One N Only Exclusive Cine Portal

ಭರ್ಜರಿ ಹುಡುಗಿ ವೈಶಾಲಿ ದೀಪಕ್!

ವೈಶಾಲಿ ದೀಪಕ್ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಚಾರ್ಲಿ. ಮೊದಲ ಸಿನಿಮಾದಲ್ಲೇ ಈ ಹುಡುಗಿಯ ನಟನೆಯ ಬಗ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗು, ಸಂತೆಯಲ್ಲಿ ನಿಂತ ಕಬೀರ ಮತ್ತು ಅಮರಾವತಿ ಚಿತ್ರಗಳಲ್ಲಿ ವೈಶಾಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂದಿದ್ದರು. ಜೊತೆಗೆ ತುಂಡ್ ಹೈಕ್ಳ ಸಾವಾಸ ಸೇರಿಂದಂತೆ ಒಂದಿಷ್ಟು ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. ಈ ವಾರ ತೆರೆಗೆ ಬರುತ್ತಿರುವ ಧೃವಾ ಸರ್ಜಾ ಅಭಿನಯದ ‘ಭರ್ಜರಿ ಚಿತ್ರದ ಮೂವರು ನಾಯಕಿಯರಲ್ಲಿ ವೈಶಾಲಿ ಕೂಡಾ ಒಬ್ಬರು. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಚಿತ್ರಗಳಲ್ಲಿ ನಟಿಸುತ್ತಿರುವ ವೈಶಾಲಿಯ ಹಿನ್ನೆಲೆಯೇನು? ಈ ಹುಡುಗಿ ಎಲ್ಲಿಂದ ಬಂದವವಳು…? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್!

ಮಲೆನಾಡು ಭಾಗದಿಂದ ಬಂದ ಪ್ರತಿಭೆಗಳು ಇದೀಗಲೇ ಹಲವಾರು ರಂಗಗಳಲ್ಲಿ ಮಿಂಚಿದ್ದಾರೆ, ಮಿಂಚುತ್ತಿದ್ದಾರೆ. ಅದಕ್ಕೆ ಸಿನಿಮಾ ರಂಗವೂ ಹೊರತಾಗಿಲ್ಲ. ಹಾಗೆ ಮಲೆನಾಡಿಂದ ಬಣ್ಣದ ಲೋಕಕ್ಕೆ ಬಂದವರ ಸಾಲಿಗೆ ಈ ಮಿಂಚುಳ್ಳಿಯಂಥಾ ಹುಡುಗಿಯದ್ದು ಹೊಸಾ ಸೇರ್ಪಡೆ. ಆಕೆ ವೈಶಾಲಿ ದೀಪಕ್!
ಯಾವುದೇ ರೀತಿಯ ಸಿನಿಮಾ ಸಂಬಂಧಿ ಕೌಟುಂಭಿಕ ಹಿನ್ನೆಲೆಗಳೂ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಾ, ತಮಿಳು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿಯೂ ಛಾಪು ಮೂಡಿಸುತ್ತಿರುವವರು ವೈಶಾಲಿ. ಯಾವುದೇ ನೆರಳಿಲ್ಲದೆ, ಗಾಡ್‌ಫಾದರುಗಳೂ ಇಲ್ಲದೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿರುವ ಈಕೆ ನೆಚ್ಚಿ ನಂಬಿರುವುದು ತನ್ನೊಳಗಿನ ನಟನಾ ಚಾತುರ್ಯವನ್ನು ಮಾತ್ರ.
