One N Only Exclusive Cine Portal

ನಂದಕಿಶೋರ್ ಕೈಹಿಡಿದೆತ್ತಿದ್ದರು ಕಿಚ್ಚ ಸುದೀಪ…

ಆತ ಕನ್ನಡದ ದೈತ್ಯ ಪ್ರತಿಭೆಯ ಕುಡಿ….
ಸುದೀಪ್ ನಿರ್ದೇಶನದ ‘#72 ಶಾಂತಿನಿವಾಸ’, ‘ಕೆಂಪೇಗೌಡ’, ಎಂಎಸ್ ರಮೇಶ್ ಅವರ ‘ತಾಕತ್’, ‘ಉಯ್ಯಾಲೆ’ ಸೇರಿದಂತೆ ಒಂದಷ್ಟು ಕನ್ನಡ ಚಿತ್ರಗಳಿಗೆ ಅಸೋಸಿಯೇಟ್ ಆಗಿ ದುಡಿದು ನಂತರ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಕಲಾವಿದನಾಗಿ ನಟಿಸಿ… ಇವತ್ತಿಗೆ ವಿಕ್ಟರಿ, ಅಧ್ಯಕ್ಷ, ರನ್ನ ಮತ್ತು ಮುಕುಂದ ಮುರಾರಿಯಂಥ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ನಿರ್ದೇಶಕ ಎಂದೆಲ್ಲಾ ಹೆಸರು ಮಾಡಿರುವ ನಿರ್ದೇಶಕ ನಂದಕಿಶೋರ್.

