One N Only Exclusive Cine Portal

‘ಕಿಡಿ’ಯ ಮೂಲಕ ನೆಲೆ ಕಂಡುಕೊಳ್ಳುತ್ತಾರಾ ಭುವನ್ ಚಂದ್ರ?

ವಿಷ್ಣು ಅಂಕಲ್ ತೀರಿಕೊಂಡಾಗ ನನಗೆ ಆದ ಆಘಾತ ಅಷ್ಟಿಷ್ಟಲ್ಲ. ಸಿರಿವಂತ ಸಿನಿಮಾದಲ್ಲಿ ನಾನು ಅವರ ಮಗನ ಪಾತ್ರದಲ್ಲಿ ನಟಿಸಿದ್ದೆ. `ನಿನ್ನ ಮಗನಾಗಿ ಹುಟ್ಟೋದಕ್ಕಿಂತ ಎಂಜಲು ಕೈಯಲ್ಲಿ ಕಾಗೆ ಹೊಡೆಯೋನ ಮಗನಾಗಿ ಹುಟ್ಟಿದ್ದಿದ್ರೂ ಚನ್ನಾಗಿರ್ತಿತ್ತು…’ ಎನ್ನುವಂತಾ ಡೈಲಾಗ್ ಹೇಳಬೇಕಿತ್ತು. ಎಸ್. ನಾರಾಯಣ್ ಸರ್ ಎಷ್ಟೇ ಹೇಳಿಕೊಟ್ಟರೂ ಆ ಮಾತು ನನ್ನ ಬಾಯಿಂದ ಬರ್‍ತಾನೇ ಇರಲಿಲ್ಲ. ಆಗ ಸ್ವತಃ ವಿಷ್ಣು ಅಂಕಲ್ `ನೋಡು ಮರೀ ಇದು ಸಿನಿಮಾ. ನಾವಿಬ್ಬರೂ ಇಲ್ಲಿ ನಟರಷ್ಟೇ. ನೀನು ಧೈರ್ಯವಾಗಿ ಹೇಳು…” ಎಂದು ಹುರಿದುಂಬಿಸಿದ್ದರಂತೆ. ಆನಂತರ ಮೂವತ್ತು ದಿನಗಳ ಕಾಲ ಸರಾಗವಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರಂತೆ ಭುವನ್. ಭುವನ್ ಈಗ ಪೂರ್ಣಪ್ರಮಾಣದ ನಾಯಕನಾಗಿ ಲಾಂಚ್ ಆಗುತ್ತಿದ್ದಾರೆ. ಈ ಹೊತ್ತಿನಲ್ಲಿ ವಿಷ್ಣು ಅಂಕಲ್ ಇದ್ದಿದ್ರೆ ಅದೆಷ್ಟು ಖುಷಿ ಪಡುತ್ತಿದ್ದರೋ ಎನ್ನುವಾಗ ವಿಷ್ಣುವರ್ಧನ್ ಮೇಲೆ ಭುವನ್ ಅವರಿಗಿರುವ ಪ್ರೀತಿ ಎದ್ದುಕಾಣುತ್ತದೆ…

ಕಿಡಿ ಚಿತ್ರದ ಮೂಲಕ ತಮ್ಮ ವೃತ್ತಿ ಬದುಕಿಗೆ ಮಹತ್ತರವಾರ ತಿರುವು ಸಿಗುತ್ತದೆ ಎಂಬ ಭರವಸೆ, ನಿರೀಕ್ಷೆ ಇಡೀ ತಂಡದಲ್ಲಿ ತುಂಬಿದೆ. ಅದರಲ್ಲಿಯೂ ವಿಶೇಷವಾಗಿ ಈ ಚಿತ್ರದ ನಾಯಕ ಭುವನ್ ಚಂದ್ರರಿಗೆ ಅಂಥಾದ್ದೊಂದು ಗೆಲುವು ಸಿಗಲೇಬಾಕಾದ ಅನಿವಾರ್ಯತೆಯೂ ಇದೆ. ಯಾಕೆಂದರೆ, ಚಿತ್ರರಂಗದಲ್ಲಿ ಅಖಂಡ ಹತ್ತು ವರ್ಷಗಳಿಂದ ಸಕ್ರಿಯರಾಗಿದ್ದುಕೊಂಡು ಅವರು ಸಾಗಿ ಬಂದಿರೋ ಹಾದಿಯೇ ಅಂಥಾದ್ದಿದೆ!