ಮೊತ್ತಮೊದಲ ಸಲ ಮದರಂಗಿ ಕೃಷ್ಣ ಜೊತೆ ಚಾರ್ಲಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿರಿಸಿದ್ದ ವೈಶಾಲಿಯ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈ ಹುಡುಗಿ ಚೆಂದಗೆ ನೆಲೆ ನಿಲ್ಲುತ್ತಾಳೆಂಬ ಭರವಸೆಯೂ ಹುಟ್ಟಿಕೊಂಡಿದೆ. ಇದೀಗ ಜಟ್ಟ ಖ್ಯಾತಿಯ ಭರವಸೆಯ ನಿರ್ದೇಶಕ ಗಿರಿರಾಜ್ ಅವರ ಅಮರಾವತಿ, ‘ತುಂಡ್ ಹೈಕ್ಳ ಸಾವಾಸ, ಶಿವಲಿಂಗ, ಕಬೀರ ಮತ್ತು ಭರ್ಜರಿ ಸೇರಿದಂತೆ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಈಕೆ, ತಮಿಳಿನ ಪ್ರಸಿದ್ಧ ನಿರ್ದೇಶಕ ರವಿ ಲಲಿನ್‌ರ ‘ತರ್ಕಾಪು ಎಂಬ ಬಹು ನಿರೀಕ್ಷಿತ ಸಿನಿಮಾದಲ್ಲಿಯೂ ನಟಿಸಿ ಅಚ್ಚರಿ ಹುಟ್ಟಿಸಿದ್ದಾರೆ.

ಹೀಗೆ ಅತ್ಯಲ್ಪ ಕಾಲದಲ್ಲಿಯೇ ಭರವಸೆಯ ನಟಿಯಾಗಿ ಗಮನ ಸೆಳೆದಿರುವ ವೈಶಾಲಿ ಮೂಲತಃ ಕಾಫಿನಾಡು ಚಿಕ್ಕಮಗಳೂರಿನವರು. ಇಲ್ಲಿನ ಮೂಡಿಗೆರೆಯ ಹತ್ತಿರದ ಊರು ಇವರ ತವರು ನೆಲ. ವೈಶಾಲಿಯವರ ತಂದೆ ದೀಪಕ್ ಕಾಫಿ ಫ್ಲಾಂಟೇಷನ್ ಮಾಲೀಕರು. ಸದ್ಯ ಲಿಫ್ಟ್ ಇರಿಗೇಷನ್‌ನಲ್ಲಿ ಫುಲ್ ಟೈಂ ನೌಕರಿ ಮಾಡುತ್ತಿರುವ ದೀಪಕ್ ಮತ್ತು ಸುಧಾ ದಂಪತಿಯ ಮಗಳಾದ ವೈಶಾಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ, ಇಲ್ಲಿಯೇ ಮುಂದುವರೆದರೂ ಚಿಕ್ಕಂದಿನಿಂದಲೂ ತವರು ನೆಲದ ಮೇಲೆ ಅತೀವ ಪ್ರೀತಿಯಿತ್ತು. ಆದುದರಿಂದಲೇ ರಜೆ ಬಂತೆಂದರೆ ಊರಲ್ಲಿಯೇ ಸೆಟಲ್ ಆಗಿ ಬಿಡುತ್ತಿದ್ದರಂತೆ!
ಪಿಯೂಸಿಯಲ್ಲಿ ಕಾಮರ್ಸ್ ವಿಭಾಗದಲ್ಲಿ ವ್ಯಾಸಂಗ ಮುಗಿಸಿ ಡಿಗ್ರಿ ಮಾಸ್ ಕಮ್ಯೂನಿಕೇಷನ್ ಪೂರೈಸಿರುವ ವೈಶಾಲಿಯವರ ನಿಜವಾದ ಆಸಕ್ತಿಯಿದ್ದದ್ದು ನಟನೆಯ ಮೇಲೆ. ಶಾಲಾ ದಿನಗಳಿಂದಲೇ ಬಣ್ಣದ ಗೀಳು ಹಚ್ಚಿಕೊಂಡಿದ್ದ ಆಕೆ ಶಾಲಾ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮಿಂಚುತ್ತಿದ್ದರು. ಕ್ರೈಸ್ಟ್ ಕಾಲೇಜ್‌ನಲ್ಲಿರುವಾಗಲೇ ಫಿಲ್ಮ್ ಮೇಕಿಂಗ್ ಬಗ್ಗೆ ಅತೀವ ಆಸಕ್ತಿಯನ್ನೂ ಹೊಂದಿದ್ದರು.
