Connect with us

ಸಂದರ್ಶನ

ಟಗರು ಟೈಟಲ್ ಸಾಂಗ್ ಹಾಡಿದವನ ಅಂತರಾಳ…

Published

on

ಟಗರು ಶಿವನ ಅಭಿಮಾನಿ ಅಂತೋಣಿ ದಾಸನ್!

ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಾಂಬಿನೇಷನ್ನಿನ ಸೂಪರ್ ಹಿಟ್ ಚಿತ್ರ ಟಗರು. ಗೆಲುವಿನ ಖದರಿನಲ್ಲಿರುವ ಈ ಚಿತ್ರದ ಹಾಡುಗಳು ಥರ ಥರದಲ್ಲಿ ಸದ್ದು ಮಾಡಿದ್ದವು. ಅದರಲ್ಲಿಯೂ ತಮಿಳಿನ ಖ್ಯಾತ ಹಿನ್ನೆಲೆ ಗಾಯಕ ಅಂಥೋಣಿ ದಾಸನ್ ಹಾಡಿರೋ ‘ಟಗರು ಬಂತು ಟಗರು ಇದು ಈ ಊರ ಟಗರು ಟೈಟಲ್ ಸಾಂಗಂತೂ ವಿಭಿನ್ನ ಸೌಂಡಿಂಗ್ ಮೂಲಕ ಹುಟ್ಟು ಹಾಕಿರೋ ಕ್ರೇಜ್ ಸಣ್ಣದೇನಲ್ಲ. ಟಗರು ಚಿತ್ರದ ಸಂಗೀತ ನಿರ್ದೇಶಕ ಚರಣ್ ರಾಜ್ ಈ ಮೂಲಕ ವಿಶಿಷ್ಟವಾದ ದೇಸೀ ಧ್ವನಿಯೊಂದನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಹೀಗೆ ಟಗರು ಟೈಟಲ್ ಸಾಂಗ್ ಮೂಲಕ ಕನ್ನಡದಲ್ಲೂ ಹೊಸಾ ತರಂಗಗಳನ್ನೆಬ್ಬಿಸಿರೋ ಅಂಥೋಣಿ ದಾಸನ್ ಸದ್ಯ ತಮಿಳಿನಲ್ಲಿ ಭಾರೀ ಪ್ರಸಿದ್ಧಿ ಪಡೆದಿರೋ ಹಿನ್ನೆಲೆ ಗಾಯಕ. ಈ ಕಾರಣದಿಂದಲೇ ಈ ಹಾಡಿಗೆ ಧ್ವನಿಯಾದ ಅಂಥೋಣಿ ದಾಸನ್ ಬಗ್ಗೆ ಕನ್ನಡಿಗರಲ್ಲೊಂದು ಕುತೂಹಲವಿದೆ. ಈ ಹಿನ್ನೆಲೆಯಲ್ಲಿ ಸಿನಿಬಜ್ ಅಂತೋಣಿ ದಾಸನ್ ಜೊತೆ ಚುಟುಕಾದ ಮಾತುಕತೆಯೊಂದನ್ನು ನಡೆಸಿದೆ. ಬೆಂಗಳೂರಿನ ಬಗ್ಗೆ ಅತೀವ ಪ್ರೀತಿ ಇಟ್ಟುಕೊಂಡೇ ಶಿವಣ್ಣನ ಚಿತ್ರಕ್ಕೆ ಹಾಡಿದ ಬಗ್ಗೆ ಅಗಾಧವಾದ ಖುಷಿಯಿಂದಲೇ ಅವರು ಬಿಚ್ಚಿಟ್ಟು ಇಂಟರೆಸ್ಟಿಂಗ್ ವಿಚಾರಗಳು ನಿಮಗಾಗಿ…

– ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹಿಟ್ ಚಿತ್ರಕ್ಕೆ ಜನಪ್ರಿಯ ಗೀತೆಯೊಂದನ್ನು ಹಾಡಿದ್ದೀರಿ. ಶಿವಣ್ಣ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶಿವಣ್ಣನ ಥರಾ ಪ್ರೀತಿ ತೋರಿಸೋ ವ್ಯಕ್ತಿಯನ್ನು ನಾನೆಂದೂ ನೋಡಿಲ್ಲ. ಅಷ್ಟು ದೊಡ್ಡ ಸ್ಥಾನದಲ್ಲಿದ್ದು ಇಷ್ಟು ಸಿಂಪಲ್ಲಾಗಿದ್ದಾರೆ. ನನ್ನಂಥ ಕಲಾವಿದನ ಜೊತೆ ಯಾವುದೇ ಕೀಳರಿಮೆ ಇಲ್ಲದೆ ಬೆರೆಯುತ್ತಾರೆ. ಅವರ ಸರಳತೆ ಮತ್ತು ಸಜ್ಜನಿಕೆಗೆ ನಾನು ಋಣಿಯಾಗಿದ್ದೇನೆ.

– ಟಗರು ಟೈಟಲ್ ಸಾಂಗ್ ಹಾಡುವ ಮುನ್ನ ಆ ಚಿತ್ರದ ಬಗ್ಗೆ ಗೊತ್ತಿತ್ತಾ?

ಶಿವಣ್ಣನಿಗೆ ಹಾಡಲು ಹೋಗಿದ್ದೇನೆ ಅಂತಾ ನನಗೆ ಗೊತ್ತೇ ಇರಲಿಲ್ಲ. ನನಗೆ ಭಾಷೆ ಗೊತ್ತಿಲ್ಲ. ತಮಿಳು ಬಿಟ್ಟು ಬೇರೆ ಭಾಷೆಯ ಅರಿವಿಲ್ಲದ ನಾನು ತಮಿಳಿನಲ್ಲೇ ಬರೆದುಕೊಂಡು ಹಾಡಿದೆ. ಕನ್ನಡ ಭಾಷೆಯ ಪರಿಚಯವೇ ಇಲ್ಲದ ನನ್ನ ಬಳಿ ಸಂಗೀತ ನಿರ್ದೇಶಕ ಚರಣ್ ರಾಜ್ ತುಂಬಾನೇ ತಾಳ್ಮೆಯಿಂದ ಕೆಲಸ ತೆಗೆಸಿಕೊಂಡರು.
ಹಾಡೆಲ್ಲಾ ಪೂರ್ತಿ ರೆಕಾರ್ಡ್ ಆದ ನಂತರವಷ್ಟೇ ಚರಣ್ ರಾಜ್ ಅವರ ಬಳಿ ‘ಸಾರ್ ಈ ಸಿನಿಮಾಗೆ ಹೀರೋ ಯಾರು ಅಂತಾ ಕೇಳಿದೆ. ಆಗ ಅವರು ‘ಶಿವಣ್ಣ ಅಂದರು. ನನಗೆ ನಂಬಲೂ ಸಾಧ್ಯವಾಗಲಿಲ್ಲ. ಆಕಾಶದಲ್ಲಿ ಹಾರುತ್ತಿದ್ದೇನೇನೋ ಎನ್ನುವಂತೆ ಅನುಭವವಾಯಿತು.
ಮೊದಲ ಬಾರಿಗೆ ನಮ್ಮ ಕರ್ನಾಟಕದ ಸೂಪರ್ ಸ್ಟಾರ್‌ಗೆ ಹಾಡಿಬಿಟ್ಟೆನಲ್ಲಾ ಅಂತಾ ಸಂಭ್ರಮಿಸಿಬಿಟ್ಟೆ.

