One N Only Exclusive Cine Portal

ದಂಡುಪಾಳ್ಯದ ಅಮಾಯಕರು!

ದಂಡುಪಾಳ್ಯ! ಈ ಊರಿನಿಂದ ಬದುಕಿಗಾಗಿ ಬೆಂಗಳೂರಿಗೆ ಸೇರಿದ ಒಂದು ಗುಂಪು. ಹಾಗೆ ಸಿಲಿಕಾನ್ ಸಿಟಿಗೆ ಕಾಲಿಟ್ಟ ಈ ಕುಟುಂಬದ ಮೇಲೆ ಬಿದ್ದಿದ್ದು ಬರೋಬ್ಬರಿ ಎಂಭತ್ತಕ್ಕೂ ಅಧಿಕ ಕೇಸುಗಳು. ಕಳ್ಳತನ, ದರೋಡೆ, ಅತ್ಯಾಚಾರ, ಸರಣಿ ಕೊಲೆಗಳು… ಒಂದು ಗ್ಯಾಂಗು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಪರಾಧವೆಸಗಲು ಸಾಧ್ಯವಾ? ಇಂಥದ್ದೊಂದು ಪ್ರಶ್ನೆ ಇವತ್ತಿಗೂ ಜೀವಂತವಾಗೇ ಇದೆ.
ಹೀಗಿರುವಾಗಲೇ ನಾಲ್ಕು ವರ್ಷಗಳ ಹಿಂದೆ ದಂಡುಪಾಳ್ಯ ಅನ್ನೋದೊಂದು ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಪಕ್ಕಾ ಪೊಲೀಸ್ ವರದಿಯನ್ನು ಆಧರಿಸಿದಂತಿತ್ತು. ಅಲ್ಲಿ ದಂಡುಪಾಳ್ಯದ ಹಂತಕರನ್ನು ಮಟ್ಟಹಾಕಿದ ಇನ್ಸ್‌ಪೆಕ್ಟರ್ ಚಲಪತಿಯೇ ಹೀರೋ. ಈ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಅನೇಕ ಬುದ್ಧಿಜೀವಿಗಳು, ಪ್ರಗತಿಪರರೆನಿಸಿಕೊಂಡವರು ಎದ್ದುನಿಂತು ಗುಡುಗಿದ್ದರು. ”ಬದುಕನ್ನರಸಿ ಬೆಂಗಳೂರಿಗೆ ಬಂದ, ಹೊಟ್ಟೆಪಾಡಿಗಾಗಿ ಸಣ್ಣ ಪುಟ್ಟ ಕೃತ್ಯವೆಸಗಿಕೊಂಡಿದ್ದ ಅಮಾಯಕ ಜನರ ಮೇಲೆ ಪೊಲೀಸರು ಸುಳ್ಳು ಕೇಸು ಹಾಕಿದ್ದಾರೆ. ಅದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾವನ್ನು ಪೊಲೀಸರ ದೃಷ್ಟಿಯಲ್ಲಿ ವೈಭವೀಕರಿಸಿದ್ದಾರೆ” ಎಂದೆಲ್ಲಾ ಆಕ್ಷೇಪಿಸಿದ್ದರು.
ಬಹುಶಃ ಆ ಎಲ್ಲಾ ಆಕ್ಷೇಪಣೆಗೂ ಉತ್ತರದಂತೆ ಮೂಡಿಬಂದಿರೋ ಸಿನಿಮಾ `ದಂಡುಪಾಳ್ಯ-2′. ಮೊದಲ ಭಾಗದಲ್ಲಿ ಯಾವ ಪೊಲೀಸ್ ಅಧಿಕಾರಿ ಹೀರೋ ಥರಾ ಕಂಡಿದ್ದನೋ ಅದೇ ವ್ಯಕ್ತಿ ಇಲ್ಲಿ ಅಕ್ಷರಶಃ ಖಳನಾಯಕನಂತೆ ಕಾಣುತ್ತಾನೆ. ಯಾವ ದಂಡು ಪಾಳ್ಯದ ಗ್ಯಾಂಗಿನ ಚಿತ್ರಣವನ್ನು ಕಂಡು ಪ್ರೇಕ್ಷಕರು ನಟಿಕೆ ಮುರಿದು ಸೀಟಿನಿಂದ ಎದ್ದಿದ್ದರೋ ಅದೇ ಜನ ಈಗ `ಪಾಪ ಅಮಾಯಕರು’ ಎನ್ನುತ್ತಾ ಥಿಯೇಟರಿನಿಂದ ಹೊರಬರುತ್ತಿದ್ದಾರೆ.
