One N Only Exclusive Cine Portal

ಕನ್ನಡ ಚಲನಚಿತ್ರೋತ್ಸವ –  Day 3 : ರಾಮಾಚಾರಿ, Ist RANK RAJU, ಶಿವಲಿಂಗ

ಕನ್ನಡ ಚಲನಚಿತ್ರೋತ್ಸವದ ಕೊನೆಯ ದಿನವಾದ ಸೋಮವಾರ (18.04.2016)  ವಾರದ ಆರಂಭದ ದಿನವಾಗಿದ್ದು ಉದ್ಯೋಗಸ್ಥರಿಗೆ ಸಿನೇಮ ನೋಡುವ ಅವಕಾಶ ತಪ್ಪಿದಂತಾಯ್ತು.    ಅಂದು ಪ್ರದರ್ಶನಗೊಂಡ ಮೂರು ಚಿತ್ರಗಳೂ – Mr. & Mrs. ರಾಮಾಚಾರಿ,  Ist Rank Raju ಮತ್ತು ಶಿವಲಿಂಗ , ಕಮರ್ಶಿಯಲ್ ಚಿತ್ರಗಳು.  ಮನವನ್ನು ರಂಜಿಸುವ ಹಾಡು, ಡಾನ್ಸು, ಸ್ವಲ್ಪ ಮಸಾಲಾ, ಚೂರು ಡಿಶುಂ ಡಿಶುಂ  ಇಷ್ಟಪಡುವ ಪ್ರೇಕ್ಷಕರಿಗೆ  ಭಾನುವಾರ ಪ್ರದರ್ಶನಗೊಂಡ  ಅಭಿರುಚಿ ಚಿತ್ರಗಳು ಕೆಲವರಿಗೆ  ಬೋರ್ ಹೊಡೆಸಿ, ಭಾನುವಾರವೇ ಈ ವಾಣಿಜ್ಯ ಚಿತ್ರಗಳಿರಬಾರದಿತ್ತೇ ಎಂದು ಹಳಹಳಿಸುವಂತಾಯ್ತು.

ಹರಿವು“, “ವಿದಾಯದಂಥ ಅಭಿರುಚಿ ಚಿತ್ರಗಳನ್ನು ನೋಡಿ ಆನಂದಿಸಿದ ಪ್ರೇಕ್ಷಕರಿಗೆ ಒಂದಿಷ್ಟು ಒಳ್ಳೆಯ ಸಿನೇಮ ನೋಡಿ ಭಾನುವಾರದ ರಜೆಯನ್ನು  ಸಾರ್ಥಕವಾಗಿ ಕಳೆದ ನೆಮ್ಮದಿ.

ಎಂದಿನಂತೆ ಬೆಳಗಿನ Mr. & Mrs ರಾಮಾಚಾರಿ ಪ್ರದರ್ಶನಕ್ಕೆ ಸಾಧಾರಣ ಜನಸಂದಣಿ ಇದ್ದು ಉಳಿದೆರಡೂ ಚಿತ್ರಗಳಿಗೂ ಹೌಸ್ ಫುಲ್ ಜನ ಸೇರಿದ್ದರು.   ದೆಹಲಿ ಕನ್ನಡಿಗರಿಗೂ ಇದು ಮೊದಲ ಸುವರ್ಣಾವಕಾಶ ಲಭಿಸಿದ್ದು ಮತ್ತೆ ಮತ್ತೆ ಇಂಥ ಕನ್ನಡ  ಚಲನಚಿತ್ರೋತ್ಸವ ಜರುಗುತ್ತಿರಲಿ ಎನ್ನುವುದೇ ಎಲ್ಲರ ಆಶಯವಾಗಿತ್ತು.   ಚಲನಚಿತ್ರ ಅಕಾಡೆಮಿಗೂ ಇದು ಸಂತಸ ತಂದ ಅಪೂರ್ವ ಘಳಿಗೆಯೆನ್ನಬಹುದು.  ಊಟ ತಿಂಡಿಯನ್ನು ಸವಿಯುವ ಜನರಿಗೆ ಪುಷ್ಕಳವಾದ ಭೋಜನ,  ಸಂಜೆಗೆ ಚಹ, ಕಾಫಿ, ಬಿಸ್ಕತ್ತು,  ಸಮೋಸ ಮನರಂಜನೆಯ ಸಂತೊಷವನ್ನು ಇಮ್ಮಡಿಗೊಳಿಸಿದ್ದವೆನ್ನಬಹುದು.   ಶನಿವಾರ , ಭಾನುವಾರಕ್ಕಿಂತ   ಸೋಮವಾರದ ಊಟ ಬಹಳ ಚೆನ್ನಾಗಿತ್ತು ಎಂದು ಮೆಚ್ಚಿದವರೂ  ಇದ್ದರು.

’ನಾಗರಹಾವು’ ಚಿತ್ರದ ರಾಮಾಚಾರಿಯಾಗಿ ಬಂದ ವಿಷ್ಣುವರ್ಧನ್ ಅಭಿಮಾನಿಯ ಪಾತ್ರದಲ್ಲಿ, ಅದೇ ಹೆಸರಿನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿಯಾಗಿ ಅಭಿನಯಿಸಿದ ಈ ಚಿತ್ರ 2015 ರ ಅತ್ಯಂತ ಯಶಸ್ವಿ ಚಿತ್ರ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಮೊದಲ ಚಿತ್ರ ರಜತೋತ್ಸವ ಕಂಡದ್ದೇ ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರ ಕೂಡಾ.

