One N Only Exclusive Cine Portal

ಕಾಲು ಕಳಕೊಂಡಿರುವ ಸತ್ಯಜಿತ್ ಆತ್ಮಸಂಕಟ!

ಹಾಸ್ಯ ನಟನಾಗಿ, ಖಳ ನಟನಾಗಿ ಪ್ರಸಿದ್ಧಿ ಪಡೆದಿರುವ ಹಿರಿಯ ನಟ ಸತ್ಯಜಿತ್ ಸಂಕಟ ತೋಡಿಕೊಂಡಿದ್ದಾರೆ. ಸಕ್ಕರೆ ಖಾಯಿಲೆಯ ಹೊಡೆತಕ್ಕೆ ಸಿಕ್ಕು ಗ್ಯಾಂಗ್ರಿನ್ ಆವರಿಸಿಕೊಂಡು ಒಂದು ಕಾಲನ್ನೇ ಕಳೆದುಕೊಂಡಿರೋ ಅವರೀಗ ಒಂದು ಕಾಲದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಕೆಲ ಮಂದಿ ಸಣ್ಣ ಸಹಾಯಕ್ಕೂ ಮುಂದಾಗದೆ ಅಸಡ್ಡೆ ಮಾಡುತ್ತಿರೋದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಕಲಿಯುಗದ ಕರ್ಣ ಅಂತೆಲ್ಲ ಕರೆಸಿಕೊಳ್ಳುವ ಅಂಬರೀಶ್ ಹೇಗಿದ್ದಿ ಅಂತ ಯೋಗಕ್ಷೇಮ ವಿಚಾರಿಸೋ ಸೌಜನ್ಯವನ್ನು ಇದುವರೆಗೆ ತೋರಿಸಿಲ್ಲ ಎಂಬ ಕೊರಗನ್ನೂ ಸತ್ಯಜಿತ್ ಹೊರ ಹಾಕಿದ್ದಾರೆ!
ಚಿತ್ರೀಕರಣದ ಅರಾಜಕ ಸುತ್ತಾಟ, ಬದುಕಿನ ಅನಿವಾರ್ಯತೆಯಿಂದ ಕಡೆಗಣಿಸಿದ್ದ ಸಕ್ಕರೆ ಕಾಯಿಲೆ ಸತ್ಯಜಿತ್ ಬದುಕಿನ ನೆಮ್ಮದಿಯನ್ನೇ ಕಸಿದುಕೊಂಡಿದೆ. ಒಂದಷ್ಟು ಚಿತ್ರದಲ್ಲಿ ಬ್ಯುಸಿಯಗಿರುವಾಗಲೇ ಇಂತಾದ್ದೊಂದು ಆಘಾತಕ್ಕೆ ಸಿಕ್ಕಿರೊ ಸತ್ಯಜಿತ್ ಅವರ ನೋವಿಗೆ ಆರಂಭದಲ್ಲಿಯೇ ಉಪೇಂದ್ರ, ಶಿವರಾಜ್ ಕುಮಾರ್, ಪುನೀತ್, ಕಿಚ್ಚ ಸುದೀಪ್ ಮುಂತಾದ ನಟರು ಸ್ಪಂದಿಸಿ ಆರ್ಥಿಕ ಸಹಾಯ ಮಾಡಿದ್ದಾರೆ. ಆದರೆ, ಬದುಕಿನುದ್ದಕ್ಕೂ ನಾನಾ ಕಷ್ಟಗಳನ್ನು ದಾಟಿಕೊಂಡರೂ ಯಾರೆದುರಿಗೂ ಕೈ ಚಾಚದ ಸತ್ಯಜಿತ್ ಅವರಿಗೀಗ ಎದ್ದು ಓಡಾಡುವ ಹಂತ ತಲುಪಲು, ಚಿಕಿತ್ಸೆಗೆ ಹಣ ಕಾಸಿನ ಕೊರತೆ ಬಿದ್ದಿದೆ. ಆದರೆ, ಸರಿಯಾಗಿದ್ದಾಗ ಚೆಂದಗಿದ್ದ ಒಂದಷ್ಟು ಜನ ಇದೀಗ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆಂಬ ನೋವು ಅವರ ಮಾತುಗಳಲ್ಲಿ ಸ್ಪಷ್ಟವಾಗಿಯೇ ಧ್ವನಿಸುತ್ತದೆ.
