One N Only Exclusive Cine Portal

ಪಾರ್ವತಮ್ಮನವರು ಹುಟ್ಟಿದ್ದೇ ಅಣ್ಣಾವ್ರಿಗಾಗಿ!

ಪಾರ್ವತಮ್ಮನವರು ಸುಮಾರು ಎಪ್ಪತ್ತೈದು ಚಿತ್ರಗಳನ್ನು ನಿರ್ಮಿಸಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಹೇಗೆ ಸಾಧ್ಯವಾಯಿತು ಎಂದು ಹುಡುಕುತ್ತಾ ಹೋದರೆ ಕುತೂಹಲಕರವಾದ ವಿಚಾರಗಳು ಕಾಣಸಿಗುತ್ತವೆ. ಪಾರ್ವತಮ್ಮನವರು ಹುಟ್ಟಿದ್ದೇ ಅಣ್ಣಾವ್ರಿಗಾಗಿ ಅನ್ನೋ ಹಾಗೆ ಆಕೆ ಹುಟ್ಟಿದ ಹನ್ನೆರಡನೇ ದಿನಕ್ಕೆ ನಾಮಕರಣ ಮಾಡುವ ಸಂದರ್ಭದಲ್ಲಿ ಡಾ.ರಾಜ್ರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ?ಇವ್ಳು ನಮ್ಮ ಮನೆಯ ಭವಿಷ್ಯದ ಭಾಗ್ಯದೇವತೆ. ನಮ್ಮ ಮುತ್ತುರಾಜನ ಹೆಂಡತಿ ಎಂದು ತೀರ್ಮಾನಿಸಿಬಿಟ್ಟಿದ್ದರಂತೆ.

ಪಾರ್ವತಮ್ಮ ಬೆಳೆದು ಸಾಲಿಗ್ರಾಮದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ‘ಹೋಗಿ ಪಾರ್ವತಿನ ಕರ್ಕೊಂಡು ಬಾ ಎಂದು ಪುಟ್ಟಸ್ವಾಮಯ್ಯನವರು ರಾಜ್ರನ್ನು ಕಳಿಸುತ್ತಿದ್ದರಂತೆ. ಸೈಕಲ್ನಲ್ಲಿ ಹೋಗಿ, ಮಣ್ಣಿನಲ್ಲಿ ಆಡಿಕೊಂಡು ಗಲೀಜಾಗಿರುತ್ತಿದ್ದ ಪಾರ್ವತಿಯನ್ನು ರಾಜ್ ಸೈಕಲ್ಲಿನಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಸಿಗುವ ನಾಲ್ಕಾಣೆಯ ಬೆಂಡೋಲೆ, ಲೋಲಾಕುಗಳನ್ನು ಕೊಡಿಸುತ್ತಿದ್ದರಂತೆ. ಪಾರ್ವತಮ್ಮನವರು ಎಸ್ಸೆಲ್ಸಿ ಓದುತ್ತಿರುವಾಗಲೇ ಮದುವೆಯಾದ ರಾಜ್ ದಾವಣಗೆರೆಯಲ್ಲಿ ಸುಬ್ಬಯ್ಯನಾಯ್ಡು ಕಂಪೆನಿಯಿಂದ ಬರುತ್ತಿದ್ದ ಪಗಾರದಲ್ಲಿ ತಿಂಗಳಿಗೆ ಹತ್ತು ರುಪಾಯಿ ಆಕೆಯ ಸ್ಕೂಲ್ ಫೀಸ್ಗಾಗಿ ಕಳಿಸುತ್ತಿದ್ದರಂತೆ. ಇದೇ ಸಮಯದಲ್ಲೇ ರಾಜ್ಗೆ ಗುಬ್ಬಿ ಕಂಪೆನಿಯಿಂದ ಬುಲಾವ್ ಬಂದು, ಬೇಡರಕಣ್ಣಪ್ಪ ಚಿತ್ರಕ್ಕೆ ಆಯ್ಕೆಯಾಗಿ ಅವರೊಬ್ಬ ಸಿನಿಮಾ ನಟನಾಗಿ ಅವತಾರವೆತ್ತಿದ್ದು.
