One N Only Exclusive Cine Portal

ನಗಿಸಿ ಅಳಿಸಿ ಕಾಡಿಸುವ ಹ್ಯಾಪಿ ನ್ಯೂ ಇಯರ್!


ಹ್ಯಾಪಿ ನ್ಯೂ ಇಯರ್ ಸಿನಿಮಾ ರಿಲೀಸಾಗಿದೆ. ನಿರ್ದೇಶಕರಾಗಿ ಖ್ಯಾತಿ ಗಳಿಸಿದ್ದ ಟಿ.ಎಸ್. ನಾಗಾಭರಣ ಪುತ್ರ ಪನ್ನಗ ಭರಣರ ಮೊದಲ ಚಿತ್ರ, ಐವರು ಹೀರೋಗಳು ಇರುವುದು, ಐದು ವರ್ಷಗಳ ನಂತರ ಬಿಸಿ ಪಾಟೀಲ್ ಬಣ್ಣ ಹಚ್ಚಿರೋ ಸಿನಿಮಾ, ರಘು ಧೀಕ್ಷಿತ್ ಸಂಗೀತ ನೀಡಿರೋದು… ಹೀಗೆ ಈ ಸಿನಿಮಾ ನಾಲ್ಕಾರು ಕಾರಣಕ್ಕೆ ಪ್ರೇಕ್ಷಕರು ಮತ್ತು ಸಿನಿಮಾ ವಲಯದಲ್ಲಿ ಮುಖ್ಯವಾಗಿತ್ತು.
ಕಲಾತ್ಮ ಮತ್ತು ಕೌಂಟುಂಬಿಕ, ಗ್ರಾಮೀಣ ಸೊಗಡಿನ ಸಿನಿಮಾಗಳ ಮೂಲಕ ಹೆಸರು ಮಾಡಿದವರು ನಾಗಾಭರಣ. ಪನ್ನಗ ಭರಣ ‘ಹ್ಯಾಪಿ ನ್ಯೂ ಇಯರ್’ ಎನ್ನುವ ಇಂಗ್ಲಿಷ್ ಟೈಟಲ್ಲಿನೊಟ್ಟಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಲೇ ‘ಬಹುಶಃ ತಂದೆಯ ಟೇಸ್ಟಿಗಿಂತಾ ಭಿನ್ನವಾದ ಕಥಾವಸ್ತು ಆಯ್ಕೆ ಮಾಡಿಕೊಂಡಿರಬಹುದು’ ಎಂದು ಬಹುತೇಕರು ಅಂದಾಜಿಸಿದ್ದರು. ಸಿನಿಮಾ ನೋಡಿಬಂದವರ ಪ್ರಕಾರ ಆ ಊಹೆ ನಿಜವಾಗಿದೆ. ಯಾಕೆಂದರೆ, ಇವತ್ತಿನ ಕಾಲಘಟ್ಟದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಈಗಿನ ಪ್ರೇಕ್ಷಕರು ಯಾವುದನ್ನು ಬಯಸುತ್ತಾರೋ ಆ ಎಲ್ಲಾ ಅಂಶಗಳನ್ನು ಒಟ್ಟುಮಾಡಿ ‘ಹ್ಯಾಪಿ ನ್ಯೂ ಇಯರ್’ ರೂಪಿಸಿದ್ದಾರೆ ಪನ್ನಗ.
ಸಿನಿಮಾ ಒಂದೇ ಆದರೂ ಒಂದಕ್ಕೊಂದು ಸಂಬಂಧವೇ ಇಲ್ಲದ ಐದು ಕಥೆಗಳನ್ನು ಈ ಚಿತ್ರದಲ್ಲಿ ತೆರೆದಿಟ್ಟಿದ್ದಾರೆ. ಎಲ್ಲವೂ ಇದ್ದು ಏನೋ ಕೊರತೆಯ ನಡುವೆ ಬದುಕುವ ದಂಪತಿಗಳಾಗಿ ಸಾಯಿಕುಮಾರ್-ಸುಧಾರಾಣಿ, ನಿಷ್ಠಾವಂತ ಪೊಲೀಸ್ ಪೇದೆ ಪಾತ್ರದಲ್ಲಿ ವಿಜಯರಾಘವೇಂದ್ರ, ಪತ್ನಿಯಾಗಿ ಸೋನು ಗೌಡ, ನವಪ್ರೇಮಿಗಳಾಗಿ ದಿಗಂತ್-ಸೃಷ್ಟಿ ಪಾಟೀಲ್, ರೇಡಿಯೋ ಜಾಕಿ ಧನಂಜಯ ಮತ್ತು ಆತನ ಅನಾರೋಗ್ಯಪೀಡಿತ ಗೆಳತಿಯಾಗಿ ಶೃತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ರೇಡಿಯೋ ಜಾಕಿ ಧನಂಜಯ ಐದು ವೆರೈಟಿಯ ಕಥೆ ಹೇಳುವಂತೆ ಆರಂಭಗೊಂಡು ಸಿನಿಮಾ ಮುಕ್ತಾಯವಾಗುತ್ತದೆ.