ಸಾಹಸಸಿಂಹ ವಿಷ್ಣವರ್ಧನ್ ಅಭಿನಯದ ಸಿರಿವಂತ ಚಿತ್ರದಲ್ಲಿ ಮಗನ ಪಾತ್ರ ಮಾಡಿದ್ದ ಸ್ಫುರದ್ರೂಪಿ ಯುವಕ ಭುವನ್ ಚಂದ್ರ ಆ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಅವರ ಅಭಿನಯ ಗಮನಿಸಿದ ಬಹುತೇಕರು ಈ ಹುಡುಗ ನಾಯಕನಟನಾಗಿ ನೆಲೆ ನಿಲ್ಲೋದು ಗ್ಯಾರಂಟಿ ಎಂದೂ ಮಾತಾಡಿಕೊಂಡಿದ್ದರು. ಆದರೆ, ಆ ಹಾದಿಯಲ್ಲಿ ಬಹಳಷ್ಟು ಶ್ರಮ ಹಾಕಿದರೂ ಸಂಪೂರ್ಣವಾಗಿ ಹೀರೋ ಆಗಲು ಇಷ್ಟು ವರ್ಷ ಪಡಿಪಾಟಲು ಪಡಲೇಬೇಕಾಗಿ ಬಂದಿತ್ತು. ಇದೀಗ ಅವರು ಕಿಡಿ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕರಾಗಿ ಹೊರ ಹೊಮ್ಮಿದ್ದಾರೆ.
ಮೂಲತಃ ಡ್ಯಾನ್ಸರ್ ಆಗಿರುವ ಭುವನ್ ಚಂದ್ರರಿಗೆ ಈ ಹಿಂದೆಯೇ ಹೀರೋ ಆಗುವ ಅವಕಾಶ ಕೂಡಿ ಬಂದಿತ್ತು. ಸಂಭವ ಎಂಬ ಚಿತ್ರದಲ್ಲಿ ಅವರು ನಾಯಕರಾಗಿ ನಟಿಸಿದ್ದರು. ಆ ಚಿತ್ರ ಪೂರ್ಣಗೊಂಡಿತ್ತು. ಆದರೆ ಹಣಕಾಸೂ ಸೇರಿದಂತೆ ನಾನಾ ಸಮಸ್ಯೆಗಳಿಂದ ಇನ್ನೂ ಆ ಚಿತ್ರಕ್ಕೆ ಬಿಡುಗಡೆಯ ಭಾಗ್ಯವೇ ಸಿಕ್ಕಿಲ್ಲ. ಆದ್ದರಿಂದ ಭುವನ್ ಪಾಲಿಗೀಗ ಕಿಡಿಯೇ ಪ್ರಥಮ ಚಿತ್ರ. ಅವರೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿರುವ ಈ ಚಿತ್ರದ ಬಗ್ಗೆ ಭಾರೀ ಆತ್ಮಸ್ಥೈರ್ಯದಿಂದಲೇ ಭರವಸೆ ಹೊಂದಿದ್ದಾರೆ. ತಾವು ಮೈಮೇಲೆಳೆದುಕೊಂಡ ನಾನಾ ಜವಾಬ್ದಾರಿ, ಪಟ್ಟು ಹಿಡಿದು ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂಬ ನಂಬಿಕೆಯಿಂದಿದ್ದಾರೆ.
