One N Only Exclusive Cine Portal

‘ಕೋಲುಮಂಡೆ’ ಗಾಯಕ ಶಾಸ್ತ್ರಿಯವರಿಗೆ ಕರುಳು ಕ್ಯಾನ್ಸರ್

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಟನೆಯಲ್ಲಿ ಬಂದಿದ್ದ `ಜನುಮದ ಜೋಡಿ’ ಸಿನಿಮಾದಲ್ಲಿನ `ಕೋಲುಂಡೆ ಜಂಗಮದೇವ…’ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಆ ಹಾಡಿಗೆ ದನಿಯಾಗಿದ್ದ ಗಾಯಕ ಎಲ್.ಎನ್ ಶಾಸ್ತ್ರಿ ತೀವ್ರತರವಾದ ಅನಾರೋಗ್ಯಕ್ಕೀಡಾಗಿದ್ದಾರೆ. ಸಿನಿಮಾ ಮತ್ತು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಶಾಸ್ತ್ರಿ ಅವರನ್ನು ಹೈರಾಣು ಮಾಡಿರುವುದು ಮಾರಣಾಂತಿಕ ಕರುಳು ಕ್ಯಾನ್ಸರ್.

ಎಲ್.ಎನ್ ಶಾಸ್ತ್ರಿ ಅವರನ್ನು ತಿಂಗಳುಗಳ ಹಿಂದೆಯೇ ಅನಾರೋಗ್ಯ ಬಾಧಿಸಿತ್ತು. ಆರಂಭದಲ್ಲಿ ಇದನ್ನು ಜಾಂಡೀಸ್ ಅಂತಲೇ ಭಾವಿಸಲಾಗಿತ್ತು. ಆದರೆ ಇದೀಗ ಕರುಳು ಕ್ಯಾನ್ಸರ್ ಇರುವ ವಿಚಾರ ಗೊತ್ತಾಗಿದೆ. ವೈದ್ಯರು ಹೇಳಿರೋ ಪ್ರಕಾರ ಅದಾಗಲೇ ಈ ಕಾಯಿಲೆ ನಾಲ್ಕನೇ ಹಂತದಲ್ಲಿದೆ.ಅಗಾಧವಾದ ಆತ್ಮಸ್ಥೈರ್ಯ ಮತ್ತು ಕನಸುಗಾರಿಕೆ ಹೊಂದಿದ್ದ ಶಾಸ್ತ್ರಿ ಅವರು ನವೀನ್ ಅಗಸ್ತ್ಯ ನಿರ್ದೇಶನದ ಮೇಲೊಬ್ಬ ಮಾಯಾವಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಚಂದ್ರಚೂಡ್ ಅವರು ಬರೆದ ಮೂರು ಹಾಡುಗಳಿಗೆ ಅನಾರೋಗ್ಯದ ನಡಯವೆಯೂ ಶಾಸ್ತ್ರಿ ಚೆಂದದ ಸಂಗೀತ ನಿರ್ದೇಶನ ಮಾಡಿದ್ದರು. ಇದರಲ್ಲಿ ಸಾವಿನ ಬಗೆಗಿನ ಫಿಲಾಸಫಿಯ ಹಾಡೊಂದನ್ನೂ ಚಂದ್ರಚೂಡ್ ಬರೆದಿದ್ದಾರೆ. ಆ ಹಾಡನ್ನು ತಮ್ಮನ್ನು ಒಳಗಿಂದಲೇ ಕೊರೆಯುತ್ತಿದ್ದ ನೋವನ್ನೂ ಮರೆತು ಶಾಸ್ತ್ರಿ ರೂಪಿಸಿದ್ದರಂತೆ. ಈ ಹಾಡನ್ನು ರಾಜೇಶ್ ಕೃಷ್ಣನ್, ಅನುರಾಧಾ ಭಟ್, ಶಮಿತಾ ಮಲ್ನಾಡ್, ಹೇಮಂತ್ ಮುಂತಾದವರಿಂದ ಹಾಡಿಸಿದ್ದರು.
ಒಪ್ಪಿಕೊಂಡ ಸಿನಿಮಾವನ್ನು ಮಾಡಿ ಮುಗಿಸಬೇಕೆಂಬ ಕರ್ತವ್ಯ ಪ್ರಜ್ಞೆ ಮಾತ್ರವಲ್ಲದೇ ಅದ್ಭುತ ಸಿನಿಮಾ ಪ್ರೀತಿಯಿಂದ ಶಾಸ್ತ್ರಿ ಅವರು ಮೇಲೊಬ್ಬ ಮಾಯಾವಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ತಮ್ಮ ಮಡದಿ ಸುಮಾ ಶಾಸ್ತ್ರಿ ಅವರ ಸಹಾಯದೊಂದಿಗೆ ತಾವೇ ಓಡಾಡಿ ಚೆಂದದ ಹಾಡುಗಳನ್ನ ರೂಪಿಸಿದ್ದರು.
ಶಾಸ್ತ್ರಿ ಇತ್ತೀಚೆಗಷ್ಟೇ ಬಲು ಪ್ರೀತಿಯಿಂದ ಕೆಂಗೇರಿ ಬಳಿ ಸ್ವಂತ ಮನೆ ಕಟ್ಟಿಸಿದ್ದರು. ಅಲ್ಲೇ ಒಂದು ಅಚ್ಚುಕಟ್ಟಾದ ಸ್ಟುಡಿಯೋ ಕೂಡಾ ಮಾಡಿಕೊಂಡಿದ್ದರು. ಇದೀಗ ಹಠಾತ್ತನೆ ಕ್ಯಾನ್ಸರ್‌ಗೆ ತುತ್ತಾಗಿರೋ ಅವರು ಮನೆಯನ್ನು ಮಾರಿಯಾದರೂ ಈ ಕಾಯಿಲೆಯಿಂದ ಬಚಾವಾಗಿ ಬರೋದಾಗಿ ಹೊರಟಿದ್ದಾರೆ.
ಶಾಸ್ತ್ರಿ ಅವರದ್ದು ಸ್ವಾಭಿಮಾನದ ವ್ಯಕ್ತಿತ್ವ. ಯಾರ ಬಳಿಯೂ ಕೈಚಾಚೋ ಜಾಯಮಾನದವರಲ್ಲ. ಆದರೆ ಈಗ ಅವರಿಗೆ ಹಣಕಾಸಿನ ತುರ್ತು ಖಂಡಿತಾ ಇದೆ. ಚಿತ್ರ ರಂಗದ ಮಂದಿ ಈ ಬಗ್ಗೆ ಮನಸು ಮಾಡಬೇಕಿದೆ.

Leave a Reply

Your email address will not be published. Required fields are marked *


CAPTCHA Image
Reload Image