ಇಂಡಿಯನ್ ಎಕ್ಸ್ ಪ್ರೆಸ್ ದೈನಿಕದ ಪತ್ರಕರ್ತೆಯೊಬ್ಬರು (ಶೃತಿ) ಮರಣದಂಡನೆಗೆ ಗುರಿಯಾದ, `ದಂಡುಪಾಳ್ಯದ ಹಂತಕರು’ ಎಂದು ಬಿಂಬಿಸಲ್ಪಟ್ಟವರ ಪರವಾಗಿ ವರದಿ ಮಾಡಲು ಮುಂದಾಗುತ್ತಾರೆ. ಆ ಮೂಲಕ ಅಸಲಿ ಪ್ರವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲ ಭಾಗದಲ್ಲಿದ್ದಂತೆ ಹಂತಕ ಪಡೆ ಅಮಾಯಕರ ಕತ್ತು ಸೀಳುವ ದೃಶ್ಯಗಳು ಇಲ್ಲಿಲ್ಲ. ಬದಲಿಗೆ ಪೊಲೀಸರು ದಂಡುಪಾಳ್ಯದ ಸದಸ್ಯರಿಗೆ ಕೊಟ್ಟ ಟಾರ್ಚರು ಹೇಗಿತ್ತನ್ನೋದು ಪ್ರೇಕ್ಷಕರ ಅನುಭವಕ್ಕೇ ಬರುವಂತೆ ಕಟ್ಟಿಕೊಟ್ಟಿದ್ದಾರೆ!
ಹಾಗೆ ನೋಡಿದರೆ ಕಡಿಮೆ ಅವಧಿಯ ಈ ಚಿತ್ರ ಒಂದು ಪೂರ್ತಿ ಸಿನಿಮಾವನ್ನು ನೋಡಿದ ಅನುಭವವನ್ನಂತೂ ನೀಡೋದಿಲ್ಲ. ಬಹುಶಃ `ಬಾಹುಬಲಿ’ ಸಿನಿಮಾದಂತೆ ಇಲ್ಲೂ ಕೂಡಾ ಇಡೀ ಸಿನಿಮಾ ಚಿತ್ರೀಕರಣಗೊಂಡಮೇಲೆ ಅದು ದೀರ್ಘಗೊಂಡು, ಕತ್ತರಿಸಲೂ ಆಗದೆ ಎರಡು ಭಾಗಗಳನ್ನಾಗಿ ಮಾಡಿದಂತೆ ಕಾಣುತ್ತದೆ. ಹೀಗಾಗಿ ಮುಂದಿನ ಭಾಗ ಅಂದರೆ, ಪಾರ್ಟ್-3ರನ್ನು ಇದೇ ಆಗಸ್ಟ್ ನಲ್ಲಿ ತೋರಿಸೋದಾಗಿ ಹೇಳಿ ಎರಡನೇ ಭಾಗಕ್ಕೆ `ಅಲ್ಪ’ವಿರಾಮ ಹಾಕಿದ್ದಾರೆ.
ಹಿಂದಿನ ಭಾಗ ನೋಡಿದವರು, ಮುಂದಿನ ಪಾರ್ಟನ್ನೂ ನೋಡಲಿಚ್ಚಿಸುವವರು 2ನೇ ಭಾವನ್ನು ನೋಡಲೇಬೇಕಾದ ಸಿನಿಮಾ ಇದಾಗಿದೆ.
ಒಟ್ಟಾರೆ ಸಿನಿಮಾದ ಹೈಲೇಟೆಂದರೆ, ಸಂಭಾಷಣೆ. ಗುರುರಾಜ ದೇಸಾಯಿ ಅವರು ಬರೆದ ಸಾಲುಗಳು ಅಮಾಯಕರೆದೆಯಿಂದ ಹುಟ್ಟಿಕೊಂಡ ಆಕ್ರಂದನದ ದನಿಯಾಗಿ ಹೊರಹೊಮ್ಮಿದೆ. ಇನ್ನು ನಿರ್ದೇಶನ, ಕಲಾವಿದರ ನಟನೆ ಎಲ್ಲವೂ ಮೊದಲ ಭಾಗದಂತೆಯೇ ಮುಂದುವರೆದಿದೆ.

Leave a Reply

Your email address will not be published. Required fields are marked *


CAPTCHA Image
Reload Image