Connect with us

ಸಿನಿಮಾ ವಿಮರ್ಶೆ

ಥ್ರಿಲ್ಲರ್ ಕಥೆಯ ಹಾರರ್ ಉದ್ದಿಶ್ಯ!

Published

on

ಏಕಾಏಕಿ ಮೈಸೂರು ಮೃಗಾಲಯದಲ್ಲಿನ ಪ್ರಾಣಿಗಳು ಮತ್ತು ಕೆಲ ಮನುಷ್ಯರೂ ಕೊಲೆಯಾದೇಟಿಗೆ ಎಂಟ್ರಿ ಕೊಡೋ ಸಿಐಡಿ ಆಫಿಸರ್. ಇದರ ಹಿಂದಿರೋ ಘಾತುಕ ಶಕ್ತಿಗಳನ್ನು ಹುಡುಕಿ ಇಡೀ ಪ್ರಕರಣದ ರಹಸ್ಯ ಭೇದಿಸೋದೇ ಆತನ ಪರಮ ಉದ್ದಿಶ್ಯ. ಈ ಕೊಲೆಯಗಳ ಸುತ್ತಲಿನ ತನಿಖೆಯ ಜಾಡಿನಲ್ಲಷ್ಟೇ ಮುಂದುವರೆದಿದ್ದರೆ ಉದ್ದಿಶ್ಯ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜಾನರಿಗಷ್ಟೇ ಫಿಕ್ಸಾಗುತ್ತಿತ್ತು. ಆದರೆ ಈ ತನಿಖೆಯ ಹಾದಿಯಲ್ಲಿಯೇ ಭಯಾನಕ ವಾಮಾಚಾರಿ ಎದುರಾಗುತ್ತಾನೆ. ಆತನ ಪ್ರಭೆಯಲ್ಲಿಯೇ ಮೂವರು ಸುಂದರಿಯರು ಮತ್ತು ಅಚಾನಕ್ಕಾಗಿ ಬಿಚ್ಚಿಕೊಳ್ಳೋ ಹಾರರ್ ಟ್ರ್ಯಾಕ್… ಇವಿಷ್ಟೂ ಉದ್ದಿಶ್ಯ ಚಿತ್ರವನ್ನು ಮಾಮೂಲು ಸಿನಿಮಾಗಳಿಗಿಂತಲೂ ತುಸು ಭಿನ್ನವಾಗಿಸುತ್ತವೆ.


ಹೇಮಂತ್ ಕೃಷ್ಣಪ್ಪ ನಿರ್ಮಾಣ ಮಾಡಿ, ನಿರ್ದೇಶಿಸಿ, ಈ ಚಿತ್ರದಲ್ಲಿ ಸಿಐಡಿ ಅಧಿಕಾರಿಯಾಗಿ ಖಡಕ್ಕಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಲಿವುಡ್ ಕಥೆಗಾರ ಬರೆದಿರೋ ಕಥೆಯ ಕಾರಣದಿಂದ, ವಿಶಿಷ್ಟವಾದ ಟೈಟಲ್ಲಿನ ದೆಸೆಯಿಂದ ಉದ್ದಿಶ್ಯ ಚಿತ್ರದ ಬಗೆಗೊಂದು ಕುತೂಹಲ ಮೂಡಿಕೊಂಡಿತ್ತಲ್ಲಾ? ಅದನ್ನು ಸಂಪೂರ್ಣವಾಗಿ ತಣಿಸುವ ಹೇಮಂತ್ ಕೃಷ್ಣಪ್ಪನವರ ಉದ್ದಿಶ್ಯ ತಕ್ಕಮಟ್ಟಿಗೆ ಈಡೇರಿದೆ!

ಕಥೆ ತೆರೆದುಕೊಳ್ಳೋದೇ ಸಿಕ್ಕು ಸಿಕ್ಕಾಗ ಕೊಲೆಗಳಿಂದ. ಮೃಗಾಲಯದಲ್ಲಿ ಮೇಲ್ನೋಟಕ್ಕೆ ಯಾವ ಸುಳಿವೂ ಸಿಗದಂತೆ ಕೆಲ ಪ್ರಾಣಿಗಳು ಮತ್ತು ವ್ಯಕ್ತಿಗಳು ಕೊಲೆಯಾಗುತ್ತಿರುತ್ತಾರೆ. ಇದರ ಹಿಂದೆ ಏನಿದೆ ಎಂಬುದನ್ನು ಪತ್ತೆಹಚ್ಚಲೆಂದೇ ಖಡಕ್ ಸಿಐಡಿ ಅಧಿಕಾರಿಯ ಆಗಮನವಾಗುತ್ತದೆ. ತನಿಖೆ ನಡೆಯುತ್ತಲೇ ಇದರ ಹಿಂದೆ ಓರ್ವ ಭಯಾನಕ ಮಾಂತ್ತಿಕರ ನೆರಳು ಕಾಣುತ್ತದೆ. ಆ ಮೂಲಕವೇ ಕಥೆ ಮತ್ತೊಂದು ಮಜಲು ಪಡೆದುಕೊಂಡು ಹಾರರ್ ಬಾಧೆಯೂ ಆರಂಣಭವಾಗುತ್ತೆ. ಸ್ವತಃ ಸಿಐಡಿ ಅಧಿಕಾರಿಯನ್ನೇ ಕಂಗಾಲು ಮಾಡುವಂಥಾ ಅನುಭವಗಳೂ ಆಗುತ್ತವೆ. ಈ ಭಯಾನಕ ಮಾಂತ್ರಿಕನಿಗೂ ಮೂವರು ಹುಡುಗಿಯರಿಗೂ ಏನು ಸಂಬಂಧ? ಸರಣಿ ಕೊಲೆಗಳಿಗೆ ಕಾರಣವೇನೆಂಬುದು ಅಸಲೀ ಕುತೂಹಲ.

