One N Only Exclusive Cine Portal

ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಹುಲಿರಾಯ!

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಭಿನ್ನ ಹಾದಿಯ ಚಿತ್ರಗಳ ಬರುವಿಕೆ ಹೆಚ್ಚಾಗುತ್ತಿದೆ. ಕನ್ನಡದಲ್ಲಿ ಕಥೆ ಇಲ್ಲ ಕಣ್ರೀ ಎಂಬಂಥಾ ವ್ಯರ್ಥಾಲಾಪದ ನೆತ್ತಿಗೆ ಹೊಡೆದಂತೆ ಅದ್ಭುತ ಕಥಾ ಹಂದರ ಹೊಂದಿರೋ ಚಿತ್ರಗಳೂ ಕೂಡಾ ಸಾಲು ಸಾಲಾಗಿ ತೆರೆ ಕಾಣುತ್ತಿವೆ. ಈ ಹಿಂದೆ ತಾವು ನಿರ್ದೇಶನ ಮಾಡಿದ್ದ ಎರಡು ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹುಲಿರಾಯ ಈ ವಾರ ತೆರೆಗೆ ಬಂದಿದೆ. ಈ ಹಿಂದೆ ‘ನಮ್ ಏರಿಯಾಲ್ ಒಂದಿನ ಮತ್ತು ‘ತುಘ್ಲಕ್ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದವರು ಅರವಿಂದ್ ಕೌಶಿಕ್. ಈ ಎರಡೂ ಚಿತ್ರಗಳೂ ಕೂಡಾ ಡಿಫರೆಂಟಾದ ಕಥಾ ಹಂದರ ಮತ್ತು ನಿರೂಪಣಾ ಶೈಲಿಯಿಂದ ಗಮನ ಸೆಳೆದಿದ್ದವು. ಈ ಚಿತ್ರಗಳ ಮೂಲಕವೇ ರಕ್ಷಿತ್ ಶೆಟ್ಟಿ ಮತ್ತು ಅನೀಶ್ ಮುಂತಾದವರು ಅನಾವರಣಗೊಂಡಿದ್ದರು. ಈಗ ತೆರೆಗೆ ಬಂದಿರುವ ‘ಹುಲಿರಾಯ ಚಿತ್ರದಲ್ಲೂ ಅರವಿಂದ್ ಅನೇಕ ಹೊಸ ಕಲಾವಿದರನ್ನು ಪರಿಚಯಿಸಿದ್ದಾರೆ. ಈಗಾಗಲೇ ಜನರಿಗೆ ಪರಿಚಯವಿದ್ದ ಬಾಲು ನಾಗೇಂದ್ರ ಅವರನ್ನು ಪೂರ್ಣಪ್ರಮಾಣದ ಹೀರೋ ಆಗಿಸಿದ್ದಾರೆ.
‘ನಮ್ಮ ನೇಟಿವಿಟಿಗೆ ಸಿನಿಮಾ ಹೊಂದಲ್ಲ. ಕಥೆಯಲ್ಲಿ ಧಂ ಇಲ್ಲ, ಸ್ಕ್ರೀನ್ ಪ್ಲೇನೇ ಸರಿ ಇಲ್ಲ… ಹೀಗೆ ಅನೇಕ ‘ಇಲ್ಲಗಳು ಕನ್ನಡ ಚಿತ್ರರಂಗದ ಪಾಲಿಗೆ ಸಾರ್ವಕಾಲಿಕ ಕೊರಗಾಗಿ ಉಳಿದುಬಿಟ್ಟಿದೆ. ಇಂಥಾ ಕೊರಗಿನ ನಡುವೆಯೇ ಅಲ್ಲಲ್ಲಿ ಚೆಂದನೆಯ ಸಿನಿಮಾಗಳು ಚೆಂಗನೆ ಬಂದು ಅಚ್ಛರಿ ಮೂಡಿಸಿಬಿಡುತ್ತವೆ. ಹಾಗೆ ಅಚ್ಛರಿದಾಯಕವಾಗಿ ಮೂಡಿಬಂದಿರುವ ಸಿನಿಮಾ ‘ಹುಲಿರಾಯ. ಮಾಮೂಲಿ ಸಿನಿಮಾಗಳಲ್ಲಿ ಯಾವ್ಯಾವುದು ಇಲ್ಲವೋ ಅವೆಲ್ಲವುಗಳನ್ನೂ ಬೆರೆಸಿ ಪಕ್ಕಾ ಕಮರ್ಷಿಯಲ್ಲಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅರವಿಂದ್ ಕೌಶಿಕ್.
