One N Only Exclusive Cine Portal

ಮದರಂಗಿ ಕೃಷ್ಣನ ಮಾರ್ಜಾಲ ಬುದ್ಧಿ!

ಕಾರಂಜಿ ಶ್ರೀಧರ್ ನಿರ್ದೇಶನದ ಜಾಲಿಬಾರು ಮತ್ತು ಪೋಲಿ ಹುಡುಗರು ಚಿತ್ರ ತೆರೆಕಾಣುವ ಮುಹೂರ್ತ ಹತ್ತಿರ ಬಂದಿದೆ. ಕೊಂಚ ತಡವಾದರೂ ಪಕ್ಕಾ ಖದರಿನಿಂದಲೇ ಎಂಟ್ರಿ ಕೊಡುತ್ತಿರೋ ಈ ಚಿತ್ರ ಅಖಂಡ ನೂರೈವತ್ತಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಆದರೆ, ನಾನಾ ಸವಾಲುಗಳನ್ನೆದುರಿಸಿ ಈ ಚಿತ್ರವನ್ನು ಬಿಡುಗಡೆಯ ಹಂತಕ್ಕೆ ತಂದಿರೋ ನಿರ್ದೇಶಕರ ಪಾಲಿಗೆ ಮಾರ್ಜಾಲ ಬುದ್ಧಿ ಪ್ರದರ್ಶಿಸುತ್ತಿರೋ ನಾಯಕನಟ ಮದರಂಗಿ ಕೃಷ್ಣನೇ ತಲೆ ನೋವಾಗಿ ಪರಿಣಮಿಸಿದ್ದಾನೆ!
ಅಷ್ಟಕ್ಕೂ ಈ ಚಿತ್ರ ಹತ್ತಿರತ್ತಿರ ಇನ್ನೂರು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತಿರೋದೇ ಮದರಂಗಿ ಕೃಷ್ಣನ ಮಹಾ ಯೋಗ. ಇಂಥಾದ್ದೊಂದು ಯೋಗ ಆತನ ಪಾಲಿಗೆ ಬಂದೊದಗುವಂತೆ ಮಾಡಿದ್ದು ನಿರ್ದೇಶಕ ಕಾರಂಜಿ ಶ್ರೀಧರ್ ಅವರ ಶ್ರಮದಿಂದ. ಈ ಚಿತ್ರದ ವಿಚಾರವಾಗಿ ಕೊಂಚ ತಡವಾಗಿದ್ದು ನಿಜ. ಆದರೆ ಅದಕ್ಕೆ ಕಾರಣ ನಿರ್ದೇಶಕರಿಗೆದುರಾಗಿದ್ದ ಅಡೆತಡೆಗಳು. ಈ ನಡುವೆ ಶ್ರೀಧರ್ ಅವರಿಗೆ ಅನಾರೋಗ್ಯವೂ ಕಾಡಿತ್ತು. ಆದರೆ ಅದ್ಯಾವುದಕ್ಕೂ ಕುಗ್ಗದೆ ಕಡೆಗೂ ಈ ಚಿತ್ರವನ್ನು ಅದ್ದೂರಿಯಾಗಿಯೇ ತೆರೆಗಾಣಿಸಲು ತಯಾರಾಗಿದ್ದಾರೆ.
ಆದರೆ, ಏಕಾಏಕಿ ತಿಮಿರು ತೋರಿಸಲಾರಂಭಿಸಿರೋ ಮದರಂಗಿ ಕೃಷ್ಣ ಮಾತ್ರ ತನ್ನದೇ ಚಿತ್ರದ ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿದ್ದಾನಂತೆ. ಮನುಷ್ಯತ್ವ ಇರೋ ಯಾರೇ ಆಗಿದ್ದರೂ ಅನಾರೋಗ್ಯದ ನಡುವೆಯೂ ಎದ್ದು ಓಡಾಡುತ್ತಿರೋ ನಿರ್ದೇಶಕರ ನೆರವಿಗೆ ನಿಲ್ಲುತ್ತಿದ್ದರು. ಕೃಷ್ಣನಿಗೆ ಆ ಔದಾರ್ಯವಿಲ್ಲ. ಆದರೆ ಇದೀಗ ಚಿತ್ರದ ಪ್ರಚಾರಕ್ಕೂ ಬಾರದಿರೋದರ ಬಗ್ಗೆ ಇಡೀ ಚಿತ್ರ ತಂಡವೇ ಅಸಹನೆಗೀಡಾಗಿದೆ. ಇದು ಮದರಂಗಿ ಕೃಷ್ಣನ ಮುಂದಿನ ನಡೆಗೂ ಮುಳ್ಳಾಗೋದು ಗ್ಯಾರೆಂಟಿ.
ಅಷ್ಟಕ್ಕೂ ಈ ಮದರಂಗಿ ಕೃಷ್ಣನನ್ನು ನಾಯಕ ನಟನಾಗಿ ಈ ವರೆಗೂ ಪ್ರೇಕ್ಷಕರ‍್ಯಾರೂ ಒಪ್ಪಿಕೊಂಡಿಲ್ಲ. ಈ ಹೊತ್ತಿನಲ್ಲಿಯೇ ಇಂಥಾ ತಿಮಿರು ತೋರಿಸುತ್ತಿರೋ ಕೃಷ್ಣ ಯಾಮಾರಿ ಹೀರೋ ಆಗಿ ನೆಲೆ ನಿಂತರೆ ಇನ್ನೇನೇನು ಕಾಟ ಕೊಡಬಹುದೆಂಬುದನ್ನು ಯಾರಾದರೂ ಊಹಿಸಬಹುದು. ಆತ ಸಣ್ಣತನಗಳನ್ನು ಬದಿಗಿಟ್ಟು ಇನ್ನಾದರೂ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡರೆ ಅದು ಆತನ ಬೆಳವಣಿಗೆಗೇ ಸಹಕಾರಿಯಾದೀತೇನೋ…

 

Leave a Reply

Your email address will not be published. Required fields are marked *


CAPTCHA Image
Reload Image