ಕಥೆ ಹೆಚ್ಚೇನೂ ಭಿನ್ನವಾಗಿಲ್ಲದಿದ್ದರೂ ಅದನ್ನು ಹೊಸಾ ರೀತಿಯಲ್ಲಿ ನಿರೂಪಣೆ ಮಾಡುವಲ್ಲಿ ನಿರ್ದೇಶಕರಾಗಿಯೂ ಹೇಮಂತ್ ಶ್ರಮ ಎದ್ದು ಕಾಣುತ್ತದೆ. ಇನ್ನೊಂಚೂರು ಖದರ್ ತುಂಬಿಕೊಳ್ಳೋ ಪ್ರಯತ್ನ ಮಾಡಬೇಕಿತ್ತೆನ್ನಿಸಿದರೂ ಅವರು ನಟನಾಗಿಯೂ ಗಮನಾರ್ಹ ಅಭಿನಯ ನೀಡಿದ್ದಾರೆ. ಅರ್ಚನಾ ಗಾಯಕವಾಡ್, ಅಕ್ಷತಾ, ಇಚ್ಚಾ ನಾಯಕಿಯರಾಗಿ ತಂತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಒಂದಷ್ಟು ಕೊರತೆಗಳಾಚೆಗೂ ತಾಂತ್ರಿಕವಾಗಿ ಹೊಸತನ ಹೊಂದಿರೋ ಈ ಚಿತ್ರ ಥ್ರಿಲ್ಲಿಂಗ್ ಅನುಭವ ನೀಡುವಲ್ಲಿ ಸಫಲವಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಸಿನಿಮಾ ವಿಮರ್ಶೆ

ಜಗತ್ ಕಿಲಾಡಿ : ಎಲ್ಲ ಮೋಸಗಳಿಗೂ ಇವನೇ ಬಾಸು!

Published

on

ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು… ಇಂಥಾ ಧಾವಂತದಿಂದ ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಾರಾಮೋಸ ಮಾಡಿದ ಸಜೀವ ಉದಾಹರಣೆಗಳು ಸಾಕಷ್ಟಿವೆ. ಈಗ ಪ್ರೇಕ್ಷಕರ ಮುಂದೆ ಬಂದಿರೋ ಜಗತ್ ಕಿಲಾಡಿ ಅಂಥಾ ಹತ್ತಾರು ಮೋಸಗಾರರ, ನಾನಾ ವೇಷಗಳ ಒಟ್ಟು ಮೊತ್ತದಂತಿರುವವನು. ಹಣ ಮಾಡುವ ಉದ್ದೇಶದಿಂದ ಎಂತೆಂಥಾ ಪ್ರಳಯಾಂತಕ ಕೆಲಸ ಮಾಡ ಬಹುದೆಂಬುದನ್ನು ಹೇಳುತ್ತಲೇ ಆ ಹಾದಿಯಲ್ಲಿ ಮುಂದುವರೆದರೆ ಕಡೆಗೂ ಸಿಕ್ಕೋದೇನೆಂಬ ಸಂದೇಶವನ್ನೂ ಸಾರುತ್ತಾ ಸಖತ್ ಎಂಟರ್‌ಟೈನಿಂಗ್ ಚಿತ್ರವಾಗಿ ಜಗತ್ ಕಿಲಾಡಿ ಪ್ರೇಕ್ಷಕರ ಮನಗೆದ್ದಿದ್ದಾನೆ!
ಆರವ್ ಧೀರೇಂದ್ರ ನಿರ್ದೇಶನದ ಈ ಚಿತ್ರ ಅಂತಿಮ ಹಂತದಲ್ಲಿ ಭಾರೀ ಸದ್ದು ಮಾಡಿತ್ತು. ನಿರಂಜನ್ ಶೆಟ್ಟಿ ಬರೋಬ್ಬರಿ ಹದಿನೈದು ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಅಚ್ಚರಿಗೆ ಕಾರಣವಾಗಿದ್ದರು. ಇದೀಗ ಬಿಡುಗಡೆಯಾಗಿರೋ ಈ ಚಿತ್ರ ಆರಂಭದಿಂದ ಕೊನೆಯವರೆಗೂ ಅದನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.