ಇದು ಕಾಡು ಮತ್ತು ನಾಡಿನ ಮನಸ್ಥಿತಿಗಳಿಗೆ ಸಂಬಂಧಿಸಿದ ಸಿನಿಮಾ. ಆ ಹುಡುಗನ ಹೆಸರು ಸುರೇಶ. ರವಿಚಂದ್ರನ್ ಅಭಿಮಾನಿ. ಮೊಬೈಲಲ್ಲಿ ನೆಟ್ ವರ್ಕ್ ಇಲ್ಲದಿದ್ದರೂ ಹಂಸಲೇಖಾರ ಎರಡು ಸಾವಿರ ಹಾಡುಗಳು ಅವನ ಮೆಮರಿ ಕಾರ್ಡಲ್ಲಿರತ್ತೆ. ನೋಟಿನ ಲೆಕ್ಕ ಕೂಡಾ ಗೊತ್ತಿಲ್ಲದ ಅನಕ್ಷರಸ್ಥ. ಇಂಥಾ ಹುಡುಗನಿಗೆ ಅದೇ ಊರಿನ ಹುಡುಗಿಯ ಮೇಲೆ ಲವ್ವು. ಅವಳಪ್ಪ ಕೊಟ್ಟ ಟಾಸ್ಕ್ ಗೆದ್ದರೆ ಮಾತ್ರ ಮದುವೆ ಅನ್ನೋ ಪರಿಸ್ಥಿತಿ. ಈ ಕಾರಣಕ್ಕೇ ಕಾಡು ಬಿಟ್ಟು ನಾಡು ಸೇರುತ್ತಾನೆ. ಸಿಟಿ ಜೀವನದ ಬಗ್ಗೆ ಏನೇನೂ ಗೊತ್ತಿಲ್ಲದವನು, ಕೂಲಿ ಕೆಲಸ-ದುಡಿಮೆಯನ್ನೂ ಗಿಟ್ಟಿಸಿಕೊಳ್ಳಲಾರದ ಅಮಾಯಕ ಮಾವ ಹೇಳಿದಂತೆ ನಡೆದುಕೊಳ್ತಾನಾ? ಆ ಹುಡುಗಿ ಸುರೇಶನಿಗೆ ದಕ್ಕುತ್ತಾಳಾ? ಮತ್ತೊಬ್ಬ ಹುಡುಗಿ ಯಾಕೆ ಬರ‍್ತಾಳೆ? ಊರಿನವರ ನಂಬಿಕೆಯಂತೆ ಹುಲಿರಾಯನ ದೆವ್ವ ಸುರೇಶನನ್ನ ಬಲಿ ತೆಗೆದುಕೊಂಡುಬಿಡುತ್ತಾ? ಹೀಗೆ ಹೆಜ್ಜೆ ಹೆಜ್ಜೆಗೂ ನಾನಾ ರೀತಿಯ ಕೌತುಗಳನ್ನು ಹುಟ್ಟಿಸುತ್ತಾ ಸಾಗುವ ಸಿನಿಮಾ ‘ಹುಲಿರಾಯ. ಇಲ್ಲಿ ಪೂರ್ಣಚಂದ್ರ ತೇಜಸ್ವಿಯವರು ವರ್ಣಿಸುವ ಕಾಡು, ವಿಚಿತ್ರ ಜನ,  ಕಣ್ಣೆದುರು ಬಂದು ನಿಲ್ಲುವಂತಾ ಪಾತ್ರಗಳು ತೆರೆಮೇಲೆ ಮೂಡಿದ ಅನುಭವವಾಗುತ್ತದೆ.