– ಶಿವಣ್ಣ ಹೇಗೆ ರಿಯಾಕ್ಟ್ ಮಾಡಿದರು?
ಮೊದಲ ಭೇಟಿಯಲ್ಲೇ ತೀರಾ ಆತ್ಮೀಯವಾಗಿ ಮಾತಾಡಿಸಿದರು. ನಾನು ನನ್ನ ಪತ್ನಿಯ ಸಮೇತ ಹೋಗಿ ಶಿವಣ್ಣರನ್ನು ಮೀಟ್ ಮಾಡಿದ್ದೆ. ಅವರನ್ನು ಎದುರು ಕಂಡಾಕ್ಷಣ ನಾನು ಈ ಪ್ರಪಂಚದಲ್ಲೇ ಇದ್ದೀನಾ? ಅಂತಾ ಒಂದು ಸಲ ಗಿಲ್ಲಿ ನೋಡಿಕೊಂಡೆ!
ಅವರೊಂದಿಗೆ ಪ್ರೋಮೋ ಶೂಟ್ ಕೂಡಾ ನಡೆಯಿತು. ನಮ್ಮ ಮನೆಗೆ ಬಾ ಅಂತಾ ಕರೆದರು. ನನ್ನಂಥವರು ಅವರ ಮನೆತನಕ ಹೋಗಬೇಕೆಂದರೆ, ನಿಜಕ್ಕೂ ನಾನು ಪುಣ್ಯವಂತ ಎಂದುಕೊಳ್ಳುತ್ತೇನೆ.

– ಈ ಹಾಡು ಹಿಟ್ ಆಗಿರೋದರ ಬಗ್ಗೆ ನಿಮಗೆ ಏನನಿಸುತ್ತಿದೆ?

ನನಗೆ ಬೆಂಗಳೂರೆಂದರೆ ಬಹಳ ಇಷ್ಟ. ಆಗಾಗ ಬೆಂಗಳೂರಿಗೆ ಹೋಗ್ತಾ ಇರ‍್ತೀನಿ. ಹಾಗೆ ಒಮ್ಮೆ ಹೋಗಿ ಆ ಊರಿಗಿಳಿದಾಗ ಅಲ್ಲಿನ ಗೋಡೆಗಳಿಗೆ ಅಂಟಿಸಿದ್ದ ಟಗರು ಸಿನಿಮಾ ಪೋಸ್ಟರ್ ನೋಡಿ ಖುಷಿಯಾಗಿಹೋಗಿತ್ತು. ಟಗರು ಸಿನಿಮಾದ ಹಾಡುಗಳು ಬಿಡುಗಡೆಯಾದ ನಂತರ ಎಲ್ಲರ ಬಾಯಲ್ಲೂ ‘ಟಗರು ಬಂತು ಟಗರು ಹಾಡು, ಅದೂ ನಾನು ಹಾಡಿರುವ ಹಾಡು ಹರಿದಾಡುತ್ತಿದೆ ಅನ್ನೋದು ತಿಳಿದು ಅದೆಷ್ಟು ಸಂಭ್ರಮಿಸಿದ್ದೀನೋ..
ಒಬ್ಬ ಹಾಡುಗಾರನಿಗೆ ಭಾಷೆ ಮುಖ್ಯವಲ್ಲ, ಪ್ರತಿಭೆ ಇದ್ದರೆ ಸಾಕು ಅನ್ನೋದನ್ನು ಟಗರು ಹಾಡು ಮತ್ತು ಕನ್ನಡ ಜನತೆ ಸಾಬೀತು ಮಾಡಿದ್ದಾರೆ. ಇದರ ಪ್ರತಿಫಲವೆಂಬಂತೆ ಈಗಾಗಲೇ ಇನ್ನೂ ನಾಲ್ಕೈದು ಹಾಡುಗಳನ್ನು ಕನ್ನಡ ಸಿನಿಮಾಗಳಿಗಾಗಿ ಹಾಡಿದ್ದೇನೆ.

ಹೀಗೆ ಕಲಾವಿದನಾದವನಿಗೆ ಭಾಷೆಯ ಗಡಿ ಇಲ್ಲ ಎಂಬಂತೆ ಕನ್ನಡದ ಬಗ್ಗೆಯೂ ಪ್ರೀತಿಯಿಂದಲೇ ಮಾತಾಡೋ ಅಪ್ಪಟ ದೇಸೀ ಪ್ರತಿಭೆಯಾದ ಅಂತೋಣಿ ದಾಸನ್ ಮೂಲತಃ ತಮಿಳಿನ ಜಾನಪದ ಗಾಯಕ. ತನ್ನ ವಿಶಿಷ್ಟವಾದ ಕಂಠ ಸಿರಿಯ ಮೂಲಕ ಪ್ರಸಿದ್ಧಿ ಪಡೆದ ಅವರು ತಮಿಳು ಚಿತ್ರರಂಗಕ್ಕೆ ಅಡಿಯಿರಿಸಿದ್ದು ೨೦೧೩ರಲ್ಲಿ. ಆ ನಂತರ ಹಲವಾರು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ ಅಂತೋಣಿ ದಾಸನ್ ತಮಿಳಿಗಳ ಹಾಟ್ ಫೇವರಿಟ್ ಗಾಯಕ. ಜೊತೆಗೆ ಲಾವಣಿ ಹಾಡುಗಳನ್ನು ಬರೆದು ತಾವೇ ಹಾಡುತ್ತಾರೆ.