‘ಅಂಬರೀಶ್ ಅವರ ಜೊತೆ ನಾನು ಒಂದಿಪ್ಪತೈದು ಸಿನಿಮಾ ಮಾಡಿದ್ದೇನೆ. ಆದರೆ ಈವತ್ತು ನನ್ನ ಸ್ಥಿತಿ ಹೀಗಾಗಿರುವಾಗ ಅಂಬರೀಶ್ ಕಡೇಪಕ್ಷ ಒಂದು ಫೋನು ಮಾಡಿ ಹ್ಯಾಗಿದ್ದಿ ಎಂದು ಕೇಳಿಯೂ ಇಲ್ಲ ಎಂಬುದು ಸತ್ಯಜಿತ್ ಅವರ ಸಂಕಟದ ಮಾತು. ಇನ್ನುಳಿದಂತೆ ಇವರು ಕಲಾವಿದರ ಸಂಘದ ಸದಸ್ಯರೂ ಆಗಿದ್ದಾರೆ. ಅಲ್ಲಿಂದ ಏನಾದರೂ ಸಹಾಯ ಸಿಕ್ಕೀತೆಂಬ ಆಸೆಯಿಂದ ಮನವಿ ಮಾಡಿಕೊಂಡು, ಹೋಗಿ ಮಾತಾಡಿದರೂ ಆ ಜನ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲವಂತೆ.
ಇನ್ನು ಸತ್ಯಜಿತ್ ಖುದ್ದಾಗಿ ಫೋನು ಮಾಡಿದರೂ ನಟ ದೊಡ್ಡಣ್ಣ ರಿಸೀವ್ ಕೂಡಾ ಮಾಡುತ್ತಿಲ್ಲ. ನಿಮಾಪಕ ರಾಕ್ ಲೈನ್ ವೆಂಕಟೇಶ್ ಕಡೆಯಿಂದಲೂ ಯಾವ ಪ್ರತಿಕ್ರಿಯೆಯೂ ಇಲ್ಲ. ಇನ್ನು ಕಲಾವಿದರ ಸಂಘದ ಕಡೆಯಿಂದ ಮಾಡಿಸಲಾಗಿದ್ದ ಇನ್ಶೂರೆನ್ಸ್ ಲ್ಯಾಪ್ಸ್ ಆಗಿದ್ದರೂ ಈ ಬಗ್ಗೆ ವಿಚಾರಿಸಲೂ ಗತಿ ಇಲ್ಲ. ಒಟ್ಟಾರೆಯಾಗಿ ಈಗ ಕಾಲು ಕಳೆದುಕೊಂಡು ಮೂಲೆಗೆ ಬಿದ್ದಿರೋ ನಟ ಸತ್ಯಜಿತ್ ಮೂವತೈದು ವರ್ಷಗಳಿಂದ ಅಖಂಡ ಆರುನೂರಾ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ ಕೇಳುವವರು ದಿಕ್ಕಿಲ್ಲ ಎಂಬ ಸಹಜ ಸಂಕಟದಲ್ಲಿದ್ದಾರೆ.
ಕೆಎಸ್ ಆರ್‌ಟಿಸಿ ಬಸ್ ಡ್ರೈವರಾಗಿದ್ದ ಸತ್ಯಜಿತ್ ನಟನಾಗಿ ಹೊರ ಹೊಮ್ಮಿದ್ದೇ ರೋಚಕ ಕಥೆ. ಬಡತನ, ಬದುಕಿನ ಅನಿವಾರ್ಯತೆಗಳಾಚೆಗೆ ಅವರನ್ನು ನಟನಾಗಿ ನೆಲೆ ನಿಲ್ಲುವಂತೆ ಮಾಡಿದ್ದು ಪ್ರತಿಭೆ ಮಾತ್ರ. ಡಾ. ರಾಜ್ ಕುಮಾರರಿಂದ ಮೊದಲ್ಗೊಂಡು ಇತ್ತೀಚಿನ ಹೀರೋಗಳ ಸಿನಿಮಾಗಳಲ್ಲಿಯೂ ನಟಿಸಿದ್ದ ಸತ್ಯಜಿತ್ ಈಗ ಸಂಕಷ್ಟದಲ್ಲಿದ್ದಾರೆ. ಕೃತಕ ಕಾಲು ಜೋಡಿಸಿದರೆ ಸ್ವತಂತ್ರವಾಗಿ ಓಡಾಡುವ ಅವಕಾಶ ಇದೆಯದರೂ ಅದಕ್ಕೆ ಹಣಕಾಸಿನ ಕೊರತೆ ಇದೆ. ಸರ್ಕಾರ ನೆರವಾಗುವ ಭರವಸೆ ನೀಡಿದೆಯಾದರೂ ಅದು ತಕ್ಷಣಕ್ಕೆ ಕೈಗೆಟುಕೋದು ಕಷ್ಟ. ಈ ಬಗ್ಗೆ ಚಿತ್ರರಂಗದ ಮಂದಿ ಸಹಾಯ ಮಾಡೋ ಮನಸು ಮಾಡಿದರೆ ಈ ಹಿರಿಯ ನಟನ ಬದುಕು ಒಂದಷ್ಟು ಸಹನಿಯವಾದೀತು…

Leave a Reply

Your email address will not be published. Required fields are marked *


CAPTCHA Image
Reload Image