One N Only Exclusive Cine Portal

ರವಿ ಕಿಶೋರ್ ಸಾಗಿಬಂದ ದಾರಿ…

 

ಸುಮ್ಮನೆ ಕೂತು ‘ಏನೂ ಸಾಧಿಸೋದಕ್ಕಾಗ್ತಾ ಇಲ್ಲ. ಸಂಪಾದನೆ ಕೂಡಾ ಇಲ್ಲ ಅಂತಾ ಕೊರಗುವ ಎಷ್ಟೋ ಜನ ಹುಡುಗರಿದ್ದಾರೆ. ಹಾಗೆ ಕೂತು ಕನವರಿಸುತ್ತಿದ್ದರೆ, ಬರೀ ಲಕ್ಷ್ಮೀ ಅಲ್ಲ, ಸರಸ್ವತಿ ಕೂಡಾ ಕರುಣೆ ತೋರೋದಿಲ್ಲ. ‘ವರಮಹಾಲಕ್ಷ್ಮಿ ಹಬ್ಬದ ದಿನದ ವಿಶೇಷ ಲೇಖನ ಇಲ್ಲಿದೆ.
ಶ್ರದ್ಧೆ, ಪರಿಶ್ರಮ ಜೊತೆಗೆ ಕ್ರಿಯಾಶೀಲತೆಯೊಂದಿದ್ದರೆ ಸಾಕು ಎಂಥದ್ದನ್ನು ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ನಮ್ಮೆದುರಿಗೇ ನಿದರ್ಶನವಾಗಿ ನಿಂತಿರುವ ಯುವಕ ರವಿ ಕಿಶೋರ್. ತೀರಾ ಸಣ್ಣ ವಯಸ್ಸಿಗೇ ಸಾಕಷ್ಟು ಯಶಸ್ವೀ ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ರವಿ ಬೆಂಗಳೂರಿನ ತೆಕ್ಕೆಗೆ ಬಿದ್ದ ಆರಂಭದಲ್ಲಿ ಮಾಡುತ್ತಿದ್ದದ್ದು ಪೇಪರ್ ಎಣಿಸುವ ಕಾಯಕ. ಕೈಲಿ ಪೇಪರ್ ಹಿಡಿಯುತ್ತಲೇ ಸಿನಿಮಾ ಧಾರಾವಾಹಿಗಳಲ್ಲಿ ಯೂನಿಟ್ ಅಸಿಸ್ಟೆಂಟ್ ಆಗಿ, ಕ್ಯಾಮೆರಾ ಸಹಾಯಕನಾಗಿ, ನಂತರ ಸ್ವತಂತ್ರ ಛಾಯಾಗ್ರಾಹಕರಾದವರು. ಸದ್ಯ ಹಿರಿತೆರೆಯ ಕ್ಯಾಮೆರಾ ಕೂಡಾ ರವಿ ಕೈಗೆ ದಕ್ಕಿದೆ. ಈ ಎಲ್ಲದರ ವಿವರ ಇಲ್ಲಿದೆ ನೋಡಿ…

ವಾರದ ಹಿಂದೆ ತೆರೆ ಕಂಡಿರುವ ‘ಆ ಎರಡು ವರ್ಷಗಳು ಉತ್ತಮ ಚಿತ್ರ ಎಂಬ ವಿಮರ್ಶೆ ಪಡೆದಿದೆ. ಈ ಚಿತ್ರಕ್ಕೆ ಸುಂದರವಾದ ಕ್ಯಾಮೆರಾ ಕೆಲಸದ ಮೂಲಕ ನೋಡುಗರ ಗಮನ ಸೆಳೆದಿರುವವರು ಯವ ಛಾಯಾಗ್ರಾಹಕ ರವಿ ಕಿಶೋರ್.
ಮೊದಲ ಚಿತ್ರದ ಮೂಲಕವೇ ಭರವಸೆ ಹುಟ್ಟಿಸಿರೋ ರವಿ ಕಿಶೋರ್ ಕಿರುತೆರೆ ಲೋಕದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಇದೇ ಹೊತ್ತಿನಲ್ಲಿ ಆ ಎರಡು ವರ್ಷಗಳು ಚಿತ್ರದ ನಂತರ ಅವರು ಚಿತ್ರರಂಗದಲ್ಲಿಯೂ ಸಕ್ರಿಯರಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕೆಲ ಮಂದಿ ಒಂದು ಗುರಿಯ ಬಗ್ಗೆ ಕನಸು ಕಂಡು ಅದನ್ನೇ ಈಡೇರಿಸಿಕೊಳ್ಳುತ್ತವೆ. ಮತ್ತೆ ಕೆಲವರನ್ನು ಬದುಕಿನ ಏರಿಳಿತಗಳೇ ಗುರಿಯೊಂದರ ಸನಿಹಕ್ಕೆ ತಂದು ನಿಲ್ಲಿಸುತ್ತವೆ. ರವಿ ಕಿಶೋರ್ ಬದುಕಿನ ಅನಿರೀಕ್ಷಿತ ಮಗ್ಗುಲುಗಳನ್ನು ಗಮನಿಸಿದರೆ ಅವರದ್ದು ಎರಡನೇ ಕ್ಯಾಟಗರಿ ಅಂತನ್ನಿಸಿದರೆ ಅಚ್ಚರಿಯೇನಿಲ್ಲ.