ಮಧ್ಯಾಹ್ನದ ಭೋಜನದ  ನಂತರ ಪ್ರದರ್ಶನಗೊಂಡ Ist RANK RAJU ನರೇಶ್ ಕುಮಾರ್ ಬರೆದು ನಿರ್ದೇಶಿಸಿದ ಮೊದಲ ಚಿತ್ರ.  ಅವರ ಮೊದಲ ಚಿತ್ರವೇ ಜನಪ್ರಿಯವಾಗಿ ಶತದಿನದ  ಸಂಭ್ರಮವನ್ನು ದಾಖಲಿಸಿದೆ.

ಹೆಸರಾಂತ ನಿರ್ದೇಶಕ ಪಿ.ವಾಸು ರಚಿಸಿ ನಿರ್ದೇಶಿಸಿರುವ  “ಶಿವಲಿಂಗ”  ಕರ್ನಾಟಕದಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.  ಇದೇ ಮೊದಲ ಬಾರಿಗೆ ಲಂಡನ್‍ನಲ್ಲಿ ಅದರ ಬಿಡುಗಡೇಯ ವೇಳೆ, ನಾಯಕನಟ ಶಿವರಾಜ್‍ಕುಮಾರ್ ಚಿತ್ರತಂಡದೊಂದಿಗೆ ತೆರಳಿ ಪಾಲ್ಗೊಂಡಿದ್ದರು.

ಸತತ ಮೂರುದಿನಗಳ ಚಿತ್ರೋತ್ಸದಲ್ಲಿ ಪಾಲ್ಗೊಂಡು ಚಿತ್ರಗಳನ್ನು ನೋಡಿ ನಲಿದ ದೆಹಲಿ ಕನ್ನಡಿಗರಿಗೆ ಬಿಸಿಲೂರಿನ  ಬಿರು ಬಿಸಿಲು ಸಹ ಹಿತವಾಗಿತ್ತು.   ಗುರಗಾಂವ್, ನೊಯಿಡಾ, ದ್ವಾರಕಾ, ಜನಕ್‍ಪುರಿ ಹೀಗೆ ಎಲ್ಲೆಲ್ಲೂ ಹರಿದುಹಂಚಿಹೋಗಿರುವ ಕನ್ನಡಿಗರು ಅಪರೂಪಕ್ಕೆ ಒಂದೆಡೆ ಸೇರಿ ಒಡನಾಡುವ ಸಂತೋಷವೇ ಬೇರೆ.  ಅಂಥ ಅವಕಾಶಕ್ಕಾಗಿ ಪ್ರತಿಯೊಬ್ಬರೂ ಕಾಯುತ್ತಿರುತ್ತೇವೆ.   ಹೀಗೆ ಕಾರ್ಯಕ್ರಮಗಳ ನಿಮಿತ್ತ  ಸೇರಿದಾಗಲೇ ನಮಗೆ ಯಾರದೋ ಸಾವು, ಯಾರದೋ  ಮದುವೆ, ಮುಂಜಿವೆ, ಇನ್ಯಾರದೋ ಮಕ್ಕಳ ಓದು ಅಭ್ಯಾಸ , ಅನಾರೋಗ್ಯ  ” ಎಂದು ಆಪ್ತರೊಡನೆ ಸುಖ ದುಃಖ , ಉಭಯಕುಶಲೋಪರಿ ಹಂಚಿಕೊಳ್ಳುವ ವೇದಿಕೆಯೂ ಆಗಿರುತ್ತದೆ.  ಕನ್ನಡಿಗರು  ಸೇರುವುದೆಂದರೆ ಅಲ್ಲೆಲ್ಲಾ ಕನ್ನಡದ ಕಲರವ ತುಂಬಿ ಕನ್ನಡದ ಹಬ್ಬವೇ ಆಗಿರುತ್ತದೆ.

ದೆಹಲಿ ಕರ್ನಾಟಕ ಸಂಘ ಒಳ್ಳೆಯ ಪ್ರಚಾರ ನೀಡಿ ತನ್ನ ಸಂಪೂರ್ಣ ಸಹಯೋಗ ಒದಗಿಸಿತು.  ಕರ್ನಾಟಕ ಚಲನ ಚಿತ್ರ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಲನಚಿತ್ರೋತ್ಸವ ನಿರ್ದೇಶನಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮುಂತಾಗಿ ಎಲ್ಲರೂ ರಾಷ್ಟ್ರದ ರಾಜಧಾನಿಯಲ್ಲಿ ಮೊಟ್ಟಮೊದಲ ಬಾರಿಗೆ ಹಮ್ಮಿಕೊಂಡ  ಕನ್ನಡ ಚಲನಚಿತ್ರೋತ್ಸವ  ನಿಜದ ಅರ್ಥದಲ್ಲಿ ಕನ್ನಡಿಗರ ಉತ್ಸವವಾಗಿ  ಅತ್ಯಂತ ಯಶಸ್ಸನ್ನು ಕಂಡಿತು.  ಹೊರನಾಡ ಕನ್ನಡಿಗರಿಗೆ ಮತ್ತೆ ಮತ್ತೆ ಇಂಥ ಕಾರ್ಯಕ್ರಮಗಳನ್ನು ಸವಿಯುವ ಅವಕಾಶ ಸಿಗಲಿ ಎಂದು ಆಶಿಸುತ್ತೇವೆ.

  • ರೇಣುಕಾ ನಿಡಗುಂದಿ

Leave a Reply

Your email address will not be published. Required fields are marked *


CAPTCHA Image
Reload Image