ಇಂಥ ನಂದಕಿಶೋರ್‌ಗೆ ಏಳೆಂಟು ವರ್ಷಗಳ ಸ್ವತಂತ್ರ್ಯ ನಿರ್ದೇಶಕನಾಗಬೇಕೆಂಬುದು ಕನಸು. ಎಲ್ಲ ಸರಿಹೋಗಿದ್ದರೆ ಆ ಹೊತ್ತಿಗೆ ನಂದಕಿಶೋರ್ ನಿರ್ದೇಶಕನಾಗಿ ಪರಿಚಯಗೊಳ್ಳಬೇಕಿತ್ತು. ಕಷ್ಟಪಟ್ಟು ಸ್ಕ್ರಿಪ್ಟು ಸಿದ್ದಪಡಿಸಿಕೊಂಡು, ಅನಿವಾಸಿ ಭಾರತೀಯ ನಿರ್ಮಾಪಕರೊಬ್ಬರನ್ನು ಅಪ್ರೋಚ್ ಕೂಡಾ ಮಾಡಿದ್ದರು. ಆ ನಿರ್ಮಾಪಕರೂ ಚಿತ್ರ ನಿರ್ಮಿಸಲು ಒಪ್ಪಿ ಅದಾಗಲೇ ಒಂದೂಕಾಲು ಕೋಟಿರುಪಾಯಿಗಳನ್ನು ನಂದಕಿಶೋರ್ ಖಾತೆಗೆ ಜಮೆ ಮಾಡಿಯೂ ಆಗಿತ್ತು. ಆ ನಿರ್ಮಾಪಕರು ವಿದೇಶದಿಂದ ಬಂದು ಅಗ್ರಿಮೆಂಟಿಗೆ ಸಹಿ ಹಾಕುವುದೊಂದೇ ಉಳಿದಿತ್ತು. ದೂರದ ದುಬೈನಿಂದ ಹೊರಟುಬಂದ ನಿರ್ಮಾಪಕ ಇನ್ನೇನು ಮಂಗಳೂರಿನಲ್ಲಿ ಬಂದು ಇಳಿಯಬೇಕು. ಅಷ್ಟೊತ್ತಿಗೆ ವಿಮಾನ ದುರಂತಕ್ಕೀಡಾಗಿ ನಿರ್ಮಾಪಕನ ಮನೆಯ ಮೂವರು ಪ್ರಾಣಬಿಟ್ಟಿದ್ದರು.
ಸಿನಿಮಾ ಆರಂಭವಾಗೇಹೋಯ್ತು ಎಂಬ ಸಂಭ್ರಮದಲ್ಲಿದ್ದ ನಂದಕಿಶೋರ್‌ಗೆ ಒಮ್ಮೆಲೇ ಪ್ರಪಂಚ ಮಗುಚಿಬಿದ್ದಹಾಗಾಗಿತ್ತು. ಬದುಕೇ ಬೇಡ ಎಂಬಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದರು. ನೂರಾರು ಕನಸು ಹೊತ್ತಿದ್ದವರು ಮುಂದಿನ ದಾರಿ ಕಾಣದೆ ಭ್ರಮನಿರಸನಗೊಂಡಿದ್ದರು… ಈ ಹೊತ್ತಿಗೆ ದಾವಣಗೆರೆಯಲ್ಲಿ ‘ಸ್ಯಾಂಡಲ್ ವುಡ್’ನವರ ಕ್ರಿಕೆಟ್ ಟೂರ್ನಮೆಂಟ್ ಆರೇಂಜ್ ಆಗಿತ್ತು. ಅಲ್ಲಿ ನಂದನ ಎದುರು ಸಿಕ್ಕ ಸುದೀಪ್ ‘ಈಗೇನ್ ಮಾಡ್ತಿದೀಯ’ ಎಂದರು. ‘ಏನೂ ಮಾಡದೇ ಹಾಗೇ ಇದ್ದೀನಿ’ ಎಂದಿದ್ದರು ನಂದಕಿಶೋರ್. ‘ಬಾ ನನ್ನೊಟ್ಟಿಗೆ’ ಎಂದು ಕರೆದುಕೊಂಡು ಬಂದವರು ‘ಕೆಂಪೇಗೌಡ’ ಚಿತ್ರಕ್ಕೆ ಸಹಾಯಕನಾಗಿ ನೇಮಿಸಿಕೊಂಡರು. ಇತ್ತ ನಿರ್ದೇಶನ, ನಟನೆ ಎರಡೂ ಜವಾಬ್ದಾರಿ ಹೊತ್ತಿದ್ದ ಸುದೀಪ್‌ಗೆ ನಂದ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಹಗಲೂ ರಾತ್ರಿಯೆನ್ನದೆ ನಿದ್ರೆಗೆಟ್ಟು ಸಿನಿಮಾ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಎಲ್ಲರ ಪರಿಶ್ರಮಕ್ಕೆ ಫಲವೆಂಬಂತೆ ಸಿನಿಮಾ ಆಗ ಸೂಪರ್ ಹಿಟ್ ಆಗಿತ್ತು.
