One N Only Exclusive Cine Portal

ದರ್ಶನ್ ಇಮೇಜಿನಾಚೆಗೆ ಮನಸು ತಾಕಿದ ತಾರಕ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪ್ರತೀ ಚಿತ್ರ ಬಿಡುಗಡೆಯಾಗೋ ಹೊತ್ತಿಗೂ ನಿರೀಕ್ಷೆಯೆಂಬುದು `ತಾರಕ’ಕ್ಕೇರಿರುತ್ತದೆ. ಅಂಥಾದ್ದೇ ಭರಪೂರ ಖದರಿನೊಂದಿಗೆ `ತಾರಕ್ ಚಿತ್ರ ತೆರೆ ಕಂಡಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಈ ಅವರೆಗೆ ಅನಾವರಣಗೊಂಡಿದ್ದ ಸ್ಟಿಲ್ಲುಗಳು, ಟೀಸರ್ ಮುಂತಾದವುಗಳಲ್ಲಿ ದರ್ಶನ್ ಲುಕ್ಕು ಬದಲಾಗಿದೆ ಎಂಬ ಸ್ಪಷ್ಟ ಸೂಚನೆ ಸಿಕ್ಕಿತ್ತು. ಆದರೀಗ ಬಿಡುಗಡೆಯಾಗಿರೋ ತಾರಕ್ ದರ್ಶನ್ ಅವರ ಈವರೆಗಿನ ಇಮೇಜ್ ಮೀರಿ ಅಭಿಮಾನಿಗಳನ್ನು ಆವರಿಸಿಕೊಳ್ಳೋ ಎಲ್ಲಾ ಲಕ್ಷಣಗಳನ್ನೂ ನಿಚ್ಚಳವಾಗಿಸಿದೆ.

