One N Only Exclusive Cine Portal

ಯುವರಾಜನ ಜೊತೆಗೆ ದೆಹಲಿ ರಾಜಕಾರಣವೇ ಸರಿ!

ನಟಿ ರಮ್ಯಾ ಈಗ ಫುಲ್ ಟೈಮ್ ರಾಜಕಾರಣಿ…
ಯೆಸ್, ರಮ್ಯಾಗೆ ಅದ್ಯಾಕೋ ಸ್ಥಳೀಯ ಪಾಲಿಟಿಕ್ಸ್ ಆಗಿಬರ್ತಾಇಲ್ಲ. ಮಂಡ್ಯ ಜನರು ರಮ್ಯಾರನ್ನು ಕಂಡ್ರೆ ಕೆಂಡಾಮಂಡಲವಾಗ್ತಿದ್ದಾರೆ. “ಈ ಯಮ್ಮ ಮಂಡ್ಯಾದಲ್ಲಿ ಗೆದ್ದು ಕಡಿದಾಕಿದ್ದೂ ಅಷ್ಟ್ರಲ್ಲೇ ಐತೆ” ಅಂತ ಮುಖ ಕಿವುಚುತ್ತಿದ್ದಾರೆ. ಮಂಡ್ಯದ ಜನ ಗಂಡು ಮೆಟ್ಟಿದ ನಾಡು. ಆದ್ರೆ ಅಲ್ಲಿ ಅದ್ಹೇಗೋ ಒಮ್ಮೆ ಕಾಂಗ್ರೆಸ್‌ನಿಂದ ಗೆದ್ದ ರಮ್ಯಾ ಲೋಕಸಭೆಯ ಸದಸ್ಯೆಯಾಗಿ ದೆಹಲಿಗೆ ಶಿಫ್ಟ್ ಆದ್ರು. ಆದ್ರೆ ಅಲ್ಲಿಗೆ ಹೋಗಿದ್ದೇ ತಡ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಈಕೆಗೆ ಫಿದಾ ಆಗಿಬಿಟ್ಟರು. ಹೀಗಾಗಿ ರಮ್ಯಾಗೆ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಕೂಡ ತುಂಬಾ ಹತ್ತಿರ ಆಗಿದ್ದಾರೆ. ರಮ್ಯಾ ಏನೇ ಹೇಳಿದ್ರೂ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎಂಬ ಊಹಾಪೋಹಗಳು ಕಾಂಗ್ರೆಸ್ ಪಾಳಯದಲ್ಲಿ ಶುರುವಾಗಿವೆ. ಅವು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ರಮ್ಯಾಗೆ ಮಂಡ್ಯಾದ ಜನ ಒಮ್ಮೆ ಪಾಠ ಕಲಿಸಿದ ನಂತರ ಈಗ ಬೋ ಬುದ್ದಿವಂತೆ ಆಗಿದ್ದಾರಂತೆ. ಸದಾ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲೇ ಮಂಡ್ಯ ಜನರನ್ನ ಭೇಟಿಯಾಗಿ, ಅದೇ ಸಾಮಾಜಿಕ ಜಾಲತಾಣಗಳಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರವನ್ನೂ ಕೊಡುತ್ತಿದ್ದ ರಮ್ಯಾಗೆ ಮಂಡ್ಯದ ಹೆಣ್ಣೈಕ್ಳು ಶ್ಯಾನೆ ಸಿಟ್ ಮಾಡ್ಕಂಡವ್ರೆ. ಹೀಗಾಗಿ ಮಂಡ್ಯದ ಜನರ ಬಳಿ ಹೋಗೋದಕ್ಕೆ ರಮ್ಯಾ ಮತ್ತೆ ಏನೇನೋ ಕಸರತ್ತು ನಡೆಸಿದರು. ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗೆ ಹೋಗಲು ತಮ್ಮ ಕಾಲಿಗೆ ಬಟ್ಟೆ ಕಟ್ಟಿಕೊಂಡು “ನನಗೆ ಗಾಯವಾಗಿದೆ. ಆಕ್ಸಿಡೆಂಟ್ ಆಗಿತ್ತು. ಆದ್ರೂ ನಿಮ್ಮನ್ನ ನೋಡೋಕೆ ಬಂದೌನಿ ಅಂತ ಪುಂಗಿ ಬಿಟ್ಟು ರೈತರ ಮನೆಗಳಿಗೆ ಹೋಗಿ ಬಂದ್ರು. ಆದ್ರೆ ಅದಾಗಿ ಕೆಲವೇ ದಿನಗಳಲ್ಲಿ ಮಂಡ್ಯಕ್ಕೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಬಂದಾಗ ಅದ್ಯಾಕೋ ರಮ್ಯಾಗೆ ಬ್ಯಾಂಡೇಜ್ ನೆನಪೇ ಆಗಿರಲಿಲ್ಲ. ಸದಾ ರಾಹುಲ್ ಪಕ್ಕದಲ್ಲೇ ಇರುತ್ತಿದ್ದರು. ಇನ್ನೇನು ರಾಹುಲ್ ಗಾಂಧಿಯನ್ನು ಹೆಲಿಕ್ಯಾಪ್ಟರ್ ಹತ್ತಿಸುವಾಗ ರಮ್ಯಾಗೆ ಹಳ್ಳಿ ಹೆಣ್ಣೈಕಳು “ಏ ಬಾರೆ ಯವ್ವಾ ನೀನ್ ಕಳಿಸಿದ್ದು ಆಯ್ತು ತಾನೆ, ಅದೇನೋ ಅಂತಾರಲ್ಲ ಸೆಲ್ಫಿ ಅದನ್ನ ತೆಗ್ಸೋಣ ಬಾ…” ಅಂತ ಜೋರಾಗೇ ಬೊಬ್ಬಿರಿದಿದ್ದರು. ಇದರಿಂದ ರಮ್ಯಾ ಕೂಡ ನಾಚಿ ನೀರಾಗಿದ್ರು…