ತಾನು ಬದುಕುತ್ತಿರುವ ಕಾಡನ್ನೇ ಉಸಿರಾಗಿಸಿಕೊಂಡ ಹುಡುಗನೊಬ್ಬ ಏಕಾಏಕಿ ನಗರ ಜೀವನಕ್ಕೆ ಎತ್ತೆಸೆಯಲ್ಪಟ್ಟಾಗ ಎದುರಾಗುವ ಹಿಂಸೆ. ದುಡ್ಡೇ ಮುಖ್ಯವಾಗಿರುವ ದುನಿಯಾದಲ್ಲಿ ಮನುಷ್ಯತ್ವ ಕಳೆದುಕೊಳ್ಳುವ ಮಂದಿ, ದುಡ್ಡಿಗಾಗಿ ಜೀವ ತೆಗೆಯುವವನ ಮನಸ್ಸಿನಲ್ಲಿ ಮೊಳಕೆಯೊಡೆಯುವ ಮಾನವೀಯತೆ… ಕಾಡಿನ ಮೂಲ ನಿವಾಸಿಗಳನ್ನು ರೆಸಾರ್ಟು ಮಣ್ಣು ಮಸಿ ಹೆಸರಿನಲ್ಲಿ ಒಕ್ಕಲೆಬ್ಬಿಸಿದಾಗ ಬೇರನ್ನು ಕಳೆದುಕೊಂಡು ನಲುಗುವ ಕಾಡುವಾಸಿಗಳ ಸಂಕಟ, ಪರರ ಕಷ್ಟವನ್ನೇ ಬಂಡವಾಳ ಮಾಡಿಕೊಂಡ ಬ್ರೋಕರು… ಹೀಗೆ ಹಲವು ಬಗೆಯ ಮುಖಗಳನ್ನು ಅರವಿಂದ್ ಕೌಶಿಕ್ ಪರಿಚಯಿಸಿದ್ದಾರೆ.
ಈ ಸಿನಿಮಾದ ಮೂಲಕ ಬಾಲು ನಾಗೇಂದ್ರ ಎನ್ನುವ ಒರಿಜಿನಲ್ ಪ್ರತಿಭಾವಂತ ಚಿತ್ರರಂಗಕ್ಕೆ ದಕ್ಕಿದ್ದಾನೆ. ‘ಹುಲಿರಾಯನ್ನನೇ ನುಂಗಿಹಾಕುವಂತೆ ಪಾತ್ರದೊಳಗೆ ಬೆರೆತಿದ್ದಾರೆ ಬಾಲು. ಇಬ್ಬರು ನಾಯಕಿಯರಲ್ಲಿ ಚಿರಶ್ರೀ ಎಷ್ಟು ಬೇಕೋ ಅಷ್ಟು ನಟಿಸಿದರೆ ದಿವ್ಯಾ ಉರುಡುಗ ಈ ಕಾಲದ ಹುಡುಗಿಯಾಗಿ ಸಖತ್ತಾಗಿ ಪರ್ಫಾರ್ಮ್ ಮಾಡಿದ್ದಾಳೆ. ಇನ್ನು ಗಿರಿಯಪ್ಪನ ಪಾತ್ರದಲ್ಲಿ ನಾಗೇಂದ್ರ ಕುಮಾರ್, ಬ್ರೋಕರಪ್ಪನ ಪಾತ್ರದಲ್ಲಿ ಶ್ರೀನಾಥ್ ಕೌಂಡಿನ್ಯ, ಕುಲದೀಪ್ ಮುಂತಾದವರು ತಮ್ಮತಮ್ಮ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಅನೇಕರು ಹೊಸಬರಾಗಿದ್ದೂ ಚೆಂದಗೆ ನಟಿಸಿರುವುದರಿಂದ ಪರದೆ ಮೇಲೆ ಫ್ರೆಶ್ ಫೀಲ್ ಹುಟ್ಟುತ್ತದೆ. ಅರವಿಂದ್ ಕೌಶಿಕ್ ಮತ್ತು ನಂದಿನಿ ನಂಜಪ್ಪ ಬರೆದ ಹಾಡುಗಳು ಸೇರಿದಂತೆ ಅರ್ಜುನ್ ರಾಮ್ ಸಂಗೀತ ಹೊಸದೇನೋ ಮ್ಯಾಜಿಕ್ ಮಾಡಿಬಿಟ್ಟಿದೆ. ಕ್ಯಾಮೆರಾ ಕೆಲಸ ಕೂಡಾ ಹೊಸತನದಿಂದ ಕೂಡಿದೆ. ಸಂಕಲನದಲ್ಲಿ ಮಾತ್ರ ಅದೇನೋ ಹೊಸದಾಗಿ ಪ್ರಯತ್ನಿಸಿದ್ದಾರೆ.