ನಿರಂಜನ್ ಶೆಟ್ಟಿ ಈ ಚಿತ್ರದಲ್ಲಿ ಸತ್ಯಮೂರ್ತಿ ಎಂಬ ಪಾತ್ರದ ಮೂಲಕ ವಿರಾಟ್ ರೂಪವನ್ನೇ ಪ್ರದರ್ಶಿಸಿದ್ದಾರೆ. ಹೆಸರಲ್ಲಿಯೇ ಸತ್ಯ ಇದ್ದರೂ ಆತ ಸುಳ್ಳು, ಮೋಸ, ವಂಚನೆಗಳ ಸಾಕಾರ ಮೂರ್ತಿ. ಎಂಥಾ ಸಂದರ್ಭವನ್ನಾದರೂ ಮೋಸದಿಂದಲೇ ಕಾಸು ಕಬಳಿಸಲು ಬಳಸಿಕೊಳ್ಳೋದರಲ್ಲಿ ಆತ ಚಾಣಾಕ್ಷ. ರೈಸ್‌ಫುಲ್ಲಿಂಗ್ ದಂಧೆಯಿಂದ ಹಿಡಿದು, ಕುಡಿಯೋ ನೀರಿನ ಮಾಫಿಯಾದ ವರೆಗೂ ಸಕಲ ಅಡ್ಡ ಕಸುಬುಗಳಲ್ಲಿಯೂ ಈತನದ್ದೇ ಮೇಲುಗೈ. ಹಣವೇ ಸಕಲ ಸುಖಕ್ಕೂ ಮೂಲ ಎಂಬುದಾತನ ಬದುಕಿನ ಸೂತ್ರ. ಎಂಥಾ ಚಾಣಾಕ್ಷನೇ ಆಗಿದ್ದರೂ ಖಾಕಿ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬಂತೆ ಈ ಜಗತ್ ಖಿಲಾಡಿಯೂ ಪೊಲೀಸರ ಅತಿಥಿಯಾಗುತ್ತಾನೆ.

 

ಹೀಗೆ ತಗುಲಿಕೊಂಡಾಗಲೂ ಮತ್ತೊಂದು ಮೋಸದ ಬಲೆ ಹೆಣೆದು ಬಚಾವಾಗೋದರಲ್ಲಿ ಸತ್ಯ ಮೂರ್ತಿಯನ್ನು ಮೀರಿಸೋ ಮತ್ತೊಬ್ಬರಿಲ್ಲ. ಸಾಮಾನ್ಯವಾಗಿ ಪ್ರೀತಿ ಎಂಥವರನ್ನೂ ಬದಲಿಸುತ್ತೇ ಅನ್ನೋದಿದೆ. ಆದರೆ ಹಣದ ಹಿಂದೆ ಬಿದ್ದ ಈತನಿಗೆ ತನ್ನ ಹಿಂದೆ ಬಿದ್ದ ಹುಡುಗಿಯೊಬ್ಬಳ ಅಂತರಾಳ ಮುಖ್ಯ ಅನ್ನಿಸೋದಿಲ್ಲ. ಆದರೂ ಮೋಸದ ಜಾಲದಲ್ಲಿ ಬಂಧಿಯಾಗಿ ಖೈದಿಯಾದ ಸಂದರ್ಭದಲ್ಲಿ ಪೊಲೀಸರು ಹೇಳಿದ ಮಾತು ಆತನನ್ನು ಕಾಡುತ್ತೆ. ಸತ್ಯಮೂರ್ತಿ ಬದಲಾಗುವ ಪಥದತ್ತ ಹೊರಳಿಕೊಳ್ಳುತ್ತಾನೆ. ಅದು ಸಾಧ್ಯವಾಗುತ್ತಾ? ಹಣದ ಹಿಂದೆ ಬಿದ್ದ ಅಸಡ್ಡೆ ಮಾಡಿದ್ದ ಪ್ರೀತಿ ಆತನಿಗೆ ದಕ್ಕುತ್ತಾ ಎಂಬುದು ಅಸಲೀ ಕ್ಯೂರಿಯಾಸಿಟಿ.

