One N Only Exclusive Cine Portal

ಮಧುರಾಶ್ವತ್ಥದಲ್ಲಿ ಸಿ ಅಶ್ವತ್ಥ್ ಸಿನಿ ಸಂಗೀತ ಯಾನದ ಅನಾವರಣ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಕಂಚಿನ ಕಂಠದ ವಿಶಿಷ್ಟ ಹಾಡುಗಾರಿಕೆಯಿಂದಲೇ ಮನಸುಗಳನ್ನು ಮುಟ್ಟಿದವರು ಸಿ. ಅಶ್ವತ್ಥ್. ಅವರ ಧ್ವನಿಯ ಮೂಲಕ ಸಾವಿರ ಗಾವುದ ದೂರದಲ್ಲಿಯ ನೊಂದ ಜೀವಗಳಿಗೂ ಸಾಂತ್ವನದ ಅಗೋಚರ ಮದ್ದೊಂದು ಹಾಡುಗಳ ಮೂಲಕ ರವಾನೆಯಾಗುತ್ತಿತ್ತು. ಪ್ರೀತಿ, ವಿರಹ, ಸಂಭ್ರಮ… ಇವೆಲ್ಲಕ್ಕೂ ವಾಹಕದಂತಿದ್ದ ಸಿ ಅಶ್ವತ್ಥ್ ಹಾಡುಗಳ ಮೂಲಕ ಇನ್ನೂ ಬದುಕಿದ್ದಾರೆ.

