One N Only Exclusive Cine Portal

ಪ್ರೀತಿ, ದೇಶಪ್ರೇಮ, ಮಾಧ್ಯಮ ಮತ್ತು ಮಂಡೆಬಿಸಿ!

ಅರ್ಜುನ್ ಸರ್ಜಾ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿರುವ ಚಿತ್ರ ಪ್ರೇಮ ಬರಹ. ಈ ಚಿತ್ರದ ಮೂಲಕ ಸರ್ಜಾ ಮಗಳು ಐಶ್ವರ್ಯಾ ಮೊದಲ ಸಲ ಬಣ್ಣ ಹಚ್ಚುತ್ತಿದ್ದಾಳೆಂಬುದೂ ಸೇರಿದಂತೆ ಸದರಿ ಚಿತ್ರದ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದದ್ದು ನಿಜ. ಆಗಾಗ ಅಪ್ಪಟ ಕನ್ನಡ ಪ್ರೇಮ ಹೊತ್ತು ಬರುವ ಸರ್ಜಾ ಸಾಕಷ್ಟು ಸಲ ತಮಿಳಿನಿಂದ ಡಬ್ ಮಾಡಿದಂಥಾ ಚಿತ್ರಗಳನ್ನು ಕೊಟ್ಟು ಕಾಗೆ ಹಾರಿಸಿದ್ದೀಗ ಇತಿಹಾಸ. ಅದು ಪ್ರೇಮಬರಹದಲ್ಲೂ ತಕ್ಕಮಟ್ಟಿಗೆ ರಿಪೀಟ್ ಆದಂತಿದೆ. ಒಂದು ಮಾಮೂಲಿ ಪ್ರೇಮಕಥೆಗೆ ದೇಶಪ್ರೇಮದ ಸುಣ್ಣಬಣ್ಣ ಬಳಿದಂತಿರೋ ಕಲಸುಮೇಲೋಗರವಾಗಿ ಪ್ರೇಮಬರಹ ಪ್ರೇಕ್ಷಕರ ಹಣೆ, ಮನಸು ಮುಂತಾದವುಗಳಿಗೆ ಅಂಟಿಕೊಂಡಿದೆ!

ಮೊದಲೇ ಹೇಳಿದಂತೆ ಪ್ರೇಮಬರಹದ್ದು ಹೇಳಿಕೊಳ್ಳುವಂಥಾ ಯಾವ ಹೊಸತನವೂ ಇಲ್ಲದ ಮಾಮೂಲು ಲವ್ ಸ್ಟೋರಿ. ಅದಕ್ಕೆ ಕಾರ್ಗಿಲ್ ಕದನದ ಹಿಮ್ಮೇಳ ಸೇರಿಸಿ, ಮಾಧ್ಯಮ ರಂಗದ ಮಸಾಲೆ ಬೆರೆಸಿದರೂ ಒಟ್ಟಾರೆ ಖದರಿನ ಹಣೆಬರಹ ಬದಲಾಯಿಸಲು ಸಾಧ್ಯವಾಗದಿರೋದು ಈ ಚಿತ್ರದ ಅಸಲೀ ವೈಫಲ್ಯ. ನಾಯಕ ಮತ್ತು ನಾಯಕಿ ಇಬ್ಬರೂ ಪತ್ರಿಕೋದ್ಯಮ ವಿದ್ಯಾರ್ಥಿಗಳು. ನಂತರ ಇಬ್ಬರೂ ಬೇರೆ ಬೇರೆ ವಾಹಿನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆದರೆ ಕಾರ್ಗಿಲ್ ಯುದ್ಧದ ವರದಿಗಾರಿಕೆಯ ಜವಾಬ್ದಾರಿ ಇಬ್ಬರ ಹೆಗಲ ಮೇಲೂ ಬೀಳುತ್ತೆ. ಹಾಗೆ ಕಾರ್ಗಿಲ್‌ನತ್ತ ಒಟ್ಟಾಗಿಯೇ ತೆರಳೋ ಈ ಜೋಡಿಯ ನಡುವೆ ಸಿಟ್ಟು, ಜಗಳ, ಕಿಚಾಯಿಸುವಿಕೆ ಎಲ್ಲವೂ ನಡೆಯುತ್ತವೆ.

ಈ ನಡುವೆ ಕಾರ್ಗಿಲ್ ಹಾದಿಯಲ್ಲಿಯೇ ನಾಯಕನ ಕ್ಯಾಮೆರಾ ಕೈ ಕೊಡುತ್ತದೆ. ನಾಯಕಿಯ ಕ್ಯಾಮೆರಾಮನ್ ಕೂಡಾ ಕಾರ್ಗಿಲ್ ಕದನದ ಭಯದಿಂದ ಎಸ್ಕೇಪಾಗುತ್ತಾನೆ. ಕಡೆಗೂ ಒಂದೇ ಕ್ಯಾಮೆರಾದಲ್ಲಿ ಮ್ಯಾನೇಜು ಮಾಡೋ ಒಪ್ಪಂದದ ಮೂಲಕ ಇಬ್ಬರೂ ವರದಿಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆ ಬಳಿಕ ದೇಶಪ್ರೇಮದ ಬಗ್ಗೆ, ಯುದ್ಧದ ಬಗ್ಗೆ ಪ್ರವಚನ, ಇನ್ನಿಲ್ಲವಾದ ಯೋಧರ ಕುಟುಂಬದ ಸಂಕಟ, ಬಾರ್ಡರಿನಲ್ಲಿ ನಿಂತಿದ್ದರೂ ಪ್ರೀತಿಯ ಬಂಧದಿಂದ ಕಾಡಿಸಿಕೊಳ್ಳುವ ಕೈ ಕಳಕೊಂಡ ಯೋಧನೊಬ್ಬನ ಆಲಾಪ…

