One N Only Exclusive Cine Portal

ಕಾಶಿ ಬಗ್ಗೆ ಕೆಲವು ವಿವರಗಳು

sanketh-kashi-25-1472108803ಕಾಶಿ ಈಗ ಒಂದು ನೆನಪು ಮಾತ್ರ. ಇದೇ ಆಗಸ್ತ್ ೬ ರಂದು ಶಿವೈಕ್ಯನಾದ ನಮ್ಮ ಆತ್ಮೀಯ, ಆದ್ಭುತ ನಟ. ರಂಗಭೂಮಿ, ಕಿರುತೆರೆ ಹಾಗೂ ಚಲನ ಗಳಲ್ಲಿ ವಿಧ ವಿಧ ಪಾತ್ರಗಳಿಗೆ ಪಾತ್ರಧಾರಿಯಾಗಿ, ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದ ಕಾಶಿ ಸುಮಾರು ೧೨ಂ ಚಿತ್ರಗಳಲ್ಲಿ ನಟಿಸಿದ ಕಾಶಿ ತಾನು ವಹಿಸಿದ ಎಲ್ಲ ಪಾತ್ರಗಳಿಗೂ ಜೀವ ತುಂಬಿದ ಮರೆಯಲಾಗದ ನಟ.

ಕಾಶಿ ಬಾಲ್ಯ ಮತ್ತು ವಿಧ್ಯಾಬ್ಯಾಸ ಮೈಸೂರಿನಲ್ಲಿ ಕಳೆಯಿತು. ೧೯೬೬ ರಲ್ಲಿ ಕಾಶಿ ಮೈಸೂರಿನ ಮಹಾರಾಜಾಸ್ ಹೈಸ್ಕೂಲ್ ವ್ಯಾಸಂಗ ಮುಗಿಸಿದ. ಟೇಬಲ್ ಟೆನ್ನಿಸ್ ಚನ್ನಾಗಿ ಆಡುತ್ತಿದ್ದ. ಬಡತನದಲ್ಲಿಯೇ ಬಾಲ್ಯ ಕಳೆದ ಕಾಶಿ ಬೆಳಿಗ್ಗೆ ಮನೆ ಮನೆಗೆ ಪೇಪರ್ ಹಂಚುತ್ತಿದ್ದ, ಹಾಲು ಸರಬರಾಜು ಮಾಡುತ್ತಿದ್ದ. ನಂತರ ಸ್ಕೂಲ್, ಸಂಜೆ ರೋಟರಿ ಕ್ಲಬ್ ನಲ್ಲಿ ಕೆಲಸ
ಟೇಬಲ್ ಟೆನ್ನಿಸ್. ಹೀಗೆ ಆತನ ದಿನಚರಿ. ನಂತರ ಯುವರಾಜ ಕಾಲೇಜಿನಲ್ಲಿ ಬಿ.ಎಸ್.ಸಿ. ಸ್ನೇಹಜೀವಿ, ಬುದ್ದಿವಂತ, ಎಲ್ಲ ವಿಶಯಗಳನ್ನೂ ಅರಿತವ, ಏನಾದರೂ ಸ್ವಂತ ಉದಿಮೆ ಪ್ರಾರಂಭಿಸಬೇಕು ಎಂದು ಆಸೆ ಹೊತ್ತವ, ಯಾವತ್ತೂ, ಯಾರಲ್ಲಿಯೂ ಕಷ್ಟ ಹೇಳಿಕೊಂಡವನಲ್ಲ.