ಆರಂಭದಿಂದ ಕಡೆಯವರೆಗೂ ಕ್ಷಣ ಕ್ಷಣವೂ ಕಾಡುವಂತೆ, ಹೊತ್ತಿನ ಪರಿವೆಯೂ ನೆನಪಾಗದಂತೆ ಚಿತ್ರವನ್ನು ಕಟ್ಟಿ ಕೊಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ನಾಯಕನಾಗಿ ನಿರಂಜನ್ ಶೆಟ್ಟಿ ಎಲ್ಲ ಶೇಡುಗಳ ಪಾತ್ರವನ್ನೂ, ಅವತಾರಗಳನ್ನೂ ಆವಾಹಿಸಿಕೊಂಡಂತೆ ನಟಿಸಿದ್ದಾರೆ. ನಾಯಕಿ ಅಮಿತಾ ಕುಲಾಲ್ ಕೂಡಾ ಇದಕ್ಕೆ ತಕ್ಕುದಾಗಿಯೇ ನಟಿಸಿದ್ದಾರೆ. ಪ್ರತೀ ಪಾತ್ರ, ಸನ್ನಿವೇಶಗಳೂ ಕೂಡಾ ಪ್ರೇಕ್ಷಕರನ್ನು ಕುತೂಹಲಕ್ಕೆ ತಳ್ಳುವ ಮೂಲಕ ಇಡೀ ಚಿತ್ರ ನೋಡಿಸಿಕೊಂಡು ಹೋಗುತ್ತೆ. ಇಡೀ ಚಿತ್ರದಲ್ಲಿನ ವೇಗ, ಅಚ್ಚುಕಟ್ಟಾದ ಚಿತ್ರಕಥೆ, ಬಿಗಿ ಕಳೆದುಕೊಳ್ಳದ ಕಥೆ ಮತ್ತು ಅದಕ್ಕೆ ತಕ್ಕುದಾದ ಪಾತ್ರ ಪೋಷಣೆಯ ಮೂಲಕ ಈ ಚಿತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.

ಸಿನಿಮಾ ರೇಟಿಂಗ್ : ***/******

Continue Reading

ಸಿನಿಮಾ ವಿಮರ್ಶೆ

ಕಂಟಕಗಳಿಗೂ ಕೇರು ಮಾಡದ ಸ್ಪೆಷಲ್ ಎಂಎಲ್‌ಎ!

Published

on


ಪ್ರಥಮ್ ಅಭಿನಯದ ಎರಡನೇ ಚಿತ್ರ ಎಂಎಲ್‌ಎ ತೆರೆ ಕಂಡಿದೆ. ನಾವೇ ಆಗಾಗ ಕಂಡಿರೋ ಬಿಡಿ ಬಿಡಿಯಾದ ರಾಜಕೀಯ ಸನ್ನಿವೇಷಗಳನ್ನು ಕಥೆಯಾಗಿಸಿ, ಅದಕ್ಕೆ ಪ್ರಥಮ್‌ಗೆ ಒಪ್ಪುವಂಥಾ ಆಯಾಮಗಳನ್ನು ನೀಡಿ ನಿರ್ದೇಶಕ ಮೌರ್ಯ ಪ್ರೇಕ್ರಕರ ಮುಂದಿಟ್ಟಿದ್ದಾರೆ. ಪ್ರಥಮ್‌ಗೆ ರಿಯಲ್ ಆಗಿ ಇರೋ ಇಮೇಜಿಗೆ ತಕ್ಕಂಥಾದ್ದೇ ಪಾತ್ರ ಸೃಷ್ಟಿಸುವಲ್ಲಿನ ಜಾಣ್ಮೆಯನ್ನು ಇಡೀ ಚಿತ್ರದಲ್ಲಿಯೂ ಜತನದಿಂದಲೇ ಕಾಯ್ದುಕೊಳ್ಳುವ ಮೂಲಕ ಎಂಎಲ್‌ಎ ಚಿತ್ರವನ್ನವರು ಕಟ್ಟಿ ಕೊಟ್ಟಿದ್ದಾರೆ.

ರಾಜಕೀಯದ ಬೇಸಿನ ಕಥೆಯೊಂದು ಚಿತ್ರವಾಗುತ್ತದೆ ಅಂದಾಕ್ಷಣವೇ ಜನಸಾಮಾನ್ಯರ ಮನಸಲ್ಲಿಯೂ ಭ್ರಷ್ಟಾಚಾರ, ದುಷ್ಟತನಗಳ ಸಿದ್ಧ ಚಿತ್ರಣವೊಂದು ಮೂಡಿಕೊಳ್ಳುತ್ತದೆ. ಆದರೆ ಇದಕ್ಕೆ ಹೊರತಾದ ಒಂದಷ್ಟು ಹಾಸ್ಯ ಪ್ರವೃತ್ತಿಯ ರಿಯಲ್ ರಾಜಕಾರಣಿಗಳೂ ನಮ್ಮ ನಡುವಿದ್ದಾರೆ. ಅವರ ಮಾತು, ವರ್ತನೆ ಮತ್ತು ಅವರ ಸುತ್ತ ಗಿರಕಿ ಹೊಡೆಯೋ ಕಥಾನಕವಿದೆಯಲ್ಲಾ? ಇಡೀ ಚಿತ್ರವನ್ನು ಅದೇ ಧಾಟಿಯಲ್ಲಿ ಕಟ್ಟಿ ಕೊಡಲಾಗಿದೆ.

