನೆಗೆ ‘ಮದ್ವೆ ಟೈಮಲ್ಲಿ ಗೊತ್ತಾಗುತ್ತೆ ಅನ್ನೋ ನಿಗೂಢ ಉತ್ತರ ಕೊಡೋ ಅವಶ್ಯಕತೆ ಏನಿತ್ತೆಂಬ ಪ್ರಶ್ನೆಯೂ ಸಹಜವಾಗೇ ಕಾಡುತ್ತೆ.
ಒಂದು ಕಾಲದಲ್ಲಿ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಮರೆಯಾದ ಐಂದ್ರಿತಾ ಸದ್ಯ ಮಾಜಿ ಆಗೋ ಹಂತದಲ್ಲಿದ್ದಾರೆ. ಸದ್ಯದ ಸನ್ನಿವೇಶಗಳ ಪ್ರಕಾರ ಹೇಳೋದಾದರೆ ದಿಗಂತ್ ಕೂಡಾ ಅದೇ ಹಾದಿಯ ಪಯಣಿಗ. ಸೋಲು, ಶೂನ್ಯ ವಾತಾವರಣ ಅನ್ನೋದು ಎಲ್ಲ ಕ್ಷೇತ್ರದಲ್ಲೂ ಎಲ್ಲ ಕಾಲದಲ್ಲೂ ಇದ್ದದ್ದೆ. ಆದರೆ ಭಾರೀ ಎಫರ್ಟ್ ಹಾಕಿಯೂ ಅಮರಿಕೊಳ್ಳೋ ಸೋಲನ್ನು ಲೇವಡಿ ಮಾಡೋದು ಮನುಷ್ಯತ್ವವಲ್ಲ. ಆದರೆ ದಿಗಂತ್ ಪಾಲಿಗಿದು ಆತನ ಧಾಡಸೀ ಸ್ವಭಾವದಿಂದಲೇ ಅಟಕಾಯಿಸಿಕೊಂಡ ಸೋಲು!
ಯಾವುದು ಹೆಂಗಾರ ಹಾಳಾಗೋಗ್ಲಿ, ಕಣ್ತುಂಬ ನಿದ್ದೆಯಾದರೆ ಸಾಕೆಂಬ ಮನೋಭಾವ ದಿಗಂತ್‌ನದ್ದು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬಡಿದಾಡಿದರೇನೇ ಗೆಲುವು ದಕ್ಕೋದು ಕಷ್ಟ. ಅಂಥಾದ್ದರಲ್ಲಿ ಕಣ್ತುಂಬಾ ನಿದ್ದೆ, ಹೊಟ್ಟೆ ತುಂಬಾ ಮುದ್ದೆ ಎಂಬೋ ಸುಖದ ಸೂತ್ರಕ್ಕೆ ಗೆಲುವು ಎಟುಕೀತಾ?
ಇದೆಲ್ಲ ಏನೇ ಇದ್ದರೂ ಸುಖಮಯ ಸಂಸಾರ ದಿಗಂತ್ ಪಾಲಿಗೆ ಬಂದೊದಗಲಿ ಅಂತ ಹಾರೈಸೋಣ!

Leave a Reply

Your email address will not be published. Required fields are marked *


CAPTCHA Image
Reload Image