ವಿಧಾನ ಪರಿಷತ್ ಸರ್ಕಸ್:
ರಮ್ಯಾ ಈಗ ಪಕ್ಕಾ ಫುಲ್ ಟೈಮ್ ರಾಜಕಾರಣಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಸಚಿವರಾದ ಅಂಬರೀಷ್, ಡಿ.ಕೆ.ಶಿವಕುಮಾರ್ ಜೊತೆ ಸಾಕಷ್ಟು ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ವಿಧಾನ ಪರಿಷತ್‌ಗೆ ತನ್ನನ್ನು ಆಯ್ಕೆ ಮಾಡಿ ಅಂತ ಒಮ್ಮೆ ರಾಹುಲ್ ಗಾಂಧಿ ಬಳಿ ತನ್ನ ಅಳಲು ತೋಡಿಕೊಂಡಿದ್ರು. ಅದಕ್ಕೆ ರಾಹುಲ್ ಗಾಂಧಿ ಕೂಡ ಸೈ ಅಂದಾಗಿತ್ತು. ಆದರೆ ರಮ್ಯಾಳನ್ನು ಪರಿಷತ್‌ಗೆ ಆಯ್ಕೆ ಮಾಡಿದ್ರೆ ಏನು ಪ್ರಯೋಜನ? ಈಗಾಗಲೇ ಸಾಕಷ್ಟು ಸಿನಿಮಾ ಮಂದಿ ಅಲ್ಲಿದ್ದಾರೆ. ಕಾಂಗ್ರೆಸ್‌ನಿಂದಲೇ ಸಚಿವರಾಗಿ ಉಮಾಶ್ರೀ ಇದ್ದಾರೆ. ಪರಿಷತ್‌ಗೆ ಆಯ್ಕೆಯಾದ ಜಯಮಾಲ ಇದ್ದಾರೆ. ಬಿಜೆಪಿಯಿಂದ ಆಯ್ಕೆಯಾದ ತಾರಾ ಅನುರಾಧ, ಜಗ್ಗೇಶ್, ಇ.ಕೃಷ್ಣಪ್ಪ, ಸಂದೇಶ್ ನಾಗರಾಜ್ ಇವರೆಲ್ಲ ಸದನದಲ್ಲಿ ಕಿತ್ತು ಕಡಿದಾಕೋದು ಏನು ಅಂತೆಲ್ಲಾ ಗರಂ ಆಗಿರೋ ಕಾಂಗ್ರೆಸ್ ನಾಯಕರು ರಮ್ಯಾರನ್ನು ಪರಿಷತ್‌ಗೆ ಆಯ್ಕೆ ಮಾಡೋದು ಬೇಡ. ಇದರಿಂದ ಅನಗತ್ಯವಾಗಿ ಪಕ್ಷದಲ್ಲಿ ಗೊಂದಲ ಶುರುವಾಗುತ್ತದೆ. ಅಂತೆಲ್ಲಾ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ರಾಹುಲ್ ಅಣತಿ ಸಿಕ್ಕರೂ ಪಕ್ಷದಲ್ಲಿ ರಾಜ್ಯ ನಾಯಕರು ಸಮ್ಮತಿ ಸಿಗಲಿಲ್ಲ. ಇದರಿಂದ ಫುಲ್ ನಿರಾಶರಾದ ರಮ್ಯಾ ನಂಗ್ಯಾಕೋ ಈ ಲೋಕಲ್ ಪಾಲಿಟಿಕ್ಸ್ ಆಗಿಬರೊಲ್ಲ. ನಂಗೇನಿದ್ರೂ ಯುವರಾಜ ರಾಹುಲ್ ಜೊತೆಗೆ ದೆಹಲಿ ರಾಜಕಾರಣವೇ ಸರಿ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಈಗ ರಾಜ್ಯ ಸಭೆಯ ಮೇಲೆ ಕಣ್ಣು ಬಿದ್ದಿದೆ!