ಒಂದು ಚಿತ್ರ ಅಂತ ನೋಡಿದರೂ ಪ್ರಥಮ್‌ನನ್ನು ಗಂಭೀರವಾಗಿ ಕಲ್ಪಿಸಿಕೊಳ್ಳೋದು ಕಷ್ಟ. ಆ ಸೂಕ್ಷ್ಮತೆಯನ್ನು ಅರಿತು ಪಾತ್ರ ಸೃಷ್ಟಿಸಿರೋದು ಈ ಚಿತ್ರದ ಪ್ಲಸ್ ಪಾಯಿಂಟ್. ಪ್ರಥಮ್ ಇಡೀ ಪಾತ್ರ ಅವರ ರಿಯಲ್ ವ್ಯಕ್ತಿತ್ವ, ಹಾವಭಾವಗಳಿಗೆ ತಕ್ಕುದಾಗಿಯೇ ಸಾಗುತ್ತದೆಯಾದ್ದರಿಂದ ನಟನೆಯ ಪ್ರಶ್ನೆ ಗೌಣವಾಗುತ್ತೆ. ಅದು ತನ್ನ ಪಾಡಿಗೆ ತಾನು ಸಹಜವೆಂಬಂತೆ ಕಲುಷಿತಗೊಂಡಿರೋ ರಾಜಕೀಯ ವ್ಯವಸ್ಥೆ. ಅದರೊಳಗೆ ಶುದ್ಧಹಸ್ತನಾದ, ತನ್ನನ್ನು ಗೆಲ್ಲಿಸಿದ ಜನರಿಗೆ ಒಳ್ಳೆಯದನ್ನೇ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿರೋ ಯುವಕನೋರ್ವ ಪ್ರವೇಶಿಸುತ್ತಾನೆ. ಆದರೆ ಒಳ್ಳೆ ಉದ್ದೇಶ ಹೊಂದಿರೋ ಆತನಿಗೆ ಸಾಕಷ್ಟು ಕಂಟಕ, ಸವಾಲುಗಳೇ ಎದುರಾಗುತ್ತವೆ. ಅದನ್ನೆಲ್ಲ ಆತ ಲವಲವಿಕೆಯಿಂದ, ಹಾಸ್ಯ ಪ್ರಜ್ಞೆಯ ಮೂಲಕವೇ ಹಾದು ಹೋಗುತ್ತಾನೆ. ಅದು ಹೇಗೆ, ಆತ ಗುರಿ ತಲುಪುತ್ತಾನಾ ಎಂಬುದು ನಿಜವಾದ ಕುತೂಹಲ.

ಹಾಗಂತ ಇದು ಬರೀ ರಾಜಕೀಯದಾಟಕ್ಕೆ ಸೀಮಿತವಾದ ಚಿತ್ರ ಅಂದುಕೊಳ್ಳಬೇಕಿಲ್ಲ. ಇದರ ನಡುವೆಯೇ ಒಂದು ಪ್ರೇಮಕಥೆ ಅರಳಿಕೊಳ್ಳುತ್ತದೆ. ಕಥೆ ಸಾಗುತ್ತಾ ಫ್ಯಾಮಿಲಿಯತ್ತಲೂ ಹೊರಳಿಕೊಳ್ಳುತ್ತದೆ. ಪ್ರಥಮ್ ರಿಯಲ್ಲಿನಂತೆಯೇ ರೀಲಲ್ಲಿಯೂ ಸಿಕ್ಕಾಪಟ್ಟೆ ಮಾತಾಡಿದ್ದಾರೆ. ಸೋನಲ್ ಮಂತೇರೋ ನಾಯಕಿಯಾಗಿ ಪ್ರಥಮ್‌ಗೆ ಸಾಥ್ ನೀಡುತ್ತಲೇ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರೇಖಾ ಇಲ್ಲಿ ಖಡಕ್ಕು ರಾಜಕಾರಣಿಯಾಗಿ ನಟಿಸಿದ್ದಾರೆ. ಕುರಿಪ್ರತಾಪ್ ಆಗಾಗ ಮಾತಿನ ಓಘದಿಂದ ವಿಚಲಿತರಾದ ಪ್ರೇಕ್ಷಕರನ್ನು ಹಾಸ್ಯದಿಂದ ರಂಜಿಸಿ ಮತ್ತೆ ಕಥೆಯೊಳಗೆ ತಂದು ಬಿಡುತ್ತಾರೆ.

ಇದೆಲ್ಲದರ ಜೊತೆಯಲ್ಲಿ ಒಂದಷ್ಟು ಕೊರತೆಗಳಿದ್ದರೂ ಪ್ರಥಮ್‌ರನ್ನು ಇಷ್ಟಪಡೋ ಮಂದಿಗದು ದೊಡ್ಡದೆನ್ನಿಸಲಿಕ್ಕಿಲ್ಲ. ಒಟಾರೆಯಾಗಿ ವೆಂಕಟೇಶ ರೆಡ್ಡಿ ನಿರ್ಮಾಣದ ಈ ಚಿತ್ರ ಪೊಲಿಟಿಕಲ್ ಮೆಲೋಡ್ರಾಮವೊಂದನ್ನು ಬೇರೆಯದ್ದೇ ಜಾಡಿನಲ್ಲಿ ಅನಾವರಣಗೊಳಿಸೋ ಉದ್ದೇಶ ಹೊಂದಿರುವಂತಿದೆ.