ಸಂಭಾಷಣೆ ಸೂಪರ್. ತಮಿಳು-ಮಲಯಾಳಂ ಸಿನಿಮಾದವರು ಮಾಡೋ ಸಿನಿಮಾಗಳನ್ನು ಹೊಗಳೋ ಮಂದಿಯೆಲ್ಲಾ ಹೋಗಿ ‘ಹುಲಿರಾಯನನ್ನು ನೋಡಲೇಬೇಕು. ಸೀಮಿತ ಮಾರುಕಟ್ಟೆ ಮುಂತಾದ ನೆಪಗಳಾಚೆಗೂ ಪರಭಾಷೆಯವರೇ ಬೆರಗಾಗುವಂಥಾ ಚಿತ್ರಗಳನ್ನೂ ಮಾಡಬಹುದೆಂಬುದಕ್ಕೆ ಹುಲಿರಾಯ ಚಿತ್ರ ಸ್ಪಷ್ಟ ಸಾಕ್ಷಿ. ಪೂರ್ಣಚಂದ್ರ ತೇಜಸ್ವಿ ಮುಂತಾದವರ ಪುಸ್ತಕಗಳ ಓದು ಎಂಥಾ ಗಟ್ಟಿ ಕಥೆ ಹುಟ್ಟಿಸಬಲ್ಲದು ಎಂಬುದಕ್ಕೂ ಹುಲಿರಾಯನೇ ತಾಜಾ ನಿದರ್ಶನ. ಕಾಡಿನೊಂದಿಗೆ ಬೆಸೆದುಕೊಂಡ ಬದುಕು ಬೆಂಗಳೂರಿನಂಥಾ ರಾಕ್ಷಸ ನಗರಿಗೆ ಬಂದು ಬಿದ್ದಾಗ ಅನುಭವಿಸೋ ತಲ್ಲಣ, ಅನಾಥಪ್ರಜ್ಞೆಗಳನ್ನು ಸದಾ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ ಅರವಿಂದ ಕೌಶಿಕ್. ಆ ಪಾತ್ರವನ್ನು ಆವಾಹಿಸಿಕೊಂಡು ತನ್ಮಯರಾಗಿ ನಟಿಸಿರೋದು ನಿಜಕ್ಕೂ ಬಾಲು ನಾಗೇಂದ್ರರ ನಟನೆಯ ತಾಕತ್ತನ್ನು ಅನಾವರಣಗೊಳಿಸಿದೆ.
ಹುಲಿರಾಯನ ಮೂಲಕ ಖಂಡಿತವಾಗಿಯೂ ಏಕತಾನನತೆಯ ನಡುವೆ ಒಳ್ಳೆ ಚಿತ್ರ ನೋಡಿದ ಭಿನ್ನ ಅನುಭವ ಪ್ರತಿಯೊಬ್ಬರನ್ನು ಆವರಿಸಿಕೊಳ್ಳುತ್ತದೆ… ಯಾವ ಪಬ್ಲಿಸಿಟಿ ಗಿಮಿಕ್ಕುಗಳೂ ಇಲ್ಲದೆ ತನ್ನ ಆಂತರ್ಯದ ಖದರಿನಿಂದಲೇ ಸದ್ದು ಮಾಡಿದ್ದು, ಆ ಮೂಲಕ ಗರಿಗೆದರಿಕೊಂಡಿದ್ದ ನಿರೀಕ್ಷೆಗಳನ್ನು ನಿಜವಾಗಿಸುವಂತಿರೋದು ಹುಲಿರಾಯನ ಹೆಚ್ಚುಗಾರಿಕೆ. ಮೊದಲ ಬಾರಿಗೆ ನಿರ್ಮಾಪಕರಾಗಿರುವ ಕೆ. ಎನ್. ನಾಗೇಶ್ ಕೋಗಿಲು ಅವರ ಪ್ರಯತ್ನ ನಿಜಕ್ಕೂ ಸಾರ್ಥಕವಾಗಿದೆ…

Leave a Reply

Your email address will not be published. Required fields are marked *


CAPTCHA Image
Reload Image