ಇಂಥಾ ವೈಶಾಲಿಯವರಿಗೆ ಚಿಕ್ಕಂದಿನಲ್ಲಿ ಭಾರೀ ಆಕರ್ಷಣೆ ಹುಟ್ಟಿಸಿದ್ದದ್ದು ರಂಗಭೂಮಿ. ಕಾಲೇಜ್‌ನಲ್ಲಿ ಆ ಕನಸು ನನಸಾಗುವ ಅವಕಾಶಗಳು ಆಕೆಗೆ ದೊರಕಿದ್ದವು. ಈ ನಡುವೆ ಕಾಲೇಜು ವ್ಯಾಸಂಗ ಮಾಡುವ ಹೊತ್ತಿಗೆಲ್ಲಾ ವೈಶಾಲಿಯವರ ಆಸಕ್ತಿ ನಿಖರವಾಗಿ ಸಿನಿಮಾ ರಂಗದತ್ತ ಹೊರಳಿಕೊಂಡಿತ್ತು. ಅದಕ್ಕೆ ಹೆಬ್ಬಾಗಿಲು ತೆರೆದದ್ದು ಕಿರು ಚಿತ್ರಗಳಲ್ಲಿ ನಟಿಸುವ ಅವಕಾಶ. ಹಾಗಂತ ಏನೂ ಅನುಭವವಿಲ್ಲದೆ ಎಂಟ್ರಿ ಕೊಡಲು ತಯಾರಿಲ್ಲದ ವೈಶಾಲಿ ಸೀದಾ ಬಾಂಬೆಗೆ ತೆರಳಿ ಎರಡು ತಿಂಗಳು ಆಕಾಶ್ ಪುರಾನಾ ಜೊತೆ ಕೆಲಸ ಕಲಿತಿದ್ದರು. ಆ ತರುವಾಯ ಕನ್ನಡದ ಬಿ ಸ್ಕೇರ್, ಸೈದಾ, ಕ್ರಾಸ್ ರೋಡ್ ಹಾಗೂ ಇಂಗ್ಲಿಷ್‌ನ ಬಿಟರ‍್ಸ್ ವಿತ್ ಲವ್ ಮುಂತಾದ ಅನೇಕ ಕ್ರಿಯಾಶೀಲ ಕಿರು ಚಿತ್ರಗಳಲ್ಲಿ ಮನೋಜ್ಞವಾಗಿ ನಟಿಸಿ ಬೇರೆ ಬೇರೆ ಭಾಷೆಯ ಸಿನಿ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಹೊಸತನ್ನು ಕಲಿಯುವ ಹಂಬಲ ಹೊಂದಿರುವ ಈಕೆ ಸ್ಟೇಷನ್ ಎಂಬ ಹಿಂದಿ ಫೀಚರ್ ಫಿಲಂನಲ್ಲಿ ಸೆಕೆಂಡ್ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ.