ತಮಿಳುನಾಡಿನಲ್ಲಿ ನಮ್ಮ ಕೀಲುಕುದುರೆಯನ್ನು ಹೋಲುವ ಕರಗಾಟ್ಟ ಎನ್ನುವ ಗ್ರಾಮೀಣ ಕಲೆಯಿದೆ. ಅಂತೋಣಿ ದಾಸನ್ ಅವರ ತಂದೆ ಕರಗಾಟ್ಟ ತಂಡದಲ್ಲಿ ನಾದಸ್ವರ ಕಲಾವಿದರಾಗಿದ್ದವರು. ಕಿತ್ತು ತಿನ್ನೋ ಬಡತನದಿಂದ ಆರನೇ ಕ್ಲಾಸಿಗೇ ಸ್ಕೂಲಿಗೆ ಗುಡ್ ಬೈ ಹೇಳಿದ ಅಂಥೋಣಿ ಕರಗಾಟ್ಟಗಳಲ್ಲಿ ಜನರನ್ನು ರಂಜಿಸುವ ಬಫೂನ್ ವೇಷ ಹಾಕಿ ಬದುಕು ಸಾಗಿಸುತ್ತಿದ್ದ. ಹಾಗೇ ರೋಡ್‌ರೋಡಲ್ಲಿ ಕುಣಿದುಕೊಂಡಿದ್ದಾತ ಇವತ್ತು ತನ್ನದೇ ಬ್ಯಾಂಡ್ ತಂಡವನ್ನು ಹೊಂದಿದ್ದಾನೆ. ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಾರ್ಯಕ್ರಮ ನೀಡುತ್ತಾನೆ. ತಮಿಳಿನ ಸ್ಟಾರ್ ನಟರ ಸಿನಿಮಾಗಳಲ್ಲಿ ಈತನದ್ದೊಂದು ಹಾಡಿರುತ್ತದೆ. ಬಣ್ಣ ಬಟ್ಟೆಗಳನ್ನು ನೋಡಿ ಅವಕಾಶ ಕೊಡೋ ಮಂದಿಯ ನಡುವೆ ಬೀದಿಗಳಲ್ಲಿ ಕುಣಿಯುತ್ತಿದ್ದ ಪ್ರತಿಭಾವಂತನನ್ನು ಕರೆತಂದು ಸಿನಿಮಾಗಳಲ್ಲಿ ಹಾಡುವ ಅವಕಾಶ ಕೊಟ್ಟ ತಮಿಳಿಗರನ್ನು ಭೇಷ್ ಅನ್ನಲೇಬೇಕು.
ಇಂಥಾ ಜನಪದ ಕಲಾವಿದ ಅಂತೋಣಿ ದಾಸನ್ ಇದೀಗ ಟಗರು ಚಿತ್ರದ ಮೂಲಕ ಕನ್ನಡಕ್ಕೂ ಅಡಿಯಿರಿಸಿದ್ದಾರೆ. ಇವರು ಹಾಡಿರೋ ಟೈಟಲ್ ಸಾಂಗ್ ಕೂಡಾ ಟಗರು ಚಿತ್ರದ ಪ್ರಮುಖ ಮೈಲಿಗಲ್ಲಾಗೋ ಮೂಲಕ ಅಂತೋಣಿ ದಾಸನ್ ಆರಂಭಿಕವಾಗಿಯೇ ಗೆಲುವು ಸಾಧಿಸಿದ್ದಾರೆ. ಅಂದಹಾಗೆ ಈ ಟೈಟಲ್ ಸಾಂಗ್ ಬರೆದಿರೋದು ಕನ್ನಡ ಚಿತ್ರರಸಿಕರ ನೆಚ್ಚಿನ ಕವಿ ಡಾ. ವಿ. ನಾಗೇಂದ್ರ ಪ್ರಸಾದ್. ಟಗರು ಟೈಟಲ್ ಹಾಡಿನ ಖದರಿನಿಂದಲೇ ಅಂತೋಣಿ ದಾಸನ್ ಕಂಠದಲ್ಲಿ ಮತ್ತಷ್ಟು ಕನ್ನಡ ಹಾಡುಗಳು ಮೂಡಿ ಬರುವ ಸನ್ನಾಹದಲ್ಲಿವೆ.

ಸಂದರ್ಶನ

ಭೀಕರ ದುರಂತದ ಆಚೀಚೆ ರವಿಚಂದ್ರನ್ ಹೇಳಿದ್ದೇನು?

Published

on

ಕಣ್ಣೆದುರೇ ಕುಸಿದು ಹೋದ ಕೊಡಗಿನ ಜನರ ಬವಣೆಗಳ ಬಗ್ಗೆ ಎಂಥವರಿಗಾದರೂ ಮರುಕ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ರವಿಚಂದ್ರ ಚಿತ್ರದ ಮುಹೂರ್ತದ ಸಂದರ್ಭದಲ್ಲಿ ರವಿಚಂದ್ರನ್ ಅವರೂ ಕೂಡಾ ಈ ದುರಂತದ ಬಗ್ಗೆ ಸವಿಸ್ತಾರವಾಗಿ ಮಾತಾಡಿದ್ದಾರೆ. ಒಂದು ಮಹಾ ಪ್ರಾಕೃತಿಕ ದುರಂತದಿಂದ ಎಲ್ಲವನ್ನೂ ಕಳೆದುಕೊಂಡು ನಿಂತಿರುವ ಕೊಡಗಿನ ಜನರತ್ತ ದೂರದೃಷ್ಟಿಯ ನೋಟವನ್ನೂ ಬೀರಿದ್ದಾರೆ.

ಇದು ನಡೆಯಬಾರದಿತ್ತು. ಆದರೆ ಪ್ರಕೃತಿಯ ಪಲ್ಲಟಗಳನ್ನು ತಡೆಯಲು ಹೇಗೆ ಸಾಧ್ಯ? ಏಕಾಏಕಿ ಮನೆ ಮಠ, ಜಮೀನು ಕಳೆದುಕೊಂಡು ಬೀದಿಗೆ ಬಂದ ಜನರನ್ನು ನೋಡಿದರೆ ಮರುಕ ಹುಟ್ಟುತ್ತೆ. ಅಂತವರಿಗೆ ಆಹಾರ, ಅವಶ್ಯಕ ವಸ್ತುಗಳ ಪೂರೈಕೆಯೂ ಆಗುತ್ತಿದೆ. ಆದರೆ ಇದೆಲ್ಲ ಈ ಕ್ಷಣದ ಸ್ಪಂದನೆಯಷ್ಟೇ. ಆದರಿದು ಇಡೀ ಕೊಡಗನ್ನು ಮತ್ತೆ ಮೊದಲಿನಂತೆ ಕಟ್ಟಿನಿಲ್ಲಿಸಲು ಮುಂದಾಗ ಬೇಕಾದ ಕಾಲ… ಇಂಥಾದ್ದೊಂದು ನಿಖರವಾದ ಚಿಂತನೆಯೊಂದಿಗೇ ಮಾತಿಗಿಳಿದವರು ಕ್ರೇಜ಼ಿಸ್ಟಾರ್ ರವಿಚಂದ್ರನ್. ಅವರ ಮಾತಿನ ಲಹರಿ ಕೊಡಗನ್ನು ಮತ್ತೆ ಕಟ್ಟುವ ಮಾಸ್ಟರ್ ಪ್ಲ್ಯಾನಿನಂತಿರೋದು ಸುಳ್ಳಲ್ಲ!

