One N Only Exclusive Cine Portal

ಕನ್ನಡಕ್ಕೆ ಮರಳಿದ ಪೂರಿಯ ‘ರೋಗ್ ‘!

“ಪೂರಿ ಜಗನ್ನಾಥ್ ಮತ್ತೆ ಕನ್ನಡ ಸಿನಿಮಾ ಮಾಡ್ತಿದಾರಂತೆ…” ಸ್ಯಾಂಡಲ್ ವುಡ್ ಪಾಲಿಗೆ ಈ ಮಾತು ತೀರಾ ಹಳೇದು. ಆದರೆ, ಶಿವರಾಜ್ ಕುಮಾರ್ ಅವರ ಯುವರಾಜ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ಅಪ್ಪು’ ಚಿತ್ರದ ನಂತರ ಪೂರಿ ಕನ್ನಡದ ಮಟ್ಟಿಗೆ ಪರಾರಿಯಾಗಿ, ತೆಲುಗಿನಲ್ಲಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಿದ್ದರು.

ಈ ನಡುವೆ ‘ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ನಟಿಸಲಿರುವ ಮೊದಲ ಸಿನಿಮಾವನ್ನೂ ಪೂರಿಯೇ ನಿರ್ದೇಶಿಸುತ್ತಾರೆಂತೆ…’ ಅನ್ನೋ ಮಾತು ಕೇಳಿಬಂತು. ಆದರದು ಸಾಧ್ಯವಾಗಿರಲಿಲ್ಲ. ನಂತರ ‘ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾವನ್ನು ನಿರ್ದೇಶಿಸಲು ಪೂರಿ ಜಗನ್ನಾಥ್ ಓಕೆ ಅಂದುಬಿಟ್ಟಿದ್ದಾರೆ. ಇನ್ನೇನು ಬಂದು ಆಕ್ಷನ್ ಅನ್ನೋದೊಂದೇ ಬಾಕಿ’ ಎನ್ನುವಷ್ಟರ ಮಟ್ಟಿಗೆ ಸುದ್ದಿಯಾಗಿತ್ತು… ಆದರೆ ಅದೂ ಕೈಗೂಡಿರಲಿಲ್ಲ. ಕೊನೆಗೆ ರಾಜಮೌಳಿ ಶಿಷ್ಯನನ್ನು ಕರೆತಂದು ಕುಮಾರಸ್ವಾಮಿ ಮಗನ ಸಿನಿಮಾವನ್ನು ಒಪ್ಪಿಸಿದರು. ಇವೆಲ್ಲದರ ನಡುವೆ ಈಗ ಕಡೆಗೂ ಪೂರಿ ಜಗನ್ನಾಥ್ ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ‘ರೋಗ್’ ಅನ್ನೋ ಸಿನಿಮಾದ ಮೂಲಕ. ಈ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್! ತಮ್ಮ ಚಿಕ್ಕಪ್ಪನ ಮಗ ಇಶಾನ್ ಗಾಗಿ ಮನೋಹರ್ ಶ್ಯಾನೆ ಕಷ್ಟ ಪಟ್ಟು ಪೂರಿಯನ್ನು ಹಿಡಿದುತಂದಿದ್ದಾರೆ.

ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಏಕಕಾಲದಲ್ಲಿ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ. ಮನ್ನಾರ್ ಛೋಪ್ರಾ ಈ ಸಿನಿಮಾದ ನಾಯಕಿ. ಗಮ್ಮತ್ತೆಂದರೆ, ಈ ಸಿನಿಮಾ ಅದಾಗಲೇ ಅರ್ಧಭಾಗ ಚಿತ್ರೀಕರಣವನ್ನೂ ಸೈಲೆಂಟಾಗಿ ಮುಗಿಸಿದೆ. ಎರಡು ದಿನದಿಂದ ಒರಾಯನ್ ಮಾಲ್ ನಲ್ಲೂ ಶೂಟಿಂಗ್ ನಡೆಸಿದ್ದಾರೆ. ಪೂರಿ ಜಗನ್ನಾಥ್ ಬೆಂಗಳೂರಲ್ಲೇ ಬೀಡುಬಿಟ್ಟು ಶೂಟಿಂಗ್ ನಡೆಸುತ್ತಿದ್ದರೂ ಈ ಚಿತ್ರದ ಹೀರೋ ಹೊಸಬನಾಗಿರುವ ಕಾರಣಕ್ಕೆ ‘ಎಲ್ಲೋ ತೆಲುಗು ಸಿನಿಮಾ ತೆಗೀತಿರಬೇಕು’ ಎಂದು ಮಾಧ್ಯಮದವರೂ ಸುಮ್ಮನಾಗಿಬಿಟ್ಟಿದ್ದಾರೆ. ಆದರೆ ಮನೋಹರ್ ಮತ್ತು ಪೂರಿ ಸೇರಿ ಸದ್ದಿಲ್ಲದೇ ಸಿನಿಮಾ ಮಾಡಿ ಮುಗಿಸುತ್ತಿದ್ದಾರೆ!

ಅಂದಹಾಗೆ, ಎಲ್ಲಾ ಕರೆಕ್ಟಾಗಿ ನಡೆದಿದ್ದರೆ, ಸಿ.ಆರ್. ಮನೋಹರ್ ಕೈಗೆ ಪೂರಿ ಸಿಕ್ಕಿಕೊಳ್ಳುತ್ತಿರಲಿಲ್ಲ. ಪೂರಿ ಜಗನ್ನಾಥ್ ಮೆಘಾ ಸ್ಟಾರ್ ಚಿರಂಜೀವಿ ನಟನೆಯ ೧೫೧ನೇ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಪೂರಿ ಬರೆದ ಕಥೆ ಚಿರುಗೆ ಇಷ್ಟವಾಗಿರಲಿಲ್ಲ. ಅದನ್ನು ಒಂಚೂರು ಬದಲಿಸಿ ಮತ್ತೊಮ್ಮೆ ರೀಡಿಂಗ್ ಕೊಡಬೇಕು ಎನ್ನುವಷ್ಟರಲ್ಲಿ ಚಿರಂಜೀವಿ ಮಾಧ್ಯಮದವರ ಮುಂದೆ ‘ಆ ಕಥೆ ನನಗೆ ಹಿಡಿಸಲಿಲ್ಲ’ ಎಂದುಬಿಟ್ಟಿದ್ದರು. ಅಲ್ಲಿಗೆ ಪೂರಿ ಮುನಿಸಿಕೊಂಡು ಪ್ರಾಜೆಕ್ಟ್ ಕೈಬಿಟ್ಟಿದ್ದರು. ಹೀಗೆ ಚಿರಂಜೀವಿ ರಿಜೆಕ್ಟ್ ಮಾಡಿದ ಕಾರಣಕ್ಕೆ ಇಶಾನ್ ನಟಿಸುತ್ತಿರುವ ಮೊದಲ ಸಿನೆಮಾವನ್ನು ಪೂರಿ ಕೈಗೆತ್ತಕೊಳ್ಳುವಂತಾಗಿದೆ. -ಅರುಣ್

Leave a Reply

Your email address will not be published. Required fields are marked *


CAPTCHA Image
Reload Image