One N Only Exclusive Cine Portal

ಮನುಷ್ಯತ್ವ ಮರೆತವರಿಗೆ ಸತೀಶ್ ಹೇಳಿದ್ದೇನು?

ಈ ಆಂಡ್ರಾಯ್ಡ್ ಮೊಬೈಲು, ಆನ್‌ಲೈನ್ ಭರಾಟೆ ಬಂದ ಮೇಲೆ ಕೆಲ ಜನರು ಮನುಷ್ಯತ್ವವೇ ಮರೆಯಾದಂತೆ ವರ್ತಿಸುತ್ತಿದ್ದಾರೆ. ನಡು ಬೀದಿಯಲ್ಲೇ ಒಂದು ಜೀವ ಕೈಕಾಲು ಕಳೆದುಕೊಂಡು ಒದ್ದಾಡುತ್ತಿದ್ದರೂ ನೀರು ಕುಡಿಸುವ ಸೌಜನ್ಯವೂ ಇಲ್ಲದೇ ಆ ನರಳಿಕೆಯನ್ನೇ ವಿಡಿಯೋ ಮಾಡುವ ವಿಕೃತಿ ಹೆಚ್ಚುತ್ತಲೇ ಇದೆ. ಆದರೆ, ಒಂದು ಜೀವ ಸಾವು ಬದುಕಿನ ನಡುವೆ ಒದ್ದಾಡುವಾಗ ಕೈಲಾದ ಸಹಾಯ ಮಾಡುವುದು ಮನುಷ್ಯರ ಲಕ್ಷಣ. ಅದು ಮರೆಯಾಗುತ್ತಿರುವ ಸ್ಪಷ್ಟ ಸೂಚನೆಯೊಂದು ಮತ್ತೆ ಸಿಕ್ಕ ಸಂದರ್ಭದಲ್ಲಿ ನಟ ನೀನಾಸಂ ಸತೀಶ್ ತಮ್ಮದೇ ಅನುಭವವೊಂದರ ಮೂಲಕ ಮನುಷ್ಯತ್ವ ಅಂದರೇನು ಎಂಬುದನ್ನು ದಾಖಲಿಸಿದ್ದಾರೆ. ಅದನ್ನು ಅವರದ್ದೇ ಮಾತುಗಳಲ್ಲಿ ಇಲ್ಲಿ ನೀಡುತ್ತಿದ್ದೇವೆ…

ನಾನು ಮಳೆಗಾಲದಲ್ಲಿ ಒಂದಿನ ಗಿರಿನಗರ ಕಡೆಯಿಂದ ಕಾರಲ್ಲಿ ಪ್ರಯಾಣ ಮಾಡಬೇಕಾದ್ರೆ ಒಂದು ೮೦೦ ಕಾರು ನಿಂತಿತ್ತು. ಅದನ್ನ ಒಬ್ಬ ಅರವತ್ತರ ಪ್ರಾಯದ ಮನುಷ್ಯ ತಳ್ಳುತ್ತಿದ್ದರು. ಗಾಡಿ ಸ್ಟಾರ್ಟ್ ಮಾಡೋದಕ್ಕೆ ಒಳಗಿದ್ದ ಡ್ರೈವರ್ ೩೫ರವನು. ತಳ್ಳಿ ಸುಸ್ತಾದ ಮನುಷ್ಯ ಕುಸಿದು ಕಣ್ಣೆದುರೇ ಬಿದ್ದರು. ಮಳೆಯಲ್ಲಿ ಕೆಳಗಿಳಿದು ಅವರಿಗೆ ಸಹಾಯ ಮಾಡಲು ಯಾರೂ ಇಳಿಯಲಿಲ್ಲ. ಸಿನಿಮಾದಲ್ಲಿ ಉದ್ದುದ್ದ ಸಮಾಜಿಕ ಕಳಕಳಿ ಎಂದು ಮಾತಾಡುವ ನಾನು ಸುಮ್ಮನೆ ಕುಳಿತರೆ ಬದುಕಿದ್ದು ವ್ಯರ್ಥವೆನಿಸಿ ಕೆಳಗಿಳಿದು ನನ್ನ ಕಾರಿನಲ್ಲಿ ಕೂರಿಸಿ ಉಸಿರಾಟ ಮಾಡಿಸಿ ಅವರು ಸಹಜ ಸ್ಥಿತಿಗೆ ಮರಳುವವರೆಗೆ ಸಹಾಯ ಮಾಡಿದೆ. ಆಸ್ಪತ್ರೆಗೆ ಹೋಗಲು ಆತ ಒಪ್ಪಲಿಲ್ಲ. ಕಡೆಗೆ ಅವರು ಸಹಜ ಸ್ಥಿತಿಗೆ ಮರಳಿ “ನೀವು ನೂರು ವರುಷ ಬದುಕಿ” ಎಂದು ಹೇಳುವಾಗ ಅವರ ಕಣ್ಣಂಚಲಿ ನೀರು ತುಂಬಿದ್ದವು. ಅವರು ಕೆಳಗಿಳಿದು ತಮ್ಮ ಕಾರಲ್ಲಿ ಹೊರಟರು, ನನ್ನ ಕಾರಲ್ಲಿ ಅವರು ಬಿಟ್ಟು ಹೋದ ಮಣ್ಣಿನ ಕಲೆ ಒಂದು ನಿಮಿಷಕ್ಕೆ ಮಾಯವಾಯ್ತು. ಅದು ಒಂದು ನಿಮಿಷದ ಕೆಲಸ. ಅಂಥ ಸ್ಥಿತಿಯಲ್ಲಿ ಸಹಾಯ ಮಾಡಿದೆನೆಂಬ ಹೆಮ್ಮೆಗಿಂಥ ಮತ್ತೊಂದು ಸಂತೋಷ ಎಂದೂ ಸಿಗಲಾರದು.
ದಯಮಾಡಿ ಅಂಥ ಆಪತ್ಕಾಲದಲ್ಲಿ ಮೈಮರೆಯಬೇಡಿ. ಅಪಘಾತದಲ್ಲಿ ಎರಡು ಕಾಲು ಕಳೆದುಕೊಂಡ ಮನುಷ್ಯನನ್ನು ಆಸ್ಪತ್ರೆಗೆ ಸೇರಿಸುವುದು ಬಿಟ್ಟು ವಿಡಿಯೋ ಮಾಡುತ್ತಿದ್ದ ಸಂಗತಿಯನ್ನ ಈಗಷ್ಟೇ ನೋಡಿ ಬೇಸರವಾಯ್ತು. ಹಳೆ ವಿಷಯ ನೆನಪಾಗಿ ಇದನ್ನ ಬರೆದೆ..

Leave a Reply

Your email address will not be published. Required fields are marked *


CAPTCHA Image
Reload Image