One N Only Exclusive Cine Portal

ಪನ್ನಗ ಭರಣರ ಹೈಟೆಕ್ ಲೆಕ್ಕಾಚಾರದ ಸುತ್ತಾ…!

ಇಂಗ್ಲಿಷ್ ಪತ್ರಿಕೆಗಳಲ್ಲಿ ಸುದ್ದಿ ಬರೆಸಿದರೆ ಸಿನಿಮಾ ಬರಖತ್ತಾಗುತ್ತಾ?

ಕೆಲವೊಮ್ಮೆ ಚೆಂದದ ಒಂದಷ್ಟು ಚಿತ್ರಗಳೂ ಯಾಕೆ ಸಪ್ಪಗಾಗಿಬಿಡುತ್ತವೆ ಅಂತೊಂದು ಪ್ರಶ್ನೆ ಮುಂದಿಟ್ಟರೆ ‘ಅಯ್ಯೋ… ಈ ಜನರ ಮೆಂಟಾಲಿಟೀನೇ ಅರ್ಥ ಮಾಡ್ಕೊಳೊಕಾಗಲ್ಲ ಕಂಡ್ರೀ… ಕೆಲವೊಮ್ಮೆ ಸಾಮಾನ್ಯ ಅನ್ನಿಸೋ ಚಿತ್ರಗಳನ್ನೂ ಗೆಲ್ಲಿಸ್ತಾರೆ, ಚೆಂದದ ಚಿತ್ರಗಳನ್ನೂ ಮಲಗಿಸ್ತಾರೆ ಎಂಬ ರೀತಿಯಲ್ಲಿ ಬಡಪಾಯಿ ಪ್ರೇಕ್ಷಕರ ಮೇಲೆಯೇ ಗೂಬೆ ಕೂರಿಸುವಂಥಾ ಉತ್ತರಗಳು ರಾಚುತ್ತವೆ. ಹಾಗಾದ್ರೆ ಯಾಕೆ ಸುಮಾರು ಅನ್ನಿಸೋ ಚಿತ್ರಗಳೂ ದೊಡ್ಡ ಯಶ ಕಾಣುತ್ತವೆ ಎಂಬುದಕ್ಕೆ ಉತ್ತರ ಹುಡುಕುತ್ತಾ ಸಾಗಿದರೆ ಅಸಲಿ ವಿಚಾರ ಅನಾವರಣಗೊಳ್ಳುತ್ತದೆ!
ಸದ್ಯ ಇಂಥಾದ್ದೊಂದು ಪ್ರಶ್ನೆಯನ್ನು ನಿಕಷಕ್ಕೊಡ್ಡಲು ಕಾರಣವಾಗಿರೋದು ಪನ್ನಗ ಭರಣ ನಿರ್ದೇಶನದ ಹ್ಯಾಪಿ ನ್ಯೂ ಇಯರ್ ಚಿತ್ರ. ಈ ಚಿತ್ರವನ್ನು ಪನ್ನಗ ನಿಜಕ್ಕೂ ಚೆನ್ನಾಗಿಯೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲೊಂದು ಹೊಸತನವಿದೆ. ಪಾತ್ರಗಳೂ ಕಾಡುವಂತಿವೆ. ನೋಡಿದ ಮಂದಿಯೂ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಮುಖ್ಯ ಚಿತ್ರಮಂದಿರಗಳಿಗೆ ಹೆಚ್ಚು ಜನ ನೋಡಲು ಬಾರದ ಕಾರಣ ಚಿತ್ರದ ಪ್ರದರ್ಶನ ಡಲ್ಲು ಹೊಡೆದಿದೆ.
ಹಾಗಾದರೆ ಚೆಂದಗಿದ್ದರೂ ಯಾಕೆ ಹ್ಯಾಪಿ ನ್ಯೂ ಇಯರ್ ಈ ಪಾಟಿ ಹ್ಯಾಪು ಮೋರೆ ಹಾಕಿಕೊಂಡಿದೆ ಅಂತ ಹುಡುಕ ಹೋದರೆ ಎದುರಾಗೋದು ಪ್ರಚಾರದ ಕೊರತೆ ಮತ್ತು ಪನ್ನಗ ಭರಣರ ಇಂಗ್ಲಿಷ್ ಮಾಧ್ಯಮದ ಮೇಲಿನ ವ್ಯಾಮೋಹ!
ಪನ್ನಗ ಕನ್ನಡ ಮಾಧ್ಯಮಗಳ ಕಡೆ ತಲೆಕೆಡಿಸಿಕೊಂಡೇ ಇಲ್ಲ. ಆದರೆ ಕೆಲ ಇಂಗ್ಲಿಷ್ ಪತ್ರಿಕೆಗಳಲ್ಲಿ ಪೇಯ್ಡ್ ಆರ್ಟಿಕಲ್ ಮತ್ತು ಸಂದರ್ಶನ ಬರೆಸಿ ಖುಷಿ ಪಟ್ಟಿದ್ದಾರೆ. ಕನ್ನಡ ಚಿತ್ರವೊಂದರ ಬಗ್ಗೆ ಇಂಗ್ಲಿಷ್ ಪೇಪರಲ್ಲಿ ಸಂದರ್ಶನ, ಸುದ್ದಿ ಬಂದರೆ ಹೈಪು ಕ್ರಿಯೇಟಾಗಿ ಜನ ಥೇಟರುಗಳಿಗೆ ನುಗ್ಗಿ ಬರುತ್ತಾರೆಂಬ ಭ್ರಮೆ ಭರಣ ಪುತ್ರನಿಗಿತ್ತೇನೋ. ಈತನಿಗೆ ಇಂಗ್ಲಿಷ್ ಪೇಪರಿನವರ ವಿಮರ್ಶೆಯೇ ಸರ್ವಶ್ರೇಷ್ಠ. ಅವರು ಕೊಟ್ಟ ಸ್ಟಾರು ಪರಮಪ್ರಸಾದ. ಆದರೆ ಇಂಗ್ಲಿಷ್ ಪೇಪರುಗಳಲ್ಲಿ ಹ್ಯಾಪಿ ನ್ಯೂ ಇಯರ್ ಬಗ್ಗೆ ಸುದ್ದಿ, ವಿಮರ್ಶೆ ಓದಿ ಮಡಚಿಟ್ಟ ಬುದ್ಧಿವಂತ ಮಂದಿ ಮಾರನೇ ದಿನ ಶಿಸ್ತಾಗಿ ಬಾಹುಬಲಿ ನೋಡಿ ಕೃತಾರ್ಥರಾದರೇನೋ…  ಅಲ್ಲಿಗೆ ಪನ್ನಗ ಭರಣರ ಇಂಗ್ಲಿಷ್ ಲೆಕ್ಕಾಚಾರ ತಲೆ ಕೆಳಗಾಗಿದೆ!
ಸದ್ಯಕ್ಕೆ ಪನ್ನಗ ಭರಣರ ಅತಿ ಬುದ್ಧಿವಂತಿಕೆಯಿಂದಾಗಿ ಹಿಟ್ ಆಗಬೇಕಿದ್ದ ಹ್ಯಾಪಿ ನ್ಯೂ ಇಯರ್ ಚಿತ್ರ ಮೆಚ್ಚುಗೆಗಷ್ಟೇ ಸಮಾಧಾನ ಪಟ್ಟುಕೊಳ್ಳುವಂತಾಗಿದೆ!

Leave a Reply

Your email address will not be published. Required fields are marked *


CAPTCHA Image
Reload Image