One N Only Exclusive Cine Portal

`ಮಾಲಾಶ್ರೀಗೆ ನಟಿಸೋಕೆ ಬರಲ್ಲ’ ಅನ್ನೋದೆ?

ರಾಣಿ ಮಹಾರಾಣಿ, ಚಂಡಿ, ಚಾಮುಂಡಿ, ದುರ್ಗಿ…. ಈ ಎಲ್ಲಾ ಹೆಸರುಗಳಿಂದ ಕರೆಸಿಕೊಳ್ಳುವ ಮಾಲಾಶ್ರೀ ಬೇಸರಗೊಂಡಿದ್ದಾರೆ. ಚಿತ್ರರಂಗದಲ್ಲಿ ಸರಿಸುಮಾರು ಇಪ್ಪತ್ರೈದು ವರ್ಷಗಳ ಕಾಲ ನಟಿಯಾಗಿ ಗುರುತಿಸಿಕೊಂಡಿರುವ ಮಾಲಾಶ್ರೀ ಈಗ ಯಾಕೆ ಇದ್ದಕ್ಕಿದ್ದಹಾಗೆ ಬೇಸರ ಮಾಡಿಕೊಂಡರು? ಅವರ ಮನಸ್ಸಿನ ಮೇಲೆ `ಉಪ್ಪು ಖಾರ ಹುಳಿ’ ಹಿಂಡಿದವರು ಯಾರು? ಇಲ್ಲಿದೆ ನೋಡಿ ಡಿಟೇಲ್ಸ್!
ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿ ಸದ್ಯ ಚಿತ್ರ ನಿರ್ದೇಶಕರೂ ಆಗಿರುವ ಇಮ್ರಾನ್ ಸರ್ದಾರಿಯಾ ಸಿನಿಮಾವೊಂದನ್ನು ಶುರು ಮಾಡಿದ್ದರು. ಚಿತ್ರದ ಹೆಸರು ಉಪ್ಪು ಖಾರ ಹುಳಿ!. ಈ ಚಿತ್ರಕ್ಕೆ ಕೆ. ಮಂಜು ನಿರ್ಮಾಪಕ.
ಆರಂಭದಲ್ಲಿ ಮಾಲಾಶ್ರೀ ಅವರಿಗೆ ಕಥೆ ಒಪ್ಪಿಸುವಾಗ ಈ `ಈ ಪಾತ್ರವನ್ನು ನೀವೇ ಮಾಡಬೇಕು, ನೀವಿಲ್ಲದಿದ್ದರೆ ಈ ಸಿನಿಮಾ ಮಾಡಕ್ಕಾಗಲ್ಲ’ ಎಂದು ಇಮ್ರಾನ್ ಹಠ ಹಿಡಿದಿದ್ದರಂತೆ. ಈ ಕಾರಣಕ್ಕೆ ಮಾಲಾಶ್ರೀ ನಟಿಸಲು ಒಪ್ಪಿದ್ದರಂತೆ.
ಆರಂಭದಲ್ಲಿ ಕೆ. ಮಂಜು ನಿರ್ಮಾಪಕ ಎಂದು ಹೇಳಿದ್ದರಾದರೂ, ಯುಗಾದಿ ಸಂದರ್ಭದಲ್ಲಿ ಕಳಿಸಿದ್ದ ಪೋಸ್ಟರ್ ನಲ್ಲಿ ಮಂಜು ಅವರ ಹೆಸರೇ ಇರಲಿಲ್ಲವಂತೆ. ಕೇಳಿದರೆ, `ಮಂಜು ಅವರು ಹಿಂದೆ ನಿಂತು ಸಪೋರ್ಟ್ ಮಾಡ್ತಾರೆ. ಬೇರೊಬ್ಬರು ಈ ಚಿತ್ರಕ್ಕೆ ಹಣ ಹೂಡ್ತಾ ಇದ್ದಾರೆ’ ಅಂತಾ ಇಮ್ರಾನ್ ಹೇಳಿದ್ದರಂತೆ.
ಇದಾದ ನಂತರ `ಉಪ್ಪು ಖಾರ ಹುಳಿ’ ಚಿತ್ರಕ್ಕಾಗಿ ಸದ್ದಿಲ್ಲದೇ ಮುಹೂರ್ತವನ್ನೂ ಆಚರಿಸಿಕೊಂಡು, ಒಂದು ದಿನದ ಶೂಟಿಂಗ್ ಕೂಡಾ ನಡೆಸಲಗಿತ್ತು. ಮಾರೆನೆಯ ದಿನದ ಶೂಟಿಂಗ್ ಹೊತ್ತಿಗೆ ಮಾಲಾಶ್ರೀ ಅವರ ಆರೋಗ್ಯ ಸರಿಯಿಲ್ಲದ ಕಾರಣ `ಸೆಟ್‌ಗೆ ಸ್ವಲ್ಪ ಲೇಟಾಗಿ ಬರ್ತೀನಿ’ ಅಂದಿದ್ದರಂತೆ. ಹೇಳಿದಂತೆ ನಡೆದುಕೊಳ್ಳುವ ಮೇಡಮ್ಮು ಮಧ್ಯಾಹ್ನ ೧೨.೩೦ರ ಹೊತ್ತಿಗೆ ಸೆಟ್ ಗೆ ಹೋದಾಗ `ಪರವಾಗಿಲ್ಲ ನಾನು ಬೇರೆ ಪ್ಲಾನ್ ಮಾಡಿಕೊಂಡಿದ್ದೀನಿ. ನೀವು ಮನೆಗೆ ಹೋಗಿ ರೆಸ್ಟ್ ತಗೊಳ್ಳಿ’ ಅಂದಿದ್ದರಂತೆ.
ಸಂಜೆ ಹೊತ್ತಿಗೆ ಇಮ್ರಾನ್ ಸರ್ದಾರಿಯಾ ಮಾಲಾಶ್ರೀ ಅವರಿಗೊಂದು ಮೆಸೇಜ್ ಕಳಿಸಿದ್ದಾರೆ. ಅದರಲ್ಲಿ “ನಿಮ್ಮ ಪರ್ ಫಾರ್ಮೆನ್ಸ್ ಇಷ್ಟ ಆಗಿಲ್ಲ ಅಂತಾ ಕೆ. ಮಂಜು ಸಿನಿಮಾನ ಡ್ರಾಪ್ ಮಾಡಿದಾರೆ…” ಎಂದಿತ್ತಂತೆ. ಇದನ್ನು ಕಂಡ ಮಾಲಾಶ್ರೀ ನಿಜಕ್ಕೂ ದಿಗ್ರ್ಭಾಂತರಾಗಿದ್ದಾರೆ. ಕನ್ನಡ ಭಾಷೆಯೇ ಗೊತ್ತಿಲ್ಲದ ಸಂದರ್ಭದಲ್ಲಿ ಈ ಇಂಡಸ್ಟ್ರಿಗೆ ಕಾಲಿಟ್ಟು, ಎಲ್ಲೂ ಯಾವತ್ತೂ ಯಾರಿಂದಲೂ ಇಂಥಾ ಮಾತು ಅನ್ನಿಸಿಕೊಂಡಿರಲಿಲ್ಲ. ಹೊಸಾ ನಿರ್ದೇಶಕನೊಬ್ಬ ಹೀಗಂದುಬಿಟ್ಟನಲ್ಲಾ ಅಂತಾ ಕೊರಗಿದ್ದಾರೆ. ಈ ವಿಚಾರವಾಗಿ ಕೊಬ್ರಿ ಮಂಜು ಅವರೊಂದಿಗೆ ಮಾತಾಡೋಣ ಅಂತಾ ಫೋನ್ ಮಾಡಿದರೆ, “ನಾನೀಗ ಬ್ಯುಸಿ ಇದ್ದೀನಿ..” ಎಂದು ಹೇಳಿ ಸುಮ್ಮನಾಗಿಬಿಟ್ಟರಂತೆ.
ಈ ಎಲ್ಲಾ ವಿಚಾರಗಳಿಂದ ಮಾಲಾಶ್ರೀ ವ್ಯಾಕುಲಕ್ಕೊಳಗಾಗಿದ್ದಾರೆ, ಸ್ವತಃ ತಾವೇ ಪತ್ರಿಕಾಗೋಷ್ಟಿಯನ್ನು ಕರೆದು ಎಲ್ಲ ವಿವರಗಳನ್ನು ಮಾಧಮದವರ ಮುಂದೆ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image