One N Only Exclusive Cine Portal

ಪುನೀತ್ ಸಂದರ್ಶನ

ಚಿತ್ರವೊಂದು ಸೋತರೂ ಗೆದ್ದರೂ ಪುನೀತ್ ರಾಜ್‌ಕುಮಾರ್ ನಟನೆಯ ಮತ್ತೊಂದು ಚಿತ್ರ ಏನಾಗಬಹುದು? ಅನ್ನೋ ಕುತೂಹಲ ಸದಾ ಚಾಲ್ತಿಯಲ್ಲಿರುತ್ತದೆ. ತಮ್ಮ ಚಿತ್ರಗಳು ಎಷ್ಟೇ ಯಶಸ್ಸು ಕಂಡರೂ ಆ ಗೆಲುವುಗಳು ಪುನೀತ್‌ರನ್ನು ಕಿಂಚಿತ್ತೂ ಬದಲಿಸಿಲ್ಲ. ಗೆಲುವು ಎನ್ನುವುದು ಪುನೀತ್ ಪಾಲಿಗೆ ಯಾವತ್ತಿಗೂ ತಲೆಗೆ ಹತ್ತಿಲ್ಲ, ಹತ್ತುವುದೂ ಇಲ್ಲ. ಸಿನೆಮಾವನ್ನು ಅಪ್ಪು ವೃತ್ತಿಯಂತೆ ಗೌರವಿಸುವುದರಿಂದಲೇ ಅದು ಸಾಧ್ಯವಾಗಿದೆ. ಬಹುಶಃ ತನ್ನ ತಂದೆ ಇಡೀ ದೇಶಕಂಡ ಅದ್ಭುತ ಹೀರೋ ಆಗಿ ಮೆರೆಯುತ್ತಿರುವುದು ಕೂಡಾ ಇದಕ್ಕೆ ಕಾರಣವಾಗಿರಬಹುದು. ಈವರೆಗೆ ಪುನೀತ್ ನಾಯಕನಾಗಿ ನಟಿಸಿದ ಚಿತ್ರಗಳಲ್ಲಿ ಒಂದಷ್ಟು ಸೂಪರ್ ಹಿಟ್ ಆಗಿವೆ; ಹಾಗೇ ಕೆಲವೊಂದು ದಿನಿಮಾಗಳು ಅನಿರೀಕ್ಷಿತವಾಗಿ ಸೋಲನ್ನೂ ಅನುಭವಿಸಿವೆ. ಆದರೂ ತಮ್ಮ ವ್ಯಕ್ತಿತ್ವದಲ್ಲಾಗಲಿ, ಪ್ರವೃತ್ತಿಯಿಂದಾಗಲೀ ಯಾವೊಂದು ಬದಲಾವಣೆಗಳನ್ನೂ ಮಾಡಿಕೊಳ್ಳದೆ ತಮ್ಮ ಮನಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ; ಅದು ಹೀಗೇ ಮುಂದುವರೆಯಬೇಕಿದೆ ಕೂಡ. ಇನ್ನೇನು ರಾಜಕುಮಾರ ಸಿನಿಮಾ ಬಿಡುಗಡೆಯ ದಿನ ಸಮೀಪಿಸುತ್ತಿದೆ. ಇವತ್ತು ಪುನೀತ್ ಅವರ ಹುಟ್ಟುಹಬ್ಬ ಕೂಡಾ. ಈ ಸಂಭ್ರಮದಲ್ಲಿ ಸಿನಿಬಜ಼್ ಅವರನ್ನು ಮಾತಾಡಿಸಿದಾಗ…