ಡಿಸೆಂಬರ್ ತಿಂಗಳು ಬಂತೆಂದರೆ ಕರುನಾಡಿನ ಸಂಗೀತ ವ್ಯಾಮೋಹಿಗಳ ಮನಸು ಚೆಂದದ ಸ್ವರವೊಂದು ಸುಳಿವಿಲ್ಲದೆ ಮರೆಯಾದ ಕಸಿವಿಸಿ ತುಂಬಿಕೊಳ್ಳುತ್ತವೆ. ಅದು ಸಿ. ಅಶ್ವತ್ಥ್ ಮರೆಯಾದ ತಿಂಗಳು. ಅವರ ಹುಟ್ಟು ಹಬ್ಬದ ಸಂಭ್ರಮವನ್ನೂ ಸಾವಿನ ಸೂತಕ ನುಂಗಿಕೊಂಡ ಡಿಸೆಂಬರ್ ಒಂದು ಅದ್ಭುತ ಕಂಠಸಿರಿಯನ್ನು ಕನ್ನಡಿಗರಿಂದ ಕಸಿದುಕೊಂಡ ತಿಂಗಳೂ ಹೌದು.
ಆದರೆ ಅವಿರತ ತಂಡ ಇಂಥಾದ್ದೊಂದು ನೋವಿನ ಘಳಿಗೆಯನ್ನೂ ಅಶ್ವತ್ಥ್ ಅವರ ಹಾಡುಗಳ ಮೂಲಕವೇ ಮರೆಸುವಂಥಾ ಚೆಂದದ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಡಿಸೆಂಬರ್ ಹದಿನೇಳನೇ ತಾರೀಕಿನಂದು ಭಾನುವಾರ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ‘ಮಧುರಾಶ್ವತ್ಥ ಎಂಬ ಶೀರ್ಷಿಕೆಯಲ್ಲಿ ಸಿ ಅಶ್ವತ್ಥ್ ಅವರ ಸಿನಿಮಾ ಸಂಗೀತ ಯಾನವನ್ನು ಅನಾವರಣಗೊಳಿಸಲಿದೆ.
ಅವಿರತ ಪ್ರತಿಷ್ಠಾನದ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡು ಸಾಕಷ್ಟು ಚಟುವಟಿಕೆಗಳನ್ನು ನಡೆಸಿರೋ ಅವಿರತ ಸಂಸ್ಥೆ ಈ ಕಾರ್ಯಕ್ರಮದ ಮೂಲಕ ಸಿ ಅಶ್ವತ್ಥ್ ಅವರಿಗೆ ಅರ್ಥಪೂರ್ಣವಾದ ನಮನ ಸಲ್ಲಿಸಲು ತಯಾರಾಗಿದೆ.
ಸುಗಮ ಸಂಗೀತ ಲೋಕದಲ್ಲಿ ಅಚ್ಚಳಿಯದ ಹಾಡುಗಳನ್ನು ಉಳಿಸಿ ಹೋಗಿರುವ ಅಶ್ವತ್ಥ್ ಸಿನಿಮಾ ಸಂಗೀತ ಲೋಕದಲ್ಲಿಯೂ ದೊಡ್ಡ ಹೆಸರು ಮಾಡಿದ್ದವರು. ಅವರು ಹಾಡಿದ ಸಿನಿಮಾ ಹಾಡುಗಳನ್ನು ಪ್ರವೀಣ್ ಡಿ ರಾವ್ ಮತ್ತು ತಂಡ ಪ್ರೇಕ್ಷಕರೆದುರು ಮತ್ತೆ ಅನಾವರಣಗೊಳಿಸಲಿದೆ. ಎಂ.ಡಿ ಪಲ್ಲವಿ. ಅಜಯ್ ವಾರಿಯರ್, ಶ್ರೀ ಕೃಷ್ಣಾ ಎಂ ಎಸ್, ವಿನಯ್ ನಾಡಿಗ್, ಗೋವಿಂದ ಕರ್ನೂಲ್ ಕುಮರನ್, ಅನನ್ಯಾ ಭಟ್, ಶೃತಿ ತುಮಕೂರು, ಶ್ವೇತಾ ಪ್ರಭು ಮತ್ತು ಶಶಿಕಲಾ ಸುನೀಲ್ ಮುಂತಾದವರು ಅಶ್ವತ್ಥ್ ಹಾಡುಗಳಿಗೆ ಧ್ವನಿಯಾಗಲಿದ್ದಾರೆ.
ಕಂಚಿನ ಕಂಠದ ವಿಶಿಷ್ಟ ಹಾಡುಗಾರಿಕೆಯಿಂದಲೇ ಮನಸುಗಳನ್ನು ಮುಟ್ಟಿದವರು ಸಿ. ಅಶ್ವತ್ಥ್. ಅವರ ಧ್ವನಿಯ ಮೂಲಕ ಸಾವಿರ ಗಾವುದ ದೂರದಲ್ಲಿಯ ನೊಂದ ಜೀವಗಳಿಗೂ ಸಾಂತ್ವನದ ಅಗೋಚರ ಮದ್ದೊಂದು ಹಾಡುಗಳ ಮೂಲಕ ರವಾನೆಯಾಗುತ್ತಿತ್ತು. ಪ್ರೀತಿ, ವಿರಹ, ಸಂಭ್ರಮ… ಇವೆಲ್ಲಕ್ಕೂ ವಾಹಕದಂತಿದ್ದ ಸಿ ಅಶ್ವತ್ಥ್ ಹಾಡುಗಳ ಮೂಲಕ ಇನ್ನೂ ಬದುಕಿದ್ದಾರೆ. ಅವರ ಹಾಡುಗಳನ್ನು ಪೀಳಿಗೆಗಳಾಚೆಗೂ ತಲುಪಿಸುವಂಥಾ ಸಾರ್ಥಕ ಕಾರ್ಯಕ್ರಮವನ್ನು ಅವಿರತ ತಂಡ ಹಮ್ಮಿಕೊಂಡಿದೆ.

 

2007 ರಲ್ಲಿ ಬೆರಳೆಣಿಕೆಯಷ್ಟು ಸಮಾನಮನಸ್ಕ ಯುವಕರಿಂದ ಪ್ರಾರಂಭವಾದ “ಅವಿರತ ಪ್ರತಿಷ್ಠಾನ” ಇಂದು ನೂರಾರು ಸಕ್ರಿಯ ಕಾರ್ಯಕರ್ತರ ಯುವಪಡೆಯಾಗಿ ಬೆಳೆದಿದೆ. ನಮ್ಮ ಹೆಮ್ಮೆಯ ಪ್ರತಿಷ್ಠಾನಕ್ಕೆ ಈಗ ದಶಮಾನೋತ್ಸವದ ಸಂಭ್ರಮ.

