One N Only Exclusive Cine Portal

ಕಮಿಷನ್ ಕರ್ಮಕಾಂಡ ಮತ್ತು ಕನ್ನಡ ಸಿನಿಮಾ!

Commissionಕಳೆದೈದು ವರ್ಷಗಳ ಹಿಂದೆ `ಆನೆಕೆರೆ ಬೀದಿ’ ಅನ್ನೋ ಸಿನಿಮಾ ಆರಂಭವಾಗಿತ್ತು. ಅದು ತಮಿಳಿನಲ್ಲಿ ಬಂದು ಹಿಟ್ ಆಗಿದ್ದ `ರೇಣುಗುಂಟ’ ಅನ್ನೋ ಸಿನಿಮಾದ ರಿಮೇಕು. ಡ್ರಮರ್ ದೇವಾ ಇದಾರಲ್ಲ? ಅವರ ಮಗ ವಾರ್ದಿಕ್ ಜೋಸೆಫ್ ಈ ಚಿತ್ರದ ನಿರ್ದೇಶಕನಾಗಿದ್ದ.
ಆ ಸಿನಿಮಾ ಕನ್ನಡದಲ್ಲಿ ಆರಂಭವಾಗಿದ್ದಷ್ಟೇ. ನಂತರ ಮೂರು ವರ್ಷಗಳ ಗ್ಯಾಪ್ ನಂತರ ಮತ್ತೊಮ್ಮೆ ಅದೇ ನಿರ್ದೇಶಕ ಪತ್ರಕರ್ತರ ಮುಂದೆ ಪ್ರತ್ಯಕ್ಷನಾಗಿದ್ದ. ಆದರೆ ಆತನೊಬ್ಬನ್ನು ಬಿಟ್ಟು, ಇಡೀ ಸಿನಿಮಾದ ಎಲ್ಲರೂ ಬದಲಾಗಿದ್ದರು. ಸಿನಿಮಾ ಕೂಡಾ `ಮಂಡ್ಯ ಟು ಮುಂಬೈ’ ಅಂತಾ ಬದಲಾಗಿತ್ತು. ಇದಾದ ಎರಡು ವರ್ಷಗಳ ಅಂತರದಲ್ಲಿ ಮತ್ತೆ `ಮಂಡ್ಯ ಟು ಮುಂಬೈ’ ತಂಡ ಪತ್ರಕರ್ತರ ಮುಂದೆ ಬಂದಿದೆ. ಈಗ ಎಲ್ಲರೂ ಇದ್ದಾರೆ… ನಿರ್ದೇಶಕ ವಾರ್ದಿಕ್ ಜೋಸೆಫ್ ಒಬ್ಬನನ್ನು ಹೊರತುಪಡಿಸಿ!
ಮೊದಲ ಸಿನಿಮಾವನ್ನು ಕಂಪ್ಲೀಟ್ ಮಾಡಲು ಐದು ವರ್ಷ ಹೆಣಗಾಡಿದ್ದ ಜೋಸೆಫ್ ಸಿನಿಮಾ ಬಿಡುಗಡೆಯ ಹೊತ್ತಿಗೆ ಯಾಕೆ ತಂಡದಿಂದ ಹೊರಬಿದ್ದಿದ್ದಾನೆ? ಅಂತಾ ಹುಡುಕಿದರೆ, ಈ ಹುಡುಗ ಕಾಗೆ ಲೆಕ್ಕ-ಗೂಬೆ ಲೆಕ್ಕಗಳನ್ನೆಲ್ಲಾ ಕೊಟ್ಟು ಭಯಂಕರ ಕಮಿಷನ್ ಹೊಡೆದಿದ್ದ ಅನ್ನೋ ಮಾಹಿತಿ ಲಭ್ಯವಾಗುತ್ತಿದೆ.
ಅಪ್ಪ ದೇವ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಡ್ರಮ್ಸ್ ಕಲಾವಿದ. ಕಡೇ ಪಕ್ಷ ಅವರ ಹೆಸರುಳಿಸುವ ಪ್ರಯತ್ನವನ್ನಾದರೂ ಜೋಸೆಫ್ ಮಾಡಬಹುದಿತ್ತು.
