One N Only Exclusive Cine Portal

ಚೆಲುವಿನ ಚಿತ್ತಾರ ಖ್ಯಾತಿಯ ಪೆಪ್ಸಿ ಬುಲ್ಲಿ ಇನ್ನಿಲ್ಲ

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಅಮೂಲ್ಯ ನಟನೆಯ ಚೆಲುವಿನ ಚಿತ್ತಾರ ಚಿತ್ರ ನೋಡಿದವರಿಗೆ ಈ ಪುಟ್ಟ ಹುಡುಗನ ನಟನೆ ಮರೆತುಹೋಗಲು ಸಾಧ್ಯವಿಲ್ಲ. ಅದರಲ್ಲಿನ ‘ಪೆಪ್ಪೂಸಿ ಸೀನಿನ ಮೂಲಕವೇ ಖ್ಯಾತಿ ಗಳಿಸಿದ್ದ ರಾಕೇಶ್ ಬಹು ಕಾಲದಿಂದ ಕಾಡಿ ಜೀವ ಹಿಂಡಿದ ಗ್ಯಾಂಗ್ರಿನ್ ಕಾಯಿಲೆಗೆ ಬಲಿಯಾಗಿದ್ದಾನೆ.

ಕೆಲ ಟಿವಿ ಶೋ ಮೂಲಕವೇ ಪುಟ್ಟ ವಯಸ್ಸಿನಲ್ಲಿ ಭಾರೀ ಖ್ಯಾತಿ ಗಳಿಸಿದ್ದ ರಾಕೇಶ್ ರಂಗೋಲಿ ಸೀರಿಯಲ್ಲಿನ ಅಲುಮೇಲು ಪಾತ್ರದ ಮೂಲಕ ಖ್ಯಾತರಾಗಿರೋ ನಟಿ ಆಶಾರಾಣಿಯವರ ಪುತ್ರ. ಇಂಥಾದ್ದೊಂದು ಕಾಯಿಲೆ ಇತ್ತೆಂಬುದೇ ನಂಬಲು ಸಾಧ್ಯವಿಲ್ಲದಂತೆ ಲವ ಲವಿಕೆಯಿಂದ ನಟನೆಯಲ್ಲಿ ತೊಡಗಿದ್ದ ರಾಕೇಶ್‌ಗೆ ಇತ್ತೀಚೆಗೆ ಗ್ಯಾಂಗ್ರಿನ್ ಕಾಯಿಲೆ ಜಾಸ್ತಿಯಾಗಿತ್ತು. ಇದು ತೀರಾ ಉಲ್ಬಣಿಸಿದಾಗ ಈಗ್ಗೆ ಎರಡು ತಿಂಗಳಹಿಂದೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದ ರಾಕೇಶ್ ನೆನ್ನೆ ಸಂಜೆ ೭.೩೦ರ ವೇಳೆಗೆ ಮೃತ ಪಟ್ಟಿದ್ದಾನೆ.
ಸೀರಿಯಲ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಶಾರಾಣಿಯವರ ಪುತ್ರ ರಾಕೇಶನೂ ಪುಟ್ಟ ವಯಸಲ್ಲಿಯೇ ನಟನೆಯಲ್ಲಿ ತೊಡಗಿಸಿಕೊಂಡಿದ್ದ. ಎಸ್ . ನಾರಾಯಣ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಸೇರಿದಂತೆ ಶಿವಣ್ಣ ಅವರ ಭಜರಂಗಿ, ಬಂಧು – ಬಳಗ, ಪುನೀತ್ ನಟನೆಯ ಹುಡುಗರು, ದರ್ಶನ್ ಜೊತೆ ಅರ್ಜುನ್, ಅಭಯ್, ಬಾಸ್, ಯಶ್ ನಟಿಸಿದ್ದ ಮೊದಲಾ ಸಲ, ದುನಿಯಾ ವಿಜಯ್ ಜೊತೆಗೆ ಚಂಡ, ಅವ್ವ, ಜಾನಿ ಮೇರಾ ನಾಮ್ ಸೇರಿದಂತೆ ಅಕ್ಕ – ತಂಗಿ, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಜಿಂಕೆ ಮರಿ, ದೂದ್ ಸಾಗರ್ ಮುಂತಾದ ೪೫ ಸಿನೆಮಾಗಳಿಗೂ ಹೆಚ್ಚು ಸಿನೆಮಾಗಳಲ್ಲಿ ಮತ್ತು ಕವಿತಾ ಲಂಕೇಶ್ ನಿರ್ದೇಶಿಸಿದ್ದ ನೀನಡೆವ ಹಾದಿಯಲ್ಲಿ ಧಾರಾವಾಹಿಯಲ್ಲೂ ರಾಕೇಶ್ ಅಭಿನಯಿಸಿದ್ದ. ೪೭ನೇ ಸಿನಿಮಾದಲ್ಲಿ ತಾನೇ ಹೀರೋ ಆಗಿ ನಟನೆ ಮಾಡುತ್ತಿದ್ದ. ‘ಧೂಮಪಾನ ಹೆಸರಿನ ಈ ಚಿತ್ರ ಸಧ್ಯ ೫೦ರಷ್ಟು ಮುಗಿದಿದೆ. ರಾಕೇಶ ಮಾತ್ರ ತನ್ನ ಬದುಕನ್ನು ಕೂಡಾ ಅರ್ಧಕ್ಕೇ ನಿಲ್ಲಿಸಿ ಹೊರಟುಬಿಟ್ಟಿದ್ದಾನೆ…
ರಂಗಭೂಮಿ, ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಆಶಾರಾಣಿಯವರಿಗೂ ತನ್ನ ಮಗ ಈ ರಂಗದಲ್ಲಿಯೇ ಎತ್ತರಕ್ಕೇರಬೇಕೆಂಬ ಕನಸಿತ್ತು. ಆದರೆ ಗ್ಯಾಂಗ್ರಿನ್ ಎಂಬ ಮಾರಿ ಈ ಹುಡುಗನ ಬದುಕನ್ನ ತೊದಲು ಹೆಜ್ಜೆಗಳಲ್ಲಿಯೇ ಕೊನೆಗಾಣಿಸಿದ್ದು ನಿಜಕ್ಕೂ ದುರಂತ.

 

Leave a Reply

Your email address will not be published. Required fields are marked *


CAPTCHA Image
Reload Image