One N Only Exclusive Cine Portal

ಭರ್ಜರಿ ಎಂಟ್ರಿ!

ಧೃವ ಸರ್ಜಾ ಅಭಿನಯದ ಭರ್ಜರಿ ಚಿತ್ರಕ್ಕೆ ಹೆಸರಿಗೆ ತಕ್ಕುದಾಗಿಯೇ ನಿರೀಕ್ಷೆಗಳಿದ್ದವು. ಕೊಂಚ ತಡವಾದರೂ ಬಿರುಸಾಗಿಯೇ ಈ ಚಿತ್ರವೀಗ ತೆರೆ ಕಂಡಿದೆ. ಧೃವ ಅಭಿಮಾನಿಗಳು ಹುಚ್ಚೇಳುವಂತೆ ಮಾಡುತ್ತಲೇ ಬೇರೆ ವಲಯದ ಪ್ರೇಕ್ಷಕರನ್ನೂ ಆವರಿಸಿಕೊಳ್ಳೋ ಸ್ಪಷ್ಟ ಸೂಚನೆಯೊಂದಿಗೆ `ಭರ್ಜರಿ ಅದ್ಧೂರಿ ಓಪನಿಂಗ್ ಪಡೆದುಕೊಂಡಿದೆ.

ಬೆಳೆಬೆಳೆಯುತ್ತಾ ಬುದ್ಧಿ ಬರುತ್ತಿದ್ದಂತೆಯೇ `ನಾನು ಸೋಲ್ಜರ್ ಆಗಬೇಕು’ ಅನ್ನೋ ದೇಶಭಕ್ತಿಯ ಕನಸು, ಅದೇ ಬುದ್ಧಿ ಇನ್ನೊಂಚೂರು ಬಲಿಯುತ್ತಿದ್ದಂತೇ `ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು, ಇನ್ನೊಂದು, ಮತ್ತೊಂದು ಆಗಬೇಕು’ ಅನ್ನೋ ಚಂಚಲ ಮನಸ್ಥಿತಿ. ಕಡೆಗೆ ಗೊಂದಲಕ್ಕೆ ಬಿದ್ದು ಯಾವುದೂ ಆಗದೆ ಹಾದಿಬೀದಿಯಲ್ಲಿ ಕಿತ್ತಾಡಿಕೊಂಡು ಉಡಾಫೆ ಜೀವನ ಸಾಗಿಸೋ ಹುಡುಗ. ಯಥಾ ಪ್ರಕಾರ ಅಪ್ಪ, ಅಮ್ಮ, ಜೊತೆಗೊಬ್ಬಳು ತಂಗಿ. ಇಂಥ ಹುಡುಗ ಹುಡುಗಿಯೊಬ್ಬಳ ಬೆನ್ನುಬಿದ್ದು ಕಾಡಿ ಬೇಡಿ ಲವ್ವಿಗೆ ಬೀಳಿಸಿಕೊಳ್ಳೋದು ಮಾಮೂಲಿ ಫಾರ್ಮುಲಾ. ಆದರೆ `ಭರ್ಜರಿ’ಯ ಕತೆ ಈ ವಿಚಾರದಲ್ಲಿ ನಿಜಕ್ಕೂ ಡಿಫರೆಂಟು!ಇಲ್ಲಿ ಹುಡುಗಿಯೇ ಥರಾವರಿ ಕತೆ ಕಟ್ಟಿ ಹುಡುಗನನ್ನು ಒಲಿಸಿಕೊಳ್ಳೋ ಪೈಕಿ. ಆಕೆಯ ಪ್ರಯತ್ನ ಕೂಡಾ ಯಶಸ್ವಿಯಾಗಿ ಮನೆಮಂದಿಯೆಲ್ಲಾ ಸೇರಿ ನಿಶ್ಚಿತಾರ್ಥ ಮಾಡುತ್ತಾರೆ. ಆದರೆ ತಂದೆಯ ಬಯಕೆಯಂತೆ ಹುಡುಗ ಸೇನೆ ಸೇರಲು ಹೊರಡಲೇಬೇಕಾದ ಅನಿವಾರ್ಯ. ಆಗ ಹೀರೋ ಪ್ರಯಾಣ ಶುರುವಾಗುತ್ತದೆ. ರೈಲು ಚಲನೆ ಆರಂಭಿಸುತ್ತದೆ. ಅಷ್ಟರಲ್ಲಾಗಲೇ ಮತ್ತೊಬ್ಬ ನಾಯಕಿಯ ಎಂಟ್ರಿ. ರೈಲು ಮುಂದೆ ಹೋದರೂ ಹೀರೋ ಪ್ರಯಾಣದ ದಿಕ್ಕು ಮಾತ್ರ ಬದಲಾಗುತ್ತದೆ. ಆಮೇಲೆ ನಡೆಯೋದೆಲ್ಲಾ `ಭರ್ಜರಿ’ ಸನ್ನಿವೇಶಗಳೇ!