ಸಾಮಾನ್ಯವಾಗಿ ಭಾರೀ ಶ್ರಮ ವಹಿಸಿ, ಕನಸು ಕಂಡು ಒಂದು ಚಿತ್ರದಲ್ಲಿ ನಾಯಕನಾಗಿಯೂ ನಟಿಸಿ ಅದು ಬಿಡುಗಡೆಯಾಗದೇ ಹೋದರೆ ಎಂಥವರೂ ಅಧೀರರಾಗುತ್ತಾರೆ. ಆದರೆ ಅಂಥಾದ್ದೊಂದು ಆಘಾತವನ್ನೂ ಚಾಲೆಂಜಿಂಗ್ ಆಗಿ ತೆಗೆದುಕೊಂಡ ಭುವನ್ ಆ ನಿರಾಸೆಯನ್ನೆಲ್ಲ ಈ ಚಿತ್ರದ ಮೂಲಕ ನೀಗಿಕೊಳ್ಳುವ ಭರವಸೆ ಹೊಂದಿದ್ದಾರೆ. ಕಿಡಿ ಚಿತ್ರ ಆರಂಭವಾದಾಗ ನಿರ್ಮಾಪಕರಾದ ನಾಗರಾಜ್. ಟಿ ಎಲ್ಲಾ ಜವಾಬ್ದಾರಿಯನ್ನೂ ಭುವನ್ ಚಂದ್ರರಿಗೇ ಬಿಟ್ಟಿದ್ದರಂತೆ. ಒಂದು ಸಮರ್ಥ ಟೀಮು ಕಟ್ಟೋದರಿಂದ ಹಿಡಿದು ಪ್ರೊಡಕ್ಷನ್ ದೇಖಾರೇಖಿಯವರೆಗೂ ಆ ಜವಾಬ್ದಾರಿ ವಿಸ್ತರಿಸಿತ್ತು. ಅದಕ್ಕಾಗಿ ಭುವನ್ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರೊಬ್ಬರೊಂದಿಗೆ ಆರು ತಿಂಗಳ ಕಾಲ ಇದ್ದು ಅದರ ಒಳಹೊರಗನ್ನು ಅರಿತುಕೊಂಡೇ ಅಖಾಡಕ್ಕಿಳಿದಿದ್ದರು.
ಬಹುಶಃ ಸಿನಿಮಾವನ್ನೇ ಉಸಿರೆಂದುಕೊಳ್ಳದೇ ಇದ್ದಿದ್ದರೆ ಭುವನ್ ಇಷ್ಟು ಸುದೀರ್ಘವಾದ ಹಾದಿಯನ್ನು ದಾಟಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲವೇನೋ. ಅಂಥಾ ಆತ್ಮಶಕ್ತಿ ಇಲ್ಲದಿದ್ದರೆ ಕಿಡಿ ಚಿತ್ರದಲ್ಲಿಯೇ ಜವಾಬ್ದಾರಿ ನಿಭಾಯಿಸಲೂ ಕಷ್ಟವಾಗುತ್ತಿತ್ತು. ಆದರೆ ನಿರ್ಮಾಪಕರು ತಮ್ಮ ಮೇಲೆ ಜವಾಬ್ದಾರಿ ಹಾಕುತ್ತಲೇ ಭುವನ್ ಅಖಾಡಕ್ಕಿಳಿದಿದ್ದರು. ಆರಂಭದಲ್ಲಿ ಒಂದಷ್ಟು ಕಥೆ ಕೇಳಿಸಿದರಾದರೂ ಅದು ನಿರ್ಮಾಪಕರಿಗೆ ಇಷ್ಟವಾಗಲಿಲ್ಲ. ನಂತರ ಹಿಟ್ ಆದ ಚಿತ್ರಗಳನ್ನು ನೋಡುವ ಕಾರ್ಯಕ್ರಮ ಇಟ್ಟುಕೊಂಡ ಭುವನ್ ಆರು ತಿಂಗಳ ಕಾಲ ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿದ್ದರು. ಅದೆಲ್ಲದರಲ್ಲಿ ಇಷ್ಟವಾಗಿದ್ದು ಮಲೆಯಾಳಂನ ಹಿಟ್ ಮೂವಿ ಕಲಿ.
