One N Only Exclusive Cine Portal

ಊರಿಡೀ ‘ಉರ್ವಿ’ ಅಬ್ಬರ!

ಕನ್ನಡ ಚಿತ್ರರಂಗಕ್ಕಿದು ಹೊಸಾ ಶೈಲಿಯ, ನವೀನ ಪ್ರಯೋಗದ ಚಿತ್ರಗಳ ಪರ್ವ ಕಾಲ. ವಿಶೇಷವೆಂದರೆ, ಇಂಥಾ ಚಿತ್ರಗಳು ಪ್ರೇಕ್ಷಕರಿಗೂ ಇಷ್ಟವಾಗುತ್ತಿವೆ. ಗೆಲುವಿನ ಸುಗ್ಗಿಗೂ ಸಾಕ್ಷಿಯಾಗುತ್ತಿವೆ. ವಾರದ ಹಿಂದಷ್ಟೇ ತೆರೆ ಕಂಡಿರುವ ‘ಉರ್ವಿ ಚಿತ್ರವೂ ಇದೀಗ ಅಂಥಾದ್ದೇ ಒಂದು ಮೋಡಿ ಮಾಡುವಲ್ಲಿ ಸಂಪೂರ್ಣವಾಗಿ ಯಶ ಕಂಡಿದೆ!

ಉರ್ವಿ ಆರಂಭದಿಂದಲೂ ಪೋಸ್ಟರ್‌ಗಳು ಸೇರಿದಂತೆ ನಾನಾ ರೀತಿಯಲ್ಲಿ ಹವಾ ಸೃಷ್ಟಿಸುತ್ತಲೇ ಸಾಗಿತ್ತು. ಮಹಿಳಾ ಪ್ರಧಾನ ಚಿತ್ರವೆಂದೂ ಕುತೂಹಲ ಕೆರಳಿಸಿತ್ತು. ಇಂಥಾ ಕುತೂಹಲದ ಕಾವೀಗ ತಣಿದಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಲೆಕ್ಷನ್ನು ಕೂಡಾ ಭರ್ಜರಿಯಾಗಿಯೇ ಆಗುತ್ತಿದೆ. ಅದು ದಿನದಿಂದ ದಿನಕ್ಕೆ ಏರುಗತಿ ಕಾಣುತ್ತಿರೋದರಿಂದ ಚಿತ್ರತಂಡವೂ ಖುಷಿಯ ಮೂಡಿನಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕಿರಗೂರಿನ ಗಯ್ಯಾಳಿಗಳು ಬಿಟ್ಟರೆ ಮಹಿಳಾ ಪ್ರಧಾನ ಚಿತ್ರಗಳ ಟ್ರೆಂಡ್ ಇಲ್ಲವೇ ಇಲ್ಲ ಎಂಬಂತಿತ್ತು. ಇಂಥಾದ್ದೊಂದು ಕೊರಗನ್ನು ನೀಗುವಂತೆ ತಯಾರಾಗಿರೋ ಸಂಪೂರ್ಣ ಮಹಿಳಾ ಪ್ರಧಾನ ಚಿತ್ರ ಉರ್ವಿ. ಉರ್ವಿ ಐದು ಮಹಿಳಾ ಪಾತ್ರಗಳ ಸುತ್ತ ಸುತ್ತುವ ರೋಚಕ ಕಥಾ ಹಂದರ ಹೊಂದಿರೋ ಚಿತ್ರ. ಈ ಐದು ಪಾತ್ರಗಳಲ್ಲಿ ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್ ಮತ್ತು ಜಾನ್ಹವಿ ನಟಿಸಿದ್ದಾರೆ. ಅವರೆಲ್ಲರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿಯೂ ಯಶ ಕಂಡಿದ್ದಾರೆ.
ಈ ಚಿತ್ರದ ಹೆಸರೇ ಒಂದಷ್ಟು ಕೌತುಕ ಹುಟ್ಟುವಂತಿದೆ. ಉರ್ವಿ ಅಂದರೇನು ಅರ್ಥ ಎಂಬ ಪ್ರಶ್ನೆಯೂ ಬಹುತೇಕರನ್ನು ಕಾಡುತ್ತದೆ. ಉರ್ವಿ ಎಂಬುದು ಕಾಳಿಕಾ ಮಾತೆಯ ಹೆಸರುಗಳಲ್ಲೊಂದು. ಈ ಚಿತ್ರ ಮಹಿಳಾ ಪ್ರಧಾನವಾದ್ದರಿಂದ ಸ್ತ್ರೀ ಶಕ್ತಿಯ ಸಂಕೇತದಂತಿರುವ ಕಾಳಿಕಾ ಮಾತೆಯ ಆ ಹೆಸರೇ ಸೂಕ್ತ ಎಂಬ ಕಾರಣದಿಂದ ಈ ಹೆಸರಿಟ್ಟಿದ್ದಾರಂತೆ ನಿರ್ದೇಶಕರು. ಉರ್ವಿ ಚಿತ್ರದ ನಿರ್ದೇಶಕ ಪ್ರದೀಪ್ ವರ್ಮಾ ಪ್ರಸಿದ್ಧ ಕಲಾವಿದ ಬಿಕೆಎಸ್ ವರ್ಮಾ ಅವರ ಪುತ್ರ. ಚಿತ್ರರಂಗದ ಬಗ್ಗೆ ಭಾರೀ ಸೆಳೆತ ಮತ್ತು ನಿರ್ದೇಶಕನಾಗುವ ತುಡಿತ ಹೊಂದಿದ್ದ ಪ್ರದೀಪ್ ಯಾವತ್ತೋ ನಿರ್ದೇಶಕರಾಗಬೇಕಿತ್ತು. ಆದರೆ ಅದೇಕೋ ಒಂದಷ್ಟು ಅಡೆತಡೆಗಳುಂಟಾಗಿ ಇದೀಗ ಭಿನ್ನವಾದ ಕಥಾ ಹಂದರ ಮತ್ತು ನಿರೂಪಣೆ ಹೊಂದಿರುವ ಉರ್ವಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದು ಸಂಪೂರ್ಣವಾಗಿ ಗೆದ್ದಿದ್ದಾರೆ.
ರವಿ ಪ್ರಕಾಶ್ ಭಟ್ ಹಣ ಹೂಡಿರುವ ಈ ಚಿತ್ರ ಇದೀಗ ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image