`ಒಂದು ಸಿನೆಮಾದ ಯಶಸ್ಸನ್ನು ನಿರ್ಧರಿಸುವುದು ಅದನ್ನು ತೆರೆಯಮೇಲೆ ನೋಡುವ ಪ್ರೇಕ್ಷಕ ಮಾತ್ರ ಎಂಬ ಅಭಿಪ್ರಾಯ ನಮ್ಮ ಚಿತ್ರರಂಗದ ಬಹುತೇಕರದ್ದು. ನಿಮ್ಮ ಅಭಿಪ್ರಾಯವೇನು?
ನನ್ನ ಅಭಿಪ್ರಾಯವೇ ಬೇರೆ. ಜನರಿಗೆ ಏನು ಬೇಕು ಎಂಬುದು ಒಬ್ಬ ನಟ ಅಥವಾ ನಿರ್ದೇಶಕನಿಗೆ ಮೊದಲೇ ಗೊತ್ತಿರಬೇಕು. ಮೊದಲು ನಾವು ಕತೆಯನ್ನು ಇಷ್ಟಪಟ್ಟರೆ ಅದು ಜನರಿಗೂ ಇಷ್ಟವಾಗೇ ತೀರುತ್ತದೆ. ಬರೀ ಹೀರೋ ಆಗುವುದು ಮುಖ್ಯವಲ್ಲ. ಆ ಪಾತ್ರ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ಅದರ ಜೊತೆಗೆ ನನಗೂ ಇಷ್ಟವಾಗುವ ಹಾಗಿರಬೇಕು. ಹೀಗಾಗಿ ಆಯ್ಕೆಗೆ ಮುನ್ನವೇ ಅದನ್ನು ಯೋಚಿಸುವುದರಿಂದ ಚಿತ್ರ ಸೋತಮೇಲೆ ಅದನ್ನು ನಿರ್ದೇಶಕರ ಮೇಲೆ ಹೊರಿಸುವ ಪ್ರಮೇಯವೇ ಬರುವುದಿಲ್ಲ.

ರಾಜಕುಮಾರ ಚಿತ್ರಕ್ಕೂ ನಿಮ್ಮ ತಂದೆಯವರಿಗೂ ಏನಾದರೂ ಸಂಬಂಧವಿದೆಯಾ?
ಸಿನಿಮಾಗೂ ತಂದೆಯವರ ಹೆಸರಿಗೂ ಏನೇನೂ ಸಂಬಂಧ ಇಲ್ಲ. ರಾಜ ಕುಮಾರ ಅಂದ್ರೆ ರಾಜಕುಮಾರ ಅಷ್ಟೆ. ಅದೊಂದು ಫ್ಯಾಮಿಲಿ ಸಬ್ಜೆಕ್ಟ್ ಇರುವಂಥದ್ದು.

ಆಡಿಸಿನೋಡು ಗೊಂಬೆ, ಹೆಗಲ ಮೇಲಿನ ಪಾರಿವಾಳ – ರಾಜಕುಮಾರ ಸಿನಿಮಾದ ಜಾಹೀರಾತಲ್ಲಿ ಇವೆರಡೂ ಕಾಣಿಸಿಕೊಂಡಿವೆಯಲ್ಲಾ?
ಸಂತೋಷ್ ಆನಂದ್ ರಾಮ್ ರಾಮಾಚಾರಿಯಲ್ಲಿ ವಿಷ್ಣುವರ್ಧನ್ ಅವರನ್ನು ಬಳಸಿಕೊಂಡಿದ್ದರು. ಸಿನಿಮಾದ ಆಕರ್ಷಣೆ ಹೆಚ್ಚಿಸುವ ಕಾರಣಕ್ಕೆ ಆಡಿಸಿನೋಡು ಗೊಂಬೆ ಮತ್ತು ಪಾರಿವಾಳವನ್ನು ಬಳಸಿಕೊಂಡಿದ್ದಾರೆ. ಆದರೆ ಅಪ್ಪಾಜಿಯ ಸಿನಿಮಾಗೆ ಇದರ ಲಿಂಕ್ ಇಲ್ಲ.

ರಾಜಕುಮಾರ ಚಿತ್ರದಲ್ಲಿ ವಿಶೇಷತೆ ಅನಿಸಿದ್ದೇನು?
ಸಿನಿಮಾ ಚನ್ನಾಗಿ ಬಂದಿದೆ ಅಂದುಕೊಂಡಿದ್ದೀನಿ. ತುಂಬಾ ಸ್ಟಾರ್ ಕಾಸ್ಟ್ ಇರೋ ಸಿನಿಮಾ, ನಾನು ಈ ವರೆಗೆ ನಟಿಸದ ಅನೇಕರು ಈ ಸಿನಿಮಾದಲ್ಲಿದ್ದಾರೆ. ನಾನು ಇಷ್ಟೊಂದು ಜನರ ಜೊತೆಗೆ ನಟಿಸಿದ್ದು ಇದೇ ಮೊದಲು.

