One N Only Exclusive Cine Portal

ಕಿರುಚಿತ್ರ

ಈ ಆಧುನಿಕ ಯುಗದಲ್ಲಿ ಬಾಡಿಗೆ ತಾಯ್ತನ ಕ್ಷೇತ್ರ ಒಂದು ಉದ್ಯಮವಾಗಿ ಬೆಳೆಯುತ್ತಿದೆ! `ಬಾಡಿಗೆ ತಾಯಿ’ ಎಂದರೆ ಪರ್ಯಾಯ ತಾಯಿ ಎಂದು ಅರ್ಥ. ಅಂದರೆ, ಮತ್ತೊಬ್ಬ ದಂಪತಿಯ ಮಗುವನ್ನು ಹೊತ್ತು ಹೆತ್ತು ಅವರ ಕೈಗಿಡುವ ಮಹಿಳೆಯನ್ನು `ಬಾಡಿಗೆ ತಾಯಿ’ ಎನ್ನುತ್ತಾರೆ.
`ಗರ್ಭಾವಧಿ ಬಾಡಿಗೆ ತಾಯ್ತನ’ದಲ್ಲಿ ಭ್ರೂಣವು ಲ್ಯಾಬ್‌ನಲ್ಲಿ ಸೃಷ್ಟಿಯಾಗಿ `ಬಾಡಿಗೆ ಗರ್ಭಾಶಯ’ಕ್ಕೆ ವರ್ಗಾವಣೆಯಾಗುತ್ತದೆ. `ವ್ಯಾವಹಾರಿಕ ಬಾಡಿಗೆ ತಾಯ್ತನ’ವು ಗರ್ಭಾಶಯವನ್ನು ಬಾಡಿಗೆಗೆ ಪಡೆಯುವುದು. ಇಲ್ಲಿ ಬಾಡಿಗೆ ತಾಯಿಯು ಉದ್ದಿಷ್ಟ ಪೋಷಕರ ಭ್ರೂಣವನ್ನು ಹೊತ್ತುಕೊಂಡು ಹೆರಿಗೆಯ ನಂತರ ಮಗುವನ್ನು ಅವರ ಕೈಗೊಪ್ಪಿಸುತ್ತಾಳೆ. ಹೀಗೆ ಯಾರದ್ದೋ ಮಗುವಿಗೆ ತನ್ನೊಡಲಲ್ಲಿ ಜೀವ ನೀಡಿ ಅವರ ಮಡಿಲು ಸೇರಿಸುವ ಕಾಯಕಕ್ಕೆ ಪರತಿಫಲವಾಗಿ ಒಳ್ಳೇ ದುಡ್ಡು ಬಾಡಿಗೆ ತಾಯಿಯ ಕೈಸೇರುತ್ತದೆ.
ಬಾಡಿಗೆ ತಾಯ್ತನಕ್ಕೆ ಒಪ್ಪುವ ಬಡ ಮಹಿಳೆಯರನ್ನು ಬಳಸಿಕೊಂಡು ಹಣ ಮಾಡಲು ನಿಂತ ಅದೆಷ್ಟೋ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರಿದ್ದಾರೆ. ಖ್ಯಾತ ನಟ ಶಾರುಖ್ ಖಾನ್ ಸಹಾ ಹೀಗೆ ಬಾಡಿಗೆ ತಾಯಿಯಿಂದ ಮಗುವನ್ನು ಪಡೆದಿದ್ದರು ಅನ್ನೋದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು. ಹೆಚ್ಚಾಗಿ ಭಾರತೀಯ ಮಹಿಳೆಯರು ವಿದೇಶೀ ದಂಪತಿಗಳಿಗೆ ಹೀಗೆ ಮಕ್ಕಳನ್ನು ಹೆತ್ತುಕೊಡುವ ಕಾಯಕ ಮಾಡುತ್ತಾರೆ.
ಇದೇ ವಿಷಯವನ್ನಿಟ್ಟುಕೊಂಡು ಯುವ ನಿರ್ದೇಶಕ ಪ್ರಸನ್ನ ಕೊಡಪಾಡಿ ಹದಿನೈದು ನಿಮಿಷದ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಈ ಕಿರುಚಿತ್ರದಲ್ಲಿ ನಟಿ ನಿವೇದಿತಾ (ಸ್ಮಿತಾ) ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಯೂ ಆಗದ ಸೀತಾ ಹೂ ಮಾರಿ ಜೀವನ ಸಾಗಿಸುತ್ತಿರುತ್ತಾಳೆ. ಅದೊಂದು ದಿನ ಆಕೆಯ ಗೆಳತಿ ರಾಧಾ (ಸಿತಾರಾ ನೀನಾಸಂ) ಬಾಡಿಗೆ ತಾಯ್ತನಕ್ಕೆ ಒಪ್ಪಿದರೆ ಹಣ ಸಿಗುತ್ತದೆ. ನಾನೂ ಹಾಗೇ ಮಾಡಿದ್ದೆ ಎಂತು ಹೇಳಿ ಸೀತಾಳ ಮನವೊಲಿಸುತ್ತಾಳೆ. ಸೀತಾಳ ಒಡಲಲ್ಲಿ ವಿದೇಶೀ ದಂಪತಿಯ ಭ್ರೂಣವನ್ನು ಅಳವಡಿಸುತ್ತಾರೆ. ಐವತ್ತು ಸಾವಿರ ರುಪಾಯಿಗಳ ಅಡ್ವಾನ್ಸ ಕೂಡಾ ನೀಡಿರುತ್ತಾರೆ. ಆಕೆ ಏಳು ತಿಂಗಳ ಗರ್ಭವತಿಯಾಗಿರುವ ಸಂದರ್ಭದಲ್ಲಿ ವಿದೇಶೀ ದಂಪತಿ ಜಗಳವಾಡಿಕೊಂಡು ಪರಸ್ಪರ ವಿಚ್ಛೇದನದ ಮೊರೆಹೋಗಿದ್ದಾರೆ ಎನ್ನುವ ಸತ್ಯ ಗೊತ್ತಾಗುತ್ತದೆ.
ಹಾಗಾದರೆ ಸೀತಾ ಹೆತ್ತ ಮಗು ಯಾರ ಪಾಲಾಗುತ್ತದೆ? ಮಿಕ್ಕ ದುಡ್ಡು ಆಕೆಯ ಕೈಸೇರುತ್ತಾ? ಈ ಎಲ್ಲವನ್ನೂ ಕೇವಲ ಹದಿನೈದು ನಿಮಿಷದಲ್ಲಿ ನಿರೂಪಿಸಿದ್ದಾರೆ ಪ್ರಸನ್ನ ಕೊಡಪಾಡಿ. ಈ ಕಿರುಚಿತ್ರಕ್ಕೆ `ಪರಾಗಸ್ಪರ್ಶ’ ಎಂದು ಹೆಸರಿಟ್ಟಿದ್ದಾರೆ.
ನಟ, ರಂಗಕರ್ಮಿ ಚಂದ್ರಕಾಂತ ಕೊಡಪಾಡಿ ಅವರ ಪುತ್ರ ಪ್ರಸನ್ನ. ಆರಂಭದಲ್ಲಿ ಕನ್ನಡ ಸಿನಿಮಾ, ಸೀರಿಯಲ್ಲುಗಳ ವಿನ್ಯಾಸ ಕಲಾವಿದರಾಗಿದ್ದವರು. ನಂತರ ಕ್ಯಾಲಿಫೋರ್ನಿಯಾಗೆ ತರಳಿ ಅಲ್ಲಿ ೩ಡಿ ಸೂಪರ್ ವೈಸರ್ ಆಗಿ ನೌಕರಿ ಮಾಡುತ್ತಿದ್ದಾರೆ. ಸ್ಟಾರ್ ವಾರ್, ಮ್ಯಾಡ್ ಮ್ಯಾಕ್ಸ್, ಜುರಾಸಿಕ್ ವರ್ಲ್ಡ್, ಅವೆಂಜರ್‍ಸ್ ಮತ್ತು ಐರನ್ ಮ್ಯಾನ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಗ್ರಾಫಿಕ್ಸ್ ಕೆಲಸ ಮಾಡಿದ್ದಾರೆ.
ಬಾಡಿಗೆ ತಾಯ್ತನದ ಕುರಿತು ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶಿಸಬೇಕು ಅನ್ನೋದು ಪ್ರಸನ್ನ ಅವರ ಬಯಕೆ. ಅವರ ತಂದೆ ಚಂದ್ರಕಾಂತ್ ಕೊಡಪಾಡಿ ಅವರು ಸಂಪೂರ್ಣವಾದ ಸ್ಕ್ರಿಪ್ಟ್ ಅನ್ನೂ ಸಿದ್ದಗೊಳಿಸಿದ್ದರಂತೆ. ಆದರೆ ಕಡೆಗೆ ಅರವತ್ತು ದೃಶ್ಯಗಳಿದ್ದ ಆ ಸ್ಕ್ರಿಪ್ಟು ಒಂಭತ್ತು ದೃಶ್ಯಗಳಿಗಿಳಿದು ಈಗ ಕಿರುಚಿತ್ರದ ರೂಪದಲ್ಲಿ ತಯಾರಾಗಿದೆ.

Leave a Reply

Your email address will not be published. Required fields are marked *


CAPTCHA Image
Reload Image