ಐದು ಕಥೆಯಲ್ಲಿ ಮೂರು ಕತೆ ಮಾತ್ರ ಒಂದಕ್ಕೊಂದು ಲಿಂಕು ಪಡೆಯುತ್ತದೆ. ಬಿ.ಸಿ. ಪಾಟೀಲ್ ಮತ್ತು ದಿಗಂತ್ ಕತೆ ಒಂದಕ್ಕೊಂದು ಬೆಸೆದುಕೊಳ್ಳದೆ ಸಪರೇಟು ಟ್ರ್ಯಾಕಲ್ಲೇ ಉಳಿದುಬಿಡುತ್ತದೆ. ಐದು ಬೇರೆ ಬೇರೆ ಕತೆಗಳು ಒಟ್ಟಿಗೇ ಸಾಗುವುದರಿಂದ ಯಾವ ಕತೆ ಮತ್ತು ಯಾರ ನಟನೆ ಹೆಚ್ಚು ಪರಿಣಾಮಕಾರಿಯಾಗಿದೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಈ ನಿಟ್ಟಿನಲ್ಲಿ ನೋಡಿದರೆ ವಿಜಯರಾಘವೇಂದ್ರ ನಟಿಸುವುದನ್ನೇ ಮರೆತು ತೀರಾ ನೈಜವಾಗಿ, ಚೆಂದಗೆ ಪಾತ್ರ ನಿರ್ವಹಿಸಿದ್ದಾರೆ. ಹಾಗೆಯೇ ಸಾಯಿಕುಮಾರ್ ಕೂಡಾ ಸೀರಿಯಸ್ಸಾಗಿ ನಟಿಸಿಯೂ ಹಾಸ್ಯವನ್ನು ಹುಟ್ಟಿಸಬಹುದು ಅಂತಾ ತೋರಿದ್ದಾರೆ. ನಾವೇನು ಕಡಿಮೆ ಅಂಥಾ ಧನಂಜಯ ಮತ್ತು ಶೃತಿ ಹರಿಹರನ್ ಕೂಡಾ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಅದರಲ್ಲೂ ವಿಜಯರಾಘವೇಂದ್ರ ಮತ್ತು ಧನಂಜಯ ನೋಡುಗರ ಮನಸ್ಸಿಗೆ ಹತ್ತಿರವಾಗಿಬಿಡುತ್ತಾರೆ. ಸಿನಿಮಾದುದ್ದಕ್ಕೂ ಹಾಸಿಗೆಯಲ್ಲೇ ಮಲಗಿ ಭಾವನೆಗಳ ಮೂಲಕವೇ ನಟನೆಯನ್ನು ಹೊರಹಾಕಿರೋ ಶೃತಿಹರಿಹರನ್ ನಿಜಕ್ಕೂ ಗ್ರೇಟ್. ಬಿ ಸಿ ಪಾಟೀಲ್ ನಟಿಸಿ ಬಹಳ ವರ್ಷವಾದರೂ ಇನ್ನೂ ಅದೇ ಹಳೇ ಖದರ್ರು ಉಳಿಸಿಕೊಂಡಿದ್ದಾರೆ. ಪನ್ನಗ ಭರಣ ಮೊದಲ ಚಿತ್ರದಲ್ಲಿ ಪ್ರಮುಖವಾಗಿ ಗೆದ್ದಿರುವುದು ಪಾತ್ರಗಳ ಆಯ್ಕೆಯಲ್ಲಿ ಮತ್ತು ಪ್ರತಿಯೊಬ್ಬರಿಗೂ ಅವರಿಗೆ ಹೊಂದುವಂಥ ಕ್ಯಾರೆಕ್ಟರುಗಳನ್ನು ಕೊಡುವಲ್ಲಿ.
ಇನ್ನು ಸಿನಿಮಾದ ಮೊದಲ ಭಾಗ ಎಳೆದಂತೆ ಕಾಣುತ್ತದೆ. ಹಾಗೆ ಎಳೆಯೋದರ ಬದಲಾಗಿ ಇನ್ನಷ್ಟು ಕಂಟೆಂಟ್ ಸೇರಿಸಿದ್ದರೆ ಚೆನ್ನಾಗಿರುತ್ತಿತ್ತು. ನಮ್ಮ ನಮ್ಮ ನಡುವೆಯೇ ಇರುವವರ ಬದುಕಿನ ಬಿಡಿ ಚಿತ್ರಗಳನ್ನು ಕಂಡಂಥಾ ಅನುಭವ ನೀಡುವ ಹ್ಯಾಪಿ ನ್ಯೂ ಇಯರ್ ನಗಿಸಿ, ಅಳಿಸಿ, ಕಾಡಿಸುವ ಕಥೆ- ನಿರೂಪಣೆ ಹೊಂದಿದೆ. ಛಾಯಾಗ್ರಹಣ ಹಿತವಾಗಿದೆ. ಮ್ಯೂಸಿಕ್ಕು ಪರವಾಗಿಲ್ಲ. ಐದು ಕಥೆಗಳಿಗೂ ಭಿನ್ನವಾದ ಹಿನ್ನೆಲೆ ಸಂಗೀತ ನೀಡುವ ಪ್ರಯತ್ನ ನಡೆದಿದೆಯಾದರೂ ಅದ್ಯಾಕೋ ವರ್ಕೌಟ್ ಆಗಿಲ್ಲ. ಇಷ್ಟೆಲ್ಲದರ ನಡುವೆಯೂ ಒಮ್ಮೆ ಮನೆಮಂದಿಯೆಲ್ಲಾ ಕೂತು ನೋಡಿಬರಲು ಅಡ್ಡಿಯಿಲ್ಲ.
– ಅರುಣೋದಯ

Leave a Reply

Your email address will not be published. Required fields are marked *


CAPTCHA Image
Reload Image