One N Only Exclusive Cine Portal

ರಾಗಿಣಿ ಜೊತೆ ಸಿನ್ಮಾ ಮಾಡ್ತಾರಂತೆ ಬೂಸಿ ಶೇಖರ್!

ನಿರ್ದೇಶಕ ಪಿಸಿ ಶೇಖರ್ ಗೊತ್ತಾ? ಅದೇ.. ನಾಯಕ, ರೋಮಿಯೋ, ಚೆಡ್ಡಿದೋಸ್ತ್, ಸ್ಟೈಲ್ ಕಿಂಗ್, ರಾಗ ಹೀಗೆ ಒಂದರ ಹಿಂದೆ ಒಂದು ಸಿನಿಮಾ ಮಾಡ್ತಿರ‍್ತಾರಲ್ಲ ಅವರು! ಹತ್ತಾರು ಹಿಟ್ ಸಿನಿಮಾಗಳನ್ನು ಕೊಟ್ಟರೂ ಒಂದೇ ಒಂದು ಚಿತ್ರ ಕೈಕೊಟ್ಟರೆ ನಮ್ಮ ಗಾಂಧೀನಗರದ ನಿರ್ಮಾಪಕರು ಅಂಥಾ ನಿರ್ದೇಶಕರ ಬಳಿಯೂ ಸುಳಿಯೋದಿಲ್ಲ. ಆದರೆ ಪಿ.ಸಿ. ಶೇಖರ್ ಈ ವರೆಗೆ ನಿರ್ದೇಶಿಸಿರುವ ಎಲ್ಲಾ ಸಿನಿಮಾಗಳೂ ಮುಗ್ಗರಿಸಿಕೊಂಡು ಬಿದ್ದಿದ್ದರೂ ಎಲ್ಲಿಂದಲೋ ಬಂದು ಕುಂತಿರುವ ಈ ಶೇಖರನಿಗೆ ಮಾತ್ರ ಒಂದೇ ಸಮ ಡೈರೆಕ್ಷನ್ ಛಾನ್ಸು ಸಿಗೋಕೆ ಹೇಗೆ ಸಾಧ್ಯ ಅನ್ನೋ ಯಕ್ಷಪ್ರಶ್ನೆಯೊಂದು ಅದೆಷ್ಟೋ ಜನ ತಂತ್ರಜ್ಞರು ಸೇರಿದಂತೆ ಅನೇಕರನ್ನು ಕಾಡುತ್ತಿದೆ.
ಅಂದಹಾಗೆ ಪಿ.ಸಿ ಶೇಖರ್ ಅವರನ್ನು ಗಾಂಧಿನಗರದ ಜನ ಬೂಸಿ ಶೇಖರ್ ಅಂತಲೂ ಕರೀತಾರೆ. ಯಾಕಂದ್ರೆ, ಪಬ್ಲಿಸಿಟಿ ಪಡೆಯಲು ಈ ಯಪ್ಪ ಎಂಥಾ ಕಥೆ ಬೇಕಾದರೂ ಕಟ್ಟಬಲ್ಲ. ಕಳೆದ ಎರಡೂವರೆ ವರ್ಷಗಳಿಂದಲೂ ಇವರು ತಮಿಳಿನ ಸೂಪರ್ ಸ್ಟಾರ್ ಸೂರ್ಯ ಅವರ ಸಿನಿಮಾವನ್ನು ಡೈರೆಕ್ಟ್ ಮಾಡ್ತಾರಂತೆ ಅನ್ನೋ ಮಾತು ಚಾಲ್ತಿಯಲ್ಲೇ ಇದೆ!
ಬೂಸಿ ಸೇಗರ್ ಅದ್ಯಾವ ಮಹಾನುಭಾವರ ಕಿವಿ ಊದಿ ಈ ಸುದ್ದಿಯನ್ನು ಬರೆಸಿಕೊಂಡರೋ ಈ ವರೆಗೂ ಮೈಲೇಜು ಪಡೆಯುತ್ತಲೇ ಇದ್ದಾರೆ. ಆದರೆ ಸೂರ್ಯನ ಸಿನಿಮಾ ಶುರುವಾದ ಸುವಾರ್ತೆಯಂತೂ ಈ ತನಕವೂ ಚೆನ್ನೈ ನೆಲದಿಂದ ರವಾನೆಯಾದಂತಿಲ್ಲ. ಈ ವಿಚಾರವಾಗಿ ಖುದ್ದು ಶೇಖರ್ ಅವರನ್ನೇ ಪ್ರಶ್ನಿಸಿದಾಗ ‘He got with few projects and I got busy with few projects here…and I didn’t follow up’ ಎನ್ನುವ ಉತ್ತರ ದೊರಕಿದೆ. ಶೇಖ್ರಿ ಮಾತು ಕೇಳಿದರೆ ಇಲ್ಲಿ ತಮಗಿಷ್ಟ ಬಂದಿದ್ದನ್ನೆಲ್ಲಾ ಹೇಳಿ ಹೇಗೆ ಬೇಕಾದರೂ ಬರೆಸಿಕೊಳ್ಳಬಹುದು. ಯಾರಾದರೂ ಪ್ರಶ್ನಿಸಿದಾಗ ಏನೋ ಒಂದು ಸಬೂಬು ಕೊಟ್ಟರಾಯಿತು. ಆ ಹೊತ್ತಿಗೆ ಸಿಕ್ಕ ಪ್ರಚಾರವೇ ಲಾಭ ಎನ್ನುವ ಮೆಂಟಾಲಿಟಿ ಇದ್ದಂತಿದೆ.

ಇರಲಿ, ಲೇಟೆಸ್ಟಾಗಿ ರಾಗಿಣಿ ಮತ್ತು ಶೇಖರ್ ಜಂಟಿಯಾಗಿ ಹೊರಡಿಸಿರುವ ಸುದ್ದಿಯ ಪ್ರಕಾರ ರಾಗಿಣಿ ನಟಿಸಲಿರುವ ಸಿನಿಮಾವೊಂದನ್ನು ಇದೇ ಶೇಖರ್ ನಿರ್ದೇಶಿಸುತ್ತಿದ್ದಾರಂತೆ. ಅದು ಮುಗಿಯೋ ಮುಂಚೇನೇ ಆ ದಿನಗಳು ಚೇತನ್ ಹೀರೋ ಆಗಿರುವ ಇನ್ನೊಂದು ಚಿತ್ರವನ್ನೂ ಇವರು ಡೈರೆಕ್ಟ್ ಮಾಡಲಿದ್ದಾರಂತೆ. ಬಹುಶಃ ಈ ಎರಡೂ ಸಿನಿಮಾಗಳು ಮುಗಿಯೋ ಹೊತ್ತಿಗೆ ರಜನೀಕಾಂತು, ಕಮಲಹಾಸನ್ನು, ಅಮಿತಾಬಚ್ಚನ್ನು ಎಲ್ರೂ ಶೇಖರ್ ಮನೆ ಮುಂದೆ ಕ್ಯೂ ನಿಲ್ಲಬಹುದೇನೋ?!

Leave a Reply

Your email address will not be published. Required fields are marked *


CAPTCHA Image
Reload Image