ಅಂಜನಿ ಪುತ್ರ ಯಾವ ಹಂತದಲ್ಲಿದೆ? ಹರ್ಷ ಅವರ ಸಿನಿಮಾಗೆ ಒಪ್ಪಿದ್ದು ಹೇಗೆ?
ಈಗಾಗಲೇ ಶೂಟಿಂಗ್ ನಡೀತಿದೆ. ಹರ್ಷ ನನ್ನ ಆತ್ಮೀಯ ಸ್ನೇಹಿತ. ಅಭಿ ಸಿನಿಮಾದಲ್ಲಿ ಅವನ ಜೊತೆ ನಟಿಸಿದ್ದೆ. ನಂತರ ನನ್ನ ಎಲ್ಲ ಸಿನಿಮಾಗಳಿಗೂ ಕೊರಿಯೋಗ್ರಾಫ್ ಮಾಡುತ್ತಾ ಬಂದಿದ್ದಾನೆ. ಶಿವಣ್ಣನ ಸಿನಿಮಾಗಳನ್ನು ಕೂಡಾ ಡೈರೆಕ್ಟ್ ಮಾಡಿದ್ದ. ಅವನೊಂದಿಗೆ ಕೆಲಸ ಮಾಡುವುದೇ ಒಂಥರಾ ಖುಷಿ.

ಮುಂದಿನ ಸಿನಿಮಾದ ಪ್ಲಾನ್ ಏನು?
ಪ್ರತಿ ದಿನ ಕಥೆಗಳ ಡಿಸ್ಕಷನ್ ನಡೀತಾನೇ ಇರುತ್ತೆ. ಆದರೆ ಮುಂದಿನ ಸಿನಿಮಾ ರಾಕ್ ಲೈನ್ ಅವರ ನಿರ್ಮಾಣದಲ್ಲಿ ಮೂಡಿಬರಲಿದೆ ಅನ್ನೋದು ಕನ್ಫರ್ಮ್.

`ಅಭಿಮಾನಿಗಳೇ ನಮ್ಮನೆ ದೇವ್ರು’ ಥರದ ಹಾಡಿನ ಗುಂಗು ಇನ್ನೂ ಇದೆಯಾ?
ಆ ಹಾಡು ನನ್ನ ಕರಿಯರ್‌ನ ವಂಡರ್‌ಫುಲ್ ಎಕ್ಸ್‌ಪೀರಿಯನ್ಸ್. ಅದರ ಕ್ರೆಡಿಟ್ಟೆಲ್ಲಾ ಡೈರೆಕ್ಟರ್ ಸೂರಿ ಅವರಿಗೇ ಹೋಗಬೇಕು. ಆ ಹಾಡನ್ನು ರೂಪಿಸುವಲ್ಲಿ ಸೂರಿ, ಸತ್ಯ ಹೆಗಡೆ ಮತ್ತು ಹರ್ಷ ತುಂಬಾನೇ ಶ್ರಮವಹಿಸಿದ್ದರು. ನಾನೆಷ್ಟೇ ಸಿನಿಮಾ ಮಾಡಿದರೂ ಆ ಹಾಡನ್ನು ಮರೆಯಲ್ಲ.