Continue Reading

ಸಿನಿಮಾ ವಿಮರ್ಶೆ

ನೀವಂದ್ಕೊಂಡಂಗೆ ಏನೂ ಇಲ್ಲಣ್ಣೊ!

Published

on

ದಿ ವಿಲನ್: ಎಲ್ಲ ರಸಗಳನ್ನೂ ಬೆರೆಸಿ ತಯಾರಿಸಿದ ಪ್ರೇಮ್‌ಮೇಡ್ ಕಷಾಯ!
ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಥೇಟು ಗಜಪ್ರಸವದ ಮಾದರಿಯಲ್ಲಿಯೇ ಕಡೆಗೂ ಬಿಡುಗಡೆಯಾಗಿದೆ. ಒಂದು ಚಿತ್ರ ಆರಂಭಿಸಿದರೆಂದರೆ ಮೊದಲು ಪ್ರಚಾರ ಆಮೇಲೆ ಕೆಲಸ ಎಂಬ ಸೂತ್ರವನ್ನೇ ನೆಚ್ಚಿಕೊಂಡು ಬಂದಿರೋ ಪ್ರೇಮ್ ಈ ಚಿತ್ರದಲ್ಲಿಯೂ ಅದನ್ನೇ ಮುಂದುವರೆಸಿದ್ದರು. ಆದರೆ ಪ್ರೇಕ್ಷಕರ ಅಸಹನೆಯನ್ನೂ ಕಡೇ ಘಳಿಗೆಯಲ್ಲಿ ಕೊತ ಕೊತನೆ ಕುಡಿಯುವ ಕುತೂಹಲವಾಗಿಸಿದ್ದ ಪ್ರೇಮ್ ಜಾಣ್ಮೆ ಎಂಬುದರಲ್ಲಿ ಎರಡು ಮಾತಿಲ್ಲ. ಸುದೀಪ್ ಮತ್ತು ಶಿವಣ್ಣ ಈ ಇಬ್ಬರಲ್ಲಿ ಯಾರು ರಾಮ ಮತ್ತು ಯಾರು ರಾವಣ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ!

ಪ್ರೇಮ್ ಚಿತ್ರವೆಂದ ಮೇಲೆ ಹಳ್ಳಿ ಚಿತ್ರಣ, ಮದರ್ ಸೆಂಟಿಮೆಂಟ್ ಇರೋದು ವಾಡಿಕೆ. ಈ ಚಿತ್ರವೂ ಕೂಡಾ ಹಳ್ಳಿಯೊಂದರ ನಾಟಕ ಪ್ರದರ್ಶನದ ಮೂಲಕವೇ ತೆರೆದುಕೊಳ್ಳುತ್ತೆ. ಈ ಚಿತ್ರಣದಲ್ಲಿ ಶಿವಣ್ಣ ಹಳ್ಳಿಗಾಡಿನ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಆ ತಾಯಿಗೆ ತನ್ನ ಮಗ ರಾಮ ಶ್ರೀರಾಮ ಚಂದ್ರನಂತೆಯೇ ಬಾಳಿ ಬದುಕಬೇಕೆಂಬೋ ಆಸೆ. ಆದ್ದರಿಂದ ರಾಮನ ಆದರ್ಶಗಳನ್ನೇ ಧಾರೆ ಎರೆದು ಬೆಳೆಸುತ್ತಾಳೆ. ಆದರೆ ವಿಪರೀತ ನಾಟಕದ ಹುಚ್ಚಿನ ರಾಮನ ಜನ್ಮದಾತನಿಗೆ ರಾವಣನ ಮೇಲೆ ಬಲು ಪ್ರೀತಿ. ನಾಟಕದಲ್ಲಿಯೂ ಪಟ್ಟು ಹಿಡಿದು ರಾವಣನಾಗೋ ಗಂಡನ ಮೇಲೆ ರಾಮನ ತಾಯಿಗೆ ಕೆಂಡದಂಥಾ ಸಿಟ್ಟು. ಕಡೆಗೂ ಆಕೆ ತನ್ನ ಗಂಡ ನಾಟಕದಲ್ಲಿ ಧರಿಸಿ ಮೆರೆಯುವ ರಾವಣ ಕಿರೀಟಕ್ಕೆ ಬೆಂಕಿಯಿಡುತ್ತಾಳೆ. ಆ ಬೆಂಕಿಯ ಜೊತೆಗೇ ಅಸಲೀ ಕಥಾನಕ ತೆರೆದುಕೊಳ್ಳುತ್ತೆ!