ಈ ಹತ್ತು ವರುಷಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಕೇಂದ್ರ ಕಾಳಜಿಗಳನ್ನಾಗಿ ಇರಿಸಿಕೊಂಡು ಶಿಕ್ಷಣ, ಆರೋಗ್ಯ, ಕಲೆ, ಪರಿಸರ ಮುಂತಾದ ಹಲವು ಕ್ಷೇತ್ರಗಲ್ಲಿ ತೊಡಗಿಸಿಕೊಂಡು ಹತ್ತಾರು ಅರ್ಥಪೂರ್ಣ ಮತ್ತು ಸಾರ್ಥಕ ಯೋಜನೆಗಳನ್ನು ಸಾಕಾರಗೊಳಿಸಿದೆ.

೧. “ಉಚಿತ ನೋಟ್ ಪುಸ್ತಕ ವಿತರಣೆ” : ಒಂದು ಶಾಲೆಯ, 50 ಮಕ್ಕಳಿಂದ ಪ್ರಾರಂಭವಾದ ಈ ಕಾರ್ಯಕ್ರಮ “ನಮ್ಮ ಶಾಲೆ ನಮ್ಮ ಹೆಮ್ಮೆ” ಯೋಜನೆಯಲ್ಲಿ ಇಂದು ರಾಜ್ಯದ 225 ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಸುಮಾರು 20,000 ವಿದ್ಯಾರ್ಥಿಗಳನ್ನು ತಲುಪುತ್ತಿದೆ.

೨. ಶಾಲಾ ಕಟ್ಟಡ ನಿರ್ಮಾಣ : 2009 ರಲ್ಲಿ ಉತ್ತರ ಕರ್ನಾಟಕದ ನೆರೆ ಪರಿಹಾರದ ಸಲುವಾಗಿ “ಸಾರ್ಥಕ – ಶಾಶ್ವತ- ಸ್ಪಂದನ” ಕಾರ್ಯಕ್ರಮದ ಮೂಲಕ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಲಿಗನೂರಿನಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣ

೩. ಕಲಿಕೆಯಲ್ಲಿ ಗಣಕೀಕರಣ : 48 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆಯ ಮೂಲಕ ಕಲಿಕೆಯ ವಿಧಾನದಲ್ಲಿ ಮೌಲ್ಯವರ್ಧನೆ.

೪. ವಿಜ್ಞಾನ ವಿಸ್ಮಯ : ಜವಾಹರಲಾಲ್ ತಾರಾಲಯದ ಸಹಯೋಗದಲ್ಲಿ ಸರಳ ಪ್ರಯೋಗಗಳ ಮೂಲಕ ವಿಜ್ಞಾನದಲ್ಲಿ ಆಸಕ್ತಿ ಮತ್ತು ಕುತೂಹಲ ಮೂಡಿಸುವುದು

೫. ಕ್ರೀಡಾಂಗಣ ಮತ್ತು ಗ್ರಂಥಾಲಯ : 25 ಕ್ಕೂ ಹೆಚ್ಚು ಶಾಲೆಗಳಲ್ಲಿ ಚಿಕ್ಕ ಗ್ರಂಥಾಲಯ ನಿರ್ಮಾಣ ಮತ್ತು ಕ್ರೀಡಾ ಸಾಮಗ್ರಿ ವಿತರಣೆ

೬. ದೇವದಾಸಿಯರ ಮಕ್ಕಳಿಗೆ ಸಹಾಯ : ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿವರ್ಷ ದೇವದಾಸಿಯರ ಮತ್ತು ಗಣಿ ಕಾರ್ಮಿಕರ 100 ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರಿಕೆಗೆ ಧನ ಸಹಾಯ

