One N Only Exclusive Cine Portal

ರಂಜಿಸಿ, ಬೋಧಿಸುವ ರಾಜ್‌ಕುಮಾರ

ನೂರೆಂಟು ನಿರೀಕ್ಷೆಗಳ ನಡುವೆಯೇ ರಾಜ್‌ಕುಮಾರ ಚಿತ್ರ ರಿಲೀಸಾಗಿದೆ. ಪುನೀತ್ ಅಭಿನಯದ ಹಿಂದಿನ ಕೆಲವು ಚಿತ್ರಗಳು ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ ಮತ್ತು ಸಂತೋಷ್ ಆನಂದರಾಮ್ ನಿರ್ದೇಶನದ ಮೊದಲ ಚಿತ್ರ `ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಸೂಪರ್ ಹಿಟ್ ಆಗಿತ್ತು ಎಂಬ ಎರಡು ಅಂಶಗಳ ಹಿನ್ನೆಲೆಯಲ್ಲಿ `ರಾಜ್‌ಕುಮಾರ’ ಹೇಗಿರಬಹುದು ಎನ್ನುವ ಕುತೂಹಲ ಪ್ರೇಕ್ಷಕವಲಯದಲ್ಲಿ ಮಾತ್ರವಲ್ಲ, ಚಿತ್ರರಂಗದವರ ನಡುವೆಯೂ ಯಥೇಚ್ಚವಾಗಿತ್ತು. ಎಲ್ಲರ ಕ್ಯೂರಿಯಾಸಿಟಿಗೆ ಉತ್ತರವೆನ್ನುವಂತೆ ರಾಜ್‌ಕುಮಾರ ತೆರೆಗೆ ಬಂದಿದೆ.