ಆ ಸಮಯದಲ್ಲಿಯೇ ರಂಗ ನಿರ್ದೇಶಕ ಶ್ರೀ ಟಿ.ಎನ್.ನರಸಿಂಹನ್ ಪರಿಚಯವಾಗಿ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡ. ವಿಚಿತ್ರ ಜೋಡಿ, ತುಘ್ಹಲಕ್, ಮೀಟ್ ಮಿಸ್ಟರ್ ಸತ್ಯಾಜಿ, ಮುಂತಾಗಿ ಅನೇಕ ನಾಟಕಗಳಲ್ಲಿ ನಟಿಸಿ ಸೈ ಅನಿಸಿಕೊಂಡ. ಆ ಸಮಯದಲ್ಲಿ ತಂದೆಯ ಅಕಾಲಿಕ ಮರಣದಿಂದಾಗಿ ಶಿವಮೊಗ್ಗಕ್ಕೆ ಸ್ಥಳಾಂತರ ಗೊಂಡ. ಸ್ವಂತ ಉದ್ದಿಮೆ ಮಾಡುವ ಆಸೆ ಯಿಂದ ಅಣ್ಣನೊಡಗೂಡಿ ಶಿವಮೊಗ್ಗದಲ್ಲಿ ಸ್ವಲ್ಪ ಜಮೀನು ಖರೀದಿಸಿ ಉದ್ಯಮ ಪ್ರಾರಂಬಿಸಿದ. ದುರದೃಷ್ಟವಶಾತ್ ಉದ್ಯಮ ಕೈ ಹಿಡಿಯಲಿಲ್ಲ. ಮುಂದೇನು ಎಂಬ ಯೋಚನೆಯಲ್ಲಿ ಬೆಂಗಳೂರಿಗೆ ಜೀವನ ನಿರ್ವಹಣೆಗೆ ಬಂದ. ಸೇಲ್ಸ್ ಮನ್ ಆಗಿ ದುಡಿಯುವುದರ ಜೊತೆಗೆ ಬೆಂಗಳೂರಿನ ಹವ್ಯಾಸಿ ರಂಗ ಭೂಮಿಯಲ್ಲಿ ತೊಡಗಿಕೊಂಡ. ಶಿವಮೊಗ್ಗ, ಮೈಸೂರಿನಲ್ಲಿ ಅನೇಕ ಸ್ನೇಹಿತರನ್ನು ಸಂಪಾದಿಸಿದ.

ಕಾಶಿಯ ಇನ್ನೊಂದು ಹವ್ಯಾಸವೆಂದರೆ ಪುಸ್ತಕ ಗಳನ್ನು ಓದುವುದು. ಜೊತೆಗೆ ಸ್ನೇಹಿತರನ್ನು ಒಳ್ಳೊಳ್ಳೆಯ ಪುಸ್ತಕಗಳನ್ನು ಓದುವಂತೆ ಪುಸಲಾಯಿಸುತ್ತಿದ್ದ. ಮಾರಿಯೋ ಪುಜೋ, ಫ಼್ರೆಡ್ರಿಕ್ ಫ಼ೊಸಿಥ್, ಸಿಡ್ನಿ ಶೆಲ್ಡನ್, ಇಯಾನ್ ರಾಂಡ್, ರಿಚರ್ಡ್ ಬಕ್ ಮುಂತಾದವರು ಆತನ ನೆಚ್ಚಿನ ಲೇಖಕರು. ಯಾವ ಉತ್ತಮ ಇಂಗ್ಲೀಷ್ ಕಾದಂಬರಿಗಳು, ಉತ್ತಮ ಇಂಗ್ಲೀಷ್ ಚಲನಚಿತ್ರ ಗಳನ್ನು ನೋಡುತ್ತಿದ್ದ. ತಾನೂ ಉತ್ತಮ ಚಿತ್ರಗಳನ್ನು ನೋಡುವುದಲ್ಲದೇ ಎಲ್ಲ ಸ್ನೇಹಿತರನ್ನು ಆ ಚಿತ್ರಗಳನ್ನು ನೋಡುವಂತೆ ಪುಸಲಾಯಿಸುತ್ತಿದ್ದ.

