One N Only Exclusive Cine Portal

ಪುನಾರಂಭ.. ಹೊಸ ಸಿನಿಮಾ ಆರಂಭ

ದಶಕದ ಹಿಂದೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟಿಸಿ ಗುರುತಿಸಿಕೊಂಡಿದ್ದ ನಟ ಡಾ.ವಿಜಯ್‌ಕುಮಾರ್ ಈಗ ಮತ್ತೆ ಮರಳಿ ಬಂದಿದ್ದಾರೆ. ಅದೂ ‘ಪುನಾರಂಭ’ ಎಂಬ ಚಲನಚಿತ್ರದ ಮೂಲಕ. ವ್ಯಕ್ತಿಯು ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಹೊರಟಾಗ, ಆತನ ಸಾಧನೆಯ ಹಾದಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂಥ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬ ವಿಷಯದ ಸುತ್ತ ಸಾಗುವ ಕಥೆಯನ್ನು ಮುಂದಿಟ್ಟುಕೊಂಡು ಪುನಾರಂಭಕ್ಕೆ ಡಾ.ವಿಜಯ್‌ಕುಮಾರ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಜೊತೆಗೆ ನಟನಾಗಿ ಕಾಣಿಸಿಕೊಂಡಿದ್ದು, ಬಂಡವಾಳವನ್ನೂ ಚಿತ್ರಕ್ಕೆ ಹಾಕಿದ್ದಾರೆ.
ಇನ್ನುಳಿದಂತೆ ಈ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ದಿನೇಶ್ ಅಭಿನಯಿಸುತ್ತಿದ್ದಾರೆ.
ಕಳೆದ ಬುಧವಾರ ಈ ಚಿತ್ರದ ಮಹೂರ್ತ ಸಮಾರಂಭ ಮಲ್ಲೇಶ್ವರಂನ ಗಣೇಶ ದೇವಸ್ಥಾನದಲ್ಲಿ ನೆರವೇರಿತು. ಶಾಸಕ ಡಾ.ಸಿ.ಎನ್. ಅಶ್ವಥನಾರಾಯಣ ಅವರು ಚಿತ್ರದ ಮೊದಲ ದೃಷ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಆ ಬಳಿಕ ಮಾತಿಗಿಳಿದ ಡಾ.ವಿಜಯ್‌ಕುಮಾರ್, ನಾನು ಹತ್ತು ವರ್ಷಗಳ ಬಳಿಕ ಮರಳಿ ಚಿತ್ರರಂಗಕ್ಕೆ ಬಂದಿದ್ದೇನೆ. ಈ ಚಿತ್ರದಲ್ಲಿ ಹಿರಿಯರ ಜೊತೆ ಹಲವು ಹೊಸ ಕಲಾವಿದರೂ ಅಭಿನಯಿಸುತ್ತಿದ್ದಾರೆ. ಕನ್ನಡಿಗರಿಗೆ ಒಂದು ಒಳ್ಳೆಯ ಸಂದೇಶ ನೀಡುವ ಚಿತ್ರ ಕೊಡುವ ಉದ್ದೇಶದಿಂದ ಒಳ್ಳೆಯ ಟೀಮ್ ಕಟ್ಟಿಕೊಂಡು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ. ಚಿತ್ರ ಪರಿಣಾಮಕಾರಿಯಾಗಿ ಮೂಡಿಬರಲೆಂಬ ಉದ್ದೇಶದಿಂದ ಹೊಸ ಕಲಾವಿದರನ್ನೆಲ್ಲಾ ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಳ್ಳಲಾಗಿದೆ.
ವ್ಯಕ್ತಿಯೊಬ್ಬನ ಸಾಧನೆಯ ಹಾದಿಯಲ್ಲಿ ಎದುರಾಗುವಂಥ ಸಮಸ್ಯೆಗಳು, ಅದು ಕುಟುಂಬದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ. ಮನುಷ್ಯನಿಗೆ ಹಣವಿದ್ದರೆ ಎದುರಾಗುವ ಸಮಸ್ಯೆ, ಹಣ ಇಲ್ಲದಿದ್ದರೆ ಆಗುವ ಸಮಸ್ಯೆಗಳನ್ನು ಚಿತ್ರದ ಮೂಲಕ ತೋರಿಸಲಾಗುತ್ತಿದೆ. ಚಿತ್ರವನ್ನು ಬಹುತೇಕ ಮಡಿಕೇರಿಯ ಸುತ್ತ ಮುತ್ತಲ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಾಗುವುದು. ಅದಕ್ಕಾಗಿ ಲೊಕೇಶನ್ ಕೂಡ ಹುಡುಕಿದ್ದು ಇದುವರೆಗೂ ಯಾರೂ ಮಾಡದ ಕಡೆ ಚಿತ್ರೀಕರಣ ನಡೆಸಲಾಗುವುದು ಎಂದು ಹೇಳಿದರು.
ಚಿತ್ರದ ನಾಯಕಿ ಐಶ್ವರ್ಯ ದಿನೇಶ್ ಮಾತನಾಡಿ ನಾನು ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡುತ್ತಿದ್ದೇನೆ. ಕುಟುಂಬದಲ್ಲಿ ಹಣಕಾಸಿನ ಸಮಸ್ಯೆ ಎದುರಾದಾಗ ಅದು ಏನೆಲ್ಲಾ ಪರಿಣಾಮ ಬಿರಲಿದೆ, ಅದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಚಿತ್ರದಲ್ಲಿ ಹೇಳಲಾಗಿದೆ. ಒಳ್ಳೆಯ ಪಾತ್ರ ಸಿಕ್ಕಿದೆ ಎಂದು ಹೇಳಿದರು. ಈವರೆಗೆ ಕನ್ನಡದಲ್ಲಿ ೧೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿರುವ ಕೆ.ಗಣೇಶ್‌ರಾವ್ ಕೇಸರ್‌ಕರ್ ಈ ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಸಹನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.
ವಿಭಿನ್ನ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ||ರೂಪ ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂ.ಮುತ್ತುರಾಜ್ ಅವರ ಛಾಯಾಗ್ರಹಣ, ಡಾ|| ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆಯಿದೆ. ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಡಾ|| ವಿಜಯ್‌ಕುಮಾರ್, ಐಶ್ವರ್ಯ ದಿನೇಶ್, ಶೋಭರಾಜ್, ಲಯೇಂದ್ರ, ವೈಷ್ಣವಿ, ಶ್ವೇತಾ ಗೌಡ, ಪ್ರೀತು ಪೂಜಾ, ಸುರೇಖ, ಮಾ|| ಸಂಜಿತ್, ಮಾ||ಕಶ್ಯಪ್ ನಂಜಪ್ಪ, ಗುರುರಾಜ್, ರಾಜೀವ್, ಶಂಕರ್ ಅಶ್ವಥ್, ಗಣೇಶ್‌ರಾವ್ ಕೇಸರ್‌ಕರ್, ಸೇರಿದಂತೆ ಅನೇಕ ಹಿರಿ-ಕಿರಿಯ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image