ಆಸ್ಟ್ರೇಲಿಯಾದಿಂದ ಆರಂಭವಾಗಿ ಕನ್ನಡ ನೆಲದಲ್ಲಿ ಮುಕ್ತಾಯವಾಗುವ ಕಥೆ ರಾಜ್‌ಕುಮಾರನದ್ದು! ಶ್ರೀಮಂತ ಉದ್ಯಮಿಯ ಮಗ ಸಿದ್ದಾರ್ಥ್. ಎಲ್ಲ ವಿಚಾರಗಳಲ್ಲೂ `ತಂದೆಗೆ ತಕ್ಕ ಮಗ’ ಎನಿಸಿಕೊಂಡಿರುತ್ತಾನೆ. ಸಿದ್ದಾರ್ಥನ ತಂದೆಗೆ ತನ್ನ ಸ್ನೇಹಿತನ ಮಗಳನ್ನು ತಂದು ಮಗನಿಗೆ ಮದುವೆ ಮಾಡಬೇಕೆನ್ನುವ ಬಯಕೆ. ಆದರೆ ಮಗ ತನಗೆ ಈಗಾಗಲೇ ಹುಡುಗಿಯೊಬ್ಬಳ ಮೇಲೆ ಲವ್ವಾಗಿದೆ ಅಂತಾ ತಿಳಿಸುತ್ತಾನೆ. ಇತ್ತ ನಾಯಕಿ ತನ್ನ ಅಪ್ಪ ಸೆಲೆಕ್ಟ್ ಮಾಡಿದ ಹುಡುಗನನ್ನು ಮದುವೆಯಾಗಲು ನಿರಾಕರಿಸಿ ಊರುಬಿಟ್ಟುಬಂದು ಆಸ್ಟ್ರೇಲಿಯಾ ಸೇರಿರುತ್ತಾಳೆ. ಅಪ್ಪ ಫಿಕ್ಸ್ ಮಾಡಿರೋದು, ತಾನು ಇಷ್ಟಪಟ್ಟಿರೋದು ಒಂದೇ ಹುಡುಗಿ ಅನ್ನೋದು ತಿಳಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೆಚ್ಚೂಕಮ್ಮಿ ಕ್ಲೈಮ್ಯಾಕ್ಸ್ ಬರೋಹೊತ್ತಿಗೆ ಪ್ರೀತಿಸಿದವರು ಒಂದಾಗಿ, ಎಲ್ಲ ಸುಖಾಂತ್ಯವಾಯಿತು ಎಂದುಕೊಂಡು `ಮುಂದೇನು?’ ಅಂದುಕೊಳ್ಳೋ ಹೊತ್ತಿಗೆ ಅಸಲೀ ಕತೆ ಆರಂಭವಾಗುತ್ತದೆ.
ನಡೆಯಬಾರದ್ದೊಂದು ಅನಾಹುತ ನಡೆದು, ಎಲ್ಲವನ್ನೂ ತೊರೆದು ಸಿದ್ಧಾರ್ಥ್ ತಾಯ್ನಾಡಿಗೆ ಮರಳುತ್ತಾನೆ. ಅಲ್ಲಿಂದ ಕತೆ `ಕಸ್ತೂರಿ ನಿವಾಸ’ದತ್ತ ಹೊರಳಿಕೊಳ್ಳುತ್ತದೆ. ಸಿದ್ದಾರ್ಥ್ ಯಾರು? ಆತ ಆಸ್ಟ್ರೇಲಿಯಾಗೆ ಹೋಗಿದ್ದು ಹೇಗೆ? ಅನ್ನೋ ಸಣ್ಣ ಫ್ಲಾಷ್‌ಬ್ಯಾಕು ಸರಿದುಹೋಗುತ್ತದೆ. ಹೆತ್ತವರನ್ನು ದೂರ ಮಾಡಿಕೊಂಡ ಮಕ್ಕಳು, ಮಕ್ಕಳಿಂದ ಬೇರ್ಪಟ್ಟು ಅನಾಥಪ್ರಜ್ಞೆ ಎದುರಿಸುವ ಪೋಷಕರು. ವೃದ್ಧಾಶ್ರಮವೊಂದರ ಸಂಕಟಗಳ ಜೊತೆಗೆ ಒಳ್ಳೇದನ್ನು ಮಾಡಬೇಕು ಎಂದು ಮುಂದಾದವರಿಗೆ ಎದುರಾಗುವ ಸಂಕಷ್ಟಗಳು, ಅಧಿಕಾರದ ಆಸೆಗೆ ಏನನ್ನು ಬೇಕಾದರೂ ಮಾಡಿಸುವ ದುಷ್ಟ ಮನಸ್ಥಿತಿ… ಹೀಗೆ ಸಮಾಜದ ನಾನಾ ನ್ಯೂನ್ಯತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತವೆ.