ಈ ಪ್ರಾಕೃತಿಕ ವಿಕೋಪದಿಂದ ಇಡೀ ಕೊಡಗೇ ನಾಮಾವಶೇಷ ಹೊಂದಿದೆ. ಜೀವ ಹೋಗೋದು ಬೇರೆ. ಆದರೆ ಕೊಡಗಿನ ಬಹುತೇಕ ಜನ ಜೀವನವನ್ನೇ ಕಳೆದುಕೊಂಡಿದ್ದಾರೆ. ತಾವೇ ಮಾಡಿಕೊಂಡ ಜಾಗ, ಅದರಲ್ಲಿ ಕಟ್ಟಿದ ಮನೆ ಮತ್ತು ಪ್ರೀತಿಯಿಂದ ಬೆಳೆಸಿದ ತೋಟ… ಇದೆಲ್ಲವೂ ಕಣ್ಣ ಮುಂದೆಯೇ ಕೊಚ್ಚಿಕೊಂಡು ಹೋದಾಗ, ಭೂಮಿಯೊಳಗೆ ಲೀನವಾದಾಗ ಅದನ್ನು ಭರಿಸಿಕೊಳ್ಳೋದು ಕಷ್ಟ. ಹೀಗೆ ಬೀದಿಗೆ ಬಿದ್ದವರು ಮತ್ತೆ ಎದ್ದು ನಿಲ್ಲೋದೂ ತುಸು ಕಷ್ಟ. ಇದೀಗ ಆಹಾರ ಮುಂತಾದವನ್ನು ಸರಬರಾಜು ಮಾಡೋ ಒಂದು ಹಂತ ಮುಗಿದಿದೆ. ಇನ್ನೂ ಅದನ್ನೇ ಮಾಡುತ್ತಾ ಕೂತರೆ ಅದೂ ಕೂಡಾ ಬೀದಿ ಪಾಲಾಗೋ ಅಪಾಯವಿದೆ. ಈಗ ಎದ್ದು ನಿಂತು ಮತ್ತೆ ಬದುಕು ಕಟ್ಟಿಕೊಳ್ಳಲು ಕೊಡವರಿಗೆ ನೆರವಾಗಬೇಕಿರೋ ಕಾಲ.

ಇನ್ನೇನು ವಾರದೊಪ್ಪತ್ತಿನಲ್ಲಿ ಮಳೆ ಕಡಿಮೆಯಾಗಬಹುದು. ಹಾಗಾದ ಕ್ಷಣದಿಂದಲೇ ಅಲ್ಲಿ ಸೂರು ಕಳಕೊಂಡವರಿಗೆಲ್ಲ ಮನೆ ನಿರ್ಮಿಸಿ ಕೊಡುವಲ್ಲಿಂದ ಕೊಡಗನ್ನು ಮತ್ತೆ ಕಟ್ಟೋ ಕೆಲಸ ಆರಂಭವಾಗಬೇಕಿದೆ. ಇದಕ್ಕೆ ಲಕ್ಷ ಕೋಟಿ ದಾನ ಮಾಡೋದು ಮುಖ್ಯವಲ್ಲ. ಲೆಕ್ಕ ಹಾಕದೆ ಎಲ್ಲೆಡೆ ಕಾಸು ಕಲೆಕ್ಷನ್ ಮಾಡಿ ಅದು ಒಂದು ಕಡೆ ಕ್ರೋಢೀಕರಣವಾಗುವಂತೆ ನೋಡಿಕೊಂಡು, ಇಡೀ ಕೊಡಗಿನಲ್ಲಿ ಆಗಬೇಕಾದ ಸೂರುಗಳನ್ನು ಅಂದಾಜಿಸಿ ಅದನ್ನು ಕಟ್ಟಿಕೊಡುವ ಕಾರ್ಯವಾಗಬೇಕಿದೆ. ಅಲ್ಲಿ ಮನೆ ಮಾರಿನ ಜೊತೆ ಭೂಮಿಯ ಹಕ್ಕು ಪತ್ರ, ದಾಖಲೆಗಳೂ ಕೊಚ್ಚಿ ಹೋಗಿವೆಯಂತೆ. ಆದ್ದರಿಂದ ಈಗ ಅದು ನನ್ನದೆಂಬ ಅಹಮ್ಮಿಗೆ ಆಸ್ಪದವೇ ಇಲ್ಲ. ಎಲ್ಲರಿಗೂ ಕೃಷಿ ಭೂಮಿ ಹಂಚಿ ಅದರಲ್ಲಿ ಮನೆ ಕಟ್ಟಿ ಕೊಡುವ ಯಾಗಕ್ಕೆ ಚಾಲನೆ ನೀಡಬೇಕಿದೆ. ಪ್ರವಾಹದಿಂದ ಕೊಡವರನ್ನು ರಕ್ಷಿಸಲು ಯೋಧರಂತೆಯೇ ಕೆಲಸ ಮಾಡಿದ ಸಹಸ್ರಾರು ಮಂದಿ ಮನೆ ಕಟ್ಟಿಕೊಟ್ಟು ಬದುಕಿಗೆ ನೆರವಾಗಲೂ ಮನಸು ಮಾಡಿದರೆ ಕೊಡಗನ್ನು ಮತ್ತೆ ಕಟ್ಟುವ ಕೆಲಸ ಸಲೀಸಾಗುತ್ತೆ.

ಇದಕ್ಕೆ ಚಿತ್ರರಂಗದ ಕಡೆಯಿಂದಲೂ ಖಂಡಿತಾ ಹಣದ ಕ್ರೋಢೀಕರಣವಾಗೇ ಆಗುತ್ತದೆ. ಬೇರೆ ಬೇರೆ ಕ್ಷೇತ್ರಗಳಿಂದಲೂ ಅದು ಆಗುತ್ತದೆ. ಆದರೆ ಈಗ ಬೇಕಿರೋದು ಕೊಡಗನ್ನು ಮತ್ತೆ ಕಟ್ಟುವ ಪ್ಲ್ಯಾನಿಂಗು. ನಿಜ, ಕೊಚ್ಚಿ ಹೋದ ಒಂದೂರನ್ನು ಮತ್ತೆ ಕಟ್ಟೋದು ಅಸಾಧ್ಯ. ಇದನ್ನು ಮಾಡಿಕೊಳ್ಳಲು ಅಲ್ಲಿನ ಜನ ಅಶಕ್ತರಾಗಿದ್ದಾರೆ. ಅವರಿಗೆ ನೆರವಾಗೋದು ಎಲ್ಲರ ಕರ್ತವ್ಯ. ಬರೀ ಅನುಕಂಪ ತೋರಿಸಿ ಬ್ರೆಡ್ಡು ಬನ್ನು ಕಳಿಸಿಕೊಟ್ಟರೆ ಅವರ ಹೊಟ್ಟೆ ತುಂಬಬಹುದಷ್ಟೇ. ಆದರೆ ಬದುಕು ಕಟ್ಟಿ ಕೊಡೋದು ಈಗಿನ ತುರ್ತು ಅಂದ ರವಿಚಂದ್ರನ್ ಅವರ ಮಾತುಗಳಲ್ಲಿ ಕೊಡಗಿನ ಬಗ್ಗೆ ಭಾವುಕತೆಯಾಚೆಯ ಪ್ರ್ಯಾಕ್ಟಿಕಲ್ ಆದ ಕಾಳಜಿ ಎದ್ದು ಕಾಣುತ್ತಿತ್ತು. ಸರ್ಕಾರ ಈ ಬಗ್ಗೆ ಗಮನ ಹರಿಸಬಹುದೇ?