ಸುಬ್ಬಯ್ಯ ನಾಯ್ಡುರವರ ಕಂಪನಿ ನಾಟಕಗಳಲ್ಲಿ ಕಲಾವಿದರಾಗಿದ್ದ ಮುತ್ತುರಾಜ್ರನ್ನು ಮದುವೆಯಾದಾಗ ಪಾರ್ವತಮ್ಮನವರಿಗೆ ಬರೀ ಹದಿಮೂರೂವರೆ ವರ್ಷ ವಯಸ್ಸು. ಐನೂರು ರೂಪಾಯಿ ಸಾಲ ಮಾಡಿ ಮದುವೆಯಾಗಿದ್ದರು ರಾಜ್. ಮದುವೆ ಮುಗಿಸಿಕೊಂಡು ವಾಪಾಸು ದಾವಣಗೆರೆಯಲ್ಲಿ ಬಿಡಾರ ಹೂಡಿದ್ದ ಸುಬ್ಬಯ್ಯ ನಾಯ್ಡು ಕಂಪೆನಿಗೆ ವಾಪಾಸು ಹೋದರೆ ಜೊತೆಗಾರರೆಲ್ಲ ?ಏನಪ್ಪಾ ಮದ್ವೆ ಮಾಡ್ಕೊಂಡು ಬಂದಿದ್ದೀಯಾ? ನಮ್ಗೇನು ಊಟಗೀಟ ಹಾಕ್ಸಲ್ವಾ? ಎಂದಿದ್ದರಂತೆ. ಆಗ ?ಊಟ ಹಾಕೋಷ್ಟು ಯೋಗ್ಯತೆ ನನಗೆ ಇಲ್ಲದೇ ಇದ್ರೂ, ಕಂಪನಿಯ ಊಟದ ಜೊತೆಗೇ ನಿಮ್ ಬಾಯಿ ಸಿಹಿ ಮಾಡಿಸೋಕೆ ಪ್ರಯತ್ನ ಮಾಡ್ತೀನಿ ಎಂದು, ಮದುವೆ ಖರ್ಚು ಮುಗಿದು ಉಳಿದಿದ್ದ ನಲವತ್ತು ರುಪಾಯಿಯನ್ನು ಭಟ್ಟರ ಕೈಗಿಟ್ಟು ?ಹೇಗಾದರೂ ಮಾಡಿ ಈ ದುಡ್ಡಿನಲ್ಲೇ ವಿಶೇಷವಾಗಿ ಏನಾದ್ರೂ ಮಾಡಿ ಬಡಿಸಿ ಎಂದು ವಿನಂತಿಸಿ ಹಾಲುಕೀರು, ಚಿತ್ರಾನ್ನ, ಕೋಸಂಬರಿ ಊಟ ಹಾಕಿಸಿದ್ದರಂತೆ.
ಮದುವೆಯಾದ ಎರಡು ವರ್ಷಕ್ಕೇ, ಅಂದರೆ ೧೯೫೬ರಲ್ಲಿ ಬೇಡರಕಣ್ಣಪ್ಪದಲ್ಲಿ ನಾಯಕನಾಗಿ ಅವಕಾಶ ಪಡೆದಾಗ ರಾಜ್ಗೆ ಸಿಕ್ಕ ಅಡ್ವಾನ್ಸ್ ಬರೀ ೮೦೦ ರೂಪಾಯಿ ಮಾತ್ರ. ಬಿ.ಎಸ್. ರಂಗಾ ೧೯೫೭ರಲ್ಲಿ ಮಹಿಷಾಸುರ ಮರ್ದಿನಿಯಲ್ಲಿ ಛಾನ್ಸು ಪಡೆದಾಗ ರಾಜ್ಗೆ ಪಡೆದಿದ್ದು ತಿಂಗಳಿಗೆ ೧ ಸಾವಿರ ರೂಪಾಯಿಗಳ ಸಂಬಳವಷ್ಟೇ! ಅದು ಹಾಗೇ ಮುಂದುವರಿದು ಸತತ ಒಂಭತ್ತು ವರ್ಷಗಳ ಕಾಲ ಅದೇ ಸಂಬಳ ಪಡೆಯುತ್ತ ರಂಗಾರವರು ಕರೆದಾಗ ಹೋಗಿ ನಟಿಸುವ ಒಪ್ಪಂದವೂ ಇತ್ತು. ನಮಗೀಗ ತೀರಾ ನಿಕೃಷ್ಟ ಎನಿಸುವ ರಾಜ್ ಸಂಭಾವನೆ ಮೊತ್ತ ಅವರು ನೂರನೇ ಚಿತ್ರ ಮುಗಿಸಿದ್ದಾಗಲೂ, ನಟಸಾರ್ವಭೌಮ ಬಿರುದು ಪಡೆದ ಮೇಲೂ ಜಾಸ್ತಿಯಾಗಿರಲಿಲ್ಲ. ಮಣ್ಣಿನ ಮಗ ಚಿತ್ರದ ನಿರ್ದೇಶಕ ಗೀತಪ್ರಿಯ ತಮ್ಮ ಚಿತ್ರಕ್ಕೆ ರಾಜ್ರನ್ನು ಬುಕ್ ಮಾಡಲು ಹೋದಾಗ ಕೊಟ್ಟಿದ್ದ ಅಡ್ವಾನ್ಸ್ ನೂರಾಒಂದು ರೂಪಾಯಿ ಮಾತ್ರ! ರಾಜ್ ತಮ್ಮ ನೂರೈವತ್ತನೇ ಸಿನಿಮಾ ಗಂಧದ ಗುಡಿ ಮುಗಿಸಿದಾಗಲೂ ಅವರ ಸಂಭಾವನೆ ಹದಿನೈದು, ಇಪ್ಪತ್ತು ಸಾವಿರದ ಆಸುಪಾಸಿನಲ್ಲೇ ಇತ್ತು.
