One N Only Exclusive Cine Portal

ಕನ್ನಡ ಪ್ರೇಮ ಮೆರೆದ ಗಡಿನಾಡ ಜನನಾಯಕ!

ಮಾಜಿ ಸಚಿವ ಜನಾರ್ಧನ ರೆಡ್ಡಿ ರಾಜಕಾರಣಿಯಾಗಿ, ಉದ್ಯಮಿಯಾಗಿ ಪರಿಚಿತರು. ಆದರೆ ಅವರ ಅತೀವ ಕನ್ನಡ ಪ್ರೇಮದ ಬಗ್ಗೆ ಅವರ ಹತ್ತಿರದ ಮಂದಿಯನ್ನು ಬಿಟ್ಟರೆ ಬೇರ್‍ಯಾರಿಗೂ ಪರಿಚಯ ಇರದಿದ್ದರೆ ಅಚ್ಚರಿಯೇನಿಲ್ಲ. ಆದರೆ ಇದೀಗ ಒಂದು ಚೆಂದದ ಕೆಲಸದ ಮೂಲಕ ಜನಾರ್ಧನ ರೆಡ್ಡಿಯವರ ಕನ್ನಡ ಪ್ರೇಮ ಕನ್ನಡಿಗರೆದುರು ಅನಾವರಣಗೊಂಡಿದೆ. ಸ್ವತಃ ಜನಾರ್ಧನ ರೆಡ್ಡಿಯವರೇ ನಾಡಗೀತೆಯನ್ನು ಹಾಡಿ, ಅಭಿನಯಿಸಿರುವ ಈ ವಿಡಿಯೋ ಇದೀಗ ಅನಾವರಣಗೊಂಡಿದೆ.

ಈ ಮೂಲಕ ಕನ್ನಡ ರಾಜ್ಯೋತ್ಸವದ ಈ ಶುಭ ಘಳಿಗೆಯಲ್ಲಿ ಕನ್ನಡಾಂಬೆಗೆ ನಿಸ್ವಾರ್ಥದಿಂದ ಗೌರವ ಸಮರ್ಪಿಸಿದ ಧನ್ಯತಾ ಭಾವ ರೆಡ್ಡಿಯವರದ್ದು. ಪ್ರತೀ ರಾಜ್ಯೋತ್ಸವದ ಸಂದರ್ಭದಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಅಚ್ಚರಿದಾಯಕವಾಗಿ ಇಂಥಾ ಕನ್ನಾಡಾಭಿಮಾನ ಹೊರ ಹೊಮ್ಮುತ್ತಾ ಬಂದಿದೆ. ಕಳೆದ ಸಾರಿ ಲೂಸಿಯಾ ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಮೈಸೂರಿನಲ್ಲಿ ಬಾರಿಸು ಕನ್ನಡ ಡಿಂಡಿಮವಾ ಗೀತೆಯನ್ನು ಅದ್ಭುತವಾಗಿ ಅನಾವರಣಗೊಳಿಸಿದ್ದರು. ಈ ಬಾರಿ ಜನಾರ್ಧನ ರೆಡ್ಡಿ ನಾಡಗೀತೆಯನ್ನು ಸ್ವತಃ ಹಾಡಿ, ಅಭಿನಯಿಸಿ ಆ ಪರಂಪರೆಯನ್ನು ಮುಂದುವರಿಸಿರೋದು ಅವರೊಳಗಿನ ಕನ್ನಡ ಪ್ರೀತಿಗೆ ಕನ್ನಡಿ ಹಿಡಿದಿದೆ.

ಸಚಿವರಾಗಿದ್ದ ಕಾಲದಿಂದಲೂ ಜನಾರ್ಧನ ರೆಡ್ಡಿಯವರ ತೆಲುಗು ಪಸೆ ಇರೋ ಕನ್ನಡ ಭಾಷೆಯನ್ನು ಆಡಿಕೊಂಡವರೇ ಹೆಚ್ಚು. ಆದರೆ ಹೆಚ್ಚಿನ ಸಂದರ್ಭದಲ್ಲಿ ಓರ್ವರನ್ನು ನೆಗೆಟಿವ್ ದೃಷ್ಟಿಕೋನದಿಂದಷ್ಟೇ ನೋಡುವ ಉಮೇದಿನಲ್ಲಿ ಅವರ ಅಸಲೀ ಸೂಕ್ಷ್ಮ, ಸಂವೇದನಾಶೀಲತೆ, ಭಾಷಾಭಿಮಾನ ಮುಂತಾದವುಗಳು ಕಡೆಗಣಿಸಲ್ಪಡುತ್ತವೆ. ಜನಾರ್ಧನ ರೆಡ್ಡಿ ವಿಚಾರದಲ್ಲಾದದ್ದೂ ಅದೇ ಸಮಸ್ಯೆ ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲ ಮಂದಿ ಅನುಮೋದಿಸುತ್ತಾರೆ. ಅಷ್ಟಕ್ಕೂ ಜನಾರ್ಧನ ರೆಡ್ಡಿ ಅಂದರೆ ಆಂಧ್ರಪ್ರದೇಶದವರೇ ಎಂಬಂತೆ ಬಿಂಬಿಸುವ ಕೆಲಸಗಳೂ ಕೂಡಾ ಅವ್ಯಾಹತವಾಗಿ ನಡೆದುಕೊಂಡು ಬಂದಿವೆ. ಆದರೆ ಅವರ ಇಡೀ ಕುಟುಂಬ ಅಪ್ಪಟ ಕನ್ನಡಿಗರದ್ದು. ಸ್ವತಃ ಜನಾರ್ಧನ ರೆಡ್ಡಿ ಓದಿದ್ದು ಕೂಡಾ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ. ಆದರೆ ಅವರು ಬೆಳೆದಿದ್ದೆಲ್ಲವೂ ಬಳ್ಳಾರಿಯ ಆಂಧ್ರಕ್ಕೆ ಹೊಂದಿಕೊಂಡಂತಿರೋ ಗಡಿ ಪ್ರದೇಶವಾದ್ದರಿಂದ ಭಾಷೆಯ ಸಮಸ್ಯೆ ಹಾಗೆಯೇ ಉಳಿದುಕೊಂಡಿತ್ತು. ಆದರೆ ತಮ್ಮೊಳಗೆ ಅಪ್ಪಟ ಕನ್ನಡಾಭಿಮಾನ ಇದ್ದರೂ ಅದಕ್ಕೆ ವಿರುದ್ಧವಾದ ಪ್ರಚಾರಗಳು ನಡೆಯುತ್ತಿರೋವಾಗಲೂ ಅವರು ಮನಸ್ಥಿತಿ ಬದಲಾಯಿಸಿಕೊಂಡವರಲ್ಲ. ಅಂಥಾ ಸುಪ್ತ ಕನ್ನಡ ಪ್ರೇಮವೇ ಅವರ ಕಡೆಯಿಂದ ಇಂಥಾದ್ದೊಂದು ಕನ್ನಡತನದ ಕೆಲಸ ಮಾಡಲು ಪ್ರೇರೇಪಿಸಿದೆ. ಕನ್ನಡದಲ್ಲಿ ಸದ್ದು ಮಾಡೋ ಪ್ರತೀ ಚಿತ್ರಗಳನ್ನೂ ನೋಡಿ ಪ್ರೋತ್ಸಾಹಿಸುತ್ತಾ ಬಂದಿರೋ ಜನಾರ್ಧನ ರೆಡ್ಡಿ ಇದೀಗ ಕನ್ನಡಿಗರೆಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

ಓರ್ವ ವ್ಯಕ್ತಿಯ ಬಗ್ಗೆ ವಿರೋಧಾಭಾಸಗಳಿರೋದು ನಿಷಿದ್ಧವಲ್ಲ. ಅದರಲ್ಲಿಯೂ ರಾಜಕಾರಣಿಯಾಗಿ ಸಾರ್ವಜನಿಕ ಜೀವನದಲ್ಲಿರೋ ಜನಾರ್ಧನ ರೆಡ್ಡಿ ಅಂಥಾ ನಾನಾ ವಿರೋಧಗಳನ್ನು ಎದುರಿಸಿದ್ದಾರೆ. ಆದರೆ ಅದೆಲ್ಲದರಾಚೆಗೆ ಅವರ ಈ ಕನ್ನಡ ಪ್ರೇಮ ಕನ್ನಡಿಗರನ್ನೆಲ್ಲ ಖಂಡಿತವಾಗಿಯೂ ತಾಕುವಂಥಾದ್ದು. ಅವರೊಳಗಿನ ಈ ಸೂಕ್ಷ್ಮತೆ ನಿಜಕ್ಕೂ ಅಭಿನಂದನಾರ್ಹ…

 

 

 

 

 

 

 

 

 

Leave a Reply

Your email address will not be published. Required fields are marked *


CAPTCHA Image
Reload Image