One N Only Exclusive Cine Portal

ಮಡಿಕೇರಿಯಲ್ಲಿ ‘ಉದ್ಘರ್ಷ’ ಚಿತ್ರಕ್ಕೆ ಮುಹೂರ್ತ


ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ಮತ್ತೆ ಹೊಸ ಚಿತ್ರವೊಂದರ ಮೂಲಕ ಮರಳಿದ್ದಾರೆ. ಅವರು ನಿರ್ದೇಶಿಸುತ್ತಿರುವ ‘ಉದ್ಘರ್ಷ’ ಚಿತ್ರದ ಮುಹೂರ್ತ ಸಮಾರಂಭ ಮಡಿಕೇರಿಯ ಕೋಟೆ ಗಣಪತಿ ದೇವಸ್ಥಾನದ ಆವರಣದಲ್ಲಿ ನೆರವೇರಿದೆ. ಚಿತ್ರಕ್ಕೆ ಮೂವತ್ತು ದಿನಗಳ ಕಾಲ ಮಡಿಕೇರಿಯಲ್ಲೇ ಚಿತ್ರೀಕರಣ ನಡೆಯಲಿದೆ.
ಕೋಟೆ ಗಣಪತಿ ದೇವಸ್ಥಾನದಲ್ಲಿ ದೇವರ ಮೇಲಿನ ದೃಷ್ಯಾವಳಿಯೊಂದನ್ನು ಸೆರೆ ಹಿಡಿಯುವ ಮೂಲಕ ಉದ್ಘರ್ಷ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇದಕ್ಕೆ ಉದ್ಯಮಿ ಪ್ರಕಾಶ್ ರಾವ್ ಸಾತೆ ಆರಂಭ ಫಲಕ ತೋರಿಸಿದ್ದಾರೆ. ಸಂಪತ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದ್ದಾರೆ.
ಇದುವರೆಗೂ ಕನ್ನಡ ಚಿತ್ರರಂಗದಲ್ಲಿ ಹತ್ತಾರು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟವರು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಕಲಾತ್ಮಕ ಸ್ಪರ್ಷದ ಜೊತೆಗೆ ಕಮರ್ಶಿಯಲ್ ದೃಷ್ಯ ಕಟ್ಟೋದರಲ್ಲಿ ಅವರದ್ದು ಎತ್ತಿದ ಕೈ. ಈ ಚಿತ್ರದ ಕಥೆಯನ್ನೂ ಕೂಡಾ ಇಂಥ ಭಿನ್ನವಾದ ಜಾಡಿನಲ್ಲಿಯೇ ದೇಸಾಯಿ ಅವರು ಸೃಷ್ಟಿಸಿದ್ದಾರೆ.
ಸಾಮಾನ್ಯವಾಗಿ ಒಂದು ಚಿತ್ರ ವೆಂದ ಮೇಲೆ ನಾಯಕ ಮತ್ತು ನಾಯಕಿ ಪದೇ ಪದೆ ಒಟ್ಟಿಗೆ ಕಾಣಿಸಿಕೊಳ್ಳೋದು ವಾಡಿಕೆ. ಆದರೆ ಈ ಚಿತ್ರದಲ್ಲಿ ಆರಂಭದಿಂದ ಅಂತ್ಯದ ವರೆಗೂ ನಾಯಕ ನಾಯಕಿ ಮುಖಾಮುಖಿಯಾಗೋದು ಎರಡೇ ಸಲವಂತೆ. ಇನ್ನು ಅನಿವಾರ್ಯ ಕಾರಣದಿಂದ ಹಠಾತ್ ಸಂಕಷ್ಟಕ್ಕೆ ಸಿಲುಕೋ ಜೋಡಿಯೊಂದರ ಸುತ್ತ ಹೆಣೆಯಲಾಗಿರೋ ಈ ಚಿತ್ರದ್ದು ಪಕ್ಕಾ ಥ್ರಿಲ್ಲರ್ ಕಥೆ.
ಅಂದಹಾಗೆ ಈ ಚಿತ್ರದ ತಾರಾಗಣ ಕೂಡಾ ನಿರೀಕ್ಷೆ ಹುಟ್ಟಿಸುವಂತಿದೆ. ಗೋಲ್ಡ್ ಮೆಡಲ್ ಗೆದ್ದುಕೊಂಡಿರೋ ಬಾಡಿ ಬಿಲ್ಡರ್ ಕಂ ನಟ ಅನೂಪ್ ಠಾಕೂರ್ ಸಿಂಗ್, ತಮಿಳು ಮತ್ತು ತೆಲುಗಿನ ಹತ್ತಾರು ಚಿತ್ರಗಳಲ್ಲಿ ನಟಿಸಿರೋ ಧನ್ಸಿಕಾ, ಕರೀಷ್ಮಾ, ಬಾಲಿವುಡ್‌ನ ಖ್ಯಾತ ಖಳನಟ ಕಬೀರ್ ಸಿಂಗ್, ಬಾಹುಬಲಿ ಖ್ಯಾತಿಯ ಪ್ರಭಾಕರ್ ಮುಂತಾದವರ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ.
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಮತು ಸ್ನೇಹಿತರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ವರ್ಮಾ ಸಾಹಸ ನಿರ್ದೇಶನ ಹಾಗೂ ವಿಷ್ಣು ವರ್ಧನ್ ಅವರ ಛಾಯಾಗ್ರಹಣವಿದೆ.

Leave a Reply

Your email address will not be published. Required fields are marked *


CAPTCHA Image
Reload Image