ಅಂದಹಾಗೆ ಈ ಹುಡುಗಿ ತನ್ನ ಪ್ರತಿಭೆಯನ್ನು ಆರಂಭಿಕವಾಗಿ ಸಾಬೀತು ಪಡಿಸಿದ್ದೇ ಕಿರು ಚಿತ್ರಗಳ ಮೂಲಕ. ಇಂಗ್ಲಿಷ್ ಭಾಷೆಯ ಕಿರು ಚಿತ್ರಗಳಲ್ಲಿ ನಟಿಸಿದ್ದರೂ ಸಹ ಕನ್ನಡ ಚಿತ್ರದಲ್ಲಿಯೇ ಮೊದಲು ಅವಕಾಶ ಪಡೆದು ಇಲ್ಲಿಯೇ ಮಿಂಚುವ ಇರಾದೆ ವೈಶಾಲಿಗಿತ್ತು. ಈಕೆಯ ಈ ಆಸೆ ಕೂಡಾ ಕೆಲವೇ ದಿನಗಳಲ್ಲಿ ಸಾಕಾರಗೊಂಡಿತ್ತು. ಓಂಪ್ರಕಾಶ್ ರಾವ್ ನಿರ್ದೇಶನದ ಹುಚ್ಚ-೨ ಚಿತ್ರದಲ್ಲಿ ಈಕೆಗೆ ಸಲೀಸಾಗಿ ಅವಕಾಶ ಸಿಕ್ಕಿತ್ತು. ನಿರ್ದೇಶಕರು ವೈಶಾಲಿಯವರ ಮೊದಲ ಕಿರು ಚಿತ್ರ ‘ಡಿ ಸ್ಕ್ವೇರ್ ನಲ್ಲಿನ ನಟನೆ ನೋಡಿ ಅವಕಾಶ ಕೊಟ್ಟಿದ್ದರು. ಆದರೆ ಅದ್ಯಾವುದೋ ಕಾರಣದಿಂದ ವೈಶಾಲಿ ಆ ಚಿತ್ರದಿಂದ ಹೊರ ಬಂದರೂ ಸಹ ಅವಕಾಶಗಳಿಗೇನೂ ಕೊರತೆಯಾಗಲಿಲ್ಲ.
ಇದೀಗ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪಕ್ಕಾ ಕಮರ್ಷಿಯಲ್ ಸಿನಿಮಾ ‘ಭರ್ಜರಿ ಈ ವಾರ ತೆರೆಗೆ ಬರುತ್ತಿದೆ. ಪ್ರತಿಭಾವಂತ ನಿರ್ದೇಶಕ ಚೇತನ್ ಕುಮಾರ್ ಅವರ ಈ ಸಿನಿಮಾ ವೈಶಾಲಿಯ ಸಿನಿ ಬದುಕಿಗೆ ಬ್ರೇಕ್ ನೀಡಲಿದೆ ಎಂಬ ಮಾತುಗಳಂತೂ ಈಗಾಗಲೇ ಕೇಳಿ ಬರುತ್ತಿವೆ. ವೈಶಾಲಿ ಕೂಡಾ ಈ ಬಗ್ಗೆ ಭಾರೀ ಭರವಸೆ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ತನ್ನ ನಟನೆಯನ್ನು ಮತ್ತಷ್ಟು ಸಾಣೆ ಹಿಡಿಯುತ್ತಿರುವ ಬಿ.ಎಂ. ಗಿರಿರಾಜ್ ನಿರ್ದೇಶನದ ತುಂಡ್ ಹೈಕ್ಳ ಸಾವಾಸ ಇನ್ನೇನು ಬಿಡುಗಡೆಯ ಹೊಸ್ತಿಲಿನಲ್ಲಿದೆ. “ಗಿರಿರಾಜ್ ಮತ್ತು ಚೇತನ್ ಕುಮಾರ್ ಬೆಸ್ಟ್ ಡೈರೆಕ್ಟರ‍್ಸ್. ಅವರಿಗೆ ನಟರನ್ನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಗೊತ್ತು. ಎಮೋಷನ್ಸ್ ಹೇಗೆ ತೇಗೀಬೇಕು? ಕಂಫರ್ಟ್ ಲೆವೆಲ್ ಹೆಚ್ಚು ಮಾಡೋದು ಹೇಗೆಂಬುದೆಲ್ಲಾ ಅವರಿಗೆ ಕರಗತವಾಗಿದೆ. ಒಟ್ಟಾರೆಯಾಗಿ ಈ ಇಬ್ಬರೂ ನಿರ್ದೇಶಕರು ಲೈಫ್ ಟೀಚರ‍್ಸ್… ಇವು ವೈಶಾಲಿಯವರ ಅಭಿಮಾನದ ಮಾತುಗಳು. ಇದರ ಜೊತೆಗೆ ಇವು ಪಕ್ಕಾ ಕಮರ್ಷಿಯಲ್ ಸಿನಿಮಾಗಳು ಎಂಬುದನ್ನು ಹೇಳಲು ಆಕೆ ಮರೆಯುವುದಿಲ್ಲ.
