One N Only Exclusive Cine Portal

ಪ್ರಕಾಶ್ ರೈ ಪುಸ್ತಕ ಪ್ರೇಮ….

Chitti-1ಸಿನಿಮಾ ನಟ ನಟಿಯರು ಸಾಹಿತ್ಯಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತಿರುವುದೇ ಹೆಚ್ಚು. ಅಂಥಾದ್ದರಲ್ಲಿ ಹಳೇಯ ನಂಟುಗಳನ್ನು ನೆನಪಿಟ್ಟುಕೊಂಡು, ಒಂದು ಪ್ರೀತಿಯ ಕರೆಗೆ ಓಗೊಟ್ಟು ಕೆಲಸದೊತ್ತಡದ ನಡುವೆಯೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ದೂರದ ಮಾತು. ಆದರೆ ಪ್ರಕಾಶ್ ರೈ ಮಾತ್ರ ಈ ವಿಚಾರದಲ್ಲಿ ಪಕ್ಕಾ ಡಿಫರೆಂಟು.
ಅವರು ಮೊನ್ನೆ ದಿನ ಮತ್ತೆ ಒಂದು ಅಪ್ಪಟ ಸಾಹಿತ್ಯಕ ವಾತಾವರಣದಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡರು. ಲೇಖಕಿ ಪಿ.ಚಂದ್ರಿಕಾರ `ಚಿಟ್ಟಿ ಕಾದಂಬರಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಕಾಶ್ ರೈ ಮತ್ತದೇ ಪ್ರೀತಿಯೊಂದಿಗೆ ಹಳೇಯ ನಂಟುಗಳೊಂದಿಗೆ ಮುಖಾಮುಖಿಯಾದರು.
ನಿರ್ದೇಶಕ ಬಿ. ಸುರೇಶ್‌ರ ಕನಸಿನ ಕೂಸಾದ ನಾಕುತಂತಿ ಪ್ರಕಾಶನದಿಂದ ಹೊರ ಬಂದಿರುವ ಪಿ.ಚಂದ್ರಿಕಾ ಅವರ `ಚಿಟ್ಟಿ’ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಕಾಶ್ ರೈ ಆಗಮಿಸುತ್ತಾರೆಂಬುದೇ ಪ್ರಮುಖ ಆಕರ್ಷಣೆಯಾಗಿತ್ತು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ಆವರಣಕ್ಕೆ ಅಡಿಯಿಡುತ್ತಲೇ ಎಲ್ಲಾ ಖ್ಯಾತಿಗಳನ್ನೂ ಕಳಚಿ ಬಂದಂತಿದ್ದ ಪ್ರಕಾಶ್ ರೈ ಎದುರಿಗೆ ಕಂಡ ವಿಜಯಮ್ಮನವರ ಮುಂದೆ ಮಗುವಾದರು. ಹಳೇ ಸ್ನೇಹಿತರ ತೆಕ್ಕೆಗೆ ಬಿದ್ದು ಹಳೇ ಪ್ರಕಾಶನಾಗಿಯೇ ಮೈಮರೆತರು.
ಪ್ರಕಾಶ್ ರೈ ಅಂದರೆ ಹಾಗೆಯೇ. ಕನ್ನಡದ ಗಡಿ ದಾಟಿ ಎಲ್ಲಾ ಭಾಷೆಗಳನ್ನೂ ಆವರಿಸಿಕೊಂಡು ಬೇಡಿಕೆಯ ನಟನಾಗಿದ್ದರೂ ಬೇರುಗಳನ್ನು ಮರೆಯದ ಪ್ರಕಾಶ್, ಹೀಗೆ ಸಾಹಿತ್ಯದ ನೆಪದಲ್ಲಿ ಬಂದಾಗೆಲ್ಲ ಪರಿಚಿತ ವಲಯದಲ್ಲಿ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆತು ಹೋಗುತ್ತಾರೆ. ಮಾತು, ಹರಟೆ, ತರಲೆ, ಕೀಟಲೆ ಮತ್ತು ಒಂದಷ್ಟು ಜುರಿಕೆ ಸಿಗರೇಟಿನೊಂದಿಗೇ ಪ್ರಾಂಜಲ ಪ್ರೀತಿ ಹರಡಿ ಕಣ್ಮರೆಯಾಗುತ್ತಾರೆ. ಚಂದ್ರಿಕಾರ ಚಿಟ್ಟಿ ಕಾದಂಬರಿ ಬಿಡುಗಡೆಯ ನೆಪದಲ್ಲಿ ಮತ್ತೊಮ್ಮೆ ಅಂಥಾ ವಾತಾವರಣ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *


CAPTCHA Image
Reload Image