Continue Reading

ಸಂದರ್ಶನ

ಅಂತರಾಳ ತೆರೆದಿಟ್ಟ ಅಯೋಗ್ಯ

Published

on

ಸಿನಿಮಾ ಜಗತ್ತಿನ ಆಗುಹೋಗುಗಳನ್ನು ಓದುಗರ ಮುಂದಿಡುತ್ತಲೇ ಆನ್‌ಲೈನ್ ಓದುಗರಿಗೆ ಹೊಸಾ ರುಚಿ ಹತ್ತಿಸಿದ ಹೆಗ್ಗಳಿಕೆ ನಮ್ಮದು. ನಿಮ್ಮೆಲ್ಲರ ಪ್ರೀತಿಯ ಬೆಂಬಲದಿಂದಲೇ ಇದು ಸಾಧ್ಯವಾಗಿದೆ ಎಂಬ ನಂಬಿಕೆಯೊಂದಿಗೆ ಮತ್ತೊಂದು ಸಾಹಸಕ್ಕೆ ಕೈಯಿಟ್ಟಿದ್ದೇವೆ. ಅದರಫಲವಾಗಿ ಮೂಡಿ ಬಂದಿರೋದು `ನನ್ ಲೈಫ್ ಸ್ಟೋರಿ’ ಕಾರ್ಯಕ್ರಮ. ಈ ಮೂಲಕ ಇನ್ನು ಪ್ರತೀ ವಾರವೂ ಒಬ್ಬೊಬ್ಬರ ಸಿನಿ ಬದುಕಿನ ಕಥನಗಳು ನಿಮಗೆ ನೋಡಲು ಸಿಗಲಿವೆ. ಅದರ ಆರಂಭವಾಗಿ ನಟ ನೀನಾಸಂ ಸತೀಶ್ ತಮ್ಮ ಬದುಕಿನ ಮಜಲುಗಳನ್ನು ಬಿಚ್ಚಿಟ್ಟಿದ್ದಾರೆ. ಈ ವರೆಗೆ ಸತೀಶ್ ಅವರು ಎಲ್ಲೆಂದರೆಲ್ಲಯೂ ಹೇಳಿಕೊಳ್ಳದ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ. ನಿಮಗಿಷ್ಟವಾಗುತ್ತದೆನ್ನುವ ನಂಬಿಕೆ ನಮ್ಮದು.

Continue Reading

ಸಂದರ್ಶನ

ನಡುವೆ ಅಂತರವಿರಲಿ ಅಂದ ಐಶಾನಿ ಶೆಟ್ಟಿ ಮಾತಾಡಿದಾಗ..!

Published

on

ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಚಿತ್ರದ ಮೂಲಕ ನಾಯಕಿಯಾಗಿ ಶೈನಪ್ ಆದರವರು ಐಶಾನಿ ಶೆಟ್ಟಿ. ಆ ನಂತರ ನೀನಾಸಂ ಸತೀಶ್ ಜೊತೆ ರಾಕೆಟ್ ಚಿತ್ರದಲ್ಲಿ ನಟಿಸಿದ್ದ ಐಶಾನಿ ಆ ನಂತರ ಕಾಣಿಸಿಕೊಂಡಿದ್ದು ಅವರೇ ನಿರ್ದೇಶನ ಮಾಡಿದ್ದ `ಕಾಜಿ’ ಎಂಬ ಕಿರುಚಿತ್ರದ ಮೂಲಕ. ಈ ಚಿತ್ರವೀಗ ಅಂತಾರಾಷ್ಟರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಒಂದಷ್ಟು ಪ್ರಶಸ್ತಿಗಳನ್ನೂ ಬಾಷಿಕೊಂಡಿದೆ. ಇದೇ ಹೊತ್ತಲ್ಲ ಜರ್ನಲಿಸಂ ಮಾಸ್ ಕಮ್ಯೂನಿಕೇಷನ್ ಅನ್ನೂ ಮುಗಿಸಿಕೊಂಡಿರೋ ಐಶಾನಿ `ನಡುವೆ ಅಂತರವಿರಲಿ’ ಚಿತ್ರದ ನಾಯಕಿಯಾಗಿ ರೀಎಂಟ್ರಿ ಕೊಟ್ಟಿದ್ದಾರೆ. ಸಿನಿಬಜ಼್ ಜೊತೆ ಮಾತಿಗೆ ಸಿಕ್ಕ ಐಶಾನಿ ತಮ್ಮ ಕನಸು, ಚಿತ್ರ, ಬದುಕಿನ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ…

ಒಂದು ಸುದೀರ್ಘವಾದ ಮಧ್ಯಂತರದ ನಂತರ ನಡುವೆ ಅಂತರವಿರಲಿ ಚಿತ್ರದ ನಾಯಕಿಯಾಗಿದ್ದೀರಿ. ಈ ಚಿತ್ರ ನಿಮ್ಮ ಪಾಲಿಗೆ ಹೇಗೆ ವಿಶೇಷ?