ಸಾರಥಿ, ಭಜರಂಗಿ, ವಜ್ರಕಾಯ, ಮರ್‍ಯಾದೆ ರಾಮಣ್ಣ, ಮಾರುತಿ ಎಂಟ್ನೂರು… ಹೀಗೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಬಹುತೇಕ ಈ ಎಲ್ಲ ಸಿನಿಮಾದಲ್ಲಿ ಕೂಡಾ ಸಿನಿಮಾದ ಆರಂಭದಲ್ಲಿ ಹೀರೋ ಹೇಗೆ ಬೇಕೋ ಹಾಗೆ ಬದುಕುತ್ತಿರುತ್ತಾನೆ. ಅರ್ಧ ಸಿನಿಮಾ ಮುಗಿಯೋ ಹೊತ್ತಿಗೆ ದೂರದ ಊರೊಂದಕ್ಕೆ ಹೋಗಿ ಸೇರುತ್ತಾನೆ. ಆ ಊರಿಗೂ ತನಗೂ ಏನು ಸಂಬಂಧ ಅನ್ನೋದು ಮುಕ್ಕಾಲು ಸಿನಿಮಾ ಆಗೋಹೊತ್ತಿಗೆ ಗೊತ್ತಾಗುತ್ತದೆ. ಆ ನಂತರ ಮಣ್ಣಿನ ಋಣ, ಕರುಳ ಬಂಧಗಳಿಗಾಗಿ ಹೋರಾಟ ನಡೆಸುತ್ತಾನೆ… `ಭರ್ಜರಿ’ ಕತೆ ಕೂಡಾ ಮೇಲೆ ತಿಳಿಸಿದ ಸಿನಿಮಾಗಳಿಗೆ ಹೊರತಾಗಿಲ್ಲ; ಆದರೆ ನಿರೂಪಣೆ ಭಿನ್ನವಾಗಿದೆ.
ದರ್ಶನ್ ಅವರ ನಿರೂಪಣೆಯೊಂದಿಗೆ ಸಿನಿಮಾ ಆರಂಭವಾಗಿ, ಮಧ್ಯಂತರ ಮತ್ತು ಕೊನೆಯಲ್ಲಿ ಕೂಡಾ ಅವರ ದನಿಯೊಂದಿಗೇ ಮುಕ್ತಾಯವಾಗುತ್ತದೆ. ಚಿತ್ರದ ಫಸ್ಟ್ ಹಾಫ್‌ನಲ್ಲಿ ಕಾಮಿಡಿಗೆ ಹೆಚ್ಚು ಒತ್ತು ಕೊಡಲಾಗಿದೆ. ಸಾಧುಕೋಕಿಲಾ ಕೂಡಾ ಬಂದು ಹೋಗುತ್ತಾರೆ. ಎರಡನೇ ಭಾಗ ಸಂಪೂರ್ಣ ಬೇರೆಯದ್ದೇ ಫ್ಲೇವರಿನಲ್ಲಿ ಸಾಗುತ್ತದೆ. ಹಾಗೆ ನೋಡಿದರೆ ಸಿನಿಮಾ ಟೇಕಾಫ್ ಆಗೋದೇ ಇಂಟರ್’ವಲ್ ಹತ್ತಿರ ಬಂದಾಗ, ಹರಿಪ್ರಿಯಾ ಎಂಟ್ರಿ ಕೊಟ್ಟ ಮೇಲೆ. ಇಲ್ಲಿ ಮೂವರು ನಾಯಕಿಯರಿದ್ದಾರೆ. ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ದೀಪಕ್. ಗುಳಿಕೆನ್ನೆಯ ಚೆಲುವೆ ರಚಿತಾಗೆ ಹೆಚ್ಚು ದೃಶ್ಯಗಳು ದಕ್ಕಿವೆಯಾದರೂ ಹರಿಪ್ರಿಯಾ ಹೆಚ್ಚು ಗಮನ ಸೆಳೆಯುತ್ತಾರೆ. ಇನ್ನು ವೈಶಾಲಿ ದೀಪಕ್ ಪಾತ್ರ ಚಿಕ್ಕದಾಗಿದ್ದರೂ ಹೇಳಿಮಾಡಿಸಿದಂತೆ ನಟಿಸಿದ್ದಾರೆ. ಮೂವರು