ರವೀಂದ್ರ ಕಲಾಕ್ಷೆತ್ರದ ಮೆಟ್ಟಲು ಆತನಿಗೂ ಪ್ರಿಯವಾದ ಸ್ಥಳವಾಗಿತ್ತು. ಹರಟೆ, ಚರ್ಚೆ, ರಂಗ ತಾಲೀಮು ಎಲ್ಲ ಕಲಾಕ್ಶೇತ್ರದ ಮೆಟ್ಟಲಿನಲ್ಲಿ, ಕಲಾಕ್ಶೇತ್ರದ ಆವರಣದಲ್ಲಿಯೇ. ಸಮುದಾಯ, ಬಿ.ಜಯಶ್ರೀಯರ ಸ್ಪಂದನ, ಟಿ.ಎನ್. ನರಸಿಂಹನ್ ನ ರಂಗೂ ನಾಟಕ ತಂಡ ಹೀಗೆ ಅನೇಕ ರಂಗ ಪ್ರಯೋಗಗಳಲ್ಲಿ ಅಭಿನಯಿಸಿದ. ಕತ್ತಲೆ ದಾರಿ ದೂರ, ಕರಿಮಾಯಿ, ಅರಣ್ಯ ನ್ಯಾಯ, ಕೇರ್ ಟೇಕರ್ಸ್, ಮೀನಾಕ್ಷಿ ಮನೆ ಮೇಸ್ಟ್ರು ಮುಂತಾದ ನಾಟಕಗಳ್ಳಿ ಉತ್ತ್ತಮ ಪಾತ್ರ ನಿರ್ವಹಿಸಿದ. ೧೯೯ಂ ರ ಆಸುಪಾಸಿನಲ್ಲಿ ಕನ್ನಡ ರಂಗಭೂಮಿಗೆ ಅನಿವಾರ್ಯ ನಟನಾಗಿಬಿಟ್ಟ. ಎಲ್ಲ ತಂಡಗಳಿಗೂ ಬೇಕಾದ ಬೇಡಿಕೆಯ ನಟನಾಗಿ ಬಿಟ್ತ.

ಆ ಸಮಯದಲ್ಲಿಯೇ ಬೆಂಗಳೂರಿಗೆ ಶಂಕರ್ ನಾಗ್ ಆಗಮನ. ಆತ ಪ್ರಾರಂಭಿಸಿದ ಸಂಕೇತ್ ತಂಡದ ಮುಖ್ಯ ಸದಸ್ಯನಾದ. ಸಂಕೇತ್ ತಂಡ ಪ್ರಸ್ತುತ ಪಡಿಸಿದ ನಾಟಕಗಳಾದ ಕಣ್ಣಾ ಮುಚ್ಚಾಲೆ, ಅಂಜು ಮಲ್ಲಿಗೆ, ನೋಡಿಸ್ವಾಮಿ ನಾವಿರೋದು ಹೀಗೆ, ಹಸಿರೆಲೆ ಹಣ್ಣೆಲೆ, ಬ್ಯಾರಿಸ್ಟರ್, ಮುಂತಾದ ನಾಟಕ ಗಳಲ್ಲಿ ನಟನಾಗಿ, ಸಹಾಯಕ ನಿರ್ದೇಶಕನಾಗಿ, ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡ.ಎಲ್ಲ್ ಶಂಕರ್ ನಾಗ್ ರ ಅನೇಕ ನಾಟಕೇತರ ಯೋಜನೆಯಲ್ಲಿ ಅನಿವಾರ್ಯ ಸಹಾಯಕನಾದ, ಜೊತೆಗಾರನಾದ. ಮೆಟೆತೊ ರೈಲ್, ಲೋ ಕಾಸ್ಟ ಹೌಸಿಂಗ್ ಪ್ರಾಜೆಕ್ಟ್, ನಂದಿ ಹಿಲ್ಸ ನ ರೋಪ್ ವೇ ಪ್ರಾಜೆಕ್ಟ್, ಸಂಕೇತ್ ಎಲೆಕ್ಟ್ರಾನಿಕ್ಸ್, ಮಾಲ್ಗುಡಿ ಡೇಸ್, ಹೀಗೆ ಎಲ್ಲ ಶಂಕರ್ ನ ಯೋಜನೆಯಲ್ಲಿ ತನ್ನನ್ನು ತಾನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ. ಶಂಕರ್ ನಾಗ್ ಗೈರು ಹಾಜರಿಯಲ್ಲಿ ಸರ್ಕಾರಿ ಅಧಿಕಾರಿಗಳ ಜೊತೆ ಮೀಟಿಂಗ್, ಪೇಪರ್ ವರ್ಕ್ ಎಲ್ಲದಕ್ಕೂ ಕಾಶಿ ಅನಿವಾರ್ಯ ಬಲಗೈ ಜೊತೆಗಾರ ನಾದ.