– ನಡುವೆ ಅಂತರವಿರಲಿ ಚಿತ್ರ ನನಗೆ ಹೇಗೆ ವಿಶೇಷ ಅನ್ನೋದಕ್ಕಿಂತ ಇಡೀ ಚಿತ್ರವೇ ವಿಶೇಷವಾಗಿದೆ. ಇದರ ಕಥೆಯೂ ಭಿನ್ನವಾಗಿದೆ. ಇದೊಂದು ಲವ್ ಸ್ಟೋರಿ, ಹಾಗಂತ ಮಾಮೂಲಿ ಸ್ಟೈಲಿನ ಲವ್ ಸ್ಟೋರಿಯಲ್ಲ. ಇಲ್ಲಿ ಕಾಲೇಜು ಬದುಕಿನ ಮೂಲಕ ಯುವ ಮನಸುಗಳ ಭಾವೋದ್ವೇಗ, ಒತ್ತಡ, ತಲ್ಲಣಗಳತ್ತ ಪ್ರಧಾನವಾಗಿ ಫೋಕಸ್ ಮಾಡಲಾಗಿದೆ. ಬರೀ ಯುವ ಸಮೂಹಕ್ಕೆ ಮಾತ್ರವಲ್ಲದೆ ಪೋಷಕರಿಗೂ ಇಷ್ಟವಾಗುವಂತಿದೆ. ಬದುಕಿನ ಮೌಲ್ಯಗಳನ್ನೂ ಇದರ ಕಥೆ ತೆರೆದಿಡುತ್ತೆ. ಟೀನೇಜಲ್ಲಿ ಪ್ರೀತಿ, ಪ್ರೇಮದ ಹಿಂದೆ ಬಿದ್ದಾಗ ಮನಸು ಯಾವುದೋ ಲೋಕದಲ್ಲಿ ತೇಲಾಡ್ತಾ ಬ್ಲೈಂಡ್ ಆಗುತ್ತಲ್ಲಾ? ಅಂಥಾ ಸ್ಥಿತಿ ವಾಸ್ತವವನ್ನ ಮುಖಾಮುಖಿಯಾದಾಗಿನ ಪಲ್ಲಟಗಳನ್ನ ಈ ಚಿತ್ರದ ಮೂಲಕ ದಾಖಲಿಸಲಾಗಿದೆ. ಇದು ಎಲ್ಲರಿಗೂ ಇಷ್ಟವಾಗುವಂಥಾ ಚಿತ್ರ.

ನಿಮಗೆ ಈ ಸಿನಿಮಾ ಕಥೆ ಯಾಕಾಗಿ ಇಷ್ಟವಾಯ್ತು?

– ನನಗೆ ಫೀಲ್ ಆಗಿದ್ದು ಈ ಚಿತ್ರದ ಕಥೆ ಮತ್ತು ಕ್ಲೈಮ್ಯಾಕ್ಸ್. ಅದು ಎಲ್ಲರ ಮನಸಲ್ಲೂ ಉಳಿದುಕೊಳ್ಳುತ್ತೆ. ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳಖ್ಳುವಂಥಾ ಸಂದರ್ಭ ಸೃಷ್ಟಿಸುತ್ತೆ. ಇದರಲ್ಲಿನ ಪಾತ್ರ ನನ್ನ ವಯೋಮಾನಕ್ಕೆ ಹತ್ತಿರಾಗುವಂಥಾದ್ದು. ಅದಲ್ಲದೆ ನಟನೆಗೂ ಹೆಚ್ಚಿನ ಅವಕಾಶವಿತ್ತು. ಮಧ್ಯಮವರ್ಗದ ಸಿಂಪಲ್ ಹುಡುಗಿಯ ಥರ ಥರದ ಶೇಡುಗಳಿರೋ ಪಾತ್ರವನ್ನಿಲ್ಲಿ ನಾನು ಮಾಡಿದ್ದೇನೆ.

ನೀವು ಚಿತ್ರರಂಗಕ್ಕೆ ಬಂದು ನಾಲಕ್ಕು ವರ್ಷವಾಯ್ತು. ಇದು ನಿಮ್ಮ ನಾಲಕ್ಕನೇ ಸಿನಿಮಾ. ಇದು ಕಡಿಮೆ ಅನ್ನಿಸಲ್ವಾ?

– ನನಗೇನೂ ಕಮ್ಮಿ ಅನ್ನಿಸಲ್ಲ. ವಾಸ್ತುಪ್ರಕಾರ ಚಿತ್ರದ ನಂತರ ತುಂಬಾ ಅವಕಾಶಗಳು ಬರಲಾರಂಭಿಸಿದ್ದವು. ಆದ್ರೆ ಇಂಥಾ ಬ್ರೇಕ್ ಸಿಕ್ಕಿದಾಗ, ಆ ಮೂಲಕ ಅವಕಾಶಗಳು ಬರಲಾರಂಭಿಸಿದಾಗ ಯಾರೂ ಅದನ್ನ ಬಿಡಲು ಮನಸು ಮಾಡೋದಿಲ್ಲ. ಆದ್ರೆ ನಂಗೆ ನನ್ನ ಎಜುಕೇಷನ್ ಮುಖ್ಯ ಅನ್ನಿಸ್ತು. ಡಿಗ್ರಿ ಕಂಪ್ಲೀಟ್ ಮಾಡಿ ಮಾಸ್ಟರ್‍ಸ್ ಮಾಡಬೇಕನ್ನೋ ಆಸೆ ಇತ್ತು. ಅದರಂತೆಯೇ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಮಾಸ್ ಕಮ್ಯೂನಿಕೇಷನ್ ಜರ್ನಲಿಸಂ ಮಾಡಲಾರಂಭಿಸಿದೆ. ನಡುವೆ ಅಂತರವಿರಲಿ ಚಿತ್ರದ ಕಥೆ ನನಗೆ ಸಿಕ್ಕಿದ್ದು ಆವಾಗಲೇ. ಕಥೇ ಕೇಳಿದೆ. ತುಂಬಾ ಇಷ್ಟ ಆಯ್ತು. ಆದ್ರೆ ಆಗ ತುಂಬಾ ಓದೋಕಿದ್ದಿದ್ದರಿಂದ ತಕ್ಷಣಕ್ಕೆ ನಟಿಸಲು ಒಪ್ಪಿಕೊಳ್ಳೋಕೆ ಸಾಧ್ಯವಿರಲಿಲ್ಲ. ಸಿನಿಮಾ ಕೆರಿಯರ್ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಅಂತ ತೀರ್ಮಾನಿಸಿ ಓದೋದರತ್ತ ಗಮನ ಹರಿಸಿದೆ. ಈಗ ಓದು ಮುಗಿಸಿಕೊಂಡು ಮತ್ತೆ ನಟನೆಯತ್ತ ಮರಳಿದ್ದೇನೆ.

ನಿಮ್ಮ ಪೋಷಕರಿಗೆ ನೀವು ನಟಿಯಾಗೋದು ಇಷ್ಟವಿದೆಯಾ? ಅವರ ಸಹಕಾರ ಹೇಗಿದೆ?

