One N Only Exclusive Cine Portal

ಮಹೇಂದರ್ ಹಳೇ ವರಸೆ!

ಎಸ್ ಮಹೇಂದರ್ ಬಹು ಕಾಲದ ನಂತರ ನಿರ್ದೇಶನ ಮಾಡಿದ್ದ ಒನ್ಸ್ ಮೋರ್ ಕೌರವ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿತ್ತು. ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಇಷ್ಟೆಲ್ಲ ಆದರೂ ಕೂಡಾ ಈ ಚಿತ್ರವೀಗ ಒಂದೇ ವಾರಕ್ಕೆ ‘ನೋ ಮೋರ್ ಕೌರವ’ ಅನ್ನುವಂಥಾ ಆಘಾತ ಎದುರಿಸುತ್ತಿದೆ. ಈ ಚಿತ್ರಕ್ಕೆ ಭಾರೀ ಕನಸಿಟ್ಟುಕೊಂಡು ಹಣ ಹೂಡಿದ್ದ ನರೇಶ್ ಗೌಡ ಸಿನಿಮಾ ಸಾವಾಸದಿಂದ ಬೆಚ್ಚಿಬಿದ್ದು ತಮ್ಮ ಮಾಮೂಲಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಚೆನ್ನಾಗಿದೆ ಅಂತ ಹೊಗಳಿಸಿಕೊಂಡು ಪ್ರೇಕ್ಷಕರನ್ನು ಖುಷಿಗೊಳಿಸಿದ್ದ ಚಿತ್ರವೊಂದಕ್ಕೆ ಯಾಕೆ ಈ ಸ್ಥಿತಿ ಬಂತು ಅಂತ ವಿಚಾರಿಸಿದರೆ, ಆರೋಪದ ದಿಕ್ಕು ನಿರ್ದೇಶಕ ಮಹೇಂದರ್ ಅವರತ್ತ ಹೊರಳಿಕೊಳ್ಳುತ್ತದೆ!
ಮಹೇಂದರ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರು ಈ ವರೆಗೂ ಪಕ್ಕಾ ಹಳ್ಳಿ ಸೊಗಡಿನ ಒಂದಷ್ಟು ಕಣ್ಣೀರ್ ಬ್ರ್ಯಾಂಡಿನ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ದುರಂತವೆಂದರೆ ಮೇಕಿಂಗ್ ವಿಚಾರದಲ್ಲಿ ಅವರಿನ್ನೂ ಮರಸುತ್ತಿ ಗುಡ್ಡ ಹತ್ತೋ ಮೂಡಿನಿಂದ ಹೊರ ಬಂದೇ ಇಲ್ಲ. ಒನ್ಸ್ ಮೋರ್ ಕೌರವ ಚಿತ್ರವೂ ಅದೇ ಮೂಡಿನಲ್ಲಿ ಮೂಡಿ ಬಂದಿದ್ದರೂ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
ಆದರೆ ಮಹೇಂದರ್ ಮೇಕಿಂಗ್ ಮಾತ್ರವಲ್ಲ, ಪ್ರಚಾರದ ವರಸೆಯಲ್ಲೂ ಹಳೇ ಮೂಡಿನಲ್ಲೇ ಇದ್ದಾರೆ. ಈಗಿನ ಯುವ ನಿರ್ದೇಶಕರಂತೂ ಪ್ರಚಾರಕ್ಕೆ ತೀರಾ ತಲೆ ಕೆಡಿಸಿಕೊಳ್ಳುತ್ತಾರೆ. ಥರ ಥರದ ಸರ್ಕಸ್ಸು ನಡೆಸುತ್ತಾರೆ. ಆದರೆ ಮಹೇಂದರ್ ಮಾತ್ರ ಅಖಂಡ ನಾಲಕ್ಕು ಕೋಟಿಯ ಖರ್ಚು ಮಾಡಿಸಿ ಚಿತ್ರೀಕರಣ ಮುಗಿಯುತ್ತಲೇ ಸೀದಾ ಹೋಗಿ ಮನೆ ಸೇರಿಕೊಂಡಿದ್ದಾರಂತೆ. ತೀರಾ ಈ ಚಿತ್ರದ ಬಗ್ಗೆ ಒಂದೇ ಒಂದು ಸಂದರ್ಶನಕ್ಕೂ ಹಾಜರಾಗದ ಮಹೇಂದರ್ ಬಗ್ಗೆ ಚಿತ್ರತಂಡದಲ್ಲೊಂದು ಆಕ್ರೋಶ ಮಡುಗಟ್ಟಿಕೊಂಡಿದೆ.
ಚಿತ್ರೀಕರಣ ಮುಗಿದೇಟಿಗೆ ತಮ್ಮ ಕೆಲಸವೂ ಮುಗೀತೆಂದುಕೊಳ್ಳೋ ದುಷ್ಟಬುದ್ಧಿ ಮಹೇಂದರ್ ಅವರಂಥಾ ಸೂಕ್ಷ್ಮ ಮನಸಿನ ನಿರ್ದೇಶಕರಿಗೆ ಶೋಭೆ ತರುವಂಥಾದ್ದಲ್ಲ. ಕೋಟಿ ಸುರಿದು ಚಿತ್ರ ಮಾಡಿದ ನಿರ್ಮಾಪಕರ ಬೆಂಬಲಕ್ಕೆ ನಿಲ್ಲದೇ ಹೋಗೋದು ಘೋರ ಅಪಮಾನ. ಈ ವಿಚಾರ ಮಹೇಂದರ್‌ಗೆ ಅರ್ಥವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರೇ ನಿರ್ದೇಶನ ಮಾಡಿರೋ ಒನ್ಸ್ ಮೋರ್ ಕೌರವ ಚಿತ್ರ ನೋ ಮೋರ್ ಕೌರವ ಎಂಬಂಥಾ ಸ್ಥಿತಿ ತಲುಪಿಕೊಂಡಿದ್ದು ಮಾತ್ರ ಬೇಸರದ ವಿಚಾರ.

Leave a Reply

Your email address will not be published. Required fields are marked *


CAPTCHA Image
Reload Image