One N Only Exclusive Cine Portal

ಮಾಧ್ಯಮಗಳ ವಿರುದ್ಧ ಕಲಬೆರಕೆ ನಿರ್ದೇಶಕನ ಆವಾಜ್!

ಕಲಬೆರಕೆತಮ್ಮ ಸಿನಿಮಾ ಸೋಲುವ ಸೂಚನೆ ಸಿಗುತ್ತಲೇ ಅದರ ಕಾರಣಗಳನ್ನು ಗೊಣ್ಣೆಯಂತೆ ಸೀಟಿ ಬೇರೆಯವರತ್ತ ರಾಚುವ ಅಸಹ್ಯದ ಬುದ್ಧಿ ಚಿತ್ರರಂಗದ ಕೆಲ ಮಂದಿಗಿದೆ. ಕೆಲ ಮಂದಿಯಂತೂ ತಮ್ಮ ಸಿನಿಮಾ ಗೋತಾ ಹೊಡೆದ ಬಾಬತ್ತನ್ನು ಏಕಾಏಕಿ ಮಾಧ್ಯಮದ ಹೆಗಲಿಗೆ ತಗುಲಿಸಿಬಿಡುವ ಮೂರ್ಖತನಕ್ಕೂ ಕೈ ಹಾಕುತ್ತಾರೆ. ಸದ್ಯ ‘ಕಲಬೆರಕೆ ಅಂತೊಂದು ಚಿತ್ರದ ನಿರ್ದೇಶಕ ಮಧು ದಿವಾಕರ್ ಎಂಬ ಆಸಾಮಿಯೂ ಇಂಥಾದ್ದೇ ಹಾದಿ ಹಿಡಿದಿದ್ದಾರೆ!


ಉರ್ವಿ ಮತ್ತು ಶುದ್ಧಿ ಸಿನಿಮಾಗಳ ಜೊತೆ ಜೊತೆಗೇ ತೆರೆ ಕಂಡ ಚಿತ್ರ ಕಲಬೆರಕೆ. ಬಿಡುಗಡೆ ಪೂರ್ವದಲ್ಲಿಯೇ ತನ್ನ ಗುಣಮಟ್ಟದ, ಡಿಫರೆಂಟಾದ ಟ್ರೈಲರ್ ಮುಂತಾದವುಗಳ ಮೂಲಕ ಸದ್ದು ಮಾಡಿದ್ದ ಉರ್ವಿ ಮತ್ತು ಶುದ್ಧಿ ಚಿತ್ರಗಳು ನಿರೀಕ್ಷೆಯಂತೆಯೇ ಯಶ ಕಂಡಿವೆ. ಆದರೆ ಇವೆರಡು ಚಿತ್ರಗಳ ಜೊತೆಯಲ್ಲೇ ತೆರೆ ಕಂಡಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಳೀಮಯ್ಯನ ಕಲಬೆರಕೆ ಸದ್ದಿಲ್ಲದೇ ಸರಿದು ನಿಲ್ಲುವಂತಾಗಿದೆ.
ಸದ್ಯ ಇಂಥಾದ್ದೊಂದು ಸೋಲಿನ ಸುಳಿಯಲ್ಲಿ ಸಿಲುಕಿ ಕಂಗಾಲಾಗಿರುವ ಅನಿರುದ್ಧ್, ಚಿತ್ರದ ನಾಯಕಿ ಸಂಜನಾ ಪ್ರಕಾಶ್ ಮತ್ತು ನಿರ್ದೇಶಕ ಮಧು ದಿವಾಕರ್ ಫೇಸ್‌ಬುಕ್ ಲೈವಲ್ಲಿ ಬಂದು ಪೇಚಾಡಿಕೊಂಡಿದ್ದಾರೆ. ಮಧು ದಿವಾಕರ್ ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮಗಳ ವಿರುದ್ಧ ಬಬ್ರುವಾಹನನಂತೆ ಎಗರಾಡುವ ಮೂಲಕ ಹೀನಾಯ ಸೋಲಿನ ಸುಸ್ತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ!
‘ಕನ್ನಡದ ಮಾಧ್ಯಮಗಳು ಪರಭಾಷಾ ಚಿತ್ರಗಳಿಗೆ ಮನಬಂದಂತೆ ಪ್ರಚಾರ ಕೊಡುತ್ತಿವೆ. ಅಂಥಾ ಚಿತ್ರಗಳ ಬಗ್ಗೆ ಬೇಕಂತಲೇ ಬಿಲ್ಡಪ್ಪು ಕೊಡುತ್ತವೆ. ಆದರೆ ತಮ್ಮ ಚಿತ್ರದಂಥಾ ಸಾಮಾಜಿಕ ಸಂದೇಶ ಸಾರುವಂಥವುಗಳನ್ನು ಕಡೆಗಣಿಸುತ್ತಾರೆ. ಚಿತ್ರವನ್ನು ನೋಡಿ ಅದರ ಬಗ್ಗೆ ಪ್ರಚಾರ ಕೊಡಲು ಏನ್ ಧಾಡಿ ಎಂಬರ್ಥದಲ್ಲಿ ಹುಚ್ಚಾ ವೆಂಕಟನ ಹೊಸಾ ವರ್ಷನ್ನಲ್ಲಿ ಆವಾಜು ಹಾಕಿದವರು ಮಧು ದಿವಾಕರ್!
ಸ್ವಾಮಿ ಮಧು ದಿವಾಕರ್… ಕನ್ನಡ ಚಿತ್ರರಂಗದಲ್ಲಿ ತಿಂಗಳಲ್ಲಿ ಹತ್ತಾರು ಚಿತ್ರಗಳು ಮುಹೂರ್ತ ಕಾಣುತ್ತವೆ. ಅದರಲ್ಲೊಂದಷ್ಟು ರಿಲೀಸಾಗುತ್ತವೆ. ತಾವೇನೋ ಸಾಮಾಜಿಕ ಸಂದೇಶದ ಚಿತ್ರ ಮಾಡಿದ್ದೀರೆಂದು ಯಾವ ಮಾಧ್ಯಮದವರಿಗೂ ಕನಸು ಬೀಳೋದಿಲ್ಲ. ಮೊದಲು ತಮ್ಮ ಪ್ರಾಡಕ್ಟು ತನ್ನ ಕ್ರಿಯೇಟಿವಿಟಿ ಮತ್ತು ಹೊಸಾ ತನಗಳ ಮೂಲಕವೇ ಎಲ್ಲರ ಗಮನ ಸೆಳೆಯುವಂಥಾ ಧಂ ಇರಬೇಕು. ಈವತ್ತು ಕಣ್ಣೆದುರೇ ಭರ್ಜರಿ ಪ್ರದರ್ಶನ ಕಾಣುತ್ತಿರೋ ಉರ್ವಿ ಮತ್ತು ಶುದ್ಧಿ ಗೆದ್ದಿದ್ದೂ ಅಂಥಾ ಬಲದಿಂದಲೇ. ಇವೆರಡೂ ಚಿತ್ರಗಳು ಕ್ರಿಯೇಟಿವ್ ಆಗಿ ಗಮನ ಸೆಳೆದಿದ್ದರಿಂದಲೇ ಮಾಧ್ಯಮಗಳಲ್ಲಿಯೂ ಪ್ರಚಾರ ಸಿಕ್ಕಿದೆ. ಆನರದನ್ನು ಕಂಟೆಂಟ್ ಚೆನ್ನಾಗಿರೋದರಿಂದಲೇ ಗೆಲ್ಲಿಸಿದ್ದಾರೆ.
ಆದರೆ ಮಧು ದಿವಾಕರ್ ಹೇಳೋ ಪ್ರಕಾರ ಪ್ರಚಾರ ಮಾಡಲು ಆರ್ಥಿಕ ಕೊರತೆಯಾದ್ದದ್ದರಿಂದಲೇ ಅವರ ಚಿತ್ರ ಸೋತಿದೆ. ಮಾಧ್ಯಮಗಳೂ ಆ ಕಾರಣದಿಂದಲೇ ಅದನ್ನು ಕಡೆಗಣಿಸಿವೆ. ಆದರೆ ಕಲಬೆರಕೆ ಎಂಬ ಚಿತ್ರವನ್ನು ಹೊಸತನದ ಮೂಲಕವೇ ಭೂಮ್ ಕ್ರಿಯೇಟ್ ಮಾಡುವಂತೆ ನೋಡಿಕೊಳ್ಳಲು ನಿರ್ದೇಶಕರಾಗಿ ಮಧು ದಿವಾಕರ್‌ಗೆ ಅದೇನು ತಡೆಗಳಿದ್ದವು? ಪ್ರಚಾರದ ಕೊರತೆಯಿದ್ದರೂ ತೆರೆ ಕಂಡು ತನ್ನ ಕಸುವಿನಿಂದಲೇ ಗೆದ್ದ ಚಿತ್ರಗಳ ಅದೆಷ್ಟು ಉದಾಹರಣೆಗಳು ಚಿತ್ರರಂಗದಲ್ಲಿಲ್ಲ?
ಇದಕ್ಕೆ ಉತ್ತರ ಕೊಡಬೇಕಿರೋ ಮಧು ಮುಂದೆ ಮಾಧ್ಯಮಗಳ ಬಗ್ಗೆಯೇ ಒಂದು ಸಿನಿಮಾ ಮಾಡೋದಾಗಿ ಗುಟುರು ಹಾಕಿದ್ದಾರೆ. ಮಾಡಬ್ಯಾಡಿ ಅನ್ನಲು ಮಾಧ್ಯಮದವರ‍್ಯಾರು? ಧಾರಾಳವಾಗಿ ಮಾಡಿ. ಗಾಂಧಿನಗರದ ಕಸದ ಬುಟ್ಟಿಯ ಸಹನೆ ದೊಡ್ಡದಿದೆ!

Leave a Reply

Your email address will not be published. Required fields are marked *


CAPTCHA Image
Reload Image