One N Only Exclusive Cine Portal

ಕಿಚ್ಚನ ಮೇಲೆ ನಿರ್ಮಾಪಕರ ಕೆಂಗಣ್ಣು!

ಯಾಕೋ ಏನೋ ಕಿಚ್ಚ ಸುದೀಪ್ ಅವರ ಪಾಲಿಗೆ ಇದು ವಿವಾದಗಳ ಸುಗ್ಗಿ ಕಾಲದಂತಾಗಿದೆ. ಅವರು ಏನೇ ಮಾತಾಡಿದರೂ ವಿವಾದಗಳ ರೂಪದಲ್ಲಿ ಬಂದು ಅಟಕಾಯಿಸಿಕೊಳ್ಳುತ್ತಿವೆ. ಯಾವತ್ತೋ ಆಡಿದ ಮಾತು ಕೂಡಾ ದೊಡ್ಡ ಕಾಂಟ್ರವರ್ಸಿಯಂತಾಗಿ ಕಾಡುತ್ತಿದೆ.

ಸಿನಿಮಾ ಹೀರೋ, ಅದೂ ಸೂಪರ್ ಸ್ಟಾರ್ ನಟ ಎಂದಮೇಲೆ ವಿವಾದಗಳು ಇದ್ದಿದ್ದೇ. ಆದರೆ ಒಂದೇ ಏಟಿಗೆ ಎಲ್ಲವೂ ಯೂಟರ್ನ್ ತೆಗೆದುಕೊಂಡುಬಂದು ಸರಪಳಿಯಂತೆ ಸುದೀಪ್ ಅವರನ್ನು ಸುತ್ತಿಕೊಳ್ಳುತ್ತಿದೆ.

