One N Only Exclusive Cine Portal

ಮೂಕಹಕ್ಕಿ: ದಮನಿತರ ಧ್ವನಿ ಹಾಡಾಯ್ತು!


ಹೊಸಾ ಅಲೆ, ನವೀನ ಪ್ರಯೋಗಗಳ ಸರಣಿಯೋಪಾದಿಯಲ್ಲಿ ನಡೆಯುತ್ತಿದ್ದರೂ ನಮ್ಮದೇ ನಡುವಿದ್ದೂ ಬೆಳಕಿಗೆ ಬಾರದ ಬದುಕುಗಳು ಸಿನಿಮಾ ಚೌಕಟ್ಟಿಗೊಳಪಡೋದು ವಿರಳ. ಅಂಥಾದ್ದೊಂದು ಅಪರೂಪದ ಪ್ರಯತ್ನವಾಗಿ ಮೂಡಿ ಬರುತ್ತಿರೋ ಚಿತ್ರ ಮೂಕಹಕ್ಕಿ. ಈ ಚಿತ್ರದ ಹಾಡುಗಳು ಇದೀಗ ಅನಾವರಣಗೊಂಡಿವೆ.
ನೀನಾಸಂ ಮಂಜು ಮೊದಲ ಸಲ ನಿರ್ದೇಶನ ಮಾಡಿರೋ ಈ ಚಿತ್ರದ ಹಾಡುಗಳು ಮಣಿಕಾಂತ್ ಕದ್ರಿ ಮನಮೋಹಕ ಸಂಗೀತದಲ್ಲಿ ಮೂಡಿ ಬಂದಿವೆ. ಚಿತ್ರದ ಕಥಾ ಹಂದರದ ಒಟ್ಟೊಟ್ಟಿಗೇ ಸಾಗೋ ಹಾಡುಗಳನ್ನು ಕಥೆಯ ಆಂತರ್ಯಕ್ಕೆ ತಕ್ಕುದಾಗಿ ರೂಪಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳೂ ಮಣಿಕಾಂತ್ ಸಂಗೀತದ ಬಗ್ಗೆ ಕೇಳಿ ಬಂದಿದೆ.
ಈ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕೆಲ ಕಾಲ ಭಾವುಕ ವಾತಾವರಣವೊಂದು ನಿರ್ಮಾಣವಾಯಿತು. ಮಾಸ್ತಿಗುಡಿ ಚಿತ್ರದ ದುರಂತದಲ್ಲಿ ಮಡಿದ ಅನಿಲ್ ಮತ್ತು ಉದಯ್ ನೆನಪು ಅದಕ್ಕೆ ಕಾರಣ. ಅನಿಲ್ ಮೂಕಹಕ್ಕಿ ಚಿತ್ರ ಆರಂಭವಾದಾಗಿನಿಂದಲೂ ನಿರ್ದೇಶಕ ಮಂಜು ಅವರಿಗೆ ಬೆನ್ನೆಲುಬಾಗಿ ನಿಂತಿದ್ದರಂತೆ. ಆದರೆ ಅವರು ಚಿತ್ರ ಅಂತಿಮ ಹಂತಕ್ಕೆ ಬಂದಿರೋ ಈ ಹೊತ್ತಿನಲ್ಲಿ ಬರೀ ನೆನಪಾಗಿದ್ದಾರೆಂಬ ದುಗುಡದಿಂದ ಮಾತಾಡಿದ ನಿರ್ದೇಶಕ ಮಂಜು ಭಾವುಕರಾದರು.
ಓ ಎಸ್ ರಾಠೋಡ್ ಮತ್ತು ಚಂದ್ರಕಲಾ ರಾಠೋಡ್ ನಿರ್ಮಾಣ ಮಾಡಿರೋ ಈ ಚಿತ್ರ ಕೋಲೆ ಬಸವ ಅಲೆಮಾರಿ ಜನಾಂಗದ ಬದುಕಿನ ಚಿತ್ರಣವನ್ನು ಕಟ್ಟಿ ಕೊಡುವ ಕಥಾ ಹಂದರ ಹೊಂದಿದೆ. ದಮನಿತರ ದುಮ್ಮಾನಗಳಿಗೆ ಧ್ವನಿಯಾಗುತ್ತಾ ಕ್ರಿಯಾಶೀಲ ಸಾಹಿತ್ಯದ ರೂವಾರಿಯಾಗಿರುವ ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥಾ ವಿಸ್ತರಣೆ, ಸಾಹಿತ್ಯದಲ್ಲಿ ಜೊತೆಯಾಗಿದ್ದಾರೆ. ಧ್ವನಿಸುರುಳಿ ಬಿಡುಗಡೆ ಸಂಮಯದಲ್ಲಿಯೂ ಹಾಜರಿದ್ದ ರಾಮಯ್ಯ, ದಮನಿತರ ಧ್ವನಿಯಾಗೋ ಇಂಥಾ ಪ್ರಯತ್ನಗಳು ಅಪರೂಪ. ಅಂಥಾ ಹಲವಾರು ಸವಾಲುಗಳನ್ನು ದಾಟಿಕೊಂಡೂ ಈ ಚಿತ್ರ ಅಂತಿಮ ಘಟ್ಟ ತಲುಪಿದೆ ಎಂದು ಈ ವರೆಗಿನ ನಡೆಯನ್ನು ನೆನಪಿಸಿಕೊಂಡರು.
ತಿಥಿ ಚಿತ್ರ ಖ್ಯಾತಿಯ ಪೂಜಾ ಮತ್ತು ರಂಗಭೂಮಿ ಪ್ರತಿಭೆ, ಚಿತ್ರರಂಗದಲ್ಲೂ ಅದ್ಭುತ ನಟ ಎನಿಸಿಕೊಂಡಿರುವ ಸಂಪತ್ ಮುಂತಾದವರು ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರ ಇಷ್ಟರಲ್ಲೇ ತೆರೆಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image