ಆತ್ಮೀಯರಾದ ರಮೇಶ್ ಭಟ್, ಜಗದೀಶ್ ಮಲ್ನಾಡ್ ಜೊತೆಗೂಡಿ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡ. ಅಲ್ಲಿಯೂ ಏನೂ ಅಭಿವೃದ್ದಿ ಹೊಂದಲಿಲ್ಲ. ಅಲ್ಲಿಂದ ಮುಂದೆ ಪೂರ್ಣಪ್ರಮಾಣದ ನಟನಾಗಿ ಚಲನ ಚಿತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ. ಸುಮಾರು ೧೨ಂ ಚಲನಚಿತ್ರಗಳಲ್ಲಿ ನಟಿಸಿದ. ಕಾಶಿ ಚಿತ್ರರಂಗದಲ್ಲಿ ಸವೆದ ವರ್ಷಗಳು ಸುಮಾರು ೩ಂ. ಅಂದರೆ ವರ್ಷಕ್ಕೆ ೩ ರಿಂದ ನಾಲ್ಕು ಚಿತ್ರಗಳು. ಸಣ್ಣ ಪುಟ್ಟ ಪಾತ್ರಗಳಿಂದ ಹಿಡಿದು, ಗುರುತರ ಪಾತ್ರಗಳಲ್ಲೂ ತನ್ನ ಛಾಪು ಮೂಡಿಸಿದ.

ಆದರೆ ಗಳಿಸಿದ್ದೆಷ್ಟು, ಉಳಿಸಿದ್ದೆಷ್ಟು, ಕಳೆದದ್ದೆಷ್ಟು. ಅದೃಷ್ಟ ಲಕ್ಶ್ಮಿ, ಧನ ಲಕ್ಶ್ಮಿ, ಗೃಹ ಲಕ್ಷ್ಮಿ ಈ ಮೂವರು ಕಾಶಿಯಿಂದ ದೂರವೇ ಉಳಿದರು. ಆತನಲ್ಲಿದ್ದ ಪ್ರತಿಭೆ ಗೆ ತಕ್ಕ ಪಾತ್ರ ದೊರೆಯಲಿಲ್ಲ. ಗುರುತರ ಪಾತ್ರಗಳಿಗೂ ಮನ್ನಣೆ ದೊರೆಯಲಿಲ್ಲ. ಕೂಡಿಡುವಷ್ಟು ಸಂಕಾದನೆ ಯಾಗಲೇ ಇಲ್ಲ. ಹೀಗಿರುವಾಗ ಇನ್ನು ಮದುವೆಯ ಮಾತೆಲ್ಲಿ. ಬ್ರಹ್ಮಚಾರಿಯಾಗಿಯೇ ಉಳಿದುಬಿಟ್ಟ. ವೃಧ್ಯಾಪ್ಯದಿಂದ ಹಾಸಿಗೆ ಹಿಡಿದ ತಾಯಿ, ಅಣ್ಣ ಮತ್ತು ಅಕ್ಕ ಎಲ್ಲ ಸೇರಿ ದುಡಿದರೂ ಸುಖಜೀವನ ನಡೆಸಲು ಸಾಧ್ಯವಾಗಲೇ ಇಲ್ಲ.
ಈಗ ಕಾಶಿ ನಮ್ಮೊಂದಿಗಿಲ್ಲ. ಯಾರೊಂದಿಗೂ ಇಲ್ಲ, ಕುಟುಂಬದೊಂದಿಗೂ ಇಲ್ಲ. ತನ್ನ ಮೇಲಿದ್ದ ಕುಟುಂಬದ ಜವಾಬ್ದಾರಿಯನ್ನು ಹಾಗೆಯೇ ಉಳಿಸಿ ಹೋದ. ಆತನ ಅಗಲಿಕೆಯ ನೋವು ನಮ್ಮನ್ನು ತಟ್ಟಿದೆ. ಆತನ ಕುಟುಂಬವನ್ನು ಕಂಗೆಡಿಸಿದೆ. ಆತನ ಕುಟುಂಬಕ್ಕೆ ಅಗಲಿಕೆಯ ನೋವುಭರಿಸುವ ಶಕ್ತಿಯನ್ನು ಆ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಆತನ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳೋಣ.
-ಸಂಧ್ಯಾ ಭಟ್

Leave a Reply

Your email address will not be published. Required fields are marked *


CAPTCHA Image
Reload Image