ನಾಯಕಿ ದೃಷ್ಯ ಮಾಧ್ಯಮಕ್ಕೆ ಕೆಲಸಕ್ಕೆ ಸೇರುವಾಗಲೇ ಎಂಗೇಜ್‌ಮೆಂಟ್ ಮಾಡಿಕೊಂಡಿರುತ್ತಾಳೆ. ನಾಯಕನಿಗೆ ಕಾರ್ಗಿಲ್ ಹಾದಿಯಲ್ಲೇ ಪ್ರೀತಿ ಹುಟ್ಟಿದ್ದರೂ ಆಕೆಗೆ ಎಂಗೇಜ್‌ಮೆಂಟ್ ಆಗಿದೆ ಎಂಬ ಕಾರಣದಿಂದ ಸುಮ್ಮನಾಗುತ್ತಾನೆ. ಇದೆಲ್ಲದರಾಚೆಗೆ ಇವರಿಬ್ಬರು ಒಂದಾಗುತ್ತಾರಾ? ಕಾರ್ಗಿಲ್ ವರದಿಗಾರಿಕೆಯ ನಡುವೆ ಏನೇನಾಗುತ್ತೆ ಎಂಬೆಲ್ಲ ಕುತೂಹಲಗಳಿದ್ದರೆ ಥೇಟರಿನಲ್ಲಿಯೇ ತಣಿಸಿಕೊಳ್ಳೋದೊಳ್ಳೇದು!

ಪಟ್ಟು ಹಿಡಿದು ಕೂತಿದ್ದರೆ ಒಂದಷ್ಟು ಚೆಂದಗೆ ರೂಪಿಸಬಹುದಾಗಿದ್ದ ಈ ಚಿತ್ರ ಯಾಕೋ ಪೇಲವವಾಗಿದೆ. ಅರ್ಜುನ್ ಸರ್ಜಾ ತಮ್ಮ ಮಗಳನ್ನು ಲಾಂಚ್ ಮಾಡೋ ಉಮೇದಿನಲ್ಲಿ ಆಕೆಗೇ ಎಷ್ಟು ಸಾಧ್ಯವೋ ಅಷ್ಟು ಫೋಕಸ್ ಮಾಡಿದ್ದಾರೆ. ಆ ಭರಾಟೆಯಲ್ಲಿ ನಾಯಕ ಚಂದನ್ ಕೂಡಾ ಮಂಕಾಗುತ್ತಾನೆ. ಇನ್ನುಳಿದಂತೆ ಇದ್ದಲ್ಲಿಯೇ ಚಿತ್ರೀಕರಣ ಮುಗಿಸಿಕೊಳ್ಳುವ ಆಲೋಚನೆಯಿಂದಲೋ, ಮತ್ಯಾವ ಕಾರಣದಿಂದಲೋ ಕೆಲ ದೃಷ್ಯಗಳು ಅಭಾಸದಂತಿವೆ. ಕಾರ್ಗಿಲ್ ಅನ್ನು ನಿಜವಾಗಿ ತೋರಿಸಿ ಅಲ್ಲಿನ ಕದನಗಳನ್ನು ಬೇರ್‍ಯಾವುದೋ ಕಲ್ಲು ಕ್ವಾರಿಯಲ್ಲಿ ಮಾಡಿರೋದೂ ಕೂಡಾ ಕೊರತೆಯಂತೆಯೇ ಕಾಡುತ್ತೆ. ಇನ್ನು ದೆಹಲಿಯ ದೃಶ್ಯಗಳನ್ನು ಶೂಟ್ ಮಾಡುವ ಬದಲು ಸ್ಟಾಕ್ ಶಾಟ್ಸ್ ಬಳಸಿರುವುದು ಕೂಡಾ ಸಿನಿಮಾದ ಗುಣಮಟ್ಟವನ್ನು ತೋರುತ್ತದೆ!

ಇನ್ನುಳಿದಂತೆ ಈ ಚಿತ್ರ ತಮಿಳಿನಲ್ಲಿಯೂ ತಯಾರಾಗಿರೋದರಿಂದ ಕೆಲವಾರು ತಾಂತ್ರಿಕ ದೋಷಗಳೂ ಕಣ್ಣಿಗೆ ರಾಚುವಂತಿವೆ. ಕ್ಯಾಮೆರಾ ಕೆಲಸವಂತೂ ಈ ಚಿತ್ರದ ಅಸಲೀ ಮೈನಸ್ ಪಾಯಿಂಟು. ಮೊದಲ ಚಿತ್ರವಾದರೂ ಐಶ್ವರ್ಯಾ ನಟನೆ ಓಕೆ. ಚಂದನ್ ನಟನೆಯೂ ಪರವಾಗಿಲ್ಲ. ಒಂದೆರಡು ಹಾಡುಗಳು ಕೇಳುವಂತಿವೆ. ಆದರೆ ಕ್ಲೈಮ್ಯಾಕ್ಸ್ ಮತ್ತು ಅದರ ಹಿಂದಿನ ಒಂದಷ್ಟು ನಿಮಿಷಗಳನ್ನು ನಿರ್ದೇಶಕರು ನಿಜಕ್ಕೂ ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ. ಅದುವೇ ಈ ಚಿತ್ರವನ್ನು ಕೊಂಚ ಸಹನೀಯವಾಗಿಸಿದೆ!

(2/5) **

Leave a Reply

Your email address will not be published. Required fields are marked *


CAPTCHA Image
Reload Image