ಕುಣಿಗಲ್ ತಾಲೂಕಿನ ಅಮೃತಳ್ಳಿ ಹೋಬಳಿಯ ಹೊಳಗೆರೆ ಪುರ ಎಂಬ ಪುಟ್ಟ ಹಳ್ಳಿಯ ರೈತಾಪಿ ಕುಟುಂಬದಿಂದ ಬಂದವರು ರವಿ ಕಿಶೋರ್. ಆ ಕಾಲದಲ್ಲಿ ಸಾಮಾನ್ಯವಾಗಿ ಇತರೇ ಹುಡುಗರಿಗಿರುವಂತೆಯೇ ಚಿತ್ರರಂಗದ ಬಗೆಗೊಂದು ಆಕರ್ಷಣೆ ರವಿಗೂ ಇತ್ತಾದರೂ ಮುಂದೊಂದು ದಿನ ಅಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುವಂಥಾ ಕನಸಿರಲಿ ಕಲ್ಪನೆಯೂ ಇರಲಿಲ್ಲ. ಆದರೆ ಸಮಯ ಸಂದರ್ಭ ಎಂಬುದು ಅವರನ್ನು ಸಲೀಸಾಗಿ ಬೆಂಗಳೂರಿಗೆ ತಂದು ಬಿಟ್ಟು ಅಲ್ಲಿಂದ ಸೀದಾ ಬಣ್ಣದ ಲೋಕದ ಜಗುಲಿ ಸೇರಿಸಿದ ಕಥೆ ಸೊಗಸಾಗಿದೆ. ವಿದ್ಯಾಭ್ಯಾಸ ಮುಗಿದ ನಂತರ ಊರಲ್ಲಿಯೇ ಇದ್ದ ಮಗ ಹಾಳಾಗಬಾರದು ಎಂಬ ಕಾಳಜಿಯಿಂದ ಬೆಂಗಳೂರಿನಲ್ಲಿದ್ದ ತನ್ನಕ್ಕನ ಮನೆಗೆ ತಂದು ಬಿಟ್ಟರು ರವಿಯ ಅಮ್ಮ. ಆದರೆ ಈ ಬೆಂಗಳೂರಿನ ವಾತಾವರಣ ಎಂದರೇನೇ ರವಿಗೆ ಅಲರ್ಜಿ. ಆದರೂ ಅಮ್ಮ ಏಕಾಏಕಿ ಬೆಂಗಳೂರಿಗೆ ತಂದು ಬಿಟ್ಟಿದ್ದರ ಅಸಹನೆಯ ಜೊತೆಗೇ ಕೆಲಸವೊಂದಕ್ಕೆ ಹುಡುಕಾಡುತ್ತಿದ್ದ ಅವರಿಗೆ ಮೊದಲು ಸಿಕ್ಕಿದ್ದು ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ ನಂತರ ವಿಜಯ ಕರ್ನಾಟಕ ಪತ್ರಿಕೆಯನ್ನು ಕೌಂಟ್ ಮಾಡಿ ಕೊಡೋ ಕೆಲಸ.
ಆ ಸಂದರ್ಭದಲ್ಲಿ ರವಿಯ ಸಂಬಂಧಿಕರ ಮನೆ ಇದ್ದದ್ದು ಶ್ರೀನಗರದಲ್ಲಿ. ಅವರ ದಿನ ಪತ್ರಿಕೆ ಎಣಿಸೋ ಕೆಲಸ ಇದ್ದದ್ದು ಗಾಂಧಿ ಬಜಾರಿನಲ್ಲಿ. ಒಂದಷ್ಟು ವರ್ಷ ಇದೇ ಕೆಲಸ ಮಾಡುತ್ತಾ ಮುಂದುವರೆದವರಿಗೆ ಧಾರಾವಾಗಳಲ್ಲಿ ಕೆಲಸ ಮಾಡೋ ಮಂದಿಯ ಸಂಪರ್ಕ ಸಿಕ್ಕಿತ್ತು. ಬಳಿಕ ಧಾರಾವಾಹಿ ನಿರ್ಮಾಣ ಮಾಡೋ ಹನುಮಂತನಗರದ ಸುಶ್ಮಾ ಮೂವಿಟೋನ್ ಎನ್ನುವ ಯೂನಿಟ್ಟಿನಲ್ಲ್ಲಿ ಕೆಲಸಕ್ಕೆ ಸೇರಿಕೊಂಡ ರವಿ ಆ ಬಳಿಕ ಒಂದಷು ವರ್ಷ ಅಲ್ಲಿಯೇ ನಾನಾ ಕೆಲಸಗಳನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಅವರ ಪ್ರಧಾನ ಆಸಕ್ತಿ ಕೇಂದ್ರೀಕರಿಸಿದ್ದದ್ದು ಛಾಯಾಗ್ರಹಣದತ್ತ!
