One N Only Exclusive Cine Portal

ಪಾರ್ವತಮ್ಮ: ಸ್ತ್ರೀ ಶಕ್ತಿಯ ಮೇರು ಪರ್ವತ!

ರಾಜ್ ಹಿಂದಿನ ದೊಡ್ಡ ಶಕ್ತಿಯೇ ಆಗಿದ್ದ, ಕನ್ನಡ ಚಿತ್ರರಂಗದ ಸಾಕ್ಷಿಪ್ರಜ್ಞೆಯಂತಿದ್ದ ಪಾರ್ವತಮ್ಮ ರಾಜ್ಕುಮಾರ್ ಬದುಕಿನ ಪಯಣ ಮುಗಿಸಿ ಎದ್ದು ನಡೆದಿದ್ದಾರೆ. ತಮ್ಮ ಮಕ್ಕಳಿಗೆ ಮಾತ್ರವಲ್ಲದೇ ಇಡಿ ಚಿತ್ರರಂಗಕ್ಕೇ ಮಾತೃತ್ವದ ಅನುಭೂತಿ ತುಂಬಿದ್ದ ಪಾರ್ವತಮ್ಮ ಬಹು ವರ್ಷಗಳ ಹಿಂದೆಯೇ ಬಾಧಿಸಿದ್ದ ಕ್ಯಾನ್ಸರ್ ಕಾಯಿಲೆ ತೀವ್ರವಾಗಿ ಹಿಂಡಿಹಾಕಿತ್ತು.

