One N Only Exclusive Cine Portal

ಎಟಿ ರಘು ಅವರ ಪರಿಸ್ಥಿತಿ….

ಕನ್ನಡದ ಮೊಟ್ಟಮೊದಲ ವಾಕ್ಚಿತ್ರ ಸತಿ ಸುಲೋಚನ ತೆರೆಕಂಡು ಇಂದಿಗೆ ಭರ್ತಿ ೮೩ ವರ್ಷ. ಈ ೮೩ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆದಿದೆ. ಹೀಗೆ ಸಮೃದ್ಧವಾಗಿ ಬೆಳೆಯಲು ತಮ್ಮ ಅಳಿಲುಸೇವೆ ಸಲ್ಲಿಸಿದ ಸ್ಟಾರ್ ನಿರ್ದೇಶಕರೊಬ್ಬರು ಒಪ್ಪತ್ತಿನ ಊಟಕ್ಕಿಲ್ಲದೇ ಪರದಾಡುವಂಥಾ ದುಃಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರಂತ.

– ಗಣೇಶ್ ಕಾಸರಗೋಡು

ನಿರ್ಮಾಪಕರೂ ಆಗಿದ್ದ ಈ ನಿರ್ದೇಶಕ ಹೆಸರು ಅಪಾಡಂಡ ತಿಮ್ಮಯ್ಯ ರಘು : ಎ.ಟಿ. ರಘು. ವೃತ್ತಿ ಬದುಕಿನಲ್ಲಿ ಸುಮಾರು ೪೫ ಚಿತ್ರಗಳನ್ನು ನಿರ್ದೇಶಿಸಿದ ಎ.ಟಿ. ರಘು ಅವರು ಅಂಬರೀಶ್ ಅವರಿಗಾಗಿಯೇ ೨೫ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರಜನೀಕಾಂತ್ ನಟಿಸಿದ ಮೇರಿ ಅದಾಲತ್ ಚಿತ್ರವನ್ನು ನಿರ್ದೇಶಿಸಿದವರೂ ಇವರೇ. ಅರ್ಜುನ್ ಸರ್ಜಾ ಅವರಿಗೆ ಆಶಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದವರೂ ಇದೇ ಎ.ಟಿ. ರಘು. ಇವರಿಂದಾಗಿ ಈಗ ಸ್ಟಾರ್ಗಳಾಗಿರುವವರ ಒಂದು ದೊಡ್ಡ ಪಡೆಯೇ ಇದೆ. ಇಂಥಾ ಎ.ಟಿ. ರಘು ಬೆಂಗಳೂರಿನ ಬಸವೇಶ್ವರ ನಗರದ ೩ x ೪ ಅಳತೆಯ ಪುಟ್ಟ ಗೂಡಿನಂಥಾ ಖೋಲಿಯಲ್ಲಿ ಬದುಕು ನಡೆಸಿದ್ದಾರೆ. ಬೆಳಗ್ಗೆ ಇದ್ದರೆ ಮಧ್ಯಾಹ್ನಕ್ಕಿಲ್ಲ, ಮಧ್ಯಾಹ್ನಕ್ಕಿದ್ದರೆ ರಾತ್ರಿಗಿಲ್ಲದಂಥಾ ದುಃಸ್ಥಿತಿ. ಜೊತೆಗೆ ಮೈ ತುಂಬಾ ಖಾಯಿಲೆ. ಎರಡೂ ಕಿಡ್ನಿ ಫೇಲ್ಯೂರ್ ಆಗಿ ವಾರಕ್ಕೆ ೩ ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳದಿದ್ದರೆ ರಘು ಅವರನ್ನು ಆ ದೇವರೇ ಕಾಪಾಡಬೇಕು! ೧೯೭೯ರಿಂದ ೧೯೯೬ರ ತನಕ ಕನ್ನಡ ಚಿತ್ರರಂಗದಲ್ಲಿ ಏಕಮೇವಾದ್ವಿತೀಯ ಸ್ಟಾರ್ ನಿರ್ದೇಶಕರಾಗಿ ಮೆರೆದ ಎ.