ಇದಾದ ನಂತರ ಖ್ಯಾತ ಛಾಯಾಗ್ರಾಹಕ ದಿವಂಗತ ಸುಂದರನಾಥ ಸುವರ್ಣ ಅವರ ಜೊತೆ ಅಸಿಸ್ಟಂಟ್ ಆಗಿ ಸೇರಿಕೊಂಡ ರವಿ, ವಾಯುಪುತ್ರ ಮುಂತಾದ ಚಿತ್ರಗಳಿಗೂ ಸಹಾಯಕ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ಈ ಹೊತ್ತಿನಲ್ಲಿಯೇ ಮೊದಲ ಸಲ ಸ್ವತಂತ್ರ ಛಾಯಾಗ್ರಾಹಕರಾಗಿ ರವಿ ಅವರಿಗೆ ಅವಕಾಶ ಕೊಟ್ಟಿದ್ದು ಕಿರುತೆರೆ ನಿರ್ದೇಶಕ ಆದಿತ್ಯ ಭಟ್. ಅವರ ನಿರ್ದೇಶನದಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾನಸಪುತ್ರಿ ಎಂಬ ಧಾರಾವಾಹಿ ಮೂಲಕ ಛಾಯಾಗ್ರಾಹಕರಾದ ರವಿ ಅವರು ನಂತರ ಪಲ್ಲವಿ ಅನುಪಲ್ಲವಿ, ಮಿಲನ ಮುಂತಾದ ಯಶಸ್ವೀ ಧಾರಾವಾಹಿಗಳಿಗೂ ಛಾಯಾಗ್ರಾಹಕರಾದರು.
ಇದೀಗ ಅವರು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಹಂತದಲ್ಲಿಯೇ ಅವರೇ ಛಾಯಾಗ್ರಾಹಣ ಮಾಡಿದ ಆ ಎರಡು ವರ್ಷಗಳು ಚಿತ್ರ ತೆರೆ ಕಂಡಿದೆ. ಕೈಲಿ ಇನ್ನೊಂದಷ್ಟು ಅವಕಾಶಗಳೂ ಇವೆ. ಆದರೆ ಈವರೆಗೂ ಅನ್ನ ನೀಡಿದ ಧಾರಾವಾಹಿ ಮತ್ತು ಚಲನ ಚಿತ್ರ ಛಾಯಾಗ್ರಹಣವನ್ನು ಒಟ್ಟೊಟ್ಟಿಗೇ ನಿಭಾಯಿಸೋ ಇರಾದೆ ರವಿ ಕಿಶೋರ್ ಅವರದ್ದು. ಕಿರುತೆರೆ ರವಿಕಿಶೋರ್ ಅವರಿಗೆ ಬದುಕು ಕಟ್ಟಿಕೊಳ್ಳುವ ದಾರಿ ಮಾಡಿಕೊಟ್ಟಿದೆ. ಭೋಗ್ಯಕ್ಕೊಂದು ಮನೆ, ಓಡಾಡಲು ಕಾರು ಎಲ್ಲವೂ ದಕ್ಕಿದೆ. ಧಾರಾವಾಹಿ ಕ್ಷೇತ್ರದಷ್ಟು ಚಿತ್ರರಂಗದಲ್ಲಿ ಭದ್ರತೆಯಿಲ್ಲ. ಇಲ್ಲಿ ಕೈತುಂಬ ಕೆಲಸ ಇದ್ದರೂ ಜೇಬು ತುಂಬೋದು ಕಷ್ಟ. ಹೀಗಾಗಿ ಸಿನಿಮಾಗಳ ಜೊತೆಜೊತೆಗೇ ಧಾರಾವಾಹಿ ಕ್ಷೇತ್ರದಲ್ಲೂ ಮುಂದುವರೆಯುವ ಇರಾದೆ ರವಿ ಅವರದ್ದು. ಅದೇನೇ ಇದ್ದರೂ ಮೊದಲ ಚಿತ್ರದ ಮೂಲಕವೇ ಗಮನ ಸೆಳೆದಿರುವ ರವಿ ಕಿಶೋರ್ ಚಿತ್ರರಂಗದಲ್ಲಿಯೂ ಮುಖ್ಯ ಛಾಯಾಗ್ರಾಹಕರಾಗಿ ಹೊರ ಹೊಮ್ಮಲೆಂದು ಹಾರೈಸೋಣ…

Leave a Reply

Your email address will not be published. Required fields are marked *


CAPTCHA Image
Reload Image