ಆರೋಗ್ಯದಲ್ಲಿ ಕೊಂಚ ಏರುಪೇರು ಉಂಟಾಗಿದ್ದರಿಂದಾಗಿ ಪಾರ್ವತಮ್ಮನವರನ್ನು ಹದಿನೈದು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಬೆಳಗಿನ ಜಾವ ೪.೩೦ರ ಹೊತ್ತಿಗೆ ಪಾರ್ವತಮ್ಮನವರ ಪ್ರಾಣಪಕ್ಷಿ ರೆಕ್ಕೆ ಬಡಿದಿದೆ..
ಒಂದು ಶಕ್ತಿಯಂತೆ ಡಾ ರಾಜ್‌ಕುಮಾರ್‌ರಂಥಾ ದೈತ್ಯ ಕಲಾವಿದನನ್ನು ಹೆಜ್ಜೆ ಹೆಜ್ಜೆಗೂ ಪೊರೆದ ಪಾರ್ವತಮ್ಮನವರದ್ದು ಗಟ್ಟಿತನದ ವ್ಯಕ್ತಿತ್ವ. ವಜ್ರೇಶ್ವರಿಯಂಥಾ ಸಂಸ್ಥೆಯನ್ನು ಓರ್ವ ಹೆಣ್ಣು ಮಗಳಾಗಿ ಇವರು ಕಟ್ಟಿ ನಿಲ್ಲಿಸಿದ ಪರಿ ಯಾವತ್ತಿಗೂ ಸ್ಫೂರ್ತಿಯೇ. ಹಲವಾರು ಸವಾಲುಗಳನ್ನು ಎದುರಿಸುತ್ತಲೇ ನಡೆದು ಬಂದಿದ್ದ ಪಾರ್ವತಮ್ಮನವರದ್ದು ಪರಿಪೂರ್ಣ ಜೀವನ.
ಪಾರ್ವತಮ್ಮ ಚಿತ್ರ ನಿರ್ಮಾಣ ಹಾಗೂ ವಿತರಣೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಈಗಲೂ ಗಾಂಧಿನಗರದ ವಜ್ರೇಶ್ವರಿ ಸಂಸ್ಥೆ ಕಟ್ಟಡದ ಮೇಲಂತಸ್ತಿನಲ್ಲಿ ಪೂರ್ಣಿಮಾ ಲ್ಯಾಬ್ ಇದೆ. ಮೂರು ಔಟ್ ಡೋರ್ ಯೂನಿಟ್ಗಳಿವೆ. ಅತ್ಯಂತ ದುಬಾರಿಯ ಕ್ಯಾಮೆರಾಗಳಿವೆ. ರಾಜ್ ಕುಟುಂಬದ ಓನರ್ಶಿಪ್ನಲ್ಲಿ ಗಾಂಧಿನಗರದಲ್ಲಿ ಡಾ|| ರಾಜ್ಕುಮಾರ್ ಇಂಟರ್ನ್ಯಾಷನಲ್ ಹೋಟೆಲ್ ಇದೆ. ಕೆಎಸ್ಸಾರ್ಟಿಸಿ ಬಸ್ಟ್ಯಾಂಡ್ನಲ್ಲಿರುವ ಕ್ಯಾಂಟೀನ್ನಲ್ಲಿ ಪಾರ್ಟನರ್ಶಿಪ್, ಬನಶಂಕರಿಯಲ್ಲಿರುವ ಕಲ್ಯಾಣ ಮಂಟಪದ ಒಡೆತನ?
ಹೀಗೆ ರಾಜ್ ಕುಟುಂಬಕ್ಕೆ ಬಲ ಬಂದಿದ್ದೇ ಪಾರ್ವತಮ್ಮನವರ ವ್ಯಾವಹಾರಿಕ ಜಾಣ್ಮೆಯಿಂದ. ಇಷ್ಟೆಲ್ಲಾ ಸಾಧನೆಗಳ ನಡುವೆಯೂ ವಜ್ರೇಶ್ವರಿ ಸಂಸ್ಥೆ ಯಾವತ್ತೂ ಕೀಳು ಅಭಿರುಚಿಯ ಸಿನಿಮಾ ತಯಾರಿಸಲಿಲ್ಲ. ವಜ್ರೇಶ್ವರಿಯ ಸಿನಿಮಾಗಳನ್ನು ಜನ ಬೆರಗು, ಸಂತೋಷದಿಂದ ನೋಡಿ ಖುಷಿಪಟ್ಟಿದ್ದಾರೆ. ಬೆಂಬಲಿಸಿದ್ದಾರೆ. ಸಂಸ್ಥೆ ಕೂಡಾ ಹಲವಾರು ಹೊಸ ನಟ-ನಟಿಯರನ್ನು, ನಿರ್ದೇಶಕರನ್ನು ಬೆಳೆಸಿ ಉದ್ಯಮಕ್ಕೆ ಕೊಡುಗೆಯಾಗಿ ನೀಡಿದೆ. ಕನ್ನಡ ಚಿತ್ರರಂಗಕ್ಕೆ ಸುಧಾರಾಣಿ, ಮಾಲಾಶ್ರೀ, ಶಿಲ್ಪಾ, ಪ್ರೇಮಾ, ರಕ್ಷಿತಾ, ರಮ್ಯರಂಥ ಅನೇಕ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕೂಡಾ ಪಾರ್ವತಮ್ಮನವರಿಗೇ ಸಲ್ಲುತ್ತದೆ.
ಕನ್ನಡ ಚಿತ್ರರಂಗದ ಸಾಕ್ಷಿಪ್ರಜ್ಞೆಯಂತಿರುವ ಪಾರ್ವತಮ್ಮನವರು ಅನಾರೋಗ್ಯವನ್ನೆಲ್ಲ ನೀಗಿಕೊಂಡು ಅನೇಕ ಸಲ ಮೇಲೆದ್ದು ನಿಂತಿದ್ದಾರೆ. ಆದರೆ ಈ ಸಲ ಎಲ್ಲ ಹರಕೆಗಳನ್ನೂ ಮೀರಿ ಅವರು ಕಾಲನ ಕರೆಗೆ ಓಗೊಟ್ಟಿದ್ದಾರೆ. ಆದರೆ ಅವರೆಂದಿಗೂ ಎಲ್ಲಾ ರೀತಿಯಿಂದಲೂ ಮಾದರಿ ಹೆಣ್ಣು ಮಗಳಾಗಿ ಸದಾ ಜೀವಂತವಾಗಿರುತ್ತಾರೆ.

Leave a Reply

Your email address will not be published. Required fields are marked *


CAPTCHA Image
Reload Image