One N Only Exclusive Cine Portal

ಕೇಶವಮೂರ್ತಿ ಅವರ ‘ಗೇಟ್ ಕೀಪರ್’ ಪುಸ್ತಕ….

`ಕನ್ನಡಪ್ರಭ’ದ ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ಅವರ `ಗೇಟ್ ಕೀಪರ್ ಪುಸ್ತಕ ಲೋಕಾರ್ಪಣೆಗೊಂಡಿದೆ. ಸಿನಿಮಾ ಎಂಬುದು ಕೇವಲ ಮನೋರಂಜನಾ ಮಾಧ್ಯಮ ಎಂಬುದರಾಚೆಗೆ, ಸಿನಿಮಾದ ಮೂಲಕವೇ ಆಯಾ ಭಾಗದ ಬದುಕುಗಳನ್ನು ಅನಾವರಣೊಳಿಸೋ ಪ್ರಯತ್ನವಾಗಿ ಹೊರ ಬಂದಿರೋ ಈ ಪುಸ್ತಕ ಜಗತ್ತಿನ ಕ್ಲಾಸಿಕಲ್ ಸಿನಿಮಾ ಲೋಕದಲ್ಲಿ ರಸವತ್ತಾದ ಯಾನ ಮಾಡಿಸುವಂಥಾ ಹೂರಣ ಹೊಂದಿದೆ.

ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್ ಸೇರಿದಂತೆ ಜಗತ್ತಿನ ನಾನಾ ಭಾಷೆಗಳ ಹಲವಾರು ಚಿತ್ರಗಳ ಬಗೆಗಿನ ಕೌತುಕದ ವಿಚಾರಗಳು, ವಿಶ್ಮೇಷಣೆಗಳು ಈ ಪುಸ್ತಕದಲ್ಲಿವೆ.
ಒಂದು ಚೆಂದದ ಸಿನಿಮಾ ಕಟ್ಟಿ ಕೊಡುವ ಅನುಭೂತಿಯನ್ನು ಪ್ರತೀ ಅಧ್ಯಾಯಗಳಲ್ಲಿಯೂ ಕಾಪಿಟ್ಟುಕೊಂಡು ಓದಿಸಿಕೊಂಡು ಹೋಗುವುದು ಈ ಪುಸ್ತಕದ ಪ್ರಧಾನ ಅಂಶ. ಈವತ್ತಿಗೂ ಹೆಚ್ಚಿನ ಜನರ ಪಾಲಿಗೆ ಈ ಸಿನಿಮಾ ಅಂದರೆ ಒಂದೆರಡು ಘಂಟೆ ರಿಫ್ರೆಶ್ ಆಗೋ ಮಾಧ್ಯಮವಷ್ಟೆ. ಆದರೆ ಜಗತ್ತಿನ ಬಹುತೇಕ ಭಾಷೆಗಳ ಸಿನಿಮಾಗಳು ಆಯಾ ಭಾಗದ ಬದುಕು, ಅವಮಾನ ದುಮ್ಮಾನಗಳನ್ನೂ ದೃಷ್ಯ ಕಾವ್ಯವಾಗಿಸಿದೆ. ಸುಂದರವಾದ ಲೊಕೇಷನ್ ಮೂಲಕವೋ, ಭಾವನೆಗಳನ್ನು ಮೀಟುವ ಹಾಡುಗಳ ಮೂಲಕವೋ, ಮನಸ್ಸಿನ ಮೇಲೆ ಸವಾರಿ ಮಾಡುವಷ್ಟು ಚುರುಕಾದ ಸಂಭಾಷಣೆಗಳ ಮೂಲಕವೋ ಪ್ರೇಕ್ಷಕನನ್ನು ಹಿಡಿದಿಟ್ಟುಕೊಂಡು ಕೊನೆ ತನಕ ಸಾಗುವ ಹಾಗೆ ಕೃತಿಯ ಪ್ರತಿಯೊಂದು ಅಧ್ಯಾಯವೂ ಅಂತಹದ್ದೇ ಕುತೂಹಲ, ರೋಚಕತೆಯೊಂದಿಗೆ ಸಾಗುತ್ತವೆ ಎಂಬುದು `ಗೇಟ್ ಕೀಪರ್’ನ ಹೆಚ್ಚುಗಾರಿಕೆ. ಸಿನಿಮಾ ಪ್ರೇಮಿಗಳಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ, ಜಗತ್ತಿನ ಕ್ಲಾಸಿಕ್ ಸಿನಿಮಾಗಳ ಮೋಡಿ ಒಳಗಾದವರಿಗೆ, ಈಗಷ್ಟೆ ಸಿನಿಮಾ ಕನಸು ಕಟ್ಟಿಕೊಂಡು, ಸಿನಿಮಾ ಕತೆಗಳ ಕಟ್ಟುವ ದಾರಿಯಲ್ಲಿರುವ ಉತ್ಸಾಹಿ ಸಿನಿ ಕೃಷಿಕರಿಗೆ ಈ ಪುಸ್ತಕ ಸದಾ ಜತೆಯಾಗಿರುವ ಅರ್ಹತೆಯನ್ನು ಹೊಂದಿದೆ.
ಇದನ್ನು ಸಿನಿಮಾ ಓದಿಗಾಗಿ ಹಿಡಿದಿಡೋದಕ್ಕೆ ಭರಪೂರವಾದ ತಯಾರಿಯೂ ಬೇಕಾಗುತ್ತದೆ. ಅತೀವ ಸಿನಿಮಾ ವ್ಯಾಮೋಹ ಹೊಂದಿರೋ ಕೇಶವಮೂರ್ತಿ ಅದರಲ್ಲಿ ಗೆದ್ದಿದ್ದಾರೆ.
ಇದೀಗ ಬಣ್ಣ ಬಣ್ಣದ ಕನಸಿಟ್ಟುಕೊಂಡು ಚಿತ್ರರಂಗಕ್ಕೆ ಬರುತ್ತಿರುವವರ ಪಾಲಿಗೂ ಈ ಪುಸ್ತಕ ಹೊಸಾ ದಿಕ್ಕು ತೋರಿಸುವಷ್ಟು ಸಶಕ್ತವಾಗಿದೆ. ಕನ್ನಡದ ಜನಪ್ರಿಯ ಪ್ರಕಾಶನ ಸಂಸ್ಥೆಯಾದ ಸಾವಣ್ಣ ಪ್ರಕಾಶನ ಹೊರ ತಂದಿರುವ ಈ ಕೃತಿ ಎಲ್ಲಾ ಪುಸ್ತಕದಂಗಡಿ ಮತ್ತು ಆನ್ ಲೈನ್ ಮೂಲಕವೂ ಲಭ್ಯವಿದೆ.

Leave a Reply

Your email address will not be published. Required fields are marked *


CAPTCHA Image
Reload Image