ಪುನೀತ್ ರಾಜ್ ಕುಮಾರ್ ಪಾತ್ರವನ್ನು ಇಲ್ಲಿ ಬಹಳಾ ಜಾಗರೂಕತೆಯಿಂದ ಕಟ್ಟಿದ್ದಾರೆ ನಿರ್ದೇಶಕ ಸಂತೋಷ್ ಆನಂದರಾಮ್. ಸ್ಟಾರ್ ಸಿನಿಮಾ ಅಂದರೆ, ಬೇಕಾಬಿಟ್ಟಿ ಬಿಲ್ಡಪ್ಪುಗಳು, ಚಪ್ಪಾಳೆ ಗಿಟ್ಟಿಸುವ ಡೈಲಾಗುಗಳು ಮುಖ್ಯ ಎನ್ನುವ ಟ್ರೆಂಡ್ ಇರುವಾಗ ಹೀರೋ ಮಾತಾಡುವ ಪ್ರತಿಯೊಂದು ಮಾತನ್ನೂ ಸಾಮಾಜಿಕ ಸಂದೇಶದಂತೆ ಪ್ರೇಕ್ಷಕರೆದೆಗೆ ರವಾನಿಸುವಲ್ಲಿ ನಿರ್ದೇಶಕರು ಯಶಸ್ಸು ಕಂಡಿದ್ದಾರೆ. ಸಂಬಂಧಗಳ ನೆಲೆಯಲ್ಲಿ ಸೆಂಟಿಮೆಂಟಿನ ಬಿಲ್ಡಿಂಗು ಕಟ್ಟಿ ನೋಡುಗರನ್ನು ಅದರೊಳಗೆ ಕೂಡಿಹಾಕಿರುವುದು ಆನಂದ್ ರಾಮ್ ಅವರ ಜಾಣ್ಮೆಯನ್ನು ತೋರುತ್ತದೆ. ಕಸ್ತೂರಿ ನಿವಾಸ, ಆಡಿಸಿನೋಡು ಬೊಂಬೆ, ಪಾರಿವಾಳ, ಸೂಟುಧಾರಿ ನಾಯಕ ಎಲ್ಲವೂ ಕಮರ್ಷಿಯಲ್ ಸಿನಿಮಾವೊಂದರ ರೂಪಕವಾಗಿ ಬಳಯಕೆಯಾಗಿರುವುದು ಗ್ರೇಟ್ ಎನಿಸುತ್ತದೆ.
`ಕಸ್ತೂರಿ ನಿವಾಸ’ದ ಕರುಣಾಮಯಿ ಸಿದ್ದಾರ್ಥನಾಗಿ ಪುನೀತ್ ನಟನೆ ಮನೋಜ್ಞ. `ಎಲ್ಲ ಮನೆಯಲ್ಲೂ ಹಿರಿಯ ಜೀವಗಳ ಇಷ್ಟಾರ್ಥಗಳನ್ನು ಪೂರೈಸುವ ಇಂಥಾ ಒಬ್ಬ ರಾಜಕುಮಾರ ಹುಟ್ಟಬಾರದಾ?’ ಅನಿಸುವಷ್ಟರ ಮಟ್ಟಿಗೆ ಅಪ್ಪು ನಟಿಸಿದ್ದಾರೆ. ಅನಂತ್ ನಾಗ್, ದತ್ತಣ್ಣ, ಪ್ರಕಾಶ್ ರೈ, ಸುಧಾ ಬೆಳವಾಡಿ, ಅವಿನಾಶ್, ಶರತ್ ಕುಮಾರ್, ಚಿತ್ರಾ ಶೆಣೈ, ರಂಗಾಯಣ ರಘು, ಅಚ್ಯುತ್, ಮಾಸ್ತಿಗುಡಿ ಅನಿಲ್, ಮಠ ಕೊಪ್ಪಳ, ಮನದೀಪ್ ರಾಯ್, ಸಾಧು ಕೋಕಿಲ ಸೇರಿದಂತೆ ಸಿಕ್ಕಾಪಟ್ಟೆ ಕಲಾವಿದರು ತುಂಬಿಹೋಗಿರುವ ಚಿತ್ರವಿದು. ಆದರೆ ಎಲ್ಲೂ, ಯಾವ ಪಾತ್ರವೂ ಅನವಶ್ಯಕ ಎನಿಸುವುದಿಲ್ಲ. ಸಿನಿಮಾದ ಮೊದಲ ಭಾಗ ತುಂಬಾ ಸ್ಪೀಡಾಗಿದೆ. ದ್ವಿತೀಯಾರ್ಧದ ಗೋವಾ ಎಪಿಸೋಡು ಅಷ್ಟು ಬೇಕಿತ್ತಾ ಅಂತಾ ಯುವಪ್ರೇಕ್ಷಕರಿಗೆ ಅನಿಸಿದರೂ ಇದು ಎಲ್ಲ ವಯೋಮಾನದವರನ್ನು ಹಿಡಿದಿಡುವ ಉದ್ದೇಶ ಹೊಂದಿರುವ ಸಿನಿಮಾ ಆಗಿರುವುದರಿಂದ ಒಂದಿಷ್ಟು ವಿನಾಯ್ತಿ ನೀಡಬಹುದು. ಒಟ್ಟಾರೆ ರಂಜಿಸಿ, ಬೋಧಿಸುವ ರಾಜಕುಮಾರನನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಕೂತು ನೋಡಬಹುದು.

  • ಅರುಣ್ ಕುಮಾರ್.ಜಿ

Leave a Reply

Your email address will not be published. Required fields are marked *


CAPTCHA Image
Reload Image