ಬಂಗಾರದ ಮನುಷ್ಯ ಚಿತ್ರಕ್ಕೆ ನಲವತ್ತು ಸಾವಿರ ಪಡೆದಿದ್ದೇ ಬಹುಶಃ ದೊಡ್ಡ ಮೊತ್ತವಿರಬೇಕು. ರಾಜ್ ಕುಮಾರ್ ಎಷ್ಟೇ ದೊಡ್ಡ ನಟನಾದಮೇಲೂ ಅಂಥ ಆ ಮಟ್ಟದ ಸಂಪಾದನೆಗೆ ಕೈಚಾಚಿರಲಿಲ್ಲ. ರಾಜ್ರಿಂದ ನಿರ್ಮಾಪಕರ ತಿಜೋರಿ ತುಂಬಿತ್ತೇ ವಿನಃ ರಾಜ್ ಮಾತ್ರ ಆರ್ಥಿಕವಾಗಿ ಸದೃಢರಾಗಿರಲಿಲ್ಲ. ಒಂದು ವೇಳೆ ತಮ್ಮ ಚಿತ್ರಗಳಿಂದ ನಷ್ಟಚಾದ ಪಕ್ಷದಲ್ಲಿ ಅಂಥ ನಿರ್ಮಾಪಕರಿಗೆ ಮತ್ತೆ ಮತ್ತೆ ಕಾಲ್ಶೀಟ್ ಕೊಟ್ಟು ಅನ್ನದಾತರನ್ನು ರಕ್ಷಿಸುವುದಷ್ಟೇ ಅವರ ಕಾಯಕವಾಗಿತ್ತು.
ರಾಜ್ ಎಂಬ ಹೆಸರೇ ಒಂದು ಅಕ್ಷಯ ಪಾತ್ರೆ ಅಂತಾ ಗೊತ್ತಾಗುವ ಹೊತ್ತಿಗೆ ಅವರ ವೃತ್ತಿಬದುಕಿನ ಬಹಳಷ್ಟು ವರ್ಷಗಳು ಕಳೆದುಹೋಗಿದ್ದವು. ಅಂಥ ಸಂದರ್ಭದಲ್ಲೇ ನೋಡಿ ಪಾರ್ವತಮ್ಮ ಚಿತ್ರ ನಿರ್ಮಾಣಕ್ಕಿಳಿದಿದ್ದು. ಜೊತೆಗೆ ವಿತರಣೆಯನ್ನೂ ಶುರು ಮಾಡಿದರು. ಶ್ರೀನಿವಾಸ ಕಲ್ಯಾಣ, ತ್ರಿಮೂರ್ತಿ ಚಿತ್ರಗಳನ್ನು ಆರು ಲಕ್ಷದ ಬಜೆಟ್ನೊಳಗೆ ಮುಗಿಸಿ ಗೆದ್ದ ಪಾರ್ವತಮ್ಮ ಶಂಕರ್ ಗುರು ಚಿತ್ರದ ಮೂಲಕ ಒಂದು ಕೋಟಿ ರೂಪಾಯಿಗಳನ್ನು ದುಡಿದು ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ದಾಖಲೆ ಬರೆದಿದ್ದರು. ನಂತರ ಭಕ್ತ ಕುಂಬಾರ, ಬಬ್ರುವಾಹನದಂಥ ಚಿತ್ರಗಳೂ ಪಾರ್ವತಮ್ಮರಿಗೆ ಭರ್ಜರಿ ಲಾಭ ತಂದುಕೊಟ್ಟಿತ್ತು. ನಂತರ ತಮ್ಮ ಮೂವರು ಮಕ್ಕಳಿಗಾಗೇ ಸಿನಿಮಾ ನಿರ್ಮಿಸಲು ಆರಂಭಿಸಿದ ಪಾರ್ವತಮ್ಮನವರನ್ನು ವ್ಯಾವಹಾರಿಕವಾಗಿ ಇವತ್ತಿಗೂ ಬೇರೆ ಯಾರೂ ಹಿಂದಿಕ್ಕಲು ಸಾಧ್ಯವಾಗಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image