ಕೆಂಪೇಗೌಡ ಸಿನಿಮಾ ಆ ಮಟ್ಟಕ್ಕೆ ಬರಲು ಹೆಚ್ಚು ಶ್ರಮ ವಹಿಸಿದ ನಂದನ ಸಿನಿಮಾ ಪ್ರೀತಿ, ಉತ್ಸಾಹ, ವೃತ್ತಿಪರತೆಯನ್ನು ಕಂಡ ಸುದೀಪ್ ನಂದಕಿಶೋರ್‌ಗೆ ‘ಡೈರೆಕ್ಟರ್ ಕ್ಯಾಪ್ ತೊಡಿಸಿದ್ದರು.
ಹೀಗೆ ಎಲ್ಲ ಅಡ್ಡಿ ಆತಂಕಗಳನ್ನೂ ಮೀರಿ ನಿರ್ದೇಶನದ ಬಯಕೆಯ ಬೆನ್ನೇರಿ ಬಂದ ಈ ‘ದೈತ್ಯ’ ಪ್ರತಿಭೆ ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಖಳನಟ ಸುಧೀರ್ ಅವರ ಹಿರಿ ಮಗ!
ಹೀರೋ ಆಗುವ ಪ್ರಯತ್ನ ಮಾಡಿ ವಿಫಲವಾಗಿ ಈಗ ಸಪೋರ್ಟಿಂಗ್ ಕ್ಯಾರೆಕ್ಟರ್‌ಗಳಿಗೇ ಸೀಮಿತವಾಗಿರುವ ಸಹೋದರ ತರುಣ್‌ನನ್ನೂ ನಂದ ತನ್ನ ಚಿತ್ರದ ಕ್ರಿಯೇಟೀವ್ ಟೀಮ್‌ನಲ್ಲಿರಿಸಿಕೊಂಡು, ಈಗ ಅವರನ್ನೂ ನಿರ್ದೇಶಕನನ್ನಾಗಿ ಮಾಡಿದ್ದಾರೆ. ಸುಧೀರ್ ಪತ್ನಿ ಮಾಲತಿ ಸಹ ರಂಗಭೂಮಿ ನಟಿ. ಸುಧೀರ್ ಅವರು ಸ್ಥಾಪಿಸಿದ್ದ ‘ಕರ್ನಾಟಕ ಕಲಾ ವೈಭವ ಸಂಘ’ ನಾಟಕ ಸಂಸ್ಥೆ ಇವತ್ತಿಗೂ ಜೀವಂತವಾಗಿದೆ. ಬೆಂಗಳೂರಿನ ಗುಬ್ಬಿವೀರಣ್ಣ ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನ ನಡೆಸುತ್ತಲೇ ಬಂದಿದ್ದಾರೆ. ತಾಯಿಯೊಟ್ಟಿಗೆ ರಂಗಭೂಮಿಯಲ್ಲಿದ್ದುಕೊಂಡು ನಟನೆ ಮಾತ್ರವಲ್ಲದೆ, ಸ್ಟೇಜ್ ಜೋಡಿಸುವುದರಿಂದ ಹಿಡಿದು ಟಿಕೇಟು ಹರಿಯುವುದರ ತನಕ ಎಲ್ಲ ಕೆಲಸವನ್ನೂ ನಿಭಾಯಿಸಿರುವ ‘ರಂಗಕರ್ಮಿ’ ಈ ನಂದಕಿಶೋರ. ತಂದೆ ಸುಧೀರ್ ತೀರಿಕೊಂಡಾಗ ಮನನೊಂದ ನಂದ ಎರಡು ವರ್ಷಗಳ ಮನೆಯಿಂದ ಹೊರಕ್ಕೆ ಕದಲದ ಕಾರಣ ನಂದಕಿಶೋರ್ ದೇಹ ಒಬೇಸಿಟಿಯಿಂದ ಎರ್ರಾಬಿರ್ರಿ ಉಬ್ಬಿಹೋಗಿತ್ತು. ಈಗ ಕಷ್ಟಪಟ್ಟು ಒಂದಿಷ್ಟು ತೆಳ್ಳಗಾಗಿರುವ ನಂದಕಿಶೋರ್ ‘ಟೈಗರ್ ಥರಾ ಕಂಗೊಳಿಸುತ್ತಿದ್ದಾರೆ.
ಯಾವ ವಿಮಾನ ದುರಂತ ನಂದಕಿಶೋರ್ ಕನಸಿಗೆ ಕೊಳ್ಳಿ ಇಟ್ಟಿತ್ತೋ ಅದು ಘಟಿಸಿ ಇವತ್ತಿಗೆ ಏಳು ವರ್ಷ ಕಳೆದಿದೆ. ಆದರೆ, ನಂದಕಿಶೋರ್ ಅವರ ಸಿನಿಮಾ ಯಾನ ದೊಡ್ಡ ಎತ್ತರದಲ್ಲಿದೆ. ಅದು ಹೀಗೇ ಮುಂದುವರೆಯಲಿ…

Leave a Reply

Your email address will not be published. Required fields are marked *


CAPTCHA Image
Reload Image