ಪಿ.ಆರ್.ಕೆ. ಬ್ಯಾನರ್ ಶುರು ಮಾಡಿದ್ದೀರಲ್ಲ…
ಹೌದು ಅದು ನನ್ನದೇ ಪ್ರೊಡಕ್ಷನ್ ಸಂಸ್ಥೆ. ನನಗೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ತುಂಬಾನೇ ಇಷ್ಟವಾಗಿತ್ತು. ಹೀಗಾಗಿ ನನ್ನ ನಿರ್ಮಾಣದಲ್ಲಿ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ತುಂಬಾ ಸುಂದರವಾದ ಎಳೆಯನ್ನಿಟ್ಟುಕೊಂಡು ಅದ್ಭುತವಾತ ಸ್ಕ್ರೀನ್ ಪ್ಲೇ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ನಿಮ್ಮ ಮುಖದಲ್ಲಿ ಗ್ಲೋ ಹೆಚ್ಚಾಗ್ತಿದೆ ಅಲ್ವಾ?
`ನನ್ನ ಹೆಂಡತಿ ಮುಂದೆ ಯಾರಾದ್ರೂ ಹೀಗಂದ್ರೆ ನಿಜಕ್ಕೂ ಆಕೆ ಫುಲ್ ಖುಷಿಯಾಗಿಬಿಡ್ತಾಳೆ. ಗ್ಲೋ ಹೆಚ್ಚಾಗೋದಕ್ಕೆ ಕಾರಣ ನೀರು. ನಾನು ಸಿಕ್ಕಾಪಟ್ಟೆ ನೀರು ಕುಡೀತೀನಿ. ನೀರಂದ್ರೇನೇ ನನಗೆ ಅಷ್ಟೊಂದು ಇಷ್ಟ. ಸಿಕ್ಕಾಪಟ್ಟೆ ಈಸಿಯಾಗಿ ದಪ್ಪ ಆಗಿಬಿಡ್ತೀನಿ. ಬರೀ ತಿಂದ್ರೆ ಮಾತ್ರ ಅಲ್ಲ, ವಾಸನೆ ಕುಡಿದ್ರೂ ದಪ್ಪ ಆಗಿಬಿಡುವ ಬಾಡಿ ನಂದು. ಮೊದಲೇ ನನಗೆ ಸ್ನೇಹಿತರು ಜಾಸ್ತಿ, ಪ್ರತಿ ದಿನ ಏನಾದರೊಂದು ಪಾರ್ಟಿ ಇದ್ದೇ ಇರುತ್ತದೆ. ಆದರೂ ತಿನ್ನೋದರಲ್ಲಿ ಎಚ್ಚರ ವಹಿಸಿ ಫಿಟ್‌ನೆಸ್ ಮೇಂಟೇನ್ ಮಾಡಿದ್ದೀನಿ. ಪ್ರತಿ ದಿನ ಒಂದರಿಂದ ಒಂದೂವರೆ ಗಂಟೆ ವರ್ಕ್‌ಔಟ್ ಮಾಡ್ತೀನಿ. ವಾರದಲ್ಲಿ ಒಂದಿನ ಯೋಗ ಮಾಡೋದು ನನ್ನ ಅಭ್ಯಾಸ. ಯೋಗ ಮಾಡಿದ್ರೆ ತುಂಬಾನೇ ಒಳ್ಳೇದು. ದೇಹ ಮನಸ್ಸು ಎರಡೂ ಫ್ರೆಶ್ ಅನಿಸುತ್ತದೆ. ಬ್ಯಾಡ್ಮಿಂಟನ್ ತುಂಬಾ ಇಷ್ಟ ಆದ್ರೆ, ಆಡಲು ಆಗ್ತಿಲ್ಲ.

ಫ್ರೆಂಡ್ಸ್ ಜೊತೆ ಸಿಕ್ಕಾಪಟ್ಟೆ ಸೈಕ್ಲಿಂಗ್ ಕೂಡಾ ಮಡ್ತಿರ್‍ತೀರ ಅಲ್ವಾ?
ಹೌದು. ಆದರೆ ನಾನು ಮಾಡುವ ಸೈಕ್ಲಿಂಗ್ ಯಾವ ಮಹಾ? ಒಂದೇ ಸಾರಿಗೆ ಮುನ್ನೂರರಿಂದ ನಾನ್ನೂರು ಕಿಲೋಮೀಟರುಗಳ ದೂರ, ದಿನಗಟ್ಟಲೆ ಸೈಕ್ಲಿಂಗ್ ಮಾಡೋರಿದ್ದಾರೆ. ಸೈಕ್ಲಿಂಗ್ ಮಾಡೋದರಿಂದ ದೇಹವನ್ನು ದಂಡಿಸುವುದರ ಜೊತೆಗೆ ನಾನಾ ಊರುಗಳ ವೆರೈಟಿ ಜನರನ್ನು ಮೀಟ್ ಮಾಡೋ ಅವಕಾಶ ಕೂಡಾ ಸಿಗತ್ತೆ.

ವಿನಯ್ ರಾಜ್ ಕುಮಾರ್ ಏನು ಮಾಡುತ್ತಿದ್ದಾರೆ?
ಸದ್ಯಕ್ಕೆ ನನ್ನ ಜೊತೆಗೇ ಟ್ರೇನಿಂಗ್ ಮಾಡ್ತಿರ್‍ತಾನೆ. ವಿನಯ್‌ಗೋಸ್ಕರ ಪವನ್ ವೊಡೆಯರ್ ಜೊತೆ ಸ್ಕ್ರಿಪ್ಟ್ ಮಾಡ್ತಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image