– ನಾನು ಸಿನಿಮಾ ರಂಗಕ್ಕೆ ಬರಲು ಕಾರಣ ನಮ್ಮ ತಂದೆಯವರೇ. ನನ್ನ ತಂದೆ ಸಿದ್ಧಾರ್ಥ ಶೆಟ್ಟಿ ನಾರಾಯಣ ಹೃದಯಾಲಯದಲ್ಲಿ ವರ್ಕ್ ಮಾಡ್ತಿದ್ದಾರೆ. ಅವರಿಗೆ ಸಿನಿಮಾದವರು ಪರಿಚಯ ಇದ್ದದ್ದರಿಂದ ಮೊದಲ ಸಿನಿಮಾ ಅವಕಾಶ ಸಿಕ್ಕಿತ್ತು. ನಂಗೆ ನಟನೆಯಲ್ಲಿ ಆಸಕ್ತಿ ಇದೆ ಅಂತ ಅವರಿಗೆ ಗೊತ್ತಿತ್ತು. ಆದ್ರೆ ನಾನು ಸಿನಿಮಾ ನಟಿಯಾಗಬೇಕು ಅಂತ ಕನಸು ಕಂಡಿರಲಿಲ್ಲ. ಯಾಕಂದ್ರೆ ನಮ್ಮಂಥಾ ಮಧ್ಯಮವರ್ಗದವರಿಗೆ ಅಂಥಾ ಕನಸು ಕಾಣೋದು ಕಷ್ಟವಾಗುತ್ತೆ. ನಾನು ರಂಗಭೂಮಿಯತ್ತ ಆಸಕ್ತಿ ಹೊಂದಿದ್ದೆ. ಆದ್ರೆ ತಂದೆಯ ಕಾರಣದಿಂದ ಮೊದಲು ಸಿನಿಮಾದಲ್ಲಿ ನಟಿಸುವಂತಾಯ್ತು. ಅದನ್ನು ನಾನು ಹವ್ಯಾಸದಂತೆ ಮಾಡಿದ್ದೆನಾದ್ರೂ ಆ ನಂತರವೇ ವಾಸ್ತುಪ್ರಕಾರ ಮತ್ತು ರಾಕೆಟ್ ಚಿತ್ರಗಳ ಅವಕಾಶವೂ ಸಿಕ್ಕಿತು. ಆ ನಂತರದಲ್ಲಿ ಸಿನಿಮಾ ನಟನೆ ಇಷ್ಟವಾಯ್ತು. ನಾನೇನೇ ಓದಿದ್ರೂ ನಂಗೆ ಆಸಕ್ತಿ ಇರೋದೇ ಸಿನಿಮಾ ಬಗ್ಗೆ. ಇದು ಬಿಟ್ಟು ಕಥೆ, ನಿರ್ದೇಶನದಂಥಾ ಕ್ರಿಯೇಟಿವ್ ವಿಭಾಗದಲ್ಲೂ ಆಸಕ್ತಿ ಇದ್ದದ್ದರಿಂದ ಸಿನಿಮಾವನ್ನೇ ಆರಿಸಿಕೊಂಡೆ.

ಈಗ ನೀವು ನಿರ್ದೇಶನವನ್ನೂ ಮಾಡಿದ್ದೀರಿ. ನಿಮ್ಮ ಕಾಜಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ?

– ಕಾಜಿ ಕಿರುಚಿತ್ರವನ್ನ ಮಾಡಿದ್ದು ಕಲಿಕೆಯ ದೃಷ್ಟಿಯಿಂದ. ಖಂಡಿತಾ ಅವಾರ್ಡಿಗಾಗಿ ಈ ಚಿತ್ರ ಮಾಡಿದ್ದಲ್ಲ. ಸ್ಕ್ರಿಪ್ಟ್ ರೆಡಿ ಮಾಡಿದಾಗ ಅದು ಚೆನ್ನಾಗಿದೆ ಅಂತ ನೀನಾಸಂ ಸತೀಶ್ ಸಪೋರ್ಟ್ ಮಾಡಿದ್ರು. ಒಂದೊಳ್ಳೆ ಟೀಮ್ ಕಟ್ಟಿ ಕೊಟ್ರು. ನಾವು ನಿರೀಕ್ಷೆಯೇ ಮಾಡಿರದಂತೆ ಇದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ತು. ಸೈಮಾಗೂ ಆಯ್ಕೆಯಾಗಿದೆ. ಮೂರು ಅವಾರ್ಡುಗಳೂ ಸಿಕ್ಕಿವೆ. ಇದ್ರಿಂದ ತುಂಬಾ ಖುಷಿಯಾಗಿದೆ. ಇಂಥಾ ಪ್ರತಿಕ್ರಿಯೆ ಬಂದಾಗ ನನ್ನ ಬಗ್ಗೆ ನಮಗೇ ಭರವಸೆ ಮೂಡುತ್ತೆ.

ನಟನೆ ಮತ್ತು ನಿರ್ದೇಶನದಲ್ಲಿ ಯಾವುದಕ್ಕೆ ಹೆಚ್ಚು ಆದ್ಯತೆ ಕೊಡ್ರೀರಿ?

– ಖಂಡಿತಾ ನಟನೆಗೇ ಹೆಚ್ಚು ಒತ್ತು ಕೊಡ್ತೀನಿ. ಯಾಕಂದ್ರೆ ಚಿಕ್ಕ ವಯಸಿನಿಂದಲೂ ನನಗೆ ನಟನೆಯ ಬಗ್ಗೇನೆ ಜಾಸ್ತಿ ಆಸಕ್ತಿ ಇತ್ತು. ಆಕ್ಟಿಂಗ್ ಮಾಡೋ ಹೊತ್ತಲ್ಲೇ ನಂಗೆ ಫಿಲಂ ಮೇಕಿಂಗ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತಷ್ಟೆ. ಅದಕ್ಕೂ ಮೊದಲು ನನ್ನಿಷ್ಟದ ಆಯ್ಕೆಯಾಗಿದ್ದದ್ದು ನಟನೆಯಷ್ಟೇ. ಈಗ್ಲೂ ನಟನೆಯೇ ಮೊದಲ ಆದ್ಯತೆ ಕೊಡ್ತೀನಿ. ಸಿನಿಮಾ ಮೇಕಿಂಗ್‌ಗೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಕಲಿಯೋದೂ ಸಾಕಷ್ಟಿದೆ. ಆದ್ರಿಂದ ಸದ್ಯದ ನನ್ನ ಆಯ್ಕೆ ನಟನೆಯೇ.

ನಡುವೆ ಅಂತರವಿರಲಿ ಚಿತ್ರದ ನಂತರ ಹೊಸಾ ಚಿತ್ರಗಳ ಅವಕಾಶ ಬಂದಿದೆಯಾ?

– ಬಂದಿದೆ. ಅದ್ರ ಬಗ್ಗೆ ಮಾತುಕತೆಯೂ ನಡೀತಿದೆ. ಎಲ್ಲ ಫೈನಲ್ ಆದ್ಮೇಲೆ ಹೊಸಾ ಚಿತ್ರದ ಬಗ್ಗೆ ಹೇಳ್ತೀನಿ.

