One N Only Exclusive Cine Portal

ಬೋಧಿಸುವ ಬಂಗಾರ….

ಶಿವರಾಜ್ ಕುಮಾರ್ ಅಭಿನಯದ ಬಂಗಾರ ಸಿನಿಮಾ ಯಾವುದೇ ಸದ್ದು ಗದ್ದಲವಿಲ್ಲದೆ ಸೈಲೆಂಟಾಗೇ ರಿಲೀಸಾಗಿದೆ. ರೌಡಿಸಂ, ಲಾಂಗು, ಮಚ್ಚುಗಳ ಹೊರತಾಗಿ ಸಮಾಜಕ್ಕೆ ಸಂದೇಶ ನೀಡುವ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಒತ್ತಾಯ ಮಾತ್ರಕ್ಕೆ ಬಹುಶಃ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಹುಟ್ಟಿಕೊಂಡಿರಬೇಕು!

ಫಾರಿನ್ ನಲ್ಲಿ ಬೃಹತ್ ಉದ್ಯಮವನ್ನು ನಡೆಸುತ್ತಾ ಆಗರ್ಭ ಶ್ರೀಮಂತಿಕೆಯಯನ್ನು ಕಂಡ ಶಿವು(ಶಿವರಾಜ್ ಕುಮಾರ್)ಗೆ `ನಾಳೆ’ ಎಂಬುದರ ಬಗ್ಗೆ ನಂಬಿಕೆ ಇರುವುದಿಲ್ಲ. ನಾಳೆ ಯಾರಿರುತ್ತಾರೋ ಇಲ್ಲವೋ ಇವತ್ತು ಅಂದುಕೊಂಡಂತೆ ಬದುಕಿಬಿಡಬೇಕು ಅನ್ನೋದು ಶಿವು ಜೀವಿಸುವ ಶೈಲಿ. ಇಂಥ ಶಿವು ತನ್ನ ಅಪ್ಪನ ಬಗ್ಗೆ ತಿಳಿದುಕೊಳ್ಳಲು ಒಂದು ಪುಸ್ತಕ ಓದುತ್ತಾನೆ. ಆಗ ಗೊತ್ತಾಗುವುದು ತಾನು ಭೂ ಹೋರಾಟಗಾರ `ಬಂಗಾರದ ಮನುಷ್ಯ’ನ ಕುಡಿ ಅನ್ನೋದು. ಈ ವಿಚಾರ ತಿಳಿಯುತ್ತಲೇ ತನ್ನಪ್ಪ ಹೋರಾಡಿದ ನಾಡಿನ ಹಿತ ಕಾಯಲು ವಿದೇಶದಿಂದ ಕರ್ನಾಟಕಕ್ಕೆ ಬರುತ್ತಾನೆ. ಅಷ್ಟರಲ್ಲಾಗಲೇ ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ರೈತರ ನೆಲವನ್ನು ಕಿತ್ತುಕೊಂಡು, ಅವರ ಬಾಯಿಗೆ ಮಣ್ಣುಹಾಕುವ ಸಂಚು ರೂಪಿಸಿರುತ್ತವೆ. ಅದರ ವಿರುದ್ಧ ಶಿವು ಹೋರಾಟ ಕಟ್ಟುತ್ತಾನೆ. ರೈತರ ಸಮಸ್ಯೆಗೆ ಸರ್ಕಾರದ ಕಣ್ತೆರೆಸಲು ಸಿಟಿಯಲ್ಲಿರುವ ಜನರಿಗೆ ಚುರುಕು ಮುಟ್ಟಿಸುತ್ತಾನೆ. ಕೃಷಿಕರ ಮಹತ್ವ ಗೊತ್ತಿಲ್ಲದ ಜನ ಅನ್ನಾಹಾರಕ್ಕಾಗಿ ಪರದಾಡುವಂತಾಗುತ್ತದೆ… ಈ ಎಲ್ಲದರ ನಡುವೆ ರೈತರ ಸಮಸ್ಯೆ ಬಗೆಹರಿಸಲು ನಿಂತ ಬಂಗಾರದ ಮನುಷ್ಯನ ಮಗನಿಗೆ ಎದುರಾಗುವ ಸವಾಲುಗಳೇನು? ಕಡೆಗೆ ಈತ ಹೋರಾಟದಲ್ಲಿ ಜಯಗಳಿಸುತ್ತಾನಾ? ಎಂಬೆಲ್ಲಾ ಅಂಶಗಳು ಎಳೆಎಳೆಯಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ.