ಚಾಲೆಂಜಿಂಗ್ ಸ್ಟಾರ್ ಸಿನಿಮಾ ಅಂದರೆ, ಮೈ ನವಿರೇಳಿಸೋ ಫೈಟು, ಬಿಲ್ಡಪ್ಪು ಮಾಮೂಲು. ಅದೆಲ್ಲವನ್ನೂ ಒಳಗೊಂಡೇ ಮತ್ಯಾವುದರತ್ತಲೋ ಹೊರಳಿಕೊಂಡಿರೋದು ತಾರಕ್ ಚಿತ್ರದ ಪ್ರಮುಖ ಸ್ಪ್ಪೆಷಾಲಿಟಿ. ಬಹುಶಃ ದರ್ಶನ್ ಅವರ ಈ ಹಿಂದಿನ ಸಿನಿಮಾಗಳನ್ನು ಗಮನಿಸಿದರೆ ಅದು ಅವರ ಅಭಿಮಾನಿಗಳಿಗೆಂದೇ ರೂಪಿಸಿದ ಸಿನಿಮಾ ಎಂಬ ಭಾವ ಮೂಡಿಸುತ್ತಿದ್ದವು. ಆದರೆ `ತಾರಕ್’ ಅಭಿಮಾನಿಗಳ ಆಚೆಗೂ ಎಲ್ಲ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಆಗಿ ಹೊರಹೊಮ್ಮಿದೆ.
ಒಂದು ಕುಟುಂಬ, ಪ್ರೀತಿ, ಮದುವೆ, ಅಸಮಧಾನ, ಗೊಂದಲಗಳು – ತಾತ ಮತ್ತು ಮೊಮ್ಮಗನ ಬಾಂಧವ್ಯ ಅವೆಲ್ಲವನ್ನೂ ಮೀರುವಂತೆ ಮಾಡಿ ಎಂಥವರ ಕಣ್ಣಲ್ಲೂ ಹನಿಯುಕ್ಕುವಂತೆ ಮಾಡುವ ಕಥೆ ತಾರಕ್ ಚಿತ್ರದ್ದು. ಸಾಕು ತಾಯಿಯ ಆಶ್ರಯದಲ್ಲಿ ಹೊರದೇಶದಲ್ಲೇ ಬೆಳೆಯೋ ತಾರಕರಾಮನಿಗೆ ಪ್ರೀತಿ ಪ್ರೇಮದ ಗಂಧವೇ ಗೊತ್ತಿರೋದಿಲ್ಲ. ಇಂಥ ತಾರಕನ ಎದೆಯಲ್ಲಿ ಹುಡುಗಿಯೊಬ್ಬಳು ಪ್ರೀತಿಯ ಗಿಡ ನೆಡುತ್ತಾಳೆ. ಎಲ್ಲವನ್ನೂ ತೊರೆದು ಬದುಕುತ್ತಿದ್ದ ತಾರಕ್ ಮತ್ತೆ ತನ್ನ ಕರುಳ ಬಂಧವನ್ನರಸಿ ತಾತನ ಬಳಿ ಬರುತ್ತಾನೆ. ಎಲ್ಲೋ ಇದ್ದವನು ಇದ್ದಕ್ಕಿದ್ದಂತೆ ಬಂದು ವಾರಸುದಾರನಾಗುತ್ತಿದ್ದಾನೆ ಅನ್ನೋ ಭಯದಲ್ಲಿ ಸುತ್ತಲಿನ ಮನಸ್ಥಿತಿಗಳು ಮಾಡಬಾರದ ಅನಾಚಾರಗಳಿಗೆ ಕೈಯಿಡುತ್ತವೆ. ಈ ನಡುವೆ ಮೊದಲ ಬಾರಿಗೆ ಪ್ರೀತಿಸಿದವಳ ಗುಂಗಲ್ಲಿರುವ ತಾರಕ್ ಎದುರು ಮತ್ತೊಬ್ಬಳು ಬಂದು ನಿಂತಿರುತ್ತಾಳೆ. ಕಡೆಗೆ ತಾರಕ್ ಯಾರನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ? ಅದಕ್ಕೆ ಏನೆಲ್ಲಾ ಕಾರಣಗಳು ಸೃಷ್ಟಿಯಾಗುತ್ತವೆ ಅನ್ನೋದು ತಾರಕ್ ಚಿತ್ರದ ಕಥೆಯ ಎಳೆ.
ದರ್ಶನ್ ಸಿನಿಮಾಗಳೆಂದರೆ, ಸಿಕ್ಕಾಪಟ್ಟೆ ಬಿಲ್ಡಪ್ಪು, ಮಾಸ್ ಡೈಲಾಗುಗಳು ತುಂಬಿರುತ್ತವೆ ಅನ್ನೋದು ಇಲ್ಲೀವರೆಗಿನ ಫಾರ್ಮುಲಾ ಆಗಿತ್ತು. ತಾರಕ್ ಅವೆಲ್ಲ ಫಾರ್ಮುಲಾಗಳನ್ನು ಒಂದೇ ಏಟಿಗೆ ಬ್ರೇಕ್ ಮಾಡಿದೆ. ಎದುರಾಳಿಯ ಎದೆಗೆ ಆಯುಧಗಳಿಂದ ಇರಿದು ಕಣ್ಣೀರು ತರಿಸುತ್ತಿದ್ದ ದರ್ಶನ್ ಈ ಚಿತ್ರದಲ್ಲಿ ತಮ್ಮ ಸಹಜ ನಟನೆಯಿಂದ, ತಾವೂ ಕಣ್ಣೀರಿಡುತ್ತಾ ನೋಡುಗರ ಕಣ್ಣನ್ನೂ ತೇವಗೊಳಿಸುತ್ತಾರೆ. ಇನ್ನು ದರ್ಶನ್ ಎದುರು ತಾತನಾಗಿ ಅಭಿನಯಿಸಿರುವ ದೇವರಾಜ್ ಕೂಡಾ ಅದ್ಭುತ ಎನಿಸುವಂತ ನಟನೆ ನೀಡಿದ್ದಾರೆ. ಶಾನ್ವಿ ಮತ್ತು ಶೃತಿ ಹರಿಹರನ್ ಕೂಡಾ ಹೇಳಿ ಮಾಡಿಸಿದಂತ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಅವರ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾಗೆ ಎಷ್ಟು ಬೇಕೋ ಅಷ್ಟು ಮಾತ್ರ ಇದೆ. ಕೃಷ್ಣ ಕುಮಾರ್ ಕ್ಯಾಮೆರಾ ಕೆಲಸ ಅಚ್ಚುಕಟ್ಟು. ಒಟ್ಟಾರೆ ತಾರಕ್ ಕೌಟುಂಬಿಕ ಮನರಂಜನಾ ಸಿನಿಮಾ. ಮನೆಮಂದಿಯೆಲ್ಲಾ, ಅದರಲ್ಲಿಯೂ ಹೆಣ್ಣುಮಕ್ಕಳು ಅಪಾರವಾಗಿ ಇಷ್ಟಪಡುವ ಅನೇಕ ಅಂಶಗಳು `ತಾರಕ್’ ಒಳಗೊಂಡಿದೆ.
ದರ್ಶನ್ ಅಪಾರ ಪ್ರಮಾಣದ ಮಹಿಳಾ ಅಭಿಮಾನಿಗಳನ್ನು ಹೊಂದಿರುವವರು. ತಾರಕ್ ಅಂಥಾ ಮಹಿಳಾ ಅಭಿಮಾನಿಗಳನ್ನು ಖುಷಿಗೊಳಿಸುತ್ತಲೇ ಅವರ ಮಾಸ್ ಅಭಿಮಾನಿಗಳನ್ನೂ ತೃಪ್ತಗೊಳಿಸುವಂತೆ ಇಡೀ ಚಿತ್ರವನ್ನು ರೂಪಿಸಿರೋದು ನಿರ್ದೇಶಕ ಮಿಲನ ಪ್ರಕಾಶ್ ಅವರ ಕಸುಬುದಾರಿಕೆಗೆ ಸ್ಪಷ್ಟ ಸಾಕ್ಷಿ. ಒಟ್ಟಾರೆಯಾಗಿ ದರ್ಶನ್ ಇಲ್ಲಿ ಪಕ್ಕಾ ಭಾವುಕ ನಟನೆಯ ಮೂಲಕ ಪ್ರತೀ ಫ್ರೇಮಿನಲ್ಲಿಯೂ ಅಚ್ಚರಿ ಹುಟ್ಟಿಸುತ್ತಾರೆ. ಆ ಮೂಲಕವೇ ಎಂಥಾ ಪಾತ್ರಕ್ಕಾದರೂ ಸೈ ಎಂಬುದನ್ನೂ ಸಾರಿದ್ದಾರೆ. ದರ್ಶನ್ ತಾರಕ್ ಮೂಲಕ ತಾವೇ ತಾವಾಗಿ ಇದುವರೆಗಿನ ಏಕತಾನತೆಯನ್ನು ಮೀರಿಕೊಂಡಿದ್ದಾರೆ. ಆ ಖುಷಿ ಅವರ ಅಭಿಮಾನಿಗಳ ಮುಖದಲ್ಲಿಯೂ ಲಕ ಲಕಿಸುತ್ತಿರೋದು ತಾರಕ್ ಚಿತ್ರದ ನಿಜವಾದ ಯಶಸ್ಸು!

 

1 thought on “ದರ್ಶನ್ ಇಮೇಜಿನಾಚೆಗೆ ಮನಸು ತಾಕಿದ ತಾರಕ್!

Leave a Reply

Your email address will not be published. Required fields are marked *


CAPTCHA Image
Reload Image