ಸಿನಿಮಾಗೆ ಬರುವ ಮುಂಚೆ ನಿಮ್ಮ ಖಾಸಗಿ ಜಗತ್ತು ಹೇಗಿತ್ತು?

– ಸಿನಿಮಾಗೆ ಬರೋ ಮುಂಚೆ ನಾನು ಮಾಮೂಲಿ ಕಾಲೇಜು ಸ್ಟೂಡೆಂಟ್ ಅಷ್ಟೆ. ಆದ್ರೆ ಆ ಹಂತದಲ್ಲಿಯೇ ನಂಗೆ ಸಿಂಗಿಂಗ್ ಬಗ್ಗೆ ಆಸಕ್ತಿ ಇತ್ತು. ವೀಣೆ ನುಡಿಸೋದನ್ನ ಕಲಿತಿದ್ದೆ. ಅಮ್ಮ ಕೂಡಾ ನಾನು ಸಿಂಗರ್ ಆಗಬೇಕೆಂದೇ ಆಸೆಪಟ್ಟಿದ್ರು. ಸಂಗೀತವನ್ನೂ ಕಲಿತಿದ್ದ ನನಗೆ ಸ್ಪೋರ್ಟ್ಸ್‌ನಲ್ಲೂ ಆಸಕ್ತಿ ಇತ್ತು. ಅದಕ್ಕೂ ಮುಂಚೆ ಡಾಕ್ಟರ್ ಆಗ್ಬೇಕನ್ನೋ ಆಸೆ ಇತ್ತು. ಬಯಾಲಜಿ ನನ್ನ ಫೇವರಿಟ್ ಸಬ್ಜೆಕ್ಟ್ ಆಗಿತ್ತು. ಹಾಗ್ನೋಡಿದ್ರೆ ಚಿಕ್ಕವಳಿರುವಾಗ ನಾ ತುಂಬಾ ವಾಚಾಳಿಯಾಗಿದ್ದೆ. ಹೈಸ್ಕೂಲಿಗೆ ಬರೋ ಹೊತ್ತಿಗೆಲ್ಲ ಮಾತು ಕಡಿಮೆಯಾಗಿ ಅಂತರ್ಮುಖಿಯಾಗಿ ಬಿಟ್ಟಿದ್ದೆ. ಆ ಹಂತದಲ್ಲಿ ನಟಿಯಾಗಬೇಕು ಅಂದುಕೊಂಡಿರಲಿಲ್ಲ. ಆದ್ರೆ ನಂತರ ನಟಿಯಾದರೂ ರಾಕೆಟ್ ಚಿತ್ರದಲ್ಲಿ ಒಂದು ಹಾಡು ಹಾಡೋ ಮೂಲಕ ಅಮ್ಮನ ಆಸೆಯನ್ನ ಪೈರೈಸಿದ ತೃಪ್ತಿ ಇದೆ.

ನಿಮಗೆ ಹುಟ್ಟಿದೂರು ಇಷ್ಟವಾಗುತ್ತಾ ಅಥವಾ ಬೆಂಗಳೂರಾ?

– ನಾನು ಹುಟ್ಟಿದ್ದು ಅಮ್ಮ ಸಂಧ್ಯಾ ಶೆಟ್ಟಿಯವರ ಊರಾದ ಪುತ್ತೂರಿನಲ್ಲಿ. ನಾನು ಬೆಳೆದಿದ್ದು, ಓದಿದ್ದೆಲ್ಲ ಬೆಂಗಳೂರಿನಲ್ಲೇ ಆದ್ರೂ ಪುತ್ತೂರಿನ ನಂಟು ಹಾಗೇ ಇದೆ. ಆಗೆಲ್ಲ ವರ್ಷಕ್ಕೆ ಎರಡೆರಡು ತಿಂಗಳು ಅಲ್ಲೇ ಹೋಗಿರುತ್ತಿದ್ದೆ. ಈಗಲೂ ಪ್ರತೀ ವರ್ಷ ಊರಿಗೆ ಹೋಗ್ತೀನಿ. ಅಲ್ಲಿ ನಡೆಯೋ ಭೂತಾರಾಧನೆಯನ್ನ ಯಾವ

ಕಾರಣಕ್ಕೂ ಮಿಸ್ ಮಾಡಿಕೊಳ್ಳೋದಿಲ್ಲ. ಅಪ್ಪ, ಅಮ್ಮ ಮತ್ತು ತಮ್ಮ ಅಭಿರಥ್ ಜೊತೆ ಊರಿಗೆ ಹೋಗೋದಂದ್ರೆ ನಂಗಿಷ್ಟ.

ನೀವು ತುಳುನಾಡಿನವರು. ಇದೀಗ ತುಳು ಚಿತ್ರರಂಗವೂ ಬೆಳೆಯುತ್ತಿದೆ. ಅಲ್ಲಿಂದ ಆಫರ್‌ಗಳು ಬಂದಿವೆಯಾ?

– ಸಾಕಷ್ಟು ಆಫರ್‌ಗಳು ಬಂದಿವೆ. ಆದ್ರೆ ಕಾರಣಾಂತರಗಳಿಂದ ಒಪ್ಪಿಕೊಳ್ಳಲಾಗಿಲ್ಲ. ನಾನು ತುಳುವಿನವಳಾದರೂ ಕನ್ನಡದೊಂದಿಗೇ ನಂಟು ಜಾಸ್ತಿ. ನನಗೆ ಸೂಟ್ ಆಗುವಂಥಾ ಒಳ್ಳೆ ಕಥೆ ಬಂದ್ರೆ ಖಂಡಿತಾ ತುಳು ಚಿತ್ರಗಳಲ್ಲೂ ನಟಿಸ್ತೀನಿ.

ಈಗ ಮತ್ತೆ ನಡುವೆ ಅಂತರವಿರಲಿ ಚಿತ್ರದ ಬಗ್ಗೆ ಮಾತಾಡೋದಾದರೆ…

-ಈ ಚಿತ್ರವನ್ನು ಹೊಸಬರ ತಂಡವೇ ರೂಪಿಸಿದ್ರೂ ಡಿಫರೆಂಟಾಗಿದೆ. ತಾಂತ್ರಿಕವಾಗಿಯೂ ರಿಚ್ ಆಗಿದೆ. ಮಾಸ್, ಆಕ್ಷನ್ ಸೂತ್ರಗಳಾಚೆಗೆ ಬದುಕಿಗೆ ಹತ್ತಿರವಾದ ಕಥೆ ಹೊಂದಿದೆ. ಆದ್ದರಿಂದಲೇ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆಯೂ ಇದೆ. ಎಲ್ಲರೂ ಈ ಸಿನಿಮಾ ನೋಡುವಂತಾಗ್ಲಿ ಅಂತ ಆಶಿಸ್ತೀನಿ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz