One N Only Exclusive Cine Portal

ಗಣಿ ಬಿಕಾಂ ಪಾಸ್: ಕೆಲಸವಿಲ್ಲದವರ ಆತ್ಮಕಥೆಯಂಥಾ ಕಿರುಚಿತ್ರ!

ಕಿರು ಚಿತ್ರಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಕನಸು ಹೊಂದಿರುವವರ ಪಾಲಿಗೆ ಪ್ರತಿಭೆ ಸಾಬೀತುಪಡಿಸುವ ಪರಿಣಾಮಕಾರಿ ಮಾಧ್ಯಮ. ಸಾಲು ಸಾಲಾಗಿ ಇಂಥಾ ನೂರಾರು ಕಿರು ಚಿತ್ರಗಳು ರೆಡಿಯಾಗುತ್ತಲೇ ಇವೆಯಾದರೂ ಅವುಗಳ ಮಧ್ಯೆಯೂ ಗಮನ ಸೆಳೆಯುವಂತಾ ಒಂದಷ್ಟು ಪ್ರಯತ್ನಗಳಾಗುತ್ತಿರೋದು ಸಂತಸದ ವಿಚಾರ. ಆ ಸಾಲಿಗೆ ಇದೀಗ ಒಂದಷ್ಟು ಟಾಕ್ ಕ್ರಿಯೇಟ್ ಮಾಡಿರೋ `ಗಣಿ ಬಿ ಕಾಂ ಪಾಸ್ ಎಂಬ ಚಿತ್ರವೂ ಆ ಸಾಲಿಗೆ ಸೇರಿಕೊಳ್ಳುತ್ತದೆ.
ಈವರೆಗೂ ನಿರುದ್ಯೋಗ ಸಮಸ್ಯೆಯ ಬಗ್ಗೆ ಸಾಕಷ್ಟು ಚಿತ್ರಗಳು ಬಂದಿವೆ. ಒಂದಷ್ಟು ಕಿರು ಚಿತ್ರಗಳಿಗೂ ಅದು ಕತಾ ವಸ್ತುವಾಗಿದೆ. ಆದರೆ ಅದೇ ಕಥೆಯೊಂದಿಗೆ ಆರಂಭಗೊಳ್ಳುವ ಗಣಿ ಬಿಕಾಂ ಪಾಸ್ ಎಂಬ ಕಿರು ಚಿತ್ರ ಅಂಥಾದ್ದೇ ಕಥಾ ಹಂದರದ ಮೂಲಕ ಆರಂಭವಾಗಿ ಬೇರೇನೋ ಹೊಸಾ ಹೊಳಹು ನೀಡೋದರೊಂದಿಗೆ ಗಮನ ಸೆಳೆಯುತ್ತದೆ. ಆಧ್ವಿ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿ ಬಂದಿರೋ ಈ ಕಿರು ಚಿತ್ರವನ್ನು ಅಭಿಶೇಕ್ ಶೆಟ್ಟಿ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ಸ್ವತಃ ಅವರೇ ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ಕಿರು ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದಾರೆ. ಪ್ರಶಾಂತ್ ಕುಮಾರ್ ಶೆಟ್ಟಿ ನಿರ್ಮಿಸಿದ್ದಾರೆ.
ಬಿಕಾಂ ಪಾಸ್ ಮಾಡಿಕೊಂಡು ಎಲ್ಲಿಯೂ ಕೆಲಸ ಸಿಗದೆ ನಂತರ ಮಲ್ಟಿ ನ್ಯಾಷನಲ್ ಕಂಪೆನೀಲೇ ಕೆಲಸ ಬೇಕೆಂದು ಹಠ ಹಿಡಿದು ಸೋಂಭೇರಿತನಕ್ಕೆ ಒಗ್ಗಿಕೊಳ್ಳುವ ಹುಡುಗ. ಮಾಮೂಲಿನಂತೆ, ಮನೆ ಸೇರಿದಂತೆ ಹೋದಲ್ಲಿ ಬಂದಲ್ಲಿ ಕೆಲಸಕ್ಕೆ ಬಾರದವನೆಂಬ ಹೀಯಾಳಿಕೆ. ಕಡೆಗೆ ಪ್ರೀತಿಸಿದ ಹುಡುಗಿಯೂ ಬಿಟ್ಟು ನಡೆಯುತ್ತಾಳೆ. ಆ ನಂತರ ಮದುವೆಯಾಗಿ ಬಂದ ಡೌರಿ ಕಾಸಲ್ಲಿ ಬ್ಯುಸಿನೆಸ್ ಶುರು ಮಾಡೋ ನಿರ್ಧಾರಕ್ಕೆ ಬರೋ ಈ ಹುಡುಗನನ್ನು ಮದುವೆ ಬ್ರೋಕರ್ ಕೂಡಾ ಕಾಮಿಡಿ ಪೀಸ್‌ನಂತೆ ನೊಡುತ್ತಾನೆ. ಆ ಬ್ರೋಕರ್‌ಗೆ ಛಾಲೆಂಜ್ ಮಾಡೋ ಹುಡುಗ ಗೆಲ್ಲುತ್ತಾನಾ ಎಂಬಲ್ಲಿಗೆ ಕುತುಹಲ ಉಳಿಸಿರೋ ಅಭಿಶೇಕ್ ಶೆಟ್ಟಿ ಮುಂದೆ ಇದನ್ನು ಸಿನಿಮಾ ಆಗಿ ವಿಸ್ತರಿಸೊ ಕನಸು ಹೊಂದಿರುವಂತಿದೆ.

 

Leave a Reply

Your email address will not be published. Required fields are marked *


CAPTCHA Image
Reload Image