ಕಲಾವಿದರ ಕ್ಷೇತ್ರದಿಂದ ಬಿ.ಜಯಶ್ರೀ ಅವರನ್ನು ರಾಜ್ಯ ಸಭೆಗೆ ಹಿಂದಿನ ಕೇಂದ್ರ ಸರ್ಕಾರ ಆಯ್ಕೆ ಮಾಡಿತ್ತು. ಅವರ ಅವಧಿ ಕೂಡ ಕೊನೆಗೊಳ್ಳುತ್ತಿದೆ. ಆದರೆ ಕಾಂಗ್ರೆಸ್‌ಗೆ ಅಧಿಕಾರ ಇಲ್ಲದ ಕಾರಣ ಆ ಸ್ಥಾನಕ್ಕೆ ಕಲಾವಿದರನ್ನು ಆಯ್ಕೆ ಮಾಡುವ ಅಧಿಕಾರ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಹೀಗಾಗಿ ಉಳಿದವರು ಸುಮಾರು ನಾಲ್ಕು ಮಂದಿಯನ್ನು ಆಯ್ಕೆ ಮಾಡಬೇಕಿದೆ. ವಿಜಯ್ ಮಲ್ಯ, ಆಯನೂರು ಮಂಜುನಾಥ್, ವೆಂಕಯ್ಯ ನಾಯ್ಡು, ಆಸ್ಕರ್ ಫರ್ನಾಂಡೀಸ್ ಅವಧಿ ಇದೇ ಜೂನ್‌ಗೆ ಕೊನೆಗೊಳ್ಳಲಿದೆ. ಹೀಗಾಗಿ ಅವರ ಅವಧಿ ಕೊನೆಗೊಂಡ ನಂತರ ಆ ಸ್ಥಾನಗಳಲ್ಲಿ ಯಾವುದಾದರೂ ಒಂದು ಸ್ಥಾನಕ್ಕೆ ರಮ್ಯಾ ಅವರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಂಡಿದೆ. ಇದೆಲ್ಲ ಯುವ ರಾಜ ರಾಹುಲ್ ಗಾಂಧಿ ಕೈವಾಡ. ರಾಜ್ಯದ ಜನ ಊಹೆ ಮಾಡಿರುವ ಹಾಗೆ ರಮ್ಯಾ ರಾಹುಲ್ ಗಾಂಧಿ ಜೊತೆಗೆ ತುಂಬಾ ಹತ್ತಿರದಲ್ಲಿದ್ದಾರೆ. “ಅತಿಯಾದ” ನಿಕಟವರ್ತಿಗಳಾಗಿದ್ದರಿಂದ ರಾಜ್ಯಸಭೆಗೆ ತಮ್ಮನ್ನು ಆಯ್ಕೆ ಮಾಡಬೇಕು ಎಂದು ಈಗಾಗಲೇ ರಾಹುಲ್‌ಗೆ ಮನವಿ ನೀಡಿದ್ದಾರೆ. ಹೀಗಾಗಿ ರಾಹುಲ್ ಮಾತ್ರವಲ್ಲ ಕಾಂಗ್ರೆಸ್‌ನ ವರಿಷ್ಠರೆಲ್ಲ ಸೈ ಅಂದಿದ್ದಕ್ಕೆ ಯಾರ ಸ್ಥಾನಕ್ಕೆ ಅವರನ್ನು ಕರೆದೊಯ್ದು ಕೂರಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆ.

ಆ ಬಗ್ಗೆ ಮುಂದಿನ ಪೋಸ್ಟ್ ನಲ್ಲಿ ಪೂರ್ತಿ ವಿವರ ಕೊಡ್ತೀವಿ….

Leave a Reply

Your email address will not be published. Required fields are marked *


CAPTCHA Image
Reload Image