ಅವ್ವನ ರಾಮನಾಮಸ್ಮರಣೆಯನ್ನೇ ಕಿವಿಗೆ ಎರಕ ಹೊಯ್ದುಕೊಂಡಂತೆ ಬೆಳೆದ ರಾಮನ ಕತ್ತಿನಲ್ಲೊಂದು ಬೆಳ್ಳಿಯ ಸರ. ಆದರೆ ರಾಮ ಒಂದು ಫೈಟಿಂಗ್ ಸೀನಿನಲ್ಲಿದ್ದಾಗ ಆ ಸರ ಮಾಯವಾಗುತ್ತೆ. ಹಾಗೆ ಮಾಯವಾದ ಸರದ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಲ್ಲಿ ಕೈಸರ್ ರಾಮ್ ಆಗಿ ಸುದೀಪ್ ಭರ್ಜರಿ ಎಂಟ್ರಿ ಕೊಡುತ್ತಾರೆ. ರಾಮ ಕೈಸರ್ ರಾಮನ ಬೆಂಬಿದ್ದು, ಬಡಿದಾಟವಾಗಿ, ಅದಕ್ಕೊಂದು ಉಪಕಥೆ, ಆ ಕಥೆಗೆ ಮತ್ತೊಂದು ಕೊಂಬೆ ಕೋವೆ… ಬಹುಶಃ ನಿರ್ದೇಶಕ ಪ್ರೇಮ್ ಎರಡು ವರ್ಷಗಳ ಕಾಲ ಯಾವುದ್ಯಾವುದೋ ಕಥೆಯನ್ನು ಚೆನ್ನಾಗಿ ಕಲೆಸಿ, ಕಲಸುಮೇಲೋಗರ ಮಾಡಿ ದೃಷ್ಯ ಕಟ್ಟಿದ್ದಾರೇನೋ ಎಂಬ ಸಂಶಯ ಮೂಡುವಂತೆ ಗೋಜಲಿನ ವಾತಾವರಣವೂ ಸೃಷ್ಟಿಯಾಗುತ್ತೆ.

ಥ್ರ್ರಿಲ್ಲರ್, ಆಕ್ಷನ್ ಮತ್ತು ಸೆಂಟಿಮೆಂಟುಗಳನ್ನು ಸೇರಿಸಿ ಪ್ರೇಮ್ ಕಥೆ ಹೊಸೆದಿದ್ದಾರೆ. ಅದು ಪ್ರೇಕ್ಷಕರಿಗೆ ಅಲ್ಲಲ್ಲಿ ಕಾಮಿಡಿ ಮತ್ತು ಹಾರರ್ ಅನುಭವವನ್ನೂ ನೀಡೋದು ಈ ಚಿತ್ರದ ಹೆಚ್ಚುಗಾರಿಕೆಯೋ, ಕೊರತೆಯೋ ಎಂಬ ಗೊಂದಲವೂ ಕಾಡುತ್ತೆ. ಆದರೆ ಕಥೆ ಸಿಕ್ಕಿನಾಚೆಗೆ ಇಡೀ ಚಿತ್ರವನ್ನು ಪ್ರೇಮ್ ರಿಚ್ ಆಗಿ ಕಟ್ಟಿಕೊಟ್ಟಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ರಾಮ ಮತ್ತು ಕೈಸರ್ ರಾಮ್ ಪಾತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಅಕ್ಷರಶಃ ವಿಜೃಂಭಿಸಿದ್ದಾರೆ. ಅವರಿಬ್ಬರದ್ದೂ ಪರಕಾಯ ಪ್ರವೇಶ. ಅವರ ಬಾಯಿಂದ ಹೊರ ಬೀಳೋ ಪ್ರತೀ ಡೈಲಾಗುಗಳಿಗೂ ಶಿಳ್ಳೆ ಕೇಕೆಗಳು ಮೊರೆಯುತ್ತವೆ. ಆದರೆ ಪ್ರೇಮ್ ವ್ಯಕ್ತಿತ್ವದಂತೆಯೇ ಗಡಿಬಿಡಿ, ಗಜಿಬಿಜಿಗಳೇ ಕಥೆಯ ವಿಚಾರದಲ್ಲಿ ಮಿಜಿಗುಡುತ್ತವೆ. ಇಡೀ ಸಿನಿಮಾ ನೋಡಿದಾಗ ಸುದೀಪ್ ಪಾತ್ರಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆಯಾ ಎಂದು ಅನಿಸದೇ ಇರದು. ಹಾಗೆ ನೋಡಿದರೆ ಒಂದು ಸಣ್ಣ ಎಳೆಯಲ್ಲಿ ಸಲೀಸಾಗಿ ಹೇಳಿಬಿಡಬಹುದಾಗಿದ್ದ ಕತೆಯನ್ನು ರೋಚಕಗೊಳಿಸುವ ಉಮೇದಿಗೆ ಬಿದ್ದು ಎಲ್ಲಿಂದ ಎಲ್ಲಿಗೋ ಟ್ರಾವೆಲ್ ಮಾಡಿಸಿದ್ದಾರೆ. ಬ್ರಿಟಿಷರು ಭಾರತವನ್ನು ಆಳಿದ್ದ ಸೇಡಿಗೆ ಒಬ್ಬ ವ್ಯಕ್ತಿ ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲ್ಲಾಡಿಸಲು ಅಂಡರ್ ವರ್ಲ್ಡ್ ಡಾನ್ ರೂಪದಲ್ಲಿ ಎದ್ದುನಿಲ್ಲೋದನ್ನು ನಿಜಕ್ಕೂ ಹಾಸ್ಯಾಸ್ಪದವಾಗಿದೆ!