ಇನ್ನು ಎರಡು ವಾರಗಳ ಮುಂಚೆ `ಕ್ರೇಜಿ ಬಾಯ್’ ಹೆಸರಿನ ಚಿತ್ರವೊಂದು ತೆರೆಗೆ ಬಂದಿತ್ತು. ಈ ಸಿನಿಮಾಗೆ ಸಿಕ್ಕಾಪಟ್ಟೆ ಪಬ್ಲಿಸಿಟಿ ಕೊಡಲಾಗಿತ್ತು. ಆದರೂ ಜನ ಬರೋದಿಲ್ಲ ಅನ್ನೋದನ್ನರಿತ ಆ ಸಿನಿಮಾದವರು ಕಪಾಲಿ ಥಿಯೇಟರಿನ ಮುಂದೆ ಬಿಟ್ಟಿ ಟಿಕೇಟು ಹಂಚಿ, ಮೆಜೆಸ್ಟಿಕ್ ಏರಿಯಾದಲ್ಲಿ ತಿರುಪೆ ಎತ್ತುವವರು, ವ್ಯಸನಿಗಳು, ದಂಧೆಕೋರರನ್ನೆಲ್ಲಾ ಚಿತ್ರಮಂದಿರದಲ್ಲಿ ತುಂಬಿ ಹೌಸ್ ಫುಲ್ ಬೋರ್ಡ್ ಹಾಕಿಕೊಂಡಿತ್ತು. ಆದರೆ ಒಂದೆರಡು ಶೋಗಳಲ್ಲಿ ಅದೂ ಖಾಲಿ ಖಾಲಿ!
ಈ ಚಿತ್ರಕ್ಕೆ ಸುಮಾರು ಆರು ಕೋಟಿಗೂ ಅಧಿಕ ಹಣ ಖರ್ಚಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. `ಹೊಸಾ ಹುಡುಗನ ಸಿನಿಮಾಕ್ಕೆ ಇಷ್ಟೊಂದು ಯಾಕೆ? ಅಂಥಾ ಖರ್ಚು ಕೂಡಾ ತೆರೆ ಮೇಲೆ ಕಾಣಿಸುತ್ತಿಲ್ಲವಲ್ಲಾ?’ ಅಂತಾ ಪ್ರಶ್ನಿಸಿದರೆ ಇಲ್ಲೂ ಅದೇ ಕಮಿಷನ್ನಿನ ಕಮಟು ರಾಚುತ್ತಿದೆ. ಒಂದೊಳ್ಳೆ ಸಿನಿಮಾ ಮಾಡಬೇಕು, ತಮ್ಮ ಮಕ್ಕಳನ್ನು ತೆರೆಮೇಲೆ ಪರಿಚಯಿಸಬೇಕು ಅಂತಾ ಬರೋ ನಿರ್ಮಾಪಕರಲ್ಲಿ ಬಹುತೇಕರಿಗೆ ಇದೇ ಅನುಭವವಾಗುತ್ತಿದೆ…
ಹಣ ಹೂಡಲು ಬರುವವರು ಕೂಡಾ ನಂಬುವವರನ್ನು ಬಿಟ್ಟು ಬೇರೆಲ್ಲರನ್ನೂ ನಂಬುತ್ತಾರೆ. ಚಸ್ಕಾ ಮಸ್ಕಾ ಮಾತಾಡಿ ಯಾಮಾರಿಸುವ ಬೂಸಿ ಬಾಬುಗಳನ್ನು ನಂಬಿದರೆ ದೋಖಾ ಗ್ಯಾರೆಂಟಿ ಅನ್ನೋದನ್ನು ಇನ್ನದರೂ ಹೊಸ ನಿರ್ಮಾಪಕರು ಅರಿತುಕೊಳ್ಳಲಿ.

Leave a Reply

Your email address will not be published. Required fields are marked *


CAPTCHA Image
Reload Image