೭. ಕಲೆ : ವಿಶೇಷ ನಾಟಕ ಮತ್ತು ಸಿನಿಮಾ ಪ್ರದರ್ಶನ : ಪ್ರೇಕ್ಷಕರಲ್ಲಿ ಸದಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಇತರ ಸಭಿರುಚಿಯ ಚಲನಚಿತ್ರಗಳ ವಿಶೇಷ ಪ್ರದರ್ಶನ ಮತ್ತು ಸಂವಾದ. ಸದಭಿರುಚಿಯ ನಾಟಕಗಳ ಪ್ರದರ್ಶನಗಳ ಮೂಲಕ ಹೊಸ ಮತ್ತು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ

೮. ಸಾಹಿತ್ಯ : ಕಥಾ ಮತ್ತು ಕಾವ್ಯ ಕಮ್ಮಟಗಳ ಮತ್ತು ರಸಗ್ರಹಣ ಶಿಬಿರಗಳ ಆಯೋಜನೆ

೯. ರಕ್ತ ದಾನದ ಮಾಹಿತಿ : ಬೇಡಿಕೆ ಮತ್ತು ದಾನಿಗಳನ್ನು ಸಂಪರ್ಕಿಸುವ ಮೊಬೈಲ್ ತತ್ರಾಂಶ ಅಭಿವೃದ್ಧಿ

೧೦. ಪರಿಸರ : ಅನೇಕ ಶಾಲೆಗಳಲ್ಲಿ ಸಸಿ ನೆಡುವ ಮೂಲಕ “ಶಾಲಾ ಉದ್ಯಾನ” ನಿರ್ಮಾಣಕ್ಕೆ ಉತ್ತೇಜನ. ಹಾಗೆ ಪ್ರತಿ ವರ್ಷ ೨೦೦೦ ಗಿಡಗಳನ್ನು ನೆಡುತ್ತಿದ್ದೇವೆ.

ಇದು ಸಾಧ್ಯವಾಗಿರುವುದು ನಿಮ್ಮ ಪಾಲ್ಗೊಳ್ಳುವಿಕೆ, ಪ್ರೋತ್ಸಾಹ ಮತ್ತು ಸಹಾಯದಿಂದ.

ಹೀಗೆ ಹಲವು ಹತ್ತು ಕಾರ್ಯಕ್ಷೇತ್ರಗಳಲ್ಲಿ ತೊಡಗಿಕೊಂಡು ಹತ್ತಾರು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿರುವ ನಮ್ಮ ಹೆಮ್ಮೆಯ ಪ್ರತಿಷ್ಠಾನದ ದಶಮಾನೋತ್ಸವದ ಸಮಾರಂಭ ಡಿಸೆಂಬರ್ 17 ರಂದು ಸಂಜೆ 6.00ಕ್ಕೆ ಚೌಡಯ್ಯ ಸ್ಮಾರಕ ಭವನ, ಬೆಂಗಳೂರಿನಲ್ಲಿ.

ಅಂದು ನೀವು ನಮ್ಮೊಡನಿದ್ದು ಈ ಚಿಕ್ಕ ಸಮಾಜಮುಖಿ ಸೇವೆಗೆ ಪ್ರೋತ್ಸಾಹಿಸಬೇಕೆಂದು ಪ್ರೀತಿ ಮತ್ತು ಆಗ್ರಹಪೂರ್ವಕ ವಿನಂತಿ.

ಸಂಜೆ ದಿ. ಅಶ್ವತ್ಥ್ ಅವರ ನೆನಪಿನಲ್ಲಿ “ಮಧುರಾಶ್ವತ್ಥ” ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.

ನಿಮ್ಮ ಪರವಾಗಿ ಟಿಕೆಟ್ ಗಳನ್ನು ಕಾಯ್ದಿರಿಸಲು ದಯಮಾಡಿ ಕರೆ ಮಾಡಿ / ಸಂದೇಶ ಮುಖೇನ ತಿಳಿಸಿ. ತಪ್ಪದೆ ಬನ್ನಿ. ಕೈ ಜೋಡಿಸಿ, ಪ್ರೋತ್ಸಾಹಿಸಿ.

– ಅವಿರತ

 

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image