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ “ನನಗೆ ಎಷ್ಟೋ ಜನ ಕೊಡಬೇಕಿರೋ ದುಡ್ಡು ಕೊಟ್ಟಿಲ್ಲ. ಕೇಳಿದರೆ, ಕೆಟ್ಟದಾಗಿ ಮಾತಾಡಿಕೊಂಡು ತಿರುಗುತ್ತಾರೆ. ಈವರೆಗೂ ಯಾವ ಸಿನಿಮಾನೂ ದುಡ್ಡು ಮಾಡಿದೆ ಅಂತಾ ಯಾರೂ ಬಂದು ನನ್ನ ಬಳಿ ಹೇಳಿಲ್ಲ. ಒಪ್ಪಿಕೊಂಡಂತೆ ನಡೆದುಕೊಂಡವರು ನನ್ನ ಲೈಫಲ್ಲಿ ಭಾಳಾ ಕಮ್ಮಿ ಜನ ಇದಾರೆ. ಕೊಡದೇ ಇರೋ ಅಮೌಂಟು ಫಿಫ್ಟಿ ಪರ್ಸೆಂಟ್‌ಗಿಂತಾ ಹೆಚ್ಚಾಗಿದೆ. ಎಷ್ಟೋ ಸಾರಿ ಸಂಭಾವನೆ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ ಅಂದ್ರೂನೂ ನಾನು ಕೆಲಸ ನಿಲ್ಲಿಸಲ್ಲ. ನನ್ನ ಕೆಲಸ ನಾನು ಮಾಡ್ತೀನಿ. ಡಬ್ಬಿಂಗಿಗೆ ಬರಲ್ಲ ಅಂತೆಲ್ಲಾ ತಕರಾರು ಮಾಡೋದಿಲ್ಲ. ಕೆಲವೊಮ್ಮೆ ಹಾಗೆ ಮಾಡೋರೇ ಸರಿ ಅನಿಸತ್ತೆ. ಬಟ್ ಐ ಸ್ಟಿಲ್ ವರ್ಕ್. ಬಚ್ಚನ್ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಅನ್ನೋ ವ್ಯಕ್ತಿಯನ್ನು ದೊಡ್ಡದೊಂದು ವಿಚಾರದಲ್ಲಿ ಮೆಚ್ಚುತ್ತೀನಿ. ಆ ಸಿನಿಮಾ ಚನ್ನಾಗೇ ಆಯ್ತು. ಪ್ರಾಫಿಟ್ ಲೆವೆಲ್ಲಿನಲ್ಲಿದ್ದರೂ ದೊಡ್ಡ ಮಟ್ಟಕ್ಕೆ ಆಗಲಿಲ್ಲ. ಆದರೂ ತುಟಿ ಪಿಟಿಕ್ ಅನ್ನಲಿಲ್ಲ ಆ ವ್ಯಕ್ತಿ. ನಮ್ಮನೆ ಬಾಗಿಲಿಗೆ ಬಂದು ಪೂರ್ತಿ ಪ್ರಮಾಣದಲ್ಲಿ ಸಂಭಾವನೆ ತಂದು ಕೊಟ್ಟು ಹೋದ್ರು. ಆ ವ್ಯಕ್ತಿಗೆ ಯಾವತ್ತಿದ್ದರೂ ನನ್ನ ಮನೆ ಬಾಗಿಲು ಓಪನ್ನಾಗಿರುತ್ತೆ. ಇನ್ನು ಎಸ್. ನಾರಾಯಣ್ ಅವರನ್ನೂ ಈ ವಿಚಾರದಲ್ಲಿ ಮೆಚ್ಚುತ್ತೀನಿ. ಹೇಳಿದ್ದನ್ನ ತಂದುಕೊಟ್ಟರು. ಮತ್ತೆ ಹೆಬ್ಬುಲಿ ಸಿನಿಮಾ ನಿರ್ಮಾಪಕರ ವಿಚಾರದಲ್ಲೂ ಅಷ್ಟೇ. ಅವರು ನನಗೆ ಏನೇ ಸ್ನೇಹಿತರಿದ್ದರೂ ಹೇಳಿದ್ದನ್ನು ಮಾಡಿದರು.” – ಇದು ಸುದೀಪ್ ಆಡಿರುವ ಮಾತುಗಳು.ಈಗ ಇದು ಈ ಹಿಂದೆ ಸುದೀಪ್ ಅವರ ಸಿನಿಮಾಗೆ ಹಣ ಹೂಡಿದ್ದ ನಿರ್ಮಾಪಕರ ಕೆಂಗಣ್ಣಿಗೆ ಕಾರಣವಾಗಿದೆ. “ಸರಿಸುಮಾರು ಅರವತ್ತು ಸಿನಿಮಾಗಳಲ್ಲಿ ಮಾಡಿರುವ ಸುದೀಪ್‌ಗೆ ಪೂರ್ತಿ ದೊಡ್ಡು ಕೊಟ್ಟಿರೋದು ಈ ಮೂರೇ ಜನ ಪ್ರೊಡ್ಯೂಸರುಗಳಾ? ನಾವೇನು ಕಲ್ಲು ಕೊಟ್ಟಿದ್ದೀವಾ? ಅಂತಾ ಕೆಲವರು