ಇದಾದ ನಂತರದಲ್ಲಿ ಒಂದೊಳ್ಳೆ ಟೀಮ್ ಕಟ್ಟುವ ಜವಾಬ್ದಾರಿಯೂ ಸಿಕ್ಕಾಗ ಹೊಸಾ ತಂಡ ಕಟ್ಟುವ ಛಲದಿಂದ ಕೆಲಸ ಆರಂಭಿಸಿದವರು ಭುವನ್. ಈ ಹಿಂದೆ ಜೊತೆಯಲ್ಲಿ ಕೆಲಸ ಮಾಡಿದ್ದ ಕನಕರಾಜು ಅವರನ್ನೇ ಕ್ಯಾಮೆರಾಮನ್ ಆಗಿ ಫಿಕ್ಸ್ ಮಾಡಿದ್ದರು. ಈ ಚಿತ್ರದಲ್ಲಿ ಕ್ಯಾಮೆರಾ ಕೆಲಸವೇ ಮುಖ್ಯ. ಈ ಕನಕರಾಜು ಕ್ವಾಲಿಟಿಗಾಗಿ ತಮ್ಮ ಕೈಯಿಂದಲೇ ಕಾಸು ಹಾಕಿಯಾದರೂ ಪರಿಕರಗಳನ್ನು ಹೊಂಚಿಕೊಳ್ಳುವಷ್ಟು ಮಟ್ಟಿಗೆ ವೃತ್ತಿಪರರು. ಆದ್ದರಿಂದಲೇ ಭುವನ್ ಅವರನ್ನು ಫೈನಲ್ ಮಾಡಿದ್ದರು. ನಂತರ ರಘು ಮಾಸ್ಟರ್ ಅವರನ್ನು ನಿರ್ದೇಶಕರಾಗಿಯೂ ನಿಕ್ಕಿ ಮಾಡಿದ್ದರು. ಇವರ ಪರಿಚಿತರಾದ ಬಾಲಸುಬ್ರಹ್ಮಣ್ಯಂ ಎಂಬವರು ಮೊಬೈಲ್ ಅಂಗಡಿಯೊಂದಿಗೆ ಪಿಯಾನೋ ಮುಂತಾದ ಸಂಗೀತ ಪರಿಕರಗಳನ್ನು ನುಡಿಸುತ್ತಾ ಸಂಗೀತದ ಬಗ್ಗೆ ಭಾರೀ ಒಲವು ಹೊಂದಿದ್ದರು. ಅವರಿಗೂ ಕೂಡಾ ಅಸ್ಸ್ಟೆಂಟ್ ಆಗಿ ಅವಕಾಶ ಕೊಡುವ ಮೂಲಕ ಭುವನ್ ಸಮರ್ಥವಾದೊಂದು ಹೊಸಾ ತಂಡ ಕಟ್ಟುವಲ್ಲಿ ಯಶ ಕಂಡಿದ್ದಾರೆ.
ರಾಮಚಂದ್ರ ಮತ್ತು ಸರೋಜಾ ದಂಪತಿಯ ಮೂವರು ಮಕ್ಕಳ ಪೈಕಿ ಹಿರೀ ಮಗನಾದ ಭುವನ್ ಅವರಿಗೆ ಯಾವುದೇ ಸಿನಿಮಾ ಹಿನ್ನೆಯೂ ಇಲ್ಲ. ಆದರೂ ಅವರು ಸ್ವಂತ ಶ್ರಮದಿಂದಲೇ ಹಂತ ಹಂತವಾಗಿ ಮೇಲೇರಿ ಬಂದಿದ್ದಾರೆ. ಆದರೆ ಈ ಹಾದಿಯಲ್ಲಿ ನಿರಾಸೆಗಳಾದಾಗಲೂ ಧೈರ್ಯ ತುಂಬಿ, ಭುವನ್ ಪ್ರತಿಭೆ ಬೆಳಕಿಗೆ ಬರಲು ಕಾರಣವಾದವರು ಅವರ ತಮ್ಮ ಧನಂಜಯ್. ಖಾಸಗಿ ಕಂಪೆನಿ ಒಂದರಲ್ಲಿ ಮ್ಯಾನೇಜರ್ ಆಗಿರುವ ಧನಂಜಯ್‌ಗೆ ಆರಂಭದಿಂದಲೂ ಅಣ್ಣನ ಪ್ರತಿಭೆಯ ಮೇಲೆ ಬಲು ಪ್ರೀತಿ. ಅವರೇ ಭುವನ್‌ರ ಪ್ರತೀ ಹೆಜ್ಜೆಗಳಿಗೂ ಸಾಥ್ ನೀಡುತ್ತಾ ಬಂದಿದ್ದಾರೆ. ಇನ್ನೋರ್ವ ಸಹೋದರ ನರೇಂದ್ರ ಅಪ್ಪನ ವ್ಯವಹಾರ ಮುಂದುವರೆಸುತ್ತಿದ್ದಾರೆ.