ಹಕ್ಕಿಗಳನ್ನು ಪಳಗಿಸಿಕೊಂಡು ಖಡಕ್ಕಾಗಿ ನಟಿಸಿದ್ದಾರೆ ಧ್ರುವಾ ಸರ್ಜಾ. ಚಿರತೆ ಬಂದ್ರೆ ವೇಗ ಇರುತ್ತೆ, ಹುಲಿ ಬಂದ್ರೆ ಗಾಂಭೀರ್ಯ ಇರುತ್ತೆ, ಸಿಂಹ ಬಂದ್ರೆ ಘರ್ಜನೆ ಇರುತ್ತೆ, ಈ ಸೂರ್ಯ ಬಂದ್ರೆ ಈ ಮೂರೂ ಇರುತ್ತೆ… ಅಂತಾ ಬರೀ ಡೈಲಾಗು ಉದುರಿಸದೇ ಅದಕ್ಕೆ ಅನ್ವರ್ಥದಂತೆ ಪಾತ್ರ ನಿಭಾಯಿಸಿದ್ದಾರೆ ಧೃವ ಸರ್ಜಾ. ಧೃವಾ ಸರ್ಜಾ ಎನ್ನುವ ಯಂಗ್ ಹೀರೋಗೆ ಯುವಕರು, ಹೆಣ್ಮಕ್ಕಳು ಫಿದಾ ಆಗಲು ಓಪನಿಂಗ್ ಸಾಂಗಿನಲ್ಲಿನ ಅವರ ಸ್ಟೆಪ್ಪು, ಕೆಲವ್ರು ಹೊಡೆದರೆ ಮಾಸ್ ಆಗಿರತ್ತೆ.. ಕೆಲವ್ರು ಹೊಡೆದ್ರೆ ಕ್ಲಾಸಾಗಿರತ್ತೆ, ಕಾಮಿಡಿಯಾಗಿರತ್ತೆ…. ನಾನ್ ಹೊಡೆದ್ರೆ ಭರ್ಜರಿಯಾಗಿರತ್ತೆ ಅನ್ನೋ ಅವರ ಬಿಲ್ಡಪ್ ಡೈಲಾಗು ಮತ್ತು ಫೈಟಿಂಗ್ ದೃಶ್ಯಗಳು ಸಾಕು.
ಶ್ರೀಶಾ ಕುದುವಳ್ಳಿ ಅವರ ಕ್ಯಾಮೆರಾ ಕೆಲಸ ಸಿನಿಮಾವನ್ನು `ಭರ್ಜರಿ’ಯಾಗಿಸಿದೆ. ತಾನು ಪಕ್ಕಾ ಕಮರ್ಷಿಯಲ್ ಡೈರೆಕ್ಟರ್ ಅನ್ನೋದನ್ನು ನಿರ್ದೇಶಕ ಚೇತನ್ ಮತ್ತೆ ಹೇಳಿಕೊಳ್ಳುವ ಅಗತ್ಯವಿಲ್ಲ. ಬಿಡುಗಡೆಯಾಗಿರುವ ಸಿನಿಮಾವೇ ಅದನ್ನು ತೋರಿಸಿಕೊಟ್ಟಿದೆ. ಯಾವುದೇ ಸ್ಟಾರ್ ನಟರನ್ನು ಬಳಸಿಕೊಂಡು ಮಾಸ್ ಸಿನಿಮಾ ಮಾಡೋ ತಾಕತ್ತು ಚೇತನ್ ಅವರಿಗಿದೆ.
ಇವೆಲ್ಲದರ ನೆಡುವೆಯೂ ಅನ್ನಿಸೋದೆಂದರೆ, ಅಬ್ಬರವಿಲ್ಲದೆಯೂ ನಟಿಸುವ ಸಾಮರ್ಥ್ಯ ಹೊಂದಿರುವ ಧ್ರುವಾ ಸರ್ಜಾರಿಂದ ಪ್ರತೀ ದೃಶ್ಯದಲ್ಲೂ ಬಿಲ್ಡಪ್ಪು ನೀಡೋ ಅವಶ್ಯಕತೆಯಿತ್ತಾ ಅನ್ನೋದಷ್ಟೇ. ಆದರೆ ಅವರ ಅಭಿಮಾನಿಗಳ ದೃಷ್ಟಿಯಿಂದ ನೋಡಿದಾಗ ಅದು ಅಂಥಾ ಅಭಾಸ ಅನ್ನಿಸೋದಿಲ್ಲ.

Leave a Reply

Your email address will not be published. Required fields are marked *


CAPTCHA Image
Reload Image