ಸಿಡಿದೆದ್ದಿದ್ದಾರೆ. ಸುದೀಪ್ ಯಾವ ಚಾನೆಲ್ಲಿನ ಕ್ಯಾಮೆರಾ ಮುಂದೆ ಕುಂತು ಹೀಗೆಲ್ಲಾ ಹೇಳಿದರೋ ಅದೇ ಟೀವಿ ಒಂಭತ್ತಕ್ಕೆ ನಾವೆಲ್ಲ ನಿರ್ಮಾಪಕರೂ ಒಟ್ಟಿಗೇ ಹೋಗಿ ಕೂರುತ್ತೇವೆ. ನಾವೆಷ್ಟೆಷ್ಟು ಕೊಟ್ಟಿದ್ದೇವೆ ಅಂತಾ ಹೇಳ್ತೀವಿ. ಬೇಕಿದ್ದರೆ ಸುದೀಪ್ ಅಲ್ಲೇ ಬಂದು ಹೇಳಲಿ ಅವರಿಗೆ ಹಣ ಕೊಡದೇ ಕೈಯೆತ್ತಿರುವ ಆ ಫಿಫ್ಟಿ ಪರ್ಸೆಂಟ್ ಜನ ಯಾರು ಅಂತಾ? ಸುದೀಪ್ ಒಳ್ಳೇ ಕಲಾವಿದ. ಪ್ರತಿಭಾವಂತ ಅನ್ನೋದು ನಿಜ. ಆದರೆ, ಅವರನ್ನು ಹಾಕಿಕೊಂಡು ಸಿನಿಮಾ ಮಾಡೋದು ಅದೆಷ್ಟು ಕಷ್ಟ ಗೊತ್ತಾ? ‘ನಾನು ಸಿನಿಮಾ ಔಟ್ ಪುಟ್‌ಗಾಗಿ ಸಿಟ್ಟು ಮಾಡಿಕೊಳ್ತೀನಿ’ ಅಂತಾರಲ್ಲ? ಬೇರೆ ವಿಚಾರಗಳಿಂದ ಯಾವತ್ತೂ ನಿರ್ಮಾಪಕರಿಗೆ ತೊಂದರೇನೇ ಆಗಿಲ್ವಾ? ಯಾಕೆ ಯಾವ ಹೀರೋಗಳಿಗೂ ಆಗದ ಸಮಸ್ಯೆ ಅವರಿಗಾಗತ್ತೆ?”-ಇದು ಇತ್ತೀಚೆಗೆ ಸುದೀಪ್ ಅವರ ಚಿತ್ರ ನಿರ್ಮಿಸಿದ್ದ ಒಂದಿಬ್ಬರು ನಿರ್ಮಾಪಕರ ಅಭಿಪ್ರಾಯ.
ನಿಜ. ಎಷ್ಟೋ ಸಲ ನಯಾ ಪೈಸೆಯ ಬಂಡವಾಳವಿಲ್ಲದೆ ಬಂದು, ಸುದೀಪ್ ಕಾಲ್ ಶೀಟ್ ಪಡೆದು, ಅವರ ಹೆಸರಲ್ಲಿ ದುಡ್ಡೆತ್ತಿದ ನಿರ್ಮಾಪಕರಿದ್ದಾರೆ. ಸಾಲ ಜಾಸ್ತಿ ಆಗಿದೆ, ವಿಷ ಕುಡಿದು ಸಾಯುವ ಪರಿಸ್ಥಿತಿಯಲ್ಲಿದ್ದೇನೆ ಅಂತಾ ಗೋಳಾಡಿ ಸುದೀಪ್ ಕಾಲ್ ಶೀಟ್ ಪಡೆದಿರೋದೂ ಉಂಟು.. ಅದರ ಜತೆಗೆ ಈವರೆಗೆ ಕನ್ನಡದ ಎಷ್ಟೋ ಧೀರ ನಿರ್ಮಾಪಕರು ಸುದೀಪ್ ಸಿನಿಮಾ ನಿರ್ಮಿಸಿದ್ದಾರೆ. ಸಾರಾಸಗಟಾಗಿ ಅರ್ಧ ಭಾಗ ಜನ ದುಡ್ಡು ಕೊಟ್ಟಿಲ್ಲ. ಮೂರೇ ಜನ ಹೇಳಿದ್ದಷ್ಟು ಕೊಟ್ಟಿರೋದು ಎನ್ನುವ ಸುದೀಪ್ ಅವರ ಮಾತುಗಳು ಅನೇಕ ನಿರ್ಮಾಪಕರನ್ನು ಕೆರಳಿಸಿದೆ. ಸದ್ಯ ಸುದೀಪ್ ವಿರುದ್ಧ ಸಿಡಿದುಬೀಳಲು ಒಂದಷ್ಟು ನಿರ್ಮಾಪಕರು ಒಳಗೊಳಗೇ ತಯಾರಿ ನಡೆಸಿರುವುದಂತೂ ನಿಜ. ಯಾವ ಕ್ಷಣದಲ್ಲಿ ಬೇಕಾದರೂ ಈ ವಿಚಾರಗಳು ಸ್ಫೋಟಗೊಂಡು ಸುದ್ದಿವಾಹಿನಿಗಳ ಬಾಯಿಗೆ ಭರ್ಜರಿ ಆಹಾರವಾಗಬಹುದು!

  • ಅರುಣ್ ಕುಮಾರ್.ಜಿ

Leave a Reply

Your email address will not be published. Required fields are marked *


CAPTCHA Image
Reload Image