ಎಲ್ಲಾ ರಸಗಳನ್ನೂ ಒಂದೇ ಚಿತ್ರದಲ್ಲಿ ಸೇರಿಸಿದರೆ ರುಚಿಯಾದ ರಸಾಯನವೇ ಆಗುತ್ತದೆಂದೇನೂ ಗ್ಯಾರಂಟಿಯಿಲ್ಲ. ಅದು ಒಗರೊಗರು ಕಷಾಯವಾಗೋ ಅಪಾಯವೂ ಇದೆ. ಆ ಅಪಾಯವನ್ನು ಪ್ರೇಮ್ ಮನಗಂಡಿಲ್ಲ ಎಂಬುದೇ ಈ ಚಿತ್ರದ ದೊಡ್ಡ ಹಿನ್ನಡೆ. ಶಿವಣ್ಣ ಮತ್ತು ಸುದೀಪ್ ಪಾತ್ರಗಳ ಖದರ್ ಇಡೀ ಕಥೆಯಲ್ಲಿಯೂ ಇದ್ದಿದ್ದರೆ, ಹುಟ್ಟಿಕೊಂಡಿದ್ದ ಕ್ರೇಜಿನಲ್ಲಿ ವಿಲನ್ ಎಲ್ಲಿಯೋ ಹೋಗಿ ಬಿಡುತ್ತಿದ್ದ. ಆದರೆ ವಿಲನ್ನು ನಿರ್ದೇಶಕ ಪ್ರೇಮ್ ಗಡಿಬಿಡಿಯ ನಡುವೆ ಅಕ್ಷರಶಃ ಬಸವಳಿದಿದ್ದಾನೆ!

ಫೈನಲಿ, ಇಡೀ ಕಥೆ ಮದರ್ ಸೆಂಟಿಮೆಂಟಿನಲ್ಲಿ ವಿಲೀನವಾಗುತ್ತದೆ. ಅದನ್ನು ನೋಡುಗರ ಕಣ್ಣಾಲಿಗಳು ತುಂಬಿ ಬರುವಂತೆ ಶಶಕ್ತವಾಗಿಯೂ ಪ್ರೇಮ್ ರೂಪಿಸಿದ್ದಾರೆ. ಆದರೆ ಕಣ್ಣುಗಳು ಹನಿಗೂಡಿದ್ದು ಮೂರು ಘಂಟೆ ಚಿತ್ರ ನೋಡಿದ ಪರಿಣಾಮದಿಂದಲಾ, ಅಥವಾ ಅದಕ್ಕೆ ಕ್ಷೈಮ್ಯಾಕ್ಸ್ ಕಾರಣವಾ ಎಂಬ ಯಕ್ಷ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತದೆ. ಇದೆಲ್ಲದರಾಚೆಗೆ ಇಡೀ ಚಿತ್ರವನ್ನು ಅದ್ದೂರಿಯಾಗಿ ರೂಪಿಸೋ ಪ್ರೇಮ್ ಹಂಬಲ ಎದ್ದು ಕಾಣಿಸುತ್ತೆ. ಕೆಲವೆಡೆ ಅದರಲ್ಲವರು ಯಶಸ್ವಿಯೂ ಆಗುತ್ತಾರೆ. ಗಿರೀಶ್ ಗೌಡ ಛಾಯಾಗ್ರಹಣವೂ ಚೇತೋಹಾರಿಯಾಗಿದೆ. ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆಯಲ್ಲೂ ಖದರ್ ಇದೆ. ಅರ್ಜುನ್ ಜನ್ಯಾ ಸಂಗೀತದ ಹಾಡುಗಳೂ ಚಿತ್ರಕ್ಕೆ ಪೂರಕವಾಗಿ ಇಷ್ಟವಾಗುತ್ತವೆ.

ಆದರೆ ಎಲ್ಲಾ ಇದೆ, ಮತ್ತೇನೋ ಇಲ್ಲ ಎಂಬ ಗೊಂದಲದ ಛಾಯೆಯೊಂದು ಕ್ಲೈಮ್ಯಾಕ್ಸ್ ಜೊತೆಗೇ ಪ್ರೇಕ್ಷಕರ ಮನಸಿಗೂ ಇಳಿದುಕೊಳ್ಳುತ್ತೆ ಎಂಬಲ್ಲಿಗೆ ವಿಲನ್ ಅಬ್ಬರ ಸಮಾಪ್ತಿಯಾಗುತ್ತೆ!

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz