One N Only Exclusive Cine Portal

ಮಾಳವಿಕಾ ಹಿಂದೆ ಬಿದ್ದ ಸಂಚಾರಿ ವಿಜಯ್ ‘ಅವ್ಯಕ್ತ ತುಮುಲ!

ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಕಿರು ಚಿತ್ರಗಳು ತಯಾರಾಗುತ್ತಿವೆ. ಆದರೆ ಒಂದು ಚಿತ್ರದಷ್ಟೇ ಶ್ರದ್ಧೆಯಿಂದ, ಗುಣಮಟ್ಟದಿಂದ ಅಣಿಗೊಂಡು ಗಮನ ಸೆಳೆಯುವವುಗಳ ಸಂಖ್ಯೆ ವಿರಳ. ಆದರೆ ಇತ್ತೀಚೆಗಷ್ಟೇ ವಿಶೇಷ ಪ್ರದರ್ಶನ ಕಂಡು ಬಿಡುಗಡೆಗೆ ಸಜ್ಜಾಗಿರುವ ‘ಅವ್ಯಕ್ತ ಎಂಬ ಕಿರುಚಿತ್ರ ಇದೀಗ ಕಥೆ, ಗುಣ ಮಟ್ಟ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದೆ.

ಶಿವಮೊಗ್ಗದಲ್ಲಿ ಸಕ್ರಿಯವಾಗಿರುವ ‘ಹೊಂಗಿರಣ ರಂಗ ತಂಡದವರೇ ಸೇರಿ ತಯಾರಿಸಿರುವ ಅವ್ಯಕ್ತ ಕಿರುಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಶಿವಕುಮಾರ ಮಾವಲಿ ಅವರ ‘ದೇವರು ಅರೆಸ್ಟಾದ ಲಥಾ ಸಂಕಲನದ ‘ಮಧ್ಯವಯಸ್ಕನ ಮನೋಲಾಗ್ ಕಥೆಯಾಧಾರಿತವಾದ ಈ ಚಿತ್ರಕ್ಕೆ ಮಾವಲಿ ಅವರೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಅವರೂ ಕೂಡಾ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದಾರೆ. ರಕ್ಷಿತ್ ಹೆಚ್.ಸಿ ಪ್ರೊಡಕ್ಷನ್ ವಿಭಾಗದಲ್ಲಿ ಧೇಖಾರೇಖಿ ನೋಡಿಕೊಂಡಿದ್ದಾರೆ.


ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಮಧ್ಯವಯಸ್ಕ ಅವಿವಾಹಿತ ಗಂಡಸೊಬ್ಬ ಅನಿರೀಕ್ಷಿತವಾಗಿ ಎದುರಿಸುವ ಘಟನೆ, ಮನೋ ವ್ಯಾಕುಲವನ್ನು ಬಿಚ್ಚಿಡುತ್ತಾ ಸಾಗುತ್ತದೆ. ಸಾಮಾನ್ಯವಾಗಿ ಇಂಥಾ ಅನಿರೀಕ್ಷಿತ ಬೆಳವಳಿಗೆಗಳನ್ನು ಎದುರಿಸುವ ಗಂಡು ಜನುಮದ ಅವ್ಯಕ್ತ ಭಾವನೆಗಳನ್ನು ತೆರೆದಿಡೋದರಿಂದಲೇ ಈ ಕಿರು ಚಿತ್ರಕ್ಕೆ ಅವ್ಯಕ್ತ ಎಂಬ ಹೆಸರಿಡಲಾಗಿದೆ. ಇದರಲ್ಲಿ ಡಾ. ಜಾನ್ಹವಿ ಜ್ಯೋತಿ ಕೂಡಾ ಗಮನಾರ್ಹವಾ ಕಾಣಿಸಿಕೊಂಡಿದ್ದಾರೆ.
ಅದಾಗಲೇ ಕೈ ತುಂಬಾ ಅವಕಾಶ ಹೊಂದಿದ್ದ ಸಂಚಾರಿ ವಿಜಯ್ ಈ ಕಿರು ಚಿತ್ರದಲ್ಲಿ ನಟಿಸೋ ಕರೆ ಬಂದಾಗ ಒಂದರೆ ಕ್ಷಣ ಗೊಂದಲಕ್ಕೆ ಬಿದ್ದಿದ್ದರು. ಆದರೆ ಇದರ ಚೆಂದದ ಕಥೆ ಕೇಳಿ ಖುಷಿಯಿಂದಲೇ ನಟಿಸಿರುವ ವಿಜಯ್ ಮಧ್ಯ ವಯಸ್ಕ ಅವಿವಾಹಿತ ಗಂಡಸರ ತುಮುಲಗಳನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಈ ಚಿತ್ರದುದ್ದಕ್ಕೂ ಮಾಳವಿಕಾ ಪಾತ್ರ ಗಮನ ಸೆಳೆಯುವಂತೆ ಮೂಡಿ ಬಂದಿದೆ.
ಮೊನ್ನೆ ಇದರ ವಿಶೇಷ ಪ್ರದರ್ಶನದ ಸಂದರ್ಭದಲ್ಲಿಯೂ ನೆರೆದಿದ್ದ ಮಂದಿ ಈ ಕಿರು ಚಿತ್ರದ ಚೆಂದದ ಕಥೆ, ನಿರೂಪಣೆ, ಗುಣಮಟ್ಟಕ್ಕೆ ಮಾರು ಹೋಗಿದ್ದಾರೆ. ಅಷ್ಟೇ ಚೆಂದದ ಒಂದು ಹಾಡನ್ನೂ ಹೊಂದಿರೋ ಈ ಚಿತ್ರ ಇಷ್ಟರಲ್ಲಿಯೇ ಯೂ ಟ್ಯೂಬಿನಲ್ಲಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image