ಪ್ರತಿಯೊಂದರಲ್ಲಿಯೂ ಪರ್ಫೆಕ್ಟ್ ಆಗಿರಬೇಕೆಂಬ ಇಂಗಿತ ಹೊಂದಿರುವ ವೈಶಾಲಿ ತನ್ನ ಮೊದಲ ಚಿತ್ರ ಚಾರ್ಲಿಗೆ ಡಬ್ಬಿಂಗ್ ಮಾಡಿರಲ್ಲವಂತೆ. ಆದರೆ ಈಗೀಗ ತಯಾರಾಗುತ್ತಿರುವ ಸಿನಿಮಾಗಳಲ್ಲಿ ಡಬ್ಬಿಂಗ್ ಮಾಡಲು ಅಣಿಯಾಗಿದ್ದಾರೆ.
ವೈಶಾಲಿಗೆ ಮಾಧುರಿ ಧೀಕ್ಷಿತ್ ಅಂದ್ರೆ ಪ್ರಾಣ. ಕನ್ನಡದಲ್ಲಿ ಪ್ರತೀ ಹೀರೋಗಳೂ ಇಷ್ಟ. ಎಲ್ಲರಿಗೂ ಅವರದ್ದೇ ಆದ ಸ್ಟೈಲ್ ಗಳಿವೆ ಎಂಬುದು ಅವರ ಸ್ಪಷ್ಟೀಕರಣ. ಯಾವುದೇ ಪಾತ್ರಕ್ಕೆ ತನ್ನತನವನ್ನು ಒಪ್ಪಿಸಿಕೊಂಡು ನಟಿಸುವ ಇರಾದೆ ಹೊಂದಿರುವ ವೈಶಾಲಿಗೆ ಅಮ್ಮ ಅಪ್ಪನ ಉತ್ತೇಜನವಿದೆ. ಮೊದಮೊದಲು ಮಗಳು ಸಿನಿಮಾ ಸೇರೋದು ಇಷ್ಟವಿಲ್ಲದಿದ್ದರೂ ಈಗ ಅವರಿಗೆ ಖುಷಿ ಇದೆ. ಓದಿನಲ್ಲಿಯೂ ಆಸಕ್ತಿ ಹೊಂದಿರುವ ಈಕೆಗೆ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳೆಂದರೆ ಬಲು ಇಷ್ಟವಂತೆ. ಇನ್ನು ಲೈಫ್ ಡೈರೆಕ್ಷನ್ ಪುಸ್ತಕಗಳೂ ಇಷ್ಟ..
ನಟನೆಯಲ್ಲಿ ಎಸ್ಟಾಬ್ಲಿಷ್ ಆದ ಮೇಲೆ ಡೈರೆಕ್ಷನ್ ಮಾಡಬೇಕೆಂಬ ಅಪರೂಪದ ಆಸೆ ಇಟ್ಟುಕೊಂಡಿರುವ ವೈಶಾಲಿ ಬಲು ಎತ್ತರಕ್ಕೇರಲಿ, ಆಕೆಯ ಕನಸುಗಳೆಲ್ಲವೂ ‘ಭರ್ಜರಿಯಾಗಿ ನನಸಾಗಲೆಂದು ಹಾರೈಸೋಣ.

Leave a Reply

Your email address will not be published. Required fields are marked *


CAPTCHA Image
Reload Image