ಭುವನ್ ಚಂದ್ರ ಒಂದು ಹೊಸಬರ ತಂಡ ಕಟ್ಟಿದಾಗ ಹೆಜ್ಜೆ ಹೆಜ್ಜೆಗೂ ನೆಗೆಟಿವ್ ಮಾತುಗಳು ಕೇಳಿ ಬಂದಿದ್ದವಂತೆ. ಬ್ಯಾನರ್ ರಿಜಿಸ್ಟರ್ ಮಾಡಿಸಲು ಹೋದಾಗ ಎದುರಾದ ಹಿರಿಯ ನಿರ್ಮಾಪಕರೊಬ್ಬರು ಕಿಡಿ ಚಿತ್ರದ ನಿರ್ಮಾಪಕ ನಾಗರಾಜ್ ಅವರಿಗೆ `ಹೊಸಬರನ್ನ ಹಾಕಿಕೊಂಡು ಯಾಕೆ ರಿಸ್ಕ್ ತಗೋತೀರಿ ಅಂತೆಲ್ಲ ಉತ್ಸಾಹ ಕುಂದಿಸೋ ಮಾತಾಡಿದ್ದರಂತೆ. ಆದರೆ ನಾಗರಾಜ್ ಸಿನಿಮಾ ರಂಗದಲ್ಲಿ ಹವಾ ಸೃಷ್ಟಿಸಿದ್ದೇ ಹೊಸಬರು ಅಂತ ಖಡಕ್ ಉತ್ತರ ನೀಡಿ ಮುಂದೆ ಸಾಗಿದ್ದರಂತೆ. ನಿರ್ಮಾಪಕರು ತಮ್ಮ ತಂಡದ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿರುವ ಭರವಸೆ ಭುವನ್ ಚಂದ್ರ ಅವರದ್ದು.
ಇದೀಗ ಅಂಥಾ ಜವಾಬ್ದಾರಿ, ಶ್ರಮವೆಲ್ಲವೂ ಸಾರ್ಥಕವಾದ ಖುಷಿ ಭುವನ್ ಚಂದ್ರರದ್ದಾಗಿದೆ. ಹ್ಯಾಂಡ್‌ಸಮ್ ಆಗಿದ್ದರೆ ಮಾತ್ರ ಸಾಲದು, ಪ್ರತಿಭೆಯೇ ಅಲ್ಟಿಮೇಟ್ ಅಂತ ನಂಬಿರುವ ಭುವನ್ ಹೀರೋ ಆಗಲು ಬೇಕಿರುವ ಸಕಲ ಕಸರತ್ತುಗಳನ್ನೂ ಕರಗತ ಮಾಡಿಕೊಂಡವರು. ತಮ್ಮ ಹತ್ತು ವರ್ಷಗಳ ಏಳು ಬೀಳು, ಆದ ಅನುಭವಗಳೆಲ್ಲವನ್ನೂ ವಿನಿಯೋಗಿಸಿ ಅವರು ಕಿಡಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಇತರೇ ಕೆಲಸ ಕಾರ್ಯಗಳನ್ನೂ ನೋಡಿಕೊಂಡಿದ್ದಾರೆ. ಇಡೀ ಚಿತ್ರ ತಯಾರಾಗುವವ ಅವಧಿಯಲ್ಲಿ ಸಂಪೂರ್ಣ ಸಹಕಾರ ನೀಡಿದ ನಿರ್ಮಾಪಕರು, ನಿರ್ದೇಶಕರು ಮತ್ತು ಇಡೀ ಚಿತ್ರ ತಂಡವನ್ನು ವಿಧೇಯತೆಯಿಂದ ಸ್ಮರಿಸಿಕೊಳ್ಳುವ ಭುವನ್ ಈ ಚಿತ್ರದ ಮೂಲಕ ನಾಯಕ ನಟನಾಗಿ ನೆಲೆ ಕಾಣಲಿ ಅಂತ ಹಾರೈಸೋಣ…

Leave a Reply

Your email address will not be published. Required fields are marked *


CAPTCHA Image
Reload Image