ರೈತರ ಸಂಕಟಕ್ಕೆ ಮಿಡಿಯದ ಸಿಟಿ ಜನರನ್ನು ಕಂಗಾಲುಗೊಳಿಸುವ ಕಾನ್ಸೆಪ್ಟಿನ ಸಿನಿಮಾವನ್ನು ಈ ಹಿಂದೆ `ಕತ್ತಿ’ ಎನ್ನುವ ತಮಿಳು ಸಿನಿಮಾದಲ್ಲಿ ಬಳಸಿಕೊಳ್ಳಲಾಗಿತ್ತು. ಅಲ್ಲಿ ನಗರ ಪ್ರದೇಶಕ್ಕೆ ನೀರು ಬಂದ್ ಮಾಡಿಸುವ ಮೂಲಕ ಹೋರಾಟದ ಕಿಚ್ಚು ಹೊತ್ತಿಸಲಾಗಿತ್ತು. ಇಲ್ಲಿ ಆಹಾರವನ್ನೇ ಬಂದ್ ಮಾಡಲಾಗಿದೆ. ಶಿವರಾಜ್ ಕುಮಾರ್ ರಂಥ ಸ್ಟಾರ್ ಒಬ್ಬರು ಹೀಗೆ ಸಮಾಜಿಕ ಕಳಕಳಿಯ ಸಿನಿಮಾದಲ್ಲಿ ನಟಿಸಿರೋದೇನೋ ಸರಿ. ಆದರೆ, ಇಲ್ಲಿ ನಾಯಕನ ಪಾತ್ರ ವಿಜೃಂಭಿಸಲು ರೈತರ ಸಮಸ್ಯೆಗಳಿಗೆ ಕಲ್ಪಿತ ಪರಿಹಾರಗಳನ್ನು ತೋರಿರುವುದು ಕ್ಲೀಷೆಯೆನಿಸಿದೆ. ಈ ನಾಡಿದ ರೈತ ಮಕ್ಕಳ ಸಮಸ್ಯೆಗಳು ಈ ಚಿತ್ರದಲ್ಲಿ ತೋರಿರುವಷ್ಟು ಸಲೀಸಾಗಿ ಬಗೆಹರಿಯೋದು ಅಸಾಧ್ಯವಾಗಿರುವುದರಿಂದ ನೋಡುಗರನ್ನು ಕಾಡುವಂತೆ ಮಾಡುವ ಉದ್ದೇಶದಿಂದ ನಿರ್ದೇಶಕರು ಹೆಣೆದಿರುವ ದೃಶ್ಯಗಳು ಕೊರೆಯುವಂತೆ ಕಂಡಿದೆ. ಚಿತ್ರಕತೆಯಲ್ಲಿ ಗಟ್ಟಿತನ ಇಲ್ಲ. ಸಂಭಾಷಣೆ ಪೆಡಸಾಗಿದೆ. ಶಿವರಾಜ್ ಕುಮಾರ್ ಪಾತ್ರ ಬಳಲಿದರೂ ನಟನೆಯಲ್ಲಿ ಯಾವತ್ತಿನಂತೆ ಉತ್ಸಾಹ ಕಾಣುತ್ತದೆ. ಕಾಮಿಡಿ ಚಿಕ್ಕಣ್ಣನ ನಟನೆ ಕಂಡು ನಕ್ಕವರೇ ಪುಣ್ಯವಂತರು. ಇಷ್ಟಾಗಿಯೂ ಈ ಚಿತ್ರವನ್ನೊಮ್ಮೆ ನೋಡಿಬಂದವರ ಎದೆಯಲ್ಲಿ ರೈತಜೀವಗಳ ಕುರಿತಾಗಿ ಒಂದಿಷ್ಟಾದರೂ ಕರುಣೆ ಹುಟ್ಟಿಕೊಂಡರೆ ಈ ಸಿನಿಮಾ ಸಾರ್ಥಕತೆ ಪಡೆಯುತ್ತದೆ.

Leave a Reply

Your email address will not be published. Required fields are marked *


CAPTCHA Image
Reload Image