One N Only Exclusive Cine Portal

ಗೌಡ್ರ ಹೋಟೆಲ್‌ನಲ್ಲಿ ಸಿಕ್ಕಿದ್ದು ಹಳಸಲು ಭೋಜನ!

ಹಾಕಬೇಕಾದ ಪದಾರ್ಥದಲ್ಲಿ ಕೊಂಚ ಎಡವಟ್ಟಾದರೂ ಮೃಷ್ಟಾನ್ನ ಭೋಜನವೂ ಗಂಟಲಿಂದಿಳಿಯೋದು ಕಷ್ಟ. ಈ ವಿಚಾರ ಪ್ರತೀ ಕೆಲಸ ಕಾರ್ಯಕ್ಕೂ, ಕಷ್ಟಪಟ್ಟು ಮಾಡೋ ಸಿನಿಮಾಕ್ಕೂ ಅನ್ವಯಿಸುತ್ತೆ. ಇಂಥಾದ್ದೊಂದು ಸೂಕ್ಷ್ಮತೆಯ ಕೊರತೆಯೇ ಒಂದೊಳ್ಳೆ ಚಿತ್ರವಾಗಿ ದಾಖಲಾಗಬಹುದಾಗಿದ್ದ ಗೌಡ್ರು ಹೋಟೆಲ್ ಚಿತ್ರವನ್ನು ಕಲಸುಮೇಲೋಗರವನ್ನಾಗಿಸಿದೆ. ಘಮಘಮಿಸೋ ಐಟಮ್ಮಿನ ನಿರೀಕ್ಷೆಯಲ್ಲಿ ಗೌಡ್ರ ಹೋಟೆಲ್ ಹೊಕ್ಕು ಹೊರ ಬಂದವರ ಮುಖ ರುಚಿಸದ ಆಹಾರವನ್ನು ಕಾಸು ಕೊಟ್ಟ ಕರ್ಮಕ್ಕೆ ತಿಂದಂಥಾ ಅಸಹನೆಯಿಂದ ಕಳೆಗುಂದಿದೆ!
ಪಿ ಕುಮಾರ್ ನಿರ್ದೇಶನದ ಈ ಚಿತ್ರ ಥರ ಥರದಲ್ಲಿ ಪ್ರಚಾರ ಪಡೆದಿತ್ತು. ಒಂದು ಭಿನ್ನ ಬಗೆಯ ಚಿತ್ರವಾಗಿ ಗೌಡ್ರ ಹೋಟೇಲ್ ದಾಖಲಾಗಬಹುದೆಂಬ ನಿರೀಕ್ಷೆಯೂ ಹುಟ್ಟಿಕೊಂಡಿತ್ತು. ಮಲೆಯಾಳಂನ ಉಸ್ತಾದ್ ಹೋಟೇಲ್ ರೀಮೇಕ್ ಆದರೂ ಈ ಚಿತ್ರದ ಕಥೆ ಸೂಕ್ಷ್ಮ ಅಂಶಗಳನ್ನೊಳಗೊಂಡಿದೆ. ಪ್ರಕಾಶ್ ರೈ ಮತ್ತು ಅನಂತ್ ನಾಗ್ ಅವರುಗಳ ಮಾಗಿದ ನಟನೆಗೆ ನಾಯಕ ರಚನ್ ಕೊಂಚವಾದರೂ ಸೂಟ್ ಆಗಿದ್ದಿದ್ದರೆ ಬಹುಶಃ ಗೌಡ್ರ ಹೋಟೇಲಿನ ಊಟದ ಮಜವೇ ಬೇರೆಯದ್ದಿರುತ್ತಿತ್ತು.
ಆದರೆ, ಇಡೀ ಚಿತ್ರಕ್ಕೆ ರಚನ್ ನಟನೆಯೇ ಬಹುದೊಡ್ಡ ಮೈನಸ್ ಪಾಯಿಂಟ್. ಅನಂತ್ ನಾಗ್ ಮತ್ತು ಪ್ರಕಾಶ್ ರೈ ಮುಂದೆ ಪಳಗಿದ ನಟರೇ ಡಲ್ಲು ಹೊಡೆಯುತ್ತಾರೆ. ಆದರೆ ಅಂಥವರೆದುರು ರಚನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದೇ ಬಹು ದೊಡ್ಡ ಪ್ರಮಾದ ಎಂಬುದು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಅನ್ನಿಸಿರುತ್ತದೆ. ಭಾವುಕತೆ, ಖುಷಿ ಸೇರಿದಂತೆ ಯಾವ ರಸಗಳೂ ರಚನ್ ನಟನೆಯಲ್ಲಿ ಉತ್ಪತ್ತಿಯಾಗೋದೇ ಇಲ್ಲ. ಒಂದು ಪಾತ್ರಕ್ಕೆ ಬೇಕಾದ ಕನಿಷ್ಠ ತಯಾರಿಯನ್ನೂ ಈತ ಮಾಡಿಕೊಂಡಂತಿಲ್ಲ. ಕ್ಯಾಮೆರಾ ಮುಂದೆ ನಿಂತೇಟಿಗೆ ಸೂಪರ್‌ಸ್ಟಾರ್ ಆಗಿ ಬಿಡಬಹುದೆಂಬ ಸಾಮಾನ್ಯ ಮನಸ್ಥಿತಿ ರಚನ್‌ಗೆ ಇದ್ದಂತಿದೆ. ಬಹುಶಃ ರಚನ್ ಈ ಪಾತ್ರಕ್ಕೆ ಫಿಟ್ ಆಗಲು ಇನ್ನೊಂದಷ್ಟು ಸಂವತ್ಸರಗಳೇ ಬೇಕಾದೀತೇನೋ…
ಹೀರೋ ಖದರ್‌ನಿಂದಿದ್ದರೆ ಬೇರೆ ಪಾತ್ರಗಳ ಊನಗಳು ತಂತಾನೇ ಮುಚ್ಚಿಕೊಳ್ಳುತ್ತದೆ. ಆದರೆ ನಾಯಕನೇ ಡಲ್ಲು ಹೊಡೆದರೆ ಉಳಿಕೆ ಪಾತ್ರಗಳು ಅದೇನೇ ಎಫರ್ಟ್ ಹಾಕಿದರೂ ವ್ಯರ್ಥವೇ. ಗೌಡ್ರ ಹೋಟೇಲಿನ ಅಸಲೀ ದುರಂತವೇ ಅದು.
ಕಡೇಯದಾಗಿ, ಈ ಚಿತ್ರದ ಪ್ರೆಸ್‌ಮೀಟೊಂದರಲ್ಲಿ ಆಂಕರ್ ಒಬ್ಬಳು ರಚನ್ ಈ ಚಿತ್ರದ ಮೂಲಕ ಸೂಪರ್ ಸ್ಟಾರ್ ಆಗುತ್ತಾನೆ ಅಂತ ಭವಿಷ್ಯ ನುಡಿದಿದ್ದಳು. ಆದರೆ ಆ ಸೂಪರ್‌ಸ್ಟಾರ್‌ನ ದೆಸೆಯಿಂದಲೇ ಗೌಡ್ರ ಹೋಟೆಲಿನ ಗಲ್ಲಾಪೆಟ್ಟಿಗೆ ಡಲ್ಲು ಹೊಡೆಯುವಂತಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತೊಬ್ಬ ಸೂಪರ್‌ಸ್ಟಾರ್ ಹುಟ್ಟಿಕೊಂಡು ಹೊಸಾ ಸ್ಟಾರ್‌ವಾರ್‌ನ ಕಂಟಕದಿಂದ ಕನ್ನಡ ಚಿತ್ರರಂಗ ಪಾರಾಗಿದೆ!

 

Leave a Reply

Your email address will not be published. Required fields are marked *


CAPTCHA Image
Reload Image