ಟಿ. ರಘು ನಿರ್ದೇಶಿಸಿರುವ ಚಿತ್ರಗಳ ಪಟ್ಟಿಯನ್ನಷ್ಟೇ ಗಮನಿಸಿ:
ಮಂಡ್ಯದ ಗಂಡು, ಅಂತಿಮ ತೀರ್ಪು, ಆಶಾ, ಮೈಸೂರು ಜಾಣ, ಮಿಡಿದ ಹೃದಯ, ಶ್ರಾವಣ ಸಂತೆ, ಕಾಡಿನ ರಾಜ, ಶಂಕರ್-ಸುಂದರ್, ನ್ಯಾಯ ನೀತಿ ಧರ್ಮ, ಗೂಂಡಾಗುರು, ಧರ್ಮಯುದ್ಧ, ಅರ್ಜುನ್, ಪ್ರೀತಿ, ನ್ಯಾಯಕ್ಕಾಗಿ ನಾನು, ಪದ್ಮವ್ಯೂಹ, ದೇವರ ಮನೆ, ಬೇಟೆಗಾರ, ರ‍್ಯಾಂಬೋರಾಜ, ಕೃಷ್ಣ ಮೆಚ್ಚಿದ ರಾಧೆ, ಇನ್ಸ್‌ಪೆಕ್ಟರ್ ಕ್ರಾಂತಿ ಕುಮಾರ್, ಮೇರಿ ಅದಾಲತ್ (ಹಿಂದಿ) ಇತ್ಯಾದಿ ಇತ್ಯಾದಿ. ಹಾಗಿದ್ದರೆ ಇವರ ಇಳಿ ಸಂಜೆಯ ಬದುಕಿನ ಈ ದುಃಸ್ಥಿತಿಗೆ ಕಾರಣವೇನು? ಎ.ಟಿ. ರಘು ಹೇಳುತ್ತಾರೆ: ನಿರ್ದೇಶಕನಾಗಿ ನಾನು ಕಂಡಿರುವ ಯಶಸ್ಸನ್ನು ಕನ್ನಡದ ಬೇರೆ ಯಾವ ನಿರ್ದೇಶಕನೂ ಕಂಡಿರಲಾರ. ಖ್ಯಾತಿ, ದುಡ್ಡು, ಮನೆ, ಮಠ, ಕಾರು, ಸುಖ ಸಂಸಾರ… ಯಾವುದಕ್ಕೂ ಕೊರತೆಯಿರಲಿಲ್ಲ. ಆದರೆ ಇದು ಹೆಚ್ಚು ಕಾಲ ಉಳಿಯಲಿಲ್ಲ. ಅದ್ಯಾವ ದುಸಾರೆ ಬಂತೋ ಕೈಲಿದ್ದ ದುಡ್ಡನ್ನು ಸುರಿದು ರ‍್ಯಾಂಬೋರಾಜ ಎಂಬ ಚಿತ್ರವನ್ನು ನಿರ್ಮಿಸಿದೆ. ಅದೂ ತೋಪಾಯಿತು. ನಾನು ಅರ್ಧ ಸತ್ತು ಹೋದೆ. ನಂತರ ‘ಕಾಳಿ’ ಚಿತ್ರವನ್ನು ಮಾಡಿದೆ. ಅದರಲ್ಲೂ ಸೋಲಾಯಿತು. ನಾನು ಪೂರ್ತಿ ಸತ್ತುಹೋದೆ. ಸಾಲಸೋಲ ಮಾಡಿ ನಿರ್ಮಿಸಿದ ಚಿತ್ರಗಳು ಕೈ ಕೊಟ್ಟಾಗ ಸಾಲಗಾರರು ಮನೆ ಮುಂದೆ ಕ್ಯೂ ನಿಂತರು. ಹೆಂಡತಿಯ ಒಡವೆಯನ್ನು ಮಾರಿದೆ. ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ! ಎಲ್ಲಿ ಸಾಕು? ಬಸವೇಶ್ವರ ನಗರದಲ್ಲಿ ಆಸೆಯಿಂದ ಕಟ್ಟಿಸಿದ ಮಹಡಿ ಮನೆಯನ್ನು ಮಾರಲೇಬೇಕಾಯಿತು. ಅರ್ಜುನ್ ಸರ್ಜಾನನ್ನು ನಾಯಕನನ್ನಾಗಿ ಮಾಡಿ ಚಿತ್ರಿಸಿದ ಆಶಾ ಚಿತ್ರದ ಭರ್ಜರಿ ಯಶಸ್ಸಿನ ನೆನಪಿಗಾಗಿ ಕಟ್ಟಿಸಿದ ದೊಡ್ಡ ಬಂಗಲೆಯದು. ಮನೆಗೆ ಆಶಾ ಎಂದೇ ಹೆಸರಿಟ್ಟಿದ್ದೆ. ಆದರೆ ಕಾಳಿ ಚಿತ್ರದಿಂದಾಗಿ ನನ್ನ ಬದುಕಿನ ಆಶಾಸೌಧವೇ ಕುಸಿದುಹೋಯಿತು.
ಸಂಪಾದನೆಯಿಲ್ಲದೇ ಹತ್ತಿಪ್ಪತ್ತು ವರ್ಷಗಳಾದವು. ನನಗೀಗ ೭೦ರ ವಯಸ್ಸು. ಕಾಡು ಬಾ ಅಂತಿದೆ; ಊರು ಹೋಗು ಅಂತಿದೆ. ಡಯಾಲಿಸಿಸ್‌ಗೇ ತಿಂಗಳಿಗೆ ಸಾವಿರಾರು ರೂಪಾಯಿಗಳು ಬೇಕು. ಔಷಧೋಪಚಾರವೆಲ್ಲಾ ಸೇರಿದರೆ ೩೫,೦೦೦ ರೂಪಾಯಿ ಬೇಕೇಬೇಕು. ಎಲ್ಲಿಂದ ತರಲಿ? ಹತ್ತು ಲಕ್ಷದ ಸಾಲವಿದೆ. ಕುಟುಂಬಸ್ಥರ ಕೈಯಿಂದಲೇ ಪಡೆದ ಸಾಲ. ವಾಪಾಸ್ಸು ಕೊಡುವುದು ಹೇಗೆ? ರಾಜನಂತೆ ಬದುಕಿದ ನನಗೆ ಈ ದುಃಸ್ಥಿತಿ ಬರಬಾರದಿತ್ತು. ಒಂದು ರೀತಿಯಲ್ಲಿ ನನ್ನ ಈ ಸ್ಥಿತಿಗೆ ಬೇರೆ ಯಾರೂ ಕಾರಣರಲ್ಲ. ನಿಮ್ಮಾಣೆಗೂ ಹೇಳ್ತಿದ್ದೇನೆ, ಹತ್ತು ರೂಪಾಯಿ ಕೈಲಿದ್ದರೆ ಹೋಟೆಲ್‌ಗೆ ಹೋಗಿ ಅನ್ನ ಸಾಂಬಾರ್ ತಿನ್ನಬಹುದು. ಆದರೆ ನಾನು ಹಾಗೆ ಮಾಡೋನಲ್ಲ. ಹತ್ತು ರೂಪಾಯಿಗೆ ಅಕ್ಕಿ ತಂದು ಮನೆಯಲ್ಲೇ ಬೇಯಿಸಿದರೆ ನಾಲ್ಕು ಹೊತ್ತಿನ ಊಟವಾಗುತ್ತದೆ ಎಂಬ ಸ್ವಾರ್ಥ ನನ್ನದು. ಪ್ರತಿ ದಿನದ ಊಟಕ್ಕಾಗಿ ಯಾರದ್ದೋ ಕೈ ಕಾಯುವ ದುಃಸ್ಥಿತಿ ಇದೆಯಲ್ಲಾ ಎಂಥಾ ಶತ್ರುವಿಗೂ ಬರಬಾರದು ಸಾರ್… ಎಂದು ಹೇಳುತ್ತಾ ಎ.ಟಿ. ರಘು ಅಕ್ಷರಶಃ ಕಣ್ಣೀರಾದರು.

A.T. RAGHU 9900643345

Leave a Reply